ಒಂದು ದೇಶದ ನವಪೀಳಿಗೆ ಅವರ ಹಿರಿಯರು ತೋರಿದ ತ್ಯಾಗ, ಶೌರ್ಯ,ವಿವೇಕ ಮತ್ತು ಆದರ್ಶಗಳನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡು, ಅವರು ತೋರಿದ ಸನ್ಮಾರ್ಗದಲ್ಲಿ ಮುನ್ನಡೆದಾಗ ಮಾತ್ರ ಆ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ.ಅಂತಹ ಮಹನೀಯರಲ್ಲಿ ಅನ್ನಮಾಚಾರ್ಯ ಕೂಡ ಪ್ರಮುಖರು.
“ಜೋ ಅಚ್ಯುತಾನಂದ ಜೋ ಜೋ ಮುಕುಂದ ಲಾಲಿ ಪರಮಾನಂದ ರಾಮ ಗೋವಿಂದ”-ಆಂದ್ರಪ್ರದೇಶದಾದ್ಯಂತ ಈ ಲಾಲಿಯನ್ನು ಹಾಡದ ತಾಯಿಯೂ ಇಲ್ಲ ಮತ್ತು ಈ ಜೋಗುಳವನ್ನು ಕೇಳದೇ ಬೆಳೆದ ಯಾವ ವ್ಯಕ್ತಿಯೂ ನಿಮಗೆ ಸಿಗಲಾರ.ಇಂತಹ ಖ್ಯಾತ ಗೀತೆಯನ್ನು ರಚಿಸಿದವರೇ ಅನ್ನಮಾಚಾರ್ಯ. ತೆಲುಗು ದೇಶದ ಪ್ರಖ್ಯಾತ ಕವಿ ಹಾಗೂ ದಾರ್ಶನಿಕರಲ್ಲಿ ಅನ್ನಮಾಚಾರ್ಯರೂ ಒಬ್ಬರು.
ಅನ್ನಮಾಚಾರ್ಯರ ಜನನ ಕ್ರಿ.ಶ.1408ರಲ್ಲಿ ಈಗಿನ ಕಡಪ ಜಿಲ್ಲೆಯ ರಾಜಂಪೇಟೆ ತಾಲ್ಲೂಕಿನ ತಾಳ್ಳಪಾಕ ಎಂಬಲ್ಲಿ ಆಯಿತು. ಪೂರ್ವಜರೆಲ್ಲಾ ವೇದವಿದ್ಯಾ ಪಾರಂಗತರಾದ್ದರಿಂದ ಅವರ ಪ್ರಭಾವವು ಬಾಲಕ ಅನ್ನಮಾಚಾರ್ಯನ ಮೇಲೆ ಬೀರಿತು. ಅವನ ತಂದೆ ತಾಯಿಗೆ ಬಹಳ ವರ್ಷದವರೆಗೂ ಮಕ್ಕಳಿಲ್ಲದ್ದರಿಂದ ಅವರು ವೆಂಕಟೇಶ್ವರನ ಮೊರೆ ಹೋದಾಗ ಜನಿಸಿದ್ದರಿಂದ ಈತನಿಗೆ ‘ಅನ್ನಮಯ್ಯ’ ಎಂದು ನಾಮಕರಣ ಮಾಡಿದರು. ಉಪನಯನದ ನಂತರ ಸಕಲ ವಿದ್ಯೆಗಳನ್ನೂ ಕರಗತಮಾಡಿಕೊಂಡ ಅನ್ನಮಯ್ಯನಿಗೆ ಆಟ-ಪಾಠಕ್ಕಿಂತ ದೇವರ ಬಗ್ಗೆಯೇ ಹೆಚ್ಚು ಆಸಕ್ತಿ. ಚಿಕ್ಕವನಿದ್ದಾಗಲೇ ವೆಂಕಟೇಶ್ವರನ ಮೇಲೆ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದನು.ಹೀಗಿರುವಾಗಲೊಮ್ಮೆ ತಿರುಮಲ ಸ್ವಾಮಿಯನ್ನು ಕನಸಲ್ಲಿ ಕಂಡು ಮನೆಬಿಟ್ಟು ತಿರುಪತಿಗೆ ತೆರಳಿದನು. ತಿರುಪತಿಯಲ್ಲಿ ಆಗಲೇ ಪೂಜೆ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿತ್ತೆಂದೂ ಮತ್ತು ಅನ್ನಮಯ್ಯನು ದೇವರನ್ನು ಭಕ್ತಿಯಿಂದ ಹಾಡಿದ್ದಕ್ಕೆ ಬೀಗಗಳು ತಾವಾಗೇ ಕಳಚಿಬಿದ್ದುವೆಂದೂ ಅನೇಕ ಸಾಹಿತ್ಯ ಕೃತಿಗಳಲ್ಲಿ ದಾಖಲಾಗಿದೆ.ಕೆಲವು ದಿನಗಳ ಕಾಲ ಅಲ್ಲಿಯೇ ಉಳಿದು ಯತಿಯೊಬ್ಬರಿಂದ ಶ್ರೀವೈಷ್ಣವ ದೀಕ್ಷೆ ಪಡೆದು ‘ಅನ್ನಮಾಚಾರ್ಯ’ ನಾದನು.
ಪುನಃ ಮನೆಗೆ ಹಿಂತಿರುಗಿ ತಿರುಮಲಕ್ಕ ಹಾಗೂ ಅಕ್ಕಲಮ್ಮ ಎಂಬ ಕನ್ಯೆಯರೊಂದಿಗೆ ವಿವಾಹವಾಗಿ ಗೃಹಸ್ಥನಾದರೂ ಸಹ ಅನ್ನಮಯ್ಯನ ಆಧ್ಯಾತ್ಮಿಕ ಶ್ರಧ್ಧೆಗಳು ಕುಂದಲಿಲ್ಲ. ಆಧ್ಯಾತ್ಮಿಕ ಜೀವನದಲ್ಲಿ ದಿನೇದಿನೇ ಬೆಳೆಯುತ್ತಿದ್ದ ಅನ್ನಮಯ್ಯರಿಗೆ ಹರಿಯ ಪೂಜೆ, ಹರಿಯ ಕೀರ್ತನೆ, ಹರಿಯ ಮನನ ಮತ್ತು ಧ್ಯಾನ ನಿತ್ಯದ ಕಾರ್ಯಕ್ರಮಗಳಾದವು. ವೆಂಕಟೇಶ್ವರನಲ್ಲಿ ಆಳವಾದ,ನಿಶ್ಚಲವಾದ ಭಕ್ತಿ ಅವರ ಬಾಳಿಗೆ ಗಟ್ಟಿಯಾದ ಬುನಾದಿಯಾಯಿತು.
ಅನ್ನಮಾಚಾರ್ಯರ ವಿಧ್ವತ್ತನ್ನು ಪ್ರಶಂಸಿಸಿ ದೊರೆ ಸಾಳುವ ನರಸಿಂಹರಾಯನು ಅವನನ್ನು ಸನ್ಮಾನಿಸಿ,ತನ್ನ ಆಸ್ಥಾನದಲ್ಲಿಯೇ ಉಳಿಸಿಕೊಂಡಿದ್ದನು. ದೊರೆಯು ವೆಂಕಟೇಶ್ವರನನ್ನು ಹಾಡಿಹೊಗಳಿದಂತೆ ತನ್ನನ್ನೂ ಹೊಗಳಬೇಕೆಂದು ಹೇಳಿದಾಗ ‘ತಾನು ಹರಿದಾಸ,ಮಾನವರನ್ನು ಹೊಗಳೆನು’ ಎಂದು ಅಲ್ಲಿಂದ ಹೊರಬಿದ್ದನು.ಅಂದಿನಿಂದ ತಮ್ಮ ಸರ್ವಸ್ವವನ್ನೂ ವೆಂಕಟೇಶ್ವರನ ಸೇವೆಗಾಗಿ ಅಂಕಿತ ಮಾಡಿದರು.ಅನ್ನಮಯ್ಯರ ಕವಿತಾಶಕ್ತಿ,ಸಂಗೀತಜ್ಞಾನ,ಗಾನಕೌಶಲ ಅವರ ಆದ್ಯಾತ್ಮಿಕ ಜೀವನಕ್ಕೆ,ತಪಸ್ಸಿಗೆ ಸಾಧಕಗಳಾದವು. ಅವರು ಒಟ್ಟು ಮೂವತ್ತೆರೆಡು ಸಾವಿರ ಸಂಕೀರ್ತನೆಗಳನ್ನು ಮಾಡಿದ್ದಾರೆಂದು ದಾಖಲೆಗಳಿಂದ ತಿಳಿದುಬರುತ್ತದೆ. ಅನ್ನಮಯ್ಯರ ದೃಷ್ಠಿಯಲ್ಲಿ ತಮ್ಮ ಸಂಕೀರ್ತನೆಗಳು ವೆಂಕಟೇಶ್ವರನಿಗೆ ತಾವು ಮಾಡಿದ ಪೂಜೆಯ ಒಂದು ರೂಪ.
ಅನ್ನಮಾಚಾರ್ಯರನ್ನು ‘ಪದಕವಿತಾ ಪಿತಾಮಹ’ ಮತ್ತು ‘ಪದಕವಿತಾ ಮಾರ್ಗದರ್ಶಿ’ ಎಂಬುದಾಗಿ ಕರೆಯಲಾಗಿದೆ.ತಮ್ಮ ಆಧ್ಯಾತ್ಮಿಕ ಸಂಕೀರ್ತನೆಗಳಲ್ಲಿ ಅವರು ಪರಮಾತ್ಮನ ಗುಣಗಳನ್ನು ಕೊಂಡಾಡುವುದಲ್ಲದೇ,ನಿಶ್ಚಲವಾದ ಭಕ್ತಿ ಮತ್ತು ವಿರಕ್ತಿಗಳ ಪೃಆಮುಖ್ಯತೆಯನ್ನು ಬೋಧಿಸಿದ್ದಾರೆ.
ಆಗಿನ ಸಂದರ್ಭದಲ್ಲಿ ಜಾತಿ,ಕುಲಗಳ ಹೆಸರಿನಲ್ಲಿ ಜನರಲ್ಲಿದ್ದ ಭೇಧಭಾವ ಕಂಡು ರೋಸಿಹೋಗಿದ್ದರು.ಇದೇ ಕೊರಗಿನಲ್ಲಿ ಕ್ರಿ.ಶ. 1503ರಲ್ಲಿ ದುಂದುಭಿ ಫಾಲ್ಗುಣ ಬಹುಳ ದ್ವಾದಶಿಯಂದು ಪರಮಾತ್ಮನ ಪಾದವನ್ನು ಸೇರಿದರು. ಅನೇಕ ಕಾಲದ ವರೆಗೆ ಎಲೆಮರೆಕಾಯಿಯಂತಿದ್ದ ಅನ್ನಮಾಚಾರ್ಯರ ಸಂಕೀರ್ತನೆಗಳನ್ನು ತಿರುಮಲ ಕಮಿಟಿಯವರು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಮುದ್ರಿಸಿ ಪುಸ್ತಕ ಹಾಗೂ ದ್ವನಿಸುರುಳಿ ರೂಪದಲ್ಲಿ ಹೊರತಂದಿದ್ದಾರೆ. ಅಷ್ಟೇ ಅಲ್ಲದೇ 1948ರಿಂದ ಪ್ರತೀವರ್ಷವೂ ಫಾಲ್ಗುಣ ಬಹುಳ ದ್ವಾದಶಿಯಂದು ತಿರುಪÀತಿಯಲ್ಲಿ ಅನ್ನಮಾಚಾರ್ಯರ ಪುಣ್ಯತಿಥಿಯನ್ನು ಆಚರಿಸಲಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
