fbpx
ಸಮಾಚಾರ

ಗಂಗೆ, ಯಮೂನಾ ನದಿಗಳಿಗೆ ಜೀವಂತ ವ್ಯಕ್ತಿಯ ಸ್ಥಾನಮಾನ: ಮಲೀನ ಮಾಡಿದರೆ ಶಿಕ್ಷೆ ಖಚಿತ

ದೇಶದ ಪ್ರಮುಖ ಜೀವಜಲ, ದೈವತ್ವದ ಸ್ಥಾನಮಾನ ಪಡೆದ ಗಂಗೆ ಮತ್ತು ಯಮೂನಾ ಎಂಬ ಎರಡೂ ನದಿಗಳಿಗಿವೆ. ಇದರ ಜೊತೆಗೆ ಜೀವಂತ ವ್ಯಕ್ತಿಯ ಸ್ಥಾನಮಾನವೂ ಈ ನದಿಗಳಿಗೆ ಲಭಿಸಿದೆ!

ಅರೆ ಇದೇನಿದು, ನದಿಗಳಿಗೆ ವ್ಯಕ್ತಿಯ ಸ್ಥಾನಮಾನ ಯಾಕೆ? ಅವೇನು ಮನುಷ್ಯರೇ? ಎಂದು ನೀವು ಪ್ರಶ್ನಿಸಬಹುದು. ಆದರೆ ಇದು ನಿಜ. ಉತ್ತರಾಖಂಡ್‍ ಹೈಕೋರ್ಟ್, ಈ ಎರಡೂ ನದಿಗಳಿಗೆ ಮನುಷ್ಯರ ಸ್ಥಾನಮಾನ ಕಲ್ಪಿಸಿ ಮಹತ್ವದ ಆದೇಶ ಹೊರಡಿಸಿದೆ.

5 ದಿನಗಳ ಹಿಂದೆಯಷ್ಟೇ ನ್ಯೂಜಿಲೆಂಡ್‍ನಲ್ಲಿ ನದಿಗೆ ವ್ಯಕ್ತಿಯ ಸ್ಥಾನಮಾನ ನೀಡಿದ ಮಾದರಿಯಲ್ಲೇ ಹೈಕೋರ್ಟ್‍‍ ನೀಡಿದ ಆದೇಶದಿಂದ ಗಂಗೆ ಮತ್ತು ಯಮೂನಾ ನದಿಗಳ ಸ್ವಚ್ಛತಾ ಕಾರ್ಯಕ್ಕೆ ಹೊಸ ವೇಗ ದೊರೆಯುವ ಸಾಧ್ಯತೆ ಇದೆ. ಗಂಗಾ ನದಿ ಉತ್ತರಾಖಂಡ್‍ ಮತ್ತು ಉತ್ತರ ಪ್ರದೇಶ ನಡುವೆ ಹಾದು ಹೋಗುತ್ತದೆ. ಈ ಹೊಸ ಆದೇಶದಿಂದ ಸಂಸ್ಕ‍್ರತಿ, ದೈವ ಮುಂತಾದ ಹೆಸರುಗಳಲ್ಲಿ ಮಲೀನ ಮಾಡುವ ಭಕ್ತಾದಿಗಳಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.

ನದಿಗೆ ಜೀವಂತ ವ್ಯಕ್ತಿ ಸ್ಥಾನಮಾನ ಹೇಗೆ?

ನದಿಗಳು ಜೀವಂತ ವ್ಯಕ್ತಿ ಅಲ್ಲದೇ ಇರಬಹುದು. ಆದರೆ ಕಾನೂನಿನ ದೃಷ್ಟಿಯಲ್ಲಿ ಜೀವಂತ ವ್ಯಕ್ತಿ ಎಂದು ಪರಿಗಣಿಸುತ್ತದೆ. ನದಿಗಳನ್ನು ಮಲೀನ ಮಾಡುವುದು ಸೇರಿದಂತೆ ಯಾವುದೇ ದುರ್ನಡತೆಯನ್ನು ಜೀವಂತ ವ್ಯಕ್ತಿಯ ಮೇಲೆ ನಡೆಸಿದ ದೌರ್ಜನ್ಯದಂತೆ ಭಾವಿಸಿ ಆರೋಪಿಗಳಿಗೆ ಶಿಕ್ಷೆ ನೀಡಬಹುದಾಗಿದೆ.
ಉದಾಹರಣೆಗೆ ವ್ಯಕ್ತಿಯ ಮೇಲೆ ಹಲ್ಲೆ, ಭೂ ಒತ್ತುವರಿ ಮಾಡಿದ್ದು ಶಿಕ್ಷೆಗೆ ಗುರಿಯಾದಂತೆ ನದಿಯಲ್ಲಿ ಕಲ್ಮ,ಶ ಹಾಕುವುದು, ಭೂ ಒತ್ತುವರಿ ಮಾಡುವುದು ಶಿಕ್ಷಾರ್ಹವಾಗುತ್ತದೆ.
ಗಂಗಾ ಮತ್ತು ಯಮೂನಾ ನದಿಗಳನ್ನು ಅಪ್ರಾಪ್ತರು ಎಂದು ಪರಿಗಣಿಸಲಾಗುತ್ತದೆ. ಅಪ್ರಾಪ್ತರು ಎಂದ ಮೇಲೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿರುತ್ತದೆ. ಅಪ್ರಾಪ್ತರನ್ನು ದುರ್ಬಳಕೆ ಮಾಡುವುದು ಹೇಗೆ ತಪ್ಪು ಎಂದು ಭಾವಿಸಲಾಗುತ್ತದೋ ಅದೇ ರೀತಿ ಈ ನದಿಗಳ ದುರ್ಬಳಕೆ ಕೂಡ ತಪ್ಪು.
ಸರಕಾರದ ಯೋಜನೆಗಳು (ಉದಾಹರಣೆಗೆ ಸ್ವಚ್ಛತಾ ಯೋಜನೆ) ಅನುಷ್ಠಾನ ಮಾಡುವಾಗ ಅದರ ಉಸ್ತುವಾರಿ ಹೊತ್ತಿರುವ ಉತ್ತರಾಖಂಡ್‍ನ ಅಡ್ವೊಕೇಟ್‍ ಜನರಲ್, ನಮಾಮಿ ಗಂಗಾ ಕಾರ್ಯಕ್ರಮದ ನಿರ್ದೇಶಕರನ್ನು ಪೋಷಕರು ಎಂದು ಪರಿಗಣಿಸಲಾಗುತ್ತದೆ. ಈ ನದಿಗಳ ಬೆಳವಣಿಗೆ, ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿ ಇವರದ್ದಾಗಿರುತ್ತದೆ.
ನದಿಯನ್ನು ಕಲ್ಮಶಗೊಳಿಸುವವರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಬಹುದು. ಉದಾಹರಣೆಗೆ ಗಂಗೆ ಪರವಾಗಿ ದೂರು ದಾಖಲಿಸಿಕೊಂಡು ಅಡ್ವೋಕೇಟ್ ಜನರಲ್‍ ಕೇಸು ದಾಖಲಿಸಬೇಕು. ನದಿಯ ನೀರನ್ನು ಒಳ್ಳೆಯ ಉದ್ದೇಶಗಳಿಗೆ ಮಾತ್ರ ಬಳಸಬೇಕು.
ಹೈಕೋರ್ಟ್ ತೀರ್ಪಿನಂತೆ 8 ವಾರಗಳ ಗಡುವಿನೊಳಗೆ ಗಂಗಾ ಉಸ್ತುವಾರಿ ಮಂಡಳಿ ನಿಯಮಾವಳಿಗಳನ್ನು ರಚಿಸಬೇಕು. ಇದರಲ್ಲಿ ನೀರಾವರಿ, ನಗರ ಮತ್ತು ಹಳ್ಳಿಗಳಿಗೆ ನೀರು ಪೂರೈಕೆ, ವಿದ್ಯುತ್‍ ಉತ್ಪಾದನೆ ಮುಂತಾದವುಗಳ ಬಗ್ಗೆ ಸ್ಪಷ್ಟ ನಿಯಮ ರೂಪಿಸಬೇಕು.
ಗಂಗಾ ನದಿಯ ಪ್ರವಾಹ ಸಂತ್ರಸ್ತರ ನೆರವಿಗಾಗಿ ಜಿಲ್ಲಾಧಿಕಾರಿ ಮತ್ತು ಸಬ್‍ ಡಿವಿಜಿನಲ್‍ ಮ್ಯಾಜಿಸ್ಟ್ರೇಟ್‍ ಗಮನ ಹರಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top