fbpx
My Story

ಪರಮಭಕ್ತೆ ಕಾನ್ಹೋಪಾತ್ರಾ

ಈ ಪುಣ್ಯಭೂಮಿ ಭಾರತದ ಮಹಾರಾಷ್ಟ್ರದಲ್ಲಿ ಅನಂತ ಸಂತರು, ಜ್ಞಾನಿಗಳು, ತಪಸ್ವಿಗಳು, ಯೋಗಿಗಳು, ಮಹಾತ್ಮರು ಜನ್ಮವೆತ್ತಿ ಈ ನೆಲವನ್ನು ಪಾವನಗೊಳಿಸಿದ್ದಾರೆ. ಅಂಥವರಲ್ಲಿ ಕಾನ್ಹೋಪಾತ್ರಾವೆಂಬ ಸ್ತ್ರೀ ರತ್ನವು ಪಾಂಡುರಂಗನ ಪರಮಭಕ್ತೆಯಾಗಿ ಪಂಢರಾಪುರದ ಪಾಂಡುರಂಗನ ದಕ್ಷಿಣ ದ್ವಾರದಲ್ಲಿಯೇ ವಾಸ ಮಾಡಿ ವಿದೇಹ ಕೈವಲ್ಯ ಹೊಂದಿದ್ದಾಳೆ.
ಶ್ರೀಕ್ಷೇತ್ರ ಪಂಢರಾಪುರದಿಂದ ಏಳು ಹರದಾರಿಯ ಅಂತರದಲ್ಲಿ ಮಂಗಳವೇಡೆ ಎಂಬ ಗ್ರಾಮವಿದೆ. ಅಲ್ಲಿ ಕೆಲ ಕಾಲದ ಹಿಂದೆ `ಶ್ಯಾಮಾ’ ಎಂಬುವವಳಿದ್ದರು. ಈಕೆಯ ಉದರದಲ್ಲಿ`ಕಾನ್ಹೋಪಾತ್ರಾ’ವೆಂಬ ಕನ್ಯಾರತ್ನ ಜನಿಸಿತು. ಆಕೆಯು ಬಲು ರೂಪವಂತೆ. ಬಾಲ್ಯದಲ್ಲಿಯೇ ಆಕೆಯ ತಾಯಿಯು ಕಾನ್ಹಾಳಿಗೆ ನೃತ್ಯ, ಸಂಗೀತ ಪಾಠ ಹೇಳಿಕೊಟ್ಟು ಆಕೆಯನ್ನು ಶ್ರೇಷ್ಠ ನೃತ್ಯಗಾರ್ತಿ, ಸಂಗೀತಗಾರ್ತಿಯನ್ನಾಗಿ ಮಾಡಿದಳು.

ಹೀಗೆ ಒಂದು ದಿನ ಕಾನ್ಹಾಳ ತಾಯಿ ಶ್ಯಾಮಾಳು ಮಗಳನ್ನು ಕಂಡು, ಕಾನ್ಹಾ ನಾವು ಈ ದಿವಸ ನಗರದ ರಾಜನ ಹತ್ತಿರ ಹೋಗೋಣ. ರಾಜರು ನಿನ್ನ ರೂಪ ಲಾವಣ್ಯಕ್ಕೆ ಮನಸೋತು ನಿನಗೆ ಧನ-ಕನಕ, ವಸ್ತ್ರ ಒಡವೆಗಳನ್ನು ಕೊಟ್ಟು ಸತ್ಕರಿಸುವನು ಎಂದು ಮಗಳಿಗೆ ಹೇಳಿದಾಗ ಕಾನ್ಹಾಳು ತನ್ನ ತಾಯಿಗೆ ತಾಯಿ ಈ ಮೃತ್ಯು ಲೋಕದಲ್ಲಿ (ಭೂಲೋಕ) ಇರುವ ಪುರುಷರೆಲ್ಲ ನನಗೆ ಬಂಧು-ಸಮಾನರು. ಕಾರಣ ಈ ವಿಷಯ ನನಗೆ ಹೇಳಬೇಡ ಎಂದು ಸ್ಪಷ್ಟವಾಗಿ ಹೇಳಿಯೇಬಿಟ್ಟಳು. ಇದಾದ ಕೆಲ ಸಮಯದ ನಂತರ ಶ್ರೀ ಪಂಢರಾಪುರದ ಮಹಾಯಾತ್ರೆ ಬಂದಿತು. ಅದೇ ಮಾರ್ಗವಾಗಿ ಸಂತರಲ್ಲಿ ವಿಠ್ಠಲನ ನಾಮಸ್ಮರಣೆ ಮಾಡುತ್ತ ದಿಂಡಿಯು ಹೊರಟಿತ್ತು. ಅದನ್ನು ನೋಡಿ ಕಾನ್ಹೋಪಾತ್ರಾಳು ಸಂತರಿಗೆ ಸಾಷ್ಟಾಂಗವೆರಗಿ ತಾವು ಈಗ ಎಲ್ಲಿಗೆ ಹೊರಟಿರುವಿರಿ? ಎಂದು ಕೇಳಲಾಗಿ ಅವರು ಕನ್ಯಾಮಣಿ ನಾವು ಪಾಂಡುರಂಗನ ಭಕ್ತರು. ಅವನ ದರ್ಶನ ಮಾಡಲು ಪಂಢರಾಪುರಕ್ಕೆ ಹೊರಟಿರುವೆವು. ಪಾಂಡುರಂಗನೇ ಮಹಾವಿಷ್ಣು. ಅವನೇ ಈಗ ಪಂಢರಾಪುರದಲ್ಲಿ ಬಂದು ನೆಲೆಸಿರುವನು. ಎಂದು ಹೇಳಿದರು. ಆಗ ಕಾನ್ಹೋಪಾತ್ರಳು ಸಂತ ಮಹಾಶಯರೇ ನಾನು ತಮ್ಮೆಲ್ಲರ ಜೊತೆ ಬಂದು ಆ ದೇವನಿಗೆ ಶರಣಾದಲ್ಲಿ ಆ ಪರಮಾತ್ಮನು ನನ್ನನ್ನು ಅಂಗೀಕರಿಸುವನೆ? ಎಂದು ಕೇಳಲು, ಸಂತರೆಲ್ಲ ಓಹೋ ಅವಶ್ಯವಾಗಿ ಆ ದೇವನು ನಿನ್ನನ್ನು ಕಡೆಗಣಿಸದೇ ಆಶೀರ್ವದಿಸುವನು. ಕೃಷ್ಣಾವತಾರದಲ್ಲಿ `ಕುಬ್ಜ’ ಎಂಬ ಕುರೂಪಿ ಕಂಸನ ದಾಸಿಯಾಗಿದ್ದಳು.

ಅಂಥವಳನ್ನೇ ಅವಳ ಭಕ್ತಿಗೆ ಮೆಚ್ಚಿ ಆಕೆಯನ್ನು ತನ್ನಲ್ಲಿ ಲೀನ ಮಾಡಿಕೊಳ್ಳಲಿಲ್ಲವೆ? ಇನ್ನು ಭ್ರಷ್ಟನಾದ ಅಜಾಮಿಳನನ್ನು ಅಸ್ಪøಶ್ಯನಾದ ಚೊಕ್ಕಾಮಳನನ್ನು ಅವರ ಕಾಯಕ, ಜಾತಿಗಳನ್ನೆನಿಸದೇ ಅವರನ್ನು ತನ್ನ ಸ್ವರೂಪದಲ್ಲಿ ಸೇರಿಸಿಕೊಂಡನು. ಆ ದೇವನು ಪರಮ ದಯಾಳು, ಪತಿತಪಾವನನು, ಘನಶ್ಯಾಮ ಸುಂದರನು, ಭಕ್ತರ ಭಕ್ತಿಗೆ ಮೆಚ್ಚಿದ್ದಾನೆ. ಅಂದ ಮೇಲೆ ನೀನು ಮನಸಾರೆ ಅವನ ನಾಮಸ್ಮರಣೆಯಲ್ಲಿಯೇ ಜೀವಿಸಿದೆಯಾದರೆ ನಿನ್ನನ್ನು ಉದ್ಧರಿಸುವುದರಲ್ಲಿ ಎಳ್ಳನಿತೂ ಸಂಶಯವಿಲ್ಲವೆಂದು ಆ ಸಂತಮಹಾತ್ಮರೆಲ್ಲ ಅವಳಿಗೆ ತಿಳಿ ಹೇಳಿದರು.
ಇದನ್ನೆಲ್ಲ ತದೇಕಚಿತ್ತದಿಂದ ಆಲಿಸಿ, ಸೀದಾ ತನ್ನ ಮನೆಯೊಳಗೆ ಹೋಗಿ, ತನ್ನ ದೀಕ್ಷೆಯನ್ನು ತೆಗೆದುಕೊಂಡು ತನ್ನ ತಾಯಿಯ ಹತ್ತಿರ ಬಂದು ಅವ್ವಾ ನಾನು ಹೊರಗಡೆ ಬಂದಿರುವ ಸಂತಮಹಾತ್ಮರ ಜೊತೆ ನಾನೂ ಪಂಢರಾಪುರಕ್ಕೆ ಶ್ರೀ ಪಾಂಡುರಂಗನ ದರ್ಶನಕ್ಕೆ ಹೋಗುವೆ ಎಂದು ಇಷ್ಟು ಹೇಳಿ ಅವರ ಜೊತೆ ಹೊರಟೇ ಬಿಟ್ಟಳು. ಪಂಢರಾಪುರ ಮುಂದೆ ನಿಂತುಕೊಂಡು ಶ್ರೀ ವಿಠ್ಠಲಾ ನಿನ್ನ ಕೀರ್ತಿ ಕೇಳಿ ನಿನಗೆ ನಾನು ಶರಣು. ಬಂದವರನ್ನು ಕಾಪಾಡುತ್ತೀ ಎಂದೂ ಸಂತ ಮಹಾತ್ಮರು ನನಗೆ ಹೇಳಿದ್ದಾರೆ. ಹೇ ಪರಮಾತ್ಮ, ದಯಾ ಸಿಂಧುವೇ, ಕೃಪಾ ಸಾಗರನೇ, ದೀನ-ದುಃಖಿಗಳಿಗೆ ಆಶ್ರಯದಾತನೇ ಇಂದು ನಾನು ಇದುವರೆಗೆ ನನ್ನಲ್ಲಿದ್ದ ಲೌಕಿಕ ಕಾಮನೆಗಳನ್ನು ದೇಹಾಭಿಮಾನವನ್ನೂ ಸಂಪೂರ್ಣವಾಗಿ ತೊರೆದು ಈಗ ನಿನ್ನಲ್ಲಿ ಶರಣು ಬಂದಿರುವೆನು ಎಂದು ನುಡಿದು ಕಾನ್ಹಾಳು ಒಂದೇಸವನೇ ಅವನ ಗುಣಗಾನ ಮಾಡುತ್ತ ಭಕ್ತಿಯ ಪರಾಕಾಷ್ಟೆ ತಲುಪಿ, ಅತೀವ ಹರ್ಷ ತಾಳಿ, ಶ್ರೀಹರಿಯ ರೂಪವನ್ನು ತದೇಕಚಿತ್ತದಿಂದ ನೋಡುತ್ತ ಬಾಹ್ಯ ಪ್ರಜ್ಞೆ ಇಲ್ಲದೇ ಶ್ರೀಹರಿಯ ಗುಣಗಾನ ಮಾಡುತ್ತ,

ಸದ್ಭಾವದಿಂದ ಶ್ರೀಹರಿಯ ಗುಣಗಳನ್ನು ವರ್ಣಿಸುತ್ತ ದಿನಾಲು ಅವನ ನಾಮಸ್ಮರಣೆಯನ್ನು ಮಾಡುತ್ತ ಪಂಢರಾಪುರದಲ್ಲಿಯೇ ವಾಸ ಮಾಡಿದಳು. ಈಗ ಕಾನ್ಹೋಪಾತ್ರಾಳಿಗೆ ಕೇವಲ ಘನಶ್ಯಾಮ ಸುಂದರನೂ, ಸಚ್ಚಿದಾನಂದ ಘನಪರಮಾತ್ಮನನ್ನು ಬಿಟ್ಟು ಬೇರೆ ಯಾವ ಲೌಕಿಕ ಆಸೆ-ಆಮಿಷ, ಕಾಮನೆಗಳು ಲಯವಾಗಿಬಿಟ್ಟವು. ಹೀಗೆ ಕೆಲವು ದಿನ ಕಳೆಯುವಷ್ಟರಲ್ಲಿ ಒಬ್ಬ ದುಷ್ಟ ಮನುಷ್ಯನು ಬೀದರದ ಸುಲ್ತಾನ (ರಾಜ)ನಿಗೆ ಹೋಗಿ, ಪಂಢರಾಪುರದಲ್ಲಿ ವಿಠ್ಠಲನ ಮಂದಿರದ ಮಹಾದ್ವಾರದ ಬಳಿ ಒಬ್ಬ ವೇಶ್ಯಾಂಗನೆ ಬಂದಿದ್ದಾಳೆ. ಆಕೆ ಮಹಾರೂಪವತಿ. ಸುರಸುಂದರಾಂಗಿನಿ. ಈ ಪೃಥ್ವಿಯಲ್ಲಿ ಆಕೆಯಷ್ಟು ರೂಪಲಾವಣ್ಯವು ಯಾವ ಸ್ತ್ರೀಯರಿಗೂ ಇಲ್ಲ. ದೇವಲೋಕದ ಅಪ್ಸರೆಯರೂ ಕೂಡ ಆಕೆಯ ಚೆಲುವಿಕೆಯನ್ನು ಮತ್ಸರಪಡುವರು ಎಂದು ಹೇಳಿದನು. ಇದನ್ನು ಕೇಳಿ ರಾಜನು ಆಕೆಯನ್ನು ಪಡೆಯುವ ಆಸೆಯಿಂದ ರಾಜದೂತನೊಬ್ಬನನ್ನು ಆ ದುಷ್ಟ ಮನುಷ್ಯನ ಜೊತೆ ಪಂಢರಾಪುರಕ್ಕೆ ಕಳಿಸಿಕೊಟ್ಟನು. ಕಾನ್ಹಾಳು ವಿಠ್ಠಲನ ನಾಮಸ್ಮರಣೆ ಮಾಡುತ್ತ ನಿಂತಿದ್ದಳು. ಆಗ ಆ ರಾಜದೂತನು ಬಂದು ನಮ್ಮ ರಾಜರ ಆಜ್ಞೆ ಆಗಿದೆ. ಈಗ ನೀನು ನಮ್ಮ ಜೊತೆ ಬರಬೇಕು ಎಂದು ಹೇಳಲಾಗಿ, ಆಗ ಕಾನ್ಹಾಳು ಅವನಿಗೆ ಈಗ ಸ್ವಲ್ಪ ತಡೆಯಿರಿ. ನಾನು ಪಾಂಡುರಂಗನಿಗೆ ನಮಸ್ಕಾರ ಮಾಡಿ ಬರುವೆನೆಂದು ಹೇಳಿ ಕಾನ್ಹೋಪಾತ್ರಳು ಶ್ರೀ ಪಾಂಡುರಂಗನೆದುರಿಗೆ ಬಂದು ನಿಂತು ಪರಮಾತ್ಮ ನಾನು ನಿನ್ನವಳೆಂದು ಅಚಲವಾಗಿ ನಂಬಿರುವೆ. ಕಾರಣ ನಿನ್ನ ಪಾದದಿಂದ ನನ್ನನ್ನು ದೂರಕರಿಸಿದರೆ ಈ ದೋಷವು ನಿನಗೆ ತಗಲುವುದು. ನೀನು ಭಕ್ತವತ್ಸಲನಿದ್ದಿ. ಶರಣಾಗತ ವತ್ಸಲವೆಂಬ ಬಿರುದು ಸುಳ್ಳಾಗುತ್ತದೆ. ಒಬ್ಬ ಸಾಮಾನ್ಯ ದುಷ್ಟ ಮನುಷ್ಯನು ನನ್ನನ್ನು ನಿನ್ನಿಂದ ಅಗಲಿಸಿ ಹೊತ್ತೊಯ್ಯುವನೆಂದರೆ ಅದು ಸಾಮಾನ್ಯವೆ? ಅದು ನಿನಗೆ ಅಪಮಾನವಲ್ಲವೆ? ಗಜೇಂದ್ರನು ಸಂಕಷ್ಟದಲ್ಲಿ ಸಿಕ್ಕಿಬಿದ್ದಾಗ ನೀನು `ನಕ್ರ’ (ಸಿಂಹ)ನಿಂದ ಆತನನ್ನು ಬಿಡಿಸಲಿಲ್ಲವೆ?

ಅಂಬರೀಶ ಮಹಾರಾಜನು ಕಷ್ಟಕ್ಕೆ ಗುರಿಯಾದಾಗ ಭಕ್ತ ರಕ್ಷಕನಾದ ನೀನು ಅಂಬರೀಶನಿಗಾಗಿ ಗರ್ಭವಾಸ ಮಾಡಲಿಲ್ಲವೆ? ಅಂದ ಮೇಲೆ ಅನನ್ಯ ನಿನ್ನ ಚರಣದಾಸಿಯಾದ ನನ್ನನ್ನು ನೀನೇಕೆ ಉಪೇಕ್ಷಿಸುವೆ? ಈಗ ನೀನು ಬೀದರ್‍ನ ಆ ನೀಚ ರಾಜನ ಕೈಗೆ ನನ್ನನ್ನು ಒಪ್ಪಿಸಿದೆಯಾದರೆ ಆ ದೋಷ ನಿನಗಲ್ಲದೇ ಅನ್ಯರಿಗಲ್ಲ. ಪರಮಾತ್ಮನೂ ನನ್ನ ಮನಸ್ಸು ನಿನ್ನ ಹೊರತು ಅನ್ಯ ಯಾವುದರ ಮೇಲೆಯೂ ಇಲ್ಲ. ಕಾರಣ ಆ ದುರುಳ ರಾಜನು ತನ್ನ ಕೈಯಿಂದ ನನ್ನನ್ನು ಸ್ಪರ್ಶ ಮಾಡುವುದನ್ನು ನೋಡಿ ಈ ಸಂತ ಮಹಾತ್ಮರೆಲ್ಲ ಕೂಡಿ ನನ್ನನ್ನೂ ನಿನ್ನನ್ನೂ ಅಪಹಾಸ್ಯಗೈಯುವರು. ಇದು ನಿನಗೆ ಶೋಭೆ ತರುವುದೇ? ಕಾರಣ ಹೇ ಪರಮಾತ್ಮ ನನ್ನನ್ನು ತಿರಸ್ಕರಿಸದೇ ನಿನ್ನ ಚರಣದಲ್ಲಿ ಸ್ವಲ್ಪ ಸ್ಥಾನ ಕೊಡು. ಅಲ್ಲಿಯೇ ನಾನು ಹಗಲಿರುಳು ನಿನ್ನ ಧ್ಯಾನದಲ್ಲಿ ಕಾಲ ಕಳೆಯುತ್ತ ವಾಸ ಮಾಡುವೆನೆಂದು ಅಂಗಲಾಚಿ ಬೇಡಿಕೊಂಡಳು. ಈಗ ಕಾನ್ಹಾಳ ಪರಮಭಕ್ತಿಗೆ ಮೆಚ್ಚಿ ಪಾಂಡುರಂಗನು ಸಂಪ್ರೀತನಾಗಿ ಪರಮಾತ್ಮ ಕೂಡಲೇ ಆಕೆಯ ಚೈತನ್ಯವನ್ನೆಲ್ಲ ತನ್ನಲ್ಲಿ ಆಕರ್ಷಿಸಿಕೊಂಡನು. ಕಾನ್ಹಾಳನ್ನು ತನ್ನ ಸ್ವರೂಪದಲ್ಲಿಯೇ ಲೀನಗೊಳಿಸಿಕೊಂಡನು. ಇದನ್ನೆಲ್ಲ ಅಲ್ಲಿದ್ದ ಭಕ್ತ ಮಂಡಳಿ ಕಣ್ಣಾರೆ ಕಂಡು ಬೆಚ್ಚಿಬಿದ್ದು ಅಚ್ಚರಿಪಟ್ಟರು. ಪರಮಾತ್ಮ ಪ್ರಕಟಗೊಂಡು ಆಕೆಯ ದೇಹವನ್ನು ತನ್ನ ಜಾನು (ತೊಡೆ)ವಿನ ಮೇಲೆ ಹಾಕಿಕೊಂಡ ಆಕೆಯು ಆಗಲೇ ಪರಮಾತ್ಮನಲ್ಲಿ ಲೀನವಾಗಿ ಹೋದಳು. ಅಲ್ಲದೇ ಅಲ್ಲಿದ್ದ ಸಂತರೆಲ್ಲ ಕೂಡಿ ಕಾನ್ಹಾಳ ಭೌತಿಕ ಶರೀರವನ್ನು ದೇವ ಮಂದಿರದ ದಕ್ಷಿಣ ದ್ವಾರದಲ್ಲಿ ಸಮಾಧಿ ಮಾಡಿದರು. ಅಲ್ಲಿಯೇ ಆಕೆಯ ಮೃತ ಶರೀರವೇ ತರಟಿ ವೃಕ್ಷ(ಅರಳಿ) ಮರವಾಗಿ ಇಂದಿಗೂ ನಿಂತಿದೆ. ಶ್ರೀಕ್ಷೇತ್ರಕ್ಕೆ ಹೋದವರೆಲ್ಲ ಇಂದಿಗೂ ಕಾಣಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top