ಈಗ ನೋಡಿ, ತಮಿಳ್ನಾಡಲ್ಲಿ ಬೀದೀಗಿಳಿದು ಜಲ್ಲಿಕಟ್ಟನ್ನ ಉಳಿಸಿಕೊಳೋ ಪ್ರಯತ್ನ ಮಾಡ್ತಾ ಇದಾರೆ.ಆದರೆ ಈ ಜಲ್ಲಿಕಟ್ತಿನ ತರಹದ್ದೇ ನಮ್ಮದೂ ಒಂದು ಆಟ ಇದೆ – ಕಂಬಳ ಅಂತ. ಗೊತ್ತು ತಾನೇ?
ನೀರು ತುಂಬಿರೋ ಕೆಸರು ಗದ್ದೆ ಅಥವಾ ನದಿ ದಡದ ಮರಳು ದಂಡೆ ಬದಿಯಲ್ಲಿ ಕೃತಕವಾಗಿ ಕಟ್ಟಿರೋ ಕೊಳದಲ್ಲಿ ಕೋಣಗಳ ರೇಸ್ ಅದು. ಕರ್ನಾಟಕದ ಕರಾವಳಿಯಲ್ಲಿ ಅನಾದಿಕಾಲದಿಂದ ನಡ್ಕೊಂಡ್ ಬಂದಿದೆ.ನೆನಪಿಡಿ, ಸುಪ್ರೀಂ ಕೋರ್ಟು ಜಲ್ಲೀಕಟ್ಟಿನ ಮೇಲೆ ನಿಷೇಧ ಹೇರುವಾಗ ನಮ್ಮ ಕಂಬಳದ ಮೇಲೂ ಹೇರಿದೆ.
ಸುಪ್ರೀಂ ಕೋರ್ಟ್ ಆದೇಶ ಹೀಗಿದೆ:
“We, therefore, hold that Animal Welfare Board of India (AWBI)is right in its stand that jallikattu, bullock-cart race and such events per-se violate Sections 3, 11(1)(a) and 11(1)(m)(ii) of PCA Act and hence we uphold the notification dated 11.7.2011 issued by the Central Government, consequently, Bulls cannot be used as performing animals, either for the Jallikattu events or Bullock-cart Races in the State of Tamil Nadu, Maharashtra or elsewhere in the country.”
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಅಚರಣೆಯಾದ ಕಂಬಳ ಕ್ರೀಡೆಗೆ ಹೈಕೋರ್ಟ್ ನಿಷೇಧ ಹೇರಿ ಮಂಗಳವಾರ ಆದೇಶ ನೀಡಿದೆ.ಕಂಬಳ ಕ್ರೀಡೆಗೆ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಖಂಡಿಸಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿಯು ಈ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು, ಸಂಸತ್ನಲ್ಲಿ ನಿಯಮ ತಿದ್ದುಪಡಿಗೆ ಒತ್ತಾಯ ಹೇರಲು ಹಾಗೂ ಜಿಲ್ಲೆಯಲ್ಲಿ ಬೃಹತ್ ಜನಾಂದೋಲನ ಪ್ರತಿಭಟನೆ ನಡೆಸಿದ್ದರು ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪ್ರಾಣಿ ಹಿಂಸೆ ಕಾರಣದಿಂದಾಗಿ ಕರಾವಳಿಯ ಸಂಪ್ರದಾಯ ಕ್ರೀಡೆ ಕಂಬಳಕ್ಕೆ ಹೈಕೋರ್ಟ್ ನಿಷೇಧವೇರಿದೆ.
ಕಂಬಳದ ಓಟದ ಹಿನ್ನಲೆ
ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ.
ಕರ್ನಾಟಕದ ಕರಾವಳಿ ಜಾನಪದ ಜನಪ್ರೀಯ ಕ್ರೀಡೆ ಕಂಬಳ ಗದ್ದೆ ಓಟದ ಹಿನ್ನಲೆ ಸುಮಾರು 700 ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳುಮೆಗಾಗಿ ಕೋಣಗಳನ್ನು ಬಳಸುವುದು ಸಾಮಾನ್ಯ. ಅವುಗಳಲ್ಲಿ ಬಲಿಷ್ಠವಾದವುಗಳ ಮಧ್ಯೆ ಓಟದ ಸ್ಪರ್ಧೆ ಏರ್ಪಡಿಸಿ ವಿಜೇತರಾದವರನ್ನು ಸನ್ಮಾನಿಸುವದರ ಹಿಂದೆ ಕೃಷಿಕರ ಕ್ರಿಡಾ ಮನೋಭಾವಕ್ಕೆ ಇಂಬು ಕೊಡುವ ಉದ್ದಿಶ್ಯ ಸ್ಪಷ್ಟ. ಅಂತೆಯೇ ಕೋಣಗಳನ್ನು ಚೆನ್ನಾಗಿ ಸಲಹಲು ಇದೊಂದು ನೆವವೂ ಹೌದು. ಭತ್ತದ ಮೊದಲ ಕೊಯಿಲಿನ ನಂತರ ಈ ಕ್ರೀಡೆ ನಡೆಯುತ್ತದೆ. ನವೆಂಬರ್-ಡಿಸೆಂಬರ್ ನಂತರದ ಛಳಿಗಾಲದಲ್ಲಿ ಆರಂಭವಾಗುವ ಕಂಬಳ ಕರಾವಳಿಯ ಬಿಸಿಲ ಬೇಗೆ ಏರುವ ಮೊದಲೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯುತ್ತದೆ
ಕಂಬಳದ ಕೋಣಗಳು
ಕಂಬಳದ ಕೋಣವನ್ನು ಸಾಕುವುದೆಂದರೆ ಅದು ಸಾಮಾನ್ಯವಲ್ಲ. ಒಳ್ಳೆಯ ಜಾತಿಯ ಕೋಣವನ್ನು ಆರಿಸಿ ಅದರ ಚೆನ್ನಾದ ಆರೈಕೆ ಮಾಡಿ, ಕಂಬಳಕ್ಕೆ ತಯಾರಿ ಮಾಡುವುದರೊಂದಿಗೆ, ಅಂತಹ ಕೋಣಗಳನ್ನು ಓಡಿಸಲು ಬೇಕಾದ ಜನವನ್ನು ತಯಾರಿ ಮಾಡುವುದೂ ಕೋಣದ ಯಜಮಾನನಿಗೆ ಅಗತ್ಯ. ಇದು ಖರ್ಚಿನ ಬಾಬ್ತೂ ಹೌದು, ಆ ಕಾರಣಕ್ಕಾಗಿ ಪ್ರತಿಷ್ಠೆಯ ಸಂಕೇತವೂ ಹೌದು. ಪ್ರತಿ ದಿನವೂ ಅವುಗಳಿಗೆ ಚೆನ್ನಾದ ಹುಲ್ಲು, ಬೇಯಿಸಿದ ಹುರುಳಿ ತಿನ್ನಿಸಲಾಗುತ್ತದೆ. ಅಂತೆಯೇ ಎಣ್ಣೆ ಹಚ್ಚಿ ಆರೈಕೆ ಮಾಡಲಾಗುತ್ತದೆ. ಕಂಬಳದ ಓಟಕ್ಕೆ ತಯಾರಿಯೂ ಮುಖ್ಯ. ಜೊತೆಯ ಕೋಣದೊಂದಿಗೆ ಸಮನಾಗಿ ಕೆಸರು ಗದ್ದೆಯಲ್ಲಿ ಗಲಾಟೆ ಗೌಜುಗಳ ಮಧ್ಯೆ ಓಡುವ ತರಬೇತಿಯನ್ನು ಈ ಕೋಣಗಳಿಗೆ ನೀಡಲಾಗುತ್ತದೆ. ಕಂಬಳದ ಓಟಕ್ಕೆ ಯೋಗ್ಯವೆಂದು ತೋರಿದ ಕೋಣಗಳ ಖರೀದಿ-ಮಾರಾಟ ಲಕ್ಷಗಟ್ಟಲೆ ರೂಪಾಯಿಗಳಲ್ಲಿ ನಡೆಯುತ್ತದೆ.
ಕಂಬಳ ಓಟದ ವಿಧಗಳು
ಈ ಓಟದಲ್ಲೂ ಕೆಲವು ವಿಧಗಳಿವೆ:
ಹಗ್ಗದ ಓಟ: ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗವೊಂದನ್ನು ಕಟ್ಟಿ, ಆ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸುವುದು.
ನೇಗಿಲು ಓಟ: ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗವೊಂದರ ಮಧ್ಯೆ ಮರದ ದಂಡವನ್ನು ಕಟ್ಟಿ, ಆ ದಂಡದ ಕೊನೆಗೆ ಸಣ್ಣ ನೇಗಿಲಿನಾಕಾರದ ಮರದ ತುಂಡೊಂದನ್ನು ಜೋಡಿಸಿ, ಆ ನೇಗಿಲನ್ನು ಹಿಡಿದು ಕೋಣಗಳನ್ನು ಓಡಿಸುವುದು.
ಅಡ್ಡ ಹಲಗೆ ಓಟ: ನೊಗದ ಮಧ್ಯೆ ಉದ್ದನೆಯ ದಂಡು ಇರುವ ಅಡ್ಡ ಹಲಗೆಯನ್ನು ಕಟ್ಟಿ, ಆ ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸುವುದು. ಈ ತರಹದ ಹಲಗೆಯನ್ನು ಉತ್ತ ಗದ್ದೆಯ ಮಣ್ಣನ್ನು ಸಮನಾಗಿ ಹರಡಲು ಉಪಯೋಗಿಸುತ್ತಾರೆ.
ಕೆನೆ ಹಲಗೆ ಓಟ: ನೊಗದ ಮಧ್ಯೆ ಉದ್ದನೆಯ ದಂಡು ಇರುವ ದಪ್ಪನೆಯ ಮರದ ತುಂಡಿನಿಂದ ಮಾಡಿದ ಕೆನೆ ಹಲಗೆಯನ್ನು ಕಟ್ಟಿ ಅದರ ಮೇಲೆ ಒಂದು ಕಾಲನ್ನಿಟ್ಟು ಕೋಣಗಳನ್ನು ಓಡಿಸುವುದು. ಇದರಲ್ಲಿ ಕೆನೆ ಹಲಗೆಯಿಂದ ಮೇಲಕ್ಕೆ ಕೆಸರು ನೀರು ಚಿಮ್ಮಿಸುವುದು ಮುಖ್ಯ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
