fbpx
Exclusive

ಭಾರತದ ಹಳೆಯ UNESCO ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾದ ಅಜಂತ ಗುಹೆಗಳು

ಕ್ರಿ.ಪೂ 2 ನೇ ಶತಮಾನದಷ್ಟು ಹಿನ್ನೆಲೆಯುಳ್ಳ , ಅಜಂತಾ ಗುಹೆಗಳು ಹಿಂದು ಧರ್ಮ, ಬೌದ್ಧ ಮತ್ತು ಜೈನ್ ಧರ್ಮಗಳಿಗೆ, ಸಾಕ್ಷಿಯಾಗಿ ನಿಂತಿದೆ. ಇಲ್ಲಿಯ ಬೌಧ್ಧ ಚೈತ್ಯಗಳಿಗೆ ಮತ್ತು ಇಲ್ಲಿನ ಗೋಡೆಗಳಲ್ಲಿನ ಭಿತ್ತಿಚಿತ್ರಗಳಿಗಾಗಿ ಇದು ಅತ್ಯಂತ ಪ್ರಸಿಧ್ಧಿಯಾಗಿದೆ. ಮಹಾರಾಷ್ಟ್ರ ರಾಜ್ಯದ ಪ್ರಮುಖ ನಗರವಾದ ಔರಂಗಾಬಾದಿನ ಹತ್ತಿರವಿರುವ ಐತಿಹಾಸಿಕ ತಾಣವಾದ ಅಜಂತ ಗುಹೆಗಳು ಭಾರತದ ಹಳೆಯ UNESCO ವಿಶ್ವ ಪರಂಪರೆಯ ತಾಣಗಳಲ್ಲಿ ಒಂದು.

30 ಗುಹೆಗಳ ಗುಂಪಾಗಿರುವ ಅಜಂತಾವು ವಾಫ್ ಕಣಿವೆಯ ಸುತ್ತಲೂ ಕಂಡುಬರುತ್ತವೆ. ಕಲೆಯ ಪ್ರಭೇದಗಳಾದ ಶಿಲ್ಪ, ಕೆತ್ತನೆ ಹಾಗೂ ವರ್ಣಲೇಪನ ಇವುಗಳ ಕೇಂದ್ರವೆನಿಸಿರುವ ಅಜಂತ ಗುಹೆಗಳು ಭಾರತೀಯ ಪರಮೋತ್ಕ್ರಷ್ಟ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿವೆ. ಇಲ್ಲಿ ಬೆಟ್ಟವನ್ನು ಕೊರೆದು ಗುಹಾಲಯಗಳನ್ನು ನಿರ್ಮಿಸಿ ಚಿತ್ರಗಳನ್ನು ಬಿಡಿಸುವ ಕಾರ್ಯ ಕ್ರಿ.ಪೂ. 2ನೆಯ ಶತಮಾನದಲ್ಲಿ ಪ್ರಾರಂಭವಾಗಿ ಅವಿಚ್ಛಿನ್ನವಾಗಿ ಕ್ರಿ.ಶ. 7ನೆಯ ಶತಮಾನದವರೆಗೂ ಮುಂದುವರಿಸಲಾಗಿತ್ತು. ಶಾತವಾಹನ, ವಾಕಾಟಕ ಮತ್ತು ಬಾದಾಮಿ ಚಾಳುಕ್ಯ ಸಂತತಿಗಳ ಅರಸರು ಬೌದ್ಧಭಿಕ್ಷುಗಳಿಗಾಗಿ ಗುಹಾಂತರ್ದೇವಾಲಯಗಳನ್ನು ನಿರ್ಮಿಸಿದವರು, ಇಲ್ಲಿನ ಶಿಲ್ಪಿಗಳು ಗುಹಾಲಯಗಳ ನಿರ್ಮಾಣ ಹಾಗೂ ಕಲಾವಿನ್ಯಾಸದಲ್ಲಿ ತಮ್ಮ ಚಾತುರ್ಯವನ್ನು ಎತ್ತಿ ತೋರಿಸಿದ್ದಾರೆ. ಇಲ್ಲಿನ ಎಲ್ಲ ಗುಹೆಗಳಲ್ಲೂ ಕಾಣುವ ಒಂದು ಸಾಮಾನ್ಯ ವಿಷಯವೆಂದರೆ, ಇವು ಬುದ್ದ ದೇವರು ಮೋಕ್ಷ ಪಡೆಯುವ ಪೂರ್ವದ ನಿಜವಾದ ಜೀವನವನ್ನು ಎತ್ತಿ ತೋರಿಸುತ್ತವೆ. ಇಲ್ಲಿನ ಗುಹೆಗಳು ಶ್ರೀಲಂಕಾದಲ್ಲಿ ಕಂಡು ಬರುವ ಸೀಗೆರಿಯ ಗುಹೆಗಳ ಹೋಲಿಕೆಯನ್ನು ತೋರುತ್ತವೆ.

ಬೌದ್ಧಮತ ಕ್ಷೀಣಿಸಿದ ಮೇಲೆ ಈ ಸ್ಥಳ ನಿರ್ಲಕ್ಷಿಸಲ್ಪಟ್ಟು ಪೊದೆಗಳು ಬೆಳೆದು ಮೃಗಪಕ್ಷಿಗಳ ಆವಾಸಸ್ಥಾನವಾಗಿ ಮಾನವರ ದೃಷ್ಟಿಯಿಂದ ಮರೆಯಾಯಿತು. ಇವು ಕ್ರಿ.ಶ. 19ನೆಯ ಶತಮಾನದ ಪೂರ್ವಾರ್ಧದಲ್ಲಿ ಆಂಗ್ಲ ವಿದ್ವಾಂಸರ ಗಮನಕ್ಕೆ ಬಂದು ಆ ಸ್ಥಳದಲ್ಲಿ ಕೆಲವು ಬ್ರಿಟೀಷ್ ಸೈನಿಕರು ಬೇಟೆಯಾಡಲು ಬಂದ ಸಮಯದಲ್ಲಿ ಕುದುರೆ ಪಾದರಕ್ಷೆಯ ಆಕಾರದ ಕಲ್ಲನ ಗುರುತು ವಿಸ್ಮಯವನ್ನೂ ಕುತೂಹಲವನ್ನೂ ಕೆರಳಿಸಿ ನಮ್ಮ ನಾಡಿನ ಹಾಗೂ ಪ್ರಪಂಚದ ಕಲಾತಜ್ಞರ ಗಮನವನ್ನು ಅತ್ತ ಸೆಳೆದರು.

ಇಲ್ಲಿ ಒಟ್ಟು 29 ಗುಹೆಗಳಿದ್ದು ಇವು ಬುದ್ಧನ ಜೀವನಕ್ಕೆ ಸಂಬಂಧಿಸಿದ ಗಮನಾರ್ಹ ಕಥೆಗಳನ್ನು ಪ್ರದರ್ಶಿಸುತ್ತವೆ. ಅನೇಕ ಗುಹಾಲಯಗಳಲ್ಲಿ ಕಾಲ ಮತ್ತು ಪ್ರಕೃತಿಯ ಹೊಡೆತದಿಂದ ಚಿತ್ರಗಳು ನಾಶವಾಗಿದೆ. ಆದಾಗ್ಗ್ಯೂ ಅವುಗಳ ಭವ್ಯಕಲ್ಪನೆಯನ್ನು ಚಿತ್ರಿಸಿಕೊಳ್ಳಲು ಎಡೆಯಿದೆ. ಪಳೆಯುಳಿಕೆಗಳನ್ನು ಇತ್ತೀಚೆಗೆ ಉದ್ಧಾರಮಾಡಿ ಕಾಪಾಡಿಕೊಂಡು ಬರುವ ಏರ್ಪಾಡು ಮಾಡಲಾಗಿದೆ. ಅಜಂತದ ಗುಹೆಗಳಲ್ಲಿ ಕಂಡುಬರುವ ಚಿತ್ರಗಳ ಮುಖ್ಯಗುರಿ ಮತಬೋಧನೆ. ಬೌದ್ಧ ಭಿಕ್ಷುಗಳು, ಕೆಂಪು, ಹಸಿರು, ಹಳದಿ, ಊದ, ಧೂಮ್ರ ಮತ್ತು ನೀಲವರ್ಣಗಳಿಂದ ಬಿಡಿಸಿರುವ ಭಿತ್ತಿಚಿತ್ರಗಳು ವರ್ಣನಾತೀತವಾದ ಸೌಂದರ್ಯವನ್ನೂ ಕೌಶಲವನ್ನೂ ಪ್ರದರ್ಶಿಸುತ್ತವೆ. ಚಿತ್ರಕಾರರು ಸಾಂಪ್ರದಾಯಿಕ ನೀತಿಯನ್ನು ಅನುಸರಿಸಿ ತಮ್ಮ ಪ್ರತಿಭೆ ಮತ್ತು ಸ್ವಾತಂತ್ರ್ಯವನ್ನು ತೋರ್ಪಡಿಸಿದ್ದಾರೆ. ಬೋಧಿಸತ್ವ ಬುದ್ಧದೇವನ ಜೀವನದ ಪ್ರಮುಖ ಘಟನೆಗಳು ಸಜೀವವಾಗಿ ಚಿತ್ರಿಸಲಾಗಿದೆ. ಹೂಬಳ್ಳಿಗಳ, ಗೂಳಿ, ಕಪಿ, ನವಿಲು ಮುಂತಾದ ಪ್ರಾಣಿ ಪಕ್ಷಿಗಳ ಚಿತ್ರಗಳು ನೈಜ ಜೀವಿಗಳಂತಿವೆ. ಸ್ತ್ರೀ ಚಿತ್ರಗಳು ಭಾರತೀಯ ಸ್ತ್ರೀಯರ ಸಹಜವಾದ ಶರೀರಭಂಗಿ, ಪ್ರಮಾಣ, ಅಲಂಕಾರ, ಮಾರ್ದವ, ಲಾವಣ್ಯಗಳನ್ನು ನಿದರ್ಶಿಸುತ್ತವೆ. ದೇವಾನುದೇವತೆಗಳ, ಅಪ್ಸರೆಯರ, ಕಿನ್ನರರ, ಪ್ರಭು, ಪ್ರಭೃತಿಗಳ, ಗಣ್ಯರ, ವೀರರ, ಹಳ್ಳಿ, ನಗರಗಳ, ಸಂತರ ಮತ್ತು ಮಹರ್ಷಿಗಳ ಚಿತ್ರಗಳು ಕಂಡುಬರುತ್ತವೆ.

ಅಜಂತಾ ಗುಹೆಗಳಿಗೆ ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳಿಂದಾಗಿ ಯಾವುದೇ ಪ್ರಭಾವ ಬೀರುವುದಿಲ್ಲ ಆದುದರಿಂದ ವರ್ಷದ ಎಲ್ಲ ಕಾಲದಲ್ಲೂ ಭೇಟಿನೀಡಬಹುದಾದ ಸ್ಥಳ ಇದಾಗಿದೆ. ಈ ಗುಹೆಗಳ ಬಗ್ಗೆ ಓದಿ ತಿಳಿದುಕೊಳ್ಳುವುದಕ್ಕಿಂತ ವೈಯಕ್ತಿಕವಾಗಿ ಭೇಟಿ ನೀಡುವುದು ಉತ್ತಮ. ವಿಶಾಲತೆ ಮತ್ತು ಭವ್ಯತೆಯನ್ನು ಹೊಂದಿರುವ ಈ ಪಾರಂಪರಿಕ ತಾಣಗಳು, ಸಾಯುವ ಮೊದಲು ಭೇಟಿ ನೀಡಲೇಬೇಕಾದ ವಿಶ್ವದ ಕೆಲವು ತಾಣಗಳಲ್ಲಿ ಒಂದಾಗಿದೆ. ಯಾವುದೇ ಕಾರಣಕ್ಕಾಗಿ ಈ ಅದ್ಭುತವನ್ನು ವೀಕ್ಷಿಸುವ ಅವಕಾಶವನ್ನು ಬಿಡಬೇಡಿ. ಮೋಡಿಗೊಳಿಸುವ ಈ ಗುಹೆಗಳು ನಿಮ್ಮನ್ನು ನಿಬ್ಬೆರಗಾಗಿಸುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top