fbpx
ಮನೋರಂಜನೆ

ಯೋಧರ ಸಂಕಟದ ಸುತ್ತಾ ಸೈಂಟಿಫಿಕ್ ಹಾರರ್-ಥ್ರಿಲ್ಲರ್ ಕಥಾನಕ!

ಯೋಧರ ಸಂಕಟದ ಸುತ್ತಾ ಸೈಂಟಿಫಿಕ್ ಹಾರರ್-ಥ್ರಿಲ್ಲರ್ ಕಥಾನಕ!

 

 

ಬಿಡುಗಡೆಗೂ ಮುನ್ನ ಹುಟ್ಟಿಸಿದ್ದ ಭರವಸೆಯೆಲ್ಲವೂ ಥೇಟರಿನೊಳಗೂ ಸಾಕಾರವಾಗೋದು ಚಿತ್ರವೊಂದರ ನಿಜವಾದ ಸಕ್ಸಸ್. ಆ ನಿಟ್ಟಿನಲ್ಲಿ ನೋಡ ಹೋದರೆ ಇಂದು ಬಿಡುಗಡೆಯಾಗಿರೋ ಸಂಯುಕ್ತ-೨ ಚಿತ್ರ ಪ್ರೇಕ್ಷಕರಲ್ಲೊಂದು ತೃಪ್ತಿಯ ಮಂದಹಾಸ, ಸರ್‌ಪ್ರೈಸ್‌ನಂಥಾ ದೃಷ್ಯಾವಳಿಗಳನ್ನು ಸವಿದ ಅಚ್ಚರಿ ಮತ್ತು ಎಲ್ಲಿಯೂ ಬೋರು ಹೊಡೆಸದ ನೀಟಾದೊಂದು ಸಿನಿಮಾ ನೋಡಿ ಬಂದ ಖುಷಿಯನ್ನು ಮೂಡಿಸುವಲ್ಲಿ ಯಶಸ್ಸು ಕಂಡಿದೆ. ದಶಕಗಳ ಹಿಂದೆ ತೆರೆ ಕಂಡಿದ್ದ ಶಿವರಾಜ್ ಕುಮಾರ್ ಅಭಿನಯದ ಸಂಯುಕ್ತ ಚಿತ್ರ ಹಾರರ್ ಅಂಶಗಳನ್ನು ಹೊಂದಿತ್ತು. ಇದೀಗ ಅದೇ ಹೆಸರಲ್ಲಿ ತೆರೆ ಕಂಡಿರೋ ಸಂಯುಕ್ತ-೨ ಚಿತ್ರವೂ ಹಾರರ್ ಮೂವಿ ಅಂತಲೇ ಬಿಂಬಿತವಾಗಿತ್ತು. ಅದೇ ಎಣಿಕೆಯಲ್ಲಿ ಥೇಟರು ಹೊಕ್ಕವರನ್ನು ಈ ಚಿತ್ರ ಕ್ಷಣ ಕ್ಷಣವೂ ಅಚ್ಚರಿಗೀಡು ಮಾಡುತ್ತದೆ. ಅದುವೇ ಇದರ ಗೆಲುವಿನ ಸೂಚನೆಯೂ ಹೌದು!

 

ಅಂದಹಾಗೆ ಈ ಚಿತ್ರವನ್ನು ಸೈಂಟಿಫಿಕ್ ಹಾರರ್, ಥ್ರಿಲ್ಲರ್ ಕ್ಯಾಟಗರಿಗೆ ಸೇರಿಸಬಹುದಾದರೂ ಸಾರಾಸಗಟಾಗಿ ಅದೇ ವೀಭಾಗಕ್ಕೆ ಬ್ರ್ಯಾಂಡ್ ಮಾಡೋ ಹಾಗಿಲ್ಲ. ಯಾಕೆಂದರೆ ಇದು ಬರೀ ಹಾರರ್ ಚಿತ್ರವಲ್ಲ. ಇಲ್ಲಿ ಟಿಪಿಕಲ್ ದೆವ್ವಗಳ ಹಾವಳಿ ಇಲ್ಲ. ಆದರೂ ಈ ಚಿತ್ರ ಭಯ ಹುಟ್ಟಿಸುತ್ತೆ. ನೋಡುಗರನ್ನು ಸೀಟಿನ ತುದೀಗೆ ತಂದು ಕೂರಿಸೋ ಮಟ್ಟಿಗೆ ಕುತೂಹಲ ಹುಟ್ಟಿಸುತ್ತೆ. ಇದು ಹೇಗೆ ಸಾಧ್ಯ ಎಂಬುದನ್ನು ಚಿತ್ರ ನೋಡಿ ಅನುಭವಿಸಿದರೇನೇ ಚೆಂದ.

 

ಇನ್ನೂ ವಿಶೇಷ ಅಂದರೆ, ಈ ಚಿತ್ರದ ಪ್ರಧಾನವಾದ ಕಥಾ ಎಳೆ ದೇಶ ಕಾಯೋ ಸೈನಿಕರ ಕುರಿತಾದದ್ದು. ದೇಶ ಕಾಯಲು ಬದುಕನ್ನೇ ಮುಡಿಪಾಗಿಟ್ಟ ಯೋಧರು ಕ್ಷಣ ಕ್ಷಣವೂ ಅನುಭವಿಸೋ ಸಮಸ್ಯೆಗಳ ಬಗ್ಗೆ ಇಲ್ಲಿ ಪ್ರಧಾನವಾಗಿ ಫೋಕಸ್ ಮಾಡಲಾಗಿದೆ. ಆದರೂ ಇಲ್ಲಿ ಸೈಂಟಿಫಿಕ್ ಬೇಸಿನ ಹಾರರ್ ಕಥಾನಕವೂ ಜೊತೆಯಾಗಿ ಚಲಿಸುತ್ತದೆ. ಆ ಕಾರಣದಿಂದಾಗಿಯೇ ಈ ಚಿತ್ರ ಭಿನ್ನವಾಗಿ ನಿಲ್ಲುತ್ತದೆ. ಕ್ಯಾನ್ಸರ್ ಗುಣಪಡಿಸಲು ನರಕ ಯಾತನೆಯನ್ನು ನೀಡೋ ಕೀಮೋ ಥೆರಪಿಯನ್ನು ಬಳಸಲಾಗುತ್ತಿದೆಯಲ್ಲಾ? ಅದರ ಬದಲಿಗೆ ಲಸಿಕೆಯೊಂದನ್ನು ಕಂಡುಹಿಡಿಯಲು ಮುಂದಾದ ವೈದ್ಯಕೀಯ ಕಾಲೇಜಿನ ಛೇರ್‍ಮನ್ (ದೇವರಾಜ್)ರ ಮೆಡಿಕಲ್ ಎರರ್ ಮತ್ತು ಅದು ಕ್ರಿಮಿಯೊಬ್ಬನ ದುರುಪಯೋಗಕ್ಕೆ ಒಳಗಾಗಿರುತ್ತದೆ. ಆ ಕಿಡಿಗೇಡಿಯ ಕೃತ್ಯವನ್ನೇ ದೇಶೋದ್ದಾರಕ್ಕೆ ಬಳಸಿಕೊಳ್ಳಲು ಮುಂದಾಗುವುದು ಸೂಪರ್ ಹೀರೋನ ಬುದ್ದಿವಂತಿಕೆ!

 

ಇನ್ನೂ ಪ್ರಮುಖವಾದ ವಿಶೇಷ ಇರೋದು ಈ ಚಿತ್ರದ ಹೀರೋ ವಿಚಾರದಲ್ಲಿ. ಇದರ ಹೀರೋ ಚೇತನ್ ಚಂದ್ರ ಎಂದೇ ಸುದ್ದಿಯಾಗಿತ್ತು. ಜೊತೆಗೆ ಇನ್ನೂ ಇಬ್ಬರು ಹುಡುಗರೂ ಇದ್ದಾರೆ. ಆದರೆ ಇದರ ನಿಜವಾದ ಹೀರೋ ನಿರ್ಮಾಪಕ ಡಾ. ಮಂಜುನಾಥ್!ಪೋಸ್ಟರುಗಳಲ್ಲಿ ಕಟ್ಟುಮಸ್ತಾದ ಬ್ಯಾಕ್‌ಪೋಸಲ್ಲಿ ಕಾಣಿಸಿಕೊಂಡಿದ್ದ ಆಕೃತಿ ಯಾರದ್ದೆಂಬ ಬಗ್ಗೆ ಭಾರೀ ಟಾಕ್ ಕ್ರಿಯೇಟ್ ಆಗಿತ್ತಲ್ಲ? ಆ ವಿಚಾರವನ್ನು ಚಿತ್ರ ತಂಡ ಗೌಪ್ಯವಾಗಿಟ್ಟಿತ್ತು. ಅಸಲಿಗೆ ಆ ಆಕೃತಿಯ ಒಡೆಯ ಡಾ. ಮಂಜುನಾಥ್. ಅವರೇ ಈ ಚಿತ್ರದಲ್ಲಿ ಮುಖ್ಯವಾದ ಪಾತ್ರ ನಿಭಾಯಿಸಿದ್ದಾರೆ. ಅವರೇ ಈ ಚಿತ್ರದ ಹೀರೋ. ಚಿತ್ರದುದ್ದಕ್ಕೂ ನಿರ್ಣಾಯಕವಾಗಿ ಕಾಣಿಸಿಕೊಳ್ಳೋ ಈ ಕಟ್ಟುಮಸ್ತಾದ ಬ್ಯಾಕ್ ಪೋಸ್ ಯಾವುದೆಬುಂದು ಕ್ಲೈಮ್ಯಾಕ್ಸ್‌ನಲ್ಲಿ ಜಾಹೀರಾಗುತ್ತದೆ. ಆ ಕಾರಣದಿಂದಲೇ ಕಡೇಯ ದೃಷ್ಯಾವಳಿಗಳೂ ಮೈ ನವಿರೇಳಿಸೋವಂತೆ ಮೂಡಿ ಬಂದಿವೆ.

 

ನಾನಾ ಕವಲು, ಥರ ಥರದ ದಿಕ್ಕು ಹೊಂದಿರೊ ಕಥೆಗೆ ಹಾರರ್ ಅಡಿಪಾಯವಿರೋದರಿಂದ ಇಲ್ಲಿ ಲಾಜಿಕ್ಕು ಹುಡುಕೋ ಪ್ರಯತ್ನವೇ ವ್ಯರ್ಥವಾಗುತ್ತದೆ. ಸಿನಿಮಾದ ಕಥೆಯಲ್ಲಿ ಮೆಡಿಕಲ್ ಎರರ್ ಸಂಭವಿಸುವಂತೆ, ನಿರ್ದೇಶಕರ ನಿರೂಪಣೆಯಲ್ಲೂ ಅಲ್ಲಲ್ಲಿ ಸಣ್ಣ ಪುಟ್ಟ ದೋಷಗಳಿವೆ. ಆದರಿದು ರಿಯಲಿಸ್ಟಿಕ್ ಕಥೆ ಅಲ್ಲದಿರೋ ಕಾರಣದಿಂದ ಅಷ್ಟು ಪ್ರಮುಖ ಅನಿಸೋದಿಲ್ಲ. ಎಲ್ಲಿಯೂ ಮುಕ್ಕಾಗದಂತೆ ದೃಷ್ಯ ಕಟ್ಟುವಲ್ಲಿ ನಿರ್ದೇಶಕ ಅಭಿರಾಮ್ ಒಂದು ಮಟ್ಟಕ್ಕೆ ಗೆದ್ದಿದ್ದಾರೆ. ಇನ್ನು ಭಾರೀ ಖರ್ಚು ಮಾಡಿ ರೂಪಿಸಿದ್ದ ಗ್ರಾಫಿಕ್ಸ್ ಅನ್ನೂ ಕೂಡಾ ನಿರ್ದೇಶಕರು ಒಟ್ಟಂದ ಹೆಚ್ಚುವಂತೆ ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ. ಎಲ್ಲ ನಟ ನಟಿಯರು ತಂತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಒಟ್ಟಾರೆ ಈ ಸಿನಿಮಾವನ್ನು ನೋಡಿದವರ ಮನಸ್ಸಿನಲ್ಲಿ ಕಟ್ಟಕಡೆಯದಾಗಿ ಉದ್ಭವಿಸುವ ಪ್ರಶ್ನೆ `ಹೀಗೂ ಉಂಟೇ’ ಅನ್ನೋದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top