fbpx
ರಾಜಕೀಯ

ಜೆಡಿಎಸ್ ಪಕ್ಷಕ್ಕೆ ದೇವೇಗೌಡರೇ ಚಾಣಕ್ಯರು

ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಜಯ ಸಾಧಿಸಲು ಹಲವು ತಂತ್ರಗಳನ್ನು ರೂಪಿಸುತ್ತವೆ. ಬಹುಮತ ಗಳಿಸಲು ಏನು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತವೆ. ಅದಕ್ಕಾಗಿ ಹಣದ ಹೊಳೆಯನ್ನೂ ಹರಿಸುತ್ತವೆ. ಅವುಗಳ ಗುರಿ ಒಂದೆ ಗೆಲುವು. ಅದಕ್ಕಾಗಿ ಮಿತ್ರರು ಶತೃಗಳಾಗುತ್ತಾರೆ. ಶತೃಗಳು ಮಿತ್ರರಾಗುತ್ತಾರೆ. ಇದೆಲ್ಲ ರಾಜಕೀಯದಲ್ಲಿ ಸಾಮಾನ್ಯ. ಈಗಂತೂ ದೇಶದಲ್ಲಿ ನೂರಾರು ಪಕ್ಷಗಳು ಉದಯಗೊಂಡಿವೆ. ಜಾತಿ ರಾಜಕೀಯದ ಲೆಕ್ಕಾಚಾರವೆ ಇವುಗಳ ಆದ್ಯತೆ. ಹಣ ಬಲ ತೋಳ್ಬಲಗಳೆ ಪ್ರಮುಖ ಅಸ್ತ್ರಗಳು.

ಇದೀಗ ರಾಜಕೀಯ ಪಕ್ಷಗಳು ಹೊಸ ಯೋಜನೆಯನ್ನು ಅಳವಡಿಸಿಕೊಂಡಿವೆ. ರಾಜಕೀಯ ತಂತ್ರಜ್ಞರನ್ನು ನೇಮಕ ಮಾಡಿಕೊಂಡು ಜಯ ಸಾಧಿಸಲು ಮುಂದಾಗುತ್ತಿವೆ. ಇದನ್ನು ಪ್ರಥಮ ಬಾರಿಗೆ ಅಳವಡಿಸಿಕೊಂಡಿದ್ದು ಬಿಜೆಪಿ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಪ್ರಚಾರ ಸಮಿತಿ ಪ್ರಶಾಂತ ಕಿಶೋರ್ ತಂಡವನ್ನು ಚುನಾವಣಾ ತಂತ್ರ ರೂಪಿಸಲು ನೇಮಕ ಮಾಡಿಕೊಂಡಿತ್ತು. ಅವರ ಮಾರ್ಗದರ್ಶನದಲ್ಲಿ ಚುನಾವಣೆಯನ್ನು ಎದುರಿಸಿದ ಬಿಜೆಪಿ ಬಹುಮತಗಳಿಸುವಲ್ಲಿ ಯಶಸ್ವಿಯೂ ಆಯಿತು. ಹೀಗಾಗಿ ವಿಜಯಕ್ಕೆ ಪ್ರಶಾಂತ ಕಿಶೋರ್ ಕಾರಣ ಎಂಬ ಖ್ಯಾತಿಗೆ ಭಾಜನರಾದರು.

ಪ್ರಶಾಂತ ಕಿಶೋರ್ ಚುನಾವಣಾ ಚಾಣಕ್ಯ ಎಂದು ಕರೆಯಲ್ಪಡತೊಡಗಿದರು. ಬಿಹಾರ್ ರಾಜ್ಯದ ಚುನಾವಣೆಯಲ್ಲಿ ನಿತೀಶ್ ಮತ್ತು ಲಾಲು ಪ್ರಸಾದ ಯಾದವ್ ಮಿತ್ರ ಪಡೆ ಇದೇ ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ಚುನಾವಣೆ ವಿಜಯಕ್ಕೆ ತಂತ್ರಜ್ಞರನ್ನಾಗಿ ನೇಮಿಸಿಕೊಂಡರು. ಹೀಗಾಗಿ ಬಿಜೆಪಿ ಬಹು ಕಠಿಣ ಪ್ರಸಂಗ ಎದುರಿಸಬೇಕಾಯಿತು. ನಿತೀಶ್ ಮತ್ತು ಲಾಲು ಮಿತ್ರ ಪಡೆ ಜಯಗಳಿಸುವಲ್ಲಿ ಯಶಸ್ವಿಯೂ ಆದರು. ಬಿಜೆಪಿ ಬಿಟ್ಟು ಹೊರಬಂದ ಪ್ರಶಾಂತ್ ಬಿಜೆಪಿ ವಿರುದ್ಧವೆ ಬೇರೆ ಪಕ್ಷ ಗೆಲ್ಲುವಂತೆ ಮಾಡಿದ್ದರಿಂದ ಅವರ ಮಾರ್ಗದರ್ಶನಕ್ಕೆ ವಿವಿಧ ರಾಜಕೀಯ ಪಕ್ಷಗಳು ಮುಂದಾಗುತ್ತಿವೆ. ಈಗ ದೇಶದಲ್ಲಿ ಚುನಾವಣಾ ಚಾಣಕ್ಯ ಎಂದೇ ಅವರನ್ನು ಸಂಬೋಧಿಸಲಾಗುತ್ತಿದೆ. ಅವರಿಗೆ ರಾಜಕೀಯ ಪಕ್ಷಗಳ ಬೇಡಿಕೆ ಹೆಚ್ಚಾಗಿದೆ.

ಇದೀಗ ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಪ್ರಶಾಂತ್ ಕಿಶೋರ್ ಅವರನ್ನು ನೇಮಕ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಕಾಂಗ್ರೆಸ್ ನಂತರ ನಡೆದ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿಯೂ ಸಾಲು ಸೋಲನ್ನೆ ಕಂಡಿತು. ಉತ್ತರ ಪ್ರದೇಶ ದೇಶದಲ್ಲಿಯೆ ಪ್ರತಿಷ್ಠಿತ ರಾಜ್ಯಗಳಲ್ಲೊಂದು. ಅಲ್ಲಿ ವಿಧಾನಸಭೆ ಚುನಾವಣೆ ರಾಜಕೀಯ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ. ಕಾಂಗ್ರೆಸ್ ವಿಜಯಕ್ಕೆ ಪ್ರಶಾಂತ್ ಬ್ರಾಹ್ಮಣ ಸಮುದಾಯಕ್ಕೆ ಮಹತ್ವ ಕೊಡಲು ತಂತ್ರ ರೂಪಿಸಿದ್ದಾರೆ. ಈಗಾಗಲೆ ಶೀಲಾ ದಿಕ್ಷೀತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ. ಹಾಗೆಯೆ ಪ್ರಿಯಾಂಕಾ ಗಾಂಧಿ ಅವರಿಗೆ ಚುನಾವಣಾ ನೇತೃತ್ವ ವಹಿಸಲು ಸೂಚಿಸಿದ್ದಾರೆ. ಇಲ್ಲಿ ಅವರ ತಂತ್ರ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಇದೇನೆ ಇರಲಿ, ಕರ್ನಾಟಕದಲ್ಲಿ 2018ರ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿ ನಿಂತಿವೆ. 18 ತಿಂಗಳು ಮೊದಲೇ ಚುನಾವಣಾ ರಣ ಕಹಳೆ ಊದಿವೆ. ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಮುಂದಾದರೆ, ಜೆಡಿಎಸ್ ಎಂದಿನಂತೆ ಕುಮಾರಸ್ವಾಮಿ ಸಾರಥ್ಯದಲ್ಲಿ ರಥವನೇರಿದೆ. ಜೆಡಿಎಸ್ ಪಕ್ಷಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ಚಾಣಕ್ಯರು. ಅವರಿಂದಲೇ ಇಂದು ರಾಜ್ಯದಲ್ಲಿ ಜನತಾ ಪರಿವಾರ ಜೀವಂತವಾಗಿದೆ. ಬೇರೆ ಯಾವ ಚಾಣಕ್ಯ ತಂತ್ರಜ್ಞರು ಅವರಿಗೆ ಬೇಕಾಗಿಲ್ಲ. ಅವರ ತಂತ್ರ ಯಾವ ಪಕ್ಷಗಳಿಗೂ ಅರ್ಥವಾಗುವುದಿಲ್ಲ. ರಾಜ್ಯದಲ್ಲಿ ಕಾವೇರಿ ಸಮಸ್ಯೆ ಉದ್ಭವಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನ ಪಡೆಯಬೇಕಾಯಿತು.

1983ರಲ್ಲಿ ರಾಜ್ಯದಲ್ಲಿ ಜನತಾ ಪಕ್ಷ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದಾಗ ಆಗ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ದೇವೇಗೌಡರು ಬೃಹತ್ ನೀರಾವರಿ ಸಚಿವರಾಗಿದ್ದರು. ಅಂದು ಅವರು ಉತ್ತರ ಕರ್ನಾಟಕ ವಿರೋಧಿಗಳು ಎಂಬ ಆಪಾದನೆಗೆ ಒಳಗಾಗಿದ್ದರು. ಕೃಷ್ಣಾ ಯೋಜನೆಗಳ ವಿಳಂಬಕ್ಕೆ ಅವರೇ ಕಾರಣ ಎಂಬ ಗೂಬೆ ಕೂಡಿಸಲಾಯಿತು.
ತಕ್ಷಣ ಅವರು ಉತ್ತರ ಕರ್ನಾಟಕದ ಜಿಲ್ಲೆ ವಿಜಯಪುರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಕೃಷ್ಣಾ ಯೋಜನೆಗಳ ಅನುಷ್ಠಾನಕ್ಕೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ಕುರಿತು ವಿವರಿಸಿ ತಾವು ವಿರೋಧಿಗಳಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದರು. ಜನತಾ ಪರಿವಾರದ ಪ್ರಮುಖ ಮುಖಂಡರಾದ ದೇವೇಗೌಡರನ್ನು ಹೆಗಡೆ ಅವರಿಂದ ಬೇರ್ಪಡಿಸಿದರೆ ಜನತಾ ಪಕ್ಷ ಅಧಿಕಾರ ಕಳೆದು ಕೊಳ್ಳುತ್ತದೆ ಎಂಬುದನ್ನು ಗಮನಿಸಿ ಕಾಂಗ್ರೆಸ್ ಈ ಆಪಾದನೆಯನ್ನು ಬೇರೆಯವರ ಮೂಲಕ ಹೊರಬಿಟ್ಟಿತ್ತು.

ಇಂದಿಗೂ ದೇವೇಗೌಡ ಮತ್ತು ಅವರ ಪುತ್ರರು ಉತ್ತರ ಕರ್ನಾಟಕ ವಿರೋಧಿಗಳು ಮತ್ತು ಲಿಂಗಾಯತ ವಿರೋಧಿಗಳು ಎಂಬ ಗಂಭೀರ ಆರೋಪಗಳನ್ನು ಎದುರಿಸುತ್ತಲೆ ಇದ್ದಾರೆ. ಹಳೆ ಮೈಸೂರ ಭಾಗದಲ್ಲಿ ಬಲಿಷ್ಠವಾಗಿರುವ ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಬಾರದೆಂಬುದೇ ಇತರ ರಾಜಕೀಯ ಪಕ್ಷಗಳ ತಂತ್ರ. ಇಷ್ಟೆಲ್ಲ ವಿರೋಧವನ್ನು ಎದುರಿಸಿಯೂ ಜೆಡಿಎಸ್ ಕಳೆದ ಚುನಾವಣೆಯಲ್ಲಿ 44 ಶಾಸಕರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಯಿತು. ಈಗ ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಹುಟ್ಟು ಹಾಕಿ ಅದನ್ನು ಅಶಕ್ತಗೊಳಿಸುವಲ್ಲಿ ಕಾಂಗ್ರೆಸ್ ಪಕ್ಷ ಸಫಲವಾಗಿದೆಯಾದರೂ 2018ರ ಚುನಾವಣೆಯಲ್ಲಿ ಮತ್ತೆ ಅದರ ಪ್ರಭಾವವನ್ನು ಎದುರಿಸಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಭಯ ಯಾವಾಗಲೂ ಇದೆ. ಜೆಡಿಎಸ್ ಬಲಿಷ್ಠವಾದರೆ ಕಾಂಗ್ರೆಸ್ ಪರಾಭವ ಖಚಿತ.

ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವದಾಗಿ ಘೋಷಿಸುವ ಮೂಲಕ 2018ರ ಚುನಾವಣೆಗೆ ರಣ ಕಹಳೆ ಊದಿರುವ ಜೆಡಿಎಸ್ ಇದೀಗ ರಾಜ್ಯಾದ್ಯಂತ ಸಂಘಟನೆಗೆ ಮುಂದಾಗಿದೆ. ಕುಮಾರಸ್ವಾಮಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ಮನೆಯನ್ನು ಮಾಡಿ ಈ ಭಾಗದಲ್ಲಿ ಒಂದು ವರ್ಷಗಳ ಕಾಲ ಪಕ್ಷ ಸಂಘಟನೆಗೆ ಅಹಿರ್ನಿಸಿ ಶ್ರಮವಹಿಸಲಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವದಾಗಿ ಪ್ರಕಟಿಸಿರುವ ಅವರು ವೀರಶೈವರ ಮತಕ್ಕೆ ಲಗ್ಗೆ ಹಾಕುವ ಗುರಿ ಹೊಂದಿದ್ದಾರೆ. ಇದು ಅವರ ಚುನಾವಣಾ ಚಾಣಕ್ಯ ತಂತ್ರ. ಇದರ ಹಿಂದೆ ದೇವೇಗೌಡರ ಇನ್ನಷ್ಟು ಪ್ರಮುಖ ಅಸ್ತ್ರಗಳಿವೆ. ಅವೆಲ್ಲ ಮುಂದಿನ ದಿನಗಳಲ್ಲಿ ಒಂದೊಂದಾಗಿ ಹೊರಬರಲಿವೆ.

ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ಧುರೀಣ ಬಸವರಾಜ ಹೊರಟ್ಟಿ ಇದಕ್ಕೆ ಸಾಥ್ ನೀಡಲಿದ್ದಾರೆ. ಬೇರೆ ಪಕ್ಷಗಳಲ್ಲಿರುವ ಜನತಾ ಪರಿವಾರದ ಇತರ ನಾಯಕರನ್ನು ಕರೆತರುವ ತಂತ್ರವೂ ಇದೆ. ಇದಕ್ಕೆ ಸಮಯ, ಸಂದರ್ಭ ನೋಡಿ ಗಾಳ ಹಾಕುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವೇಗೌಡರ ತಂತ್ರ ಮತ್ತು ಕುಮಾರಸ್ವಾಮಿ ಅವರ ಶ್ರಮ ಹಾಗೂ ಬಸವರಾಜ ಹೊರಟ್ಟಿ ಅವರ ದೂರದೃಷ್ಟಿ ಜೆಡಿಎಸ್ ಪಕ್ಷಕ್ಕೆ ಬಲ ಕೊಡುವದೇ ಎಂಬುದು ಈಗ ರಾಜ್ಯ ರಾಜಕೀಯದಲ್ಲಿ ಬಹು ಚರ್ಚಿತ ವಿಷಯವಾಗಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ವಿಷಯ ಕೂಡ ಚರ್ಚೆಗೆ ಗ್ರಾಸ ಒದಗಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top