fbpx
ಇತರೆ

ನಿಮ್ಮ ರಾಜಕೀಯ ಲೆಕ್ಕಾಚಾರ ಬದಿಗಿಟ್ಟು ಬನ್ನಿ ಕನ್ನಡ ಕಟ್ಟೋ ಕೆಲಸ ಖಾಲಿ ಇದೆ.

ನಾನು ಒಬ್ಬ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ, ಹಗಲು ರಾತ್ರಿ ಅನ್ನದೇ , ಕೆಲಸ ವೈಯಕ್ತಿಕ ಅವಶ್ಯಕತೆಗಳನ್ನು ಬದಿಗಿಟ್ಟು, ಮನೆ ಮಠ ಬಿಟ್ಟು ನನ್ನ ಪಕ್ಷದ ಮುಖಂಡ/ಅಭ್ಯರ್ಥಿಯ ಗೆಲುವಿಗಾಗಿ ನಾನು ನನ್ನಂತವರು ಅದೆಷ್ಟು ಸಾರಿ ಶ್ರಮಿಸಿದ್ದೇವೆ ಅನ್ನೋದು ನಮಗೇ ಗೊತ್ತು. ಹಾಗಾಗಿ ಇಂದು ನನ್ನ ಬೆಳಗಾವಿ ಜಿಲ್ಲೆಯಲ್ಲಿ ಆಡಳಿತ ಪಕ್ಷಕ್ಕಿಂತ ಹೆಚ್ಚಿಗೆ ನಮ್ಮವರು ಗೆಲುವು ಕಂಡಿದ್ದಾರೆ. ನಮ್ಮವರೇ ಇಬ್ಬರು ಎಂಪಿ ಗಳಿದ್ದಾರೆ. ಆದರೆ ಇವರೆಲ್ಲ ಇರೋದು ಏನನ್ನು ಕಿತ್ತು ಗುಡ್ಡೆ ಹಾಕಲಿಕ್ಕೆ ಅನ್ನೋದು ನನಗೂ ಅರ್ಥ ಆಗತಿಲ್ಲ.

ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗುವ ಮೊದಲು ನಾನೊಬ್ಬ ಕನ್ನಡಿಗ. ಬೆಳಗಾವಿ ನನ್ನೂರು, ಕನ್ನಡದ ಸ್ವಾಭಿಮಾನದ ನೆಲ ಎಂಬ ಆತ್ಮಾಭಿಮಾನದಲ್ಲಿ ಬೆಳೆದವನು, ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಿ , ನಾಡು ನುಡಿಗಾಗಿ ತೊಡೆ ತಟ್ಟಿ ಹೋರಾಡಿ ಬೆಳೆದವರು ನಾವು. ಆದರೆ ನನ್ನೊಳಗಿರೋ ನನ್ನ ತನಕ್ಕೇ, ನನ್ನ ಸ್ವಂತಿಕೆಯ ಅಸ್ತಿತ್ವಕ್ಕೆ ಇಂದು ಕುಂದು ಬಂದಿದ್ದರೂ ನಮ್ಮವರು ಎಣಿಸಿಕೊಂಡ ಯಾವ ನಾಯಕನು ಅದರ ಬಗ್ಗೆ ತಲೆ ಕೆಡಿಸಿಕೊಳುತ್ತಿಲ್ಲ. ಮೇಲಾಗಿ ಬೆಳಗಾವಿಯಲ್ಲಿ ಇಂದಿರುವ ಸನ್ನಿವೇಶದ ಕಾರಣೀಭೂತರೂ ಇವರೇ.

ಹೌದು

ನಿನ್ನೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗು ಉಪ ಮೇಯರ್ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಎಂ ಎಲ್ ಎ ಸಂಜಯ ಪಾಟೀಲ ಆಗಲಿ ಅಥವಾ ನಮ್ಮ ಎಂ ಪಿ ಸುರೇಶ ಅಂಗಡಿ ಆಗಲಿ ಮತ ಚಲಾಯಿಸಿಲ್ಲ. ಮುಂದೆ ನಿಂತು ಕನ್ನಡಿಗರನ್ನ ಆಯ್ಕೆ ಮಾಡಿ ಗದ್ದಿಗೆ ಮೇಲೆ ಕೂಡಿಸಬೇಕಾದ ಇವರು ಕನ್ನಡಿಗ ಮತದಾರರನ್ನು ಸೇರಿಸುವ ಅಥವಾ ಕನ್ನಡಿಗ ಅಭ್ಯರ್ಥಿಗಳನ್ನ ಗೆಲ್ಲಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಲಿಲ್ಲ. ಈ ಪ್ರಯತ್ನ ದೂರದ ಮಾತು, ಪಾಲಿಕೆಗೆ ಹೋಗಿ ಅಭ್ಯರ್ಥಿ ಆಯ್ಕೆಗೆ ತಮ್ಮದೇ ಆದ ಮತ ಚಲಾಯಿಸುವ ಜವಾಬ್ದಾರಿಯನ್ನೂ ನಿಭಾಯಿಸಲಿಲ್ಲ. ಆದರೆ ಇವರು ಎಲೆಕ್ಷನ್ ಗೆ ನಿಂತಾಗ ವೋಟು ಹಾಕುವುದು ನಮ್ಮೆಲ್ಲರ ಜವಾಬ್ದಾರಿ , ಕರ್ತವ್ಯ ಬ್ಲಾ ಬ್ಲಾ ಬ್ಲಾ ಅನ್ನೋ ಭಾಷಣಕ್ಕೆ ಮಾತ್ರ ಎಂದೂ ಕೊರತೆ ಬಂದಿಲ್ಲ. ಇನ್ನೊಬ್ಬರಿಗೆ ಮತದಾನದ ಉಪದೇಶ ಮಾಡೋ ಇದೇ ದಿಗ್ಗಜರಿಗೆ ತಮ್ಮ ಕನಿಷ್ಠ ಜವಾಬ್ದಾರಿಯ ಅರಿವಿಲ್ಲದಿರುವುದು ಎಂತಹ ದುರ್ದೈವದ ಸಂಗತಿ ಅಲ್ಲವೇ ?
ಆದರೆ ನಾವು ಕನ್ನಡಿಗರು, ಇಂತಹ ನಾಯಕರಿಗಾಗಿಯೇ ‘ಇವರು ನಮ್ಮ ಅಭ್ಯರ್ಥಿಗಳು, ನಮ್ಮ ಮುಖಂಡರು , ನಮ್ಮ ನಾಯಕರು , ನಮ್ಮ ಪಕ್ಷದವರು’ ಎಂದುಕೊಂಡು ಕತ್ತೆ ದುಡಿದ ಹಾಗೆ ದುಡಿಯಬೇಕಾದದ್ದು ಮಾತ್ರ ಅವರ ಬಯಕೆ ಹಾಗು ಅವಶ್ಯಕತೆ. ಇದು ನನ್ನ ವೈಯಕ್ತಿಕ ಮಾತಲ್ಲ ಕನ್ನಡಿಗನಾಗಿದ್ದರು ಭಾರತೀಯ ಜನತಾ ಪಕ್ಷಕ್ಕೆ ದುಡಿಯುತ್ತಿರುವ, ನಿಮ್ಮ ಕೈಗೆ ಸಿಕ್ಕು ತನ್ನ ಮಾತೃ ಭಾಷೆ ಹಾಗು ಸ್ವಾಭಿಮಾನವನ್ನು ಬಲಿಕೊಟ್ಟಿರುವ ಪ್ರತಿಯೊಬ್ಬ ಕನ್ನಡಿಗನ ಮಾತು . ನಿಮ್ಮಂತಹ ಕನ್ನಡ ದ್ರೋಹಿಗಳನ್ನ , ಕನ್ನಡದ ವಿಷಯದಲ್ಲಿ ನಪುಂಸಕತೆ ಪ್ರದರ್ಶಿಸುತ್ತಿರುವವರನ್ನ ಆರಿಸಿ , ಅಧಿಕಾರಕ್ಕೆ ಕೂರಿಸಿ ಕನ್ನಡಕ್ಕೆ ಈ ದಿನ ಕಳಂಕ ಬಂದರೂ ನಿಸ್ಸಹಾಯಕನಾಗಿ ಕುಳಿತಿರುವ ಪ್ರತಿಯೊಬ್ಬ ಸ್ವಾಭಿಮಾನಿಯ ಮಾತು.

ನೆನಪಿರಲಿ ನೀವು ಅಧಿಕಾರ ವಹಿಸಿಕೊಂಡಿರುವುದು ಇನ್ನ್ಯಾರದ್ದೋ ಮತ ಹಾಗು ಪರಿಶ್ರಮದಿಂದಲ್ಲ . ನಮ್ಮ ನಾಡು ನುಡಿಯ ಹಿತಾಸಕ್ತಿ ಕಾಪಾಡದಿದ್ದಲ್ಲಿ ನಿಮ್ಮ ಇರುವಿಕೆಯೂ ಪರಿಪೂರ್ಣವಲ್ಲ. ಬೆಳಗಾವಿ ವಿಷಯದಲ್ಲಿ ನೀವು ತೋರುತ್ತಿರುವ ಧೋರಣೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತಿದೆ. ಎಲ್ಲವನ್ನು ಅರಿತುಕೊಂಡು ಸರ್ವರನ್ನೂ ಸರಿದೂಗಿಸಿಕೊಂಡು ಹೋದರೆ ಮಾತ್ರ ನೀವು ರಾಷ್ಟ್ರೀಯ ಪಕ್ಷದ ನಾಯಕರಾಗಬಲ್ಲಿರಿ, ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದರಿಂದಲ್ಲ. ಇಂದು ನೀವು ಕನ್ನಡಿಗರು ಹಾಗು ಅವರ ಹಿತಾಸಕ್ತಿಯ ಬಗ್ಗೆ ನಿಷ್ಕಾಳಜಿ ತೋರುತ್ತಿದ್ದೀರಿ ನಾಳೆ ನಿಮ್ಮ ಸರದಿ ಬಂದಾಗ ನನ್ನಂತಹ ಕಾರ್ಯಕರ್ತ ನಿಷ್ಕಾಳಜಿ ತೋರಿದರೆ ??

ನಿಮ್ಮ ರಾಜಕೀಯ ಲೆಕ್ಕಾಚಾರ ಬದಿಗಿಟ್ಟು ಬನ್ನಿ ಕನ್ನಡ ಕಟ್ಟೋ ಕೆಲಸ ಖಾಲಿ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top