fbpx
ಕಿರುತೆರೆ

ಪುಟ್ಟಗೌರಿ ಮದುವೆಯ ಜಗದೀಶ…

ಇದೀಗ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಬಾಹುಬಲಿ ನಿರ್ದೇಶನದ, ಸಂಚಾರಿ ವಿಜಯ್ ನಾಯಕನಾಗಿ ನಟಿಸಿರುವ ನನ್ ಮಗಳೇ ಹೀರೋಯಿನ್ ಚಿತ್ರ ನೋಡಿದವರನ್ನು ಅದರ ಡಿಡಿ ಎಂಬೊಂದು ಪಾತ್ರ ಕಾಡದಿರಲು, ನೆನಪಲ್ಲುಳಿಯದಿರಲು ಸಾಧ್ಯವೇ ಇಲ್ಲ. ಆ ಪಾತ್ರವನ್ನು ಆವಾಹನೆ ಮಾಡಿಕೊಂಡಂತೆ ನಟಿಸಿ ಚಿತ್ರ ಪ್ರೇಮಿಗಳ ಮನ ಗೆದ್ದವರು ಗೋಪಾಲ ದೇಶಪಾಂಡೆ!

 

Related image

 

ಬಹುಶಃ ಗೋಪಾಲ ದೇಶಪಾಂಡೆ ಅಂದೇಟಿಗೆ ತಕ್ಷಣಕ್ಕೆ ಗುರುತು ಸಿಕ್ಕೋದು ಕಷ್ಟವೇನೋ. ಯಾಕೆಂದರೆ, ಕಿರುತೆರೆ ಪ್ರೇಕ್ಷಕರನ್ನು ಅತ್ಯಂತ ಕಡಿಮೆ ಅವಧಿಯಲ್ಲಿಯೇ ತನ್ನತ್ತ ಸೆಳೆದುಕೊಂಡಿರೋ ಅವರು ತಾವು ನಿರ್ವಹಿಸಿದ ಪಾತ್ರಗಳ ಮೂಲಕವೇ ಪ್ರೇಕ್ಷಕರ ಮನದಲ್ಲಿ ಅಚ್ಚಾಗಿದ್ದಾರೆ. ಬಿ.ಸುರೇಶ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಅಳಗುಳಿಮಣೆ ಧಾರಾವಾಹಿಯಲ್ಲಿ ವ್ಯವಸ್ಥೆಯ ವಿರುದ್ಧದ ಆಕ್ರೋಶವನ್ನೆಲ್ಲ ನರನಾಡಿಗಳಿಗೆ ತುಂಬಿಕೊಂಡಂತೆ ನಕ್ಸಲ್ ನಾಯಕನ ಪಾತ್ರದಲ್ಲಿ ಮಿಂಚಿದ್ದದ್ದು ಇದೇ ಗೋಪಾಲ ದೇಶಪಾಂಡೆ. ರಾಜಕುಮಾರಿ, ಮದರಂಗಿ, ಚಿತ್ರಲೇಖ ಸೀರಿಯಲ್ಲುಗಳಲ್ಲಿಯೂ ಅವರ ಪಾತ್ರಕ್ಕೆ ಕಿರುತೆರೆ ಪ್ರೇಕ್ಷಕರು ಮನಸೋತಿದ್ದರು. ಇದೀಗ ಸೀರಿಯಲ್ ಜಗತ್ತಿನಲ್ಲೊಂದು ಕೌತುಕ ಕಾಯ್ದಿಟ್ಟುಕೊಂಡು ಮುಂದುವರೆಯುತ್ತಿರೋ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯ ಅಪ್ಪ ಜಗದೀಶನ ಪಾತ್ರವಂತೂ ಫುಲ್ ಫೇಮಸ್ಸು. ಬಲಾಢ್ಯರ ಸ್ವಾರ್ಥಕ್ಕೆ ಪ್ರೀತಿಯ ಮಗಳ ಜೀವನ ಬಲಿಯಾಗೋ ದುರಂತ ಕಂಡು ಸಂಕಟ ಪಡುವ, ಆಕ್ರೋಶಗೊಳ್ಳುವ ಬಡಪಾಯಿ ತಂದೆ ಜಗದೀಶನ ಪಾತ್ರಕ್ಕೆ ಜೀವ ತುಂಬುತ್ತಲೇ ಕಿರುತೆರೆಯ ಬಹು ಬೇಡಿಕೆಯ ನಟರಾಗಿ ಹೊರ ಹೊಮ್ಮಿರುವವರು ಗೋಪಾಲ ದೇಶಪಾಂಡೆ.

 

 

Image result for puttagowri maduve father

 

ಕಿರುತೆರೆಯಲ್ಲಿ ಬ್ಯುಸಿಯಾಗಿರುವಾಗಲೇ ಇದೀಗ ಗೋಪಾಲ ದೇಶಪಾಂಡೆಯವರಿಗೆ ಸಿನಿಮಾ ಅವಕಾಶಗಳೂ ಸಾಲು ಸಾಲಾಗಿ ಅರಸಿ ಬರಲಾರಂಭಿಸಿವೆ. ಸೀರಿಯಲ್‌ಗಳಲ್ಲಿ ನಿರ್ವಹಿಸಿರೋ ಪಾತ್ರಗಳಷ್ಟೇ ಮುಗ್ಧ, ಹಮ್ಮುಬಿಮ್ಮಿಲ್ಲದ ಸಾದಾ ಸೀದ ವ್ಯಕ್ತಿತ್ವದ ಅವರು ಸಿಕ್ಕ ಅವಕಾಶಗಳನ್ನು ಚೆಂದಗೆ ಬಳಸಿಕೊಂಡು ಚಿತ್ರರಂಗದಲ್ಲಿ ಬೆಳೆದು ನಿಲ್ಲೋ ಸಕಲ ಲಕ್ಷಣಗಳೂ ಢಾಳಾಗಿವೆ. ಇಂಥಾ ಗೋಪಾಲ ದೇಶಪಾಂಡೆ ಮೂಲತಃ ರಂಗಭೂಮಿ ಪ್ರತಿಭೆ. ಅವರ ನಟನೆಯಲ್ಲಿನ ಕಸುವು ಅಲ್ಲಿಂದಲೇ ಸಿಕ್ಕ ಬಳುವಳಿ. ಸಾಮಾನ್ಯವಾಗಿ ಬಹುತೇಕರು ನಟ ಅಥವಾ ನಟಿಯಾಗಬೇಕೆಂಬ ಮಹದಾಸೆಯಿಂದ, ಅದರ ಬಗ್ಗೆ ನಾನಾ ಕನಸು ಕಟ್ಟಿಕೊಂಡು ಎತ್ತೆತ್ತಲೋ ತೂರಿಕೊಂಡು ಕಡೆಗೂ ಗುರಿ ತಲುಪುತ್ತಾರೆ. ಆದರೆ ಗೋಪಾಲ ದೇಶಪಾಂಡೆಯವರನ್ನು ಅವರೊಳಗಿನ ಕಲೆಯೇ ಕೈ ಹಿಡಿದು ಕರೆತಂದು ಬಣ್ಣದ ಜಗತ್ತಿನ ಮಧ್ಯೆ ಬಿಟ್ಟಂತಿದೆ. ಅವರ ಬದುಕಿನ ಮಜಲುಗಳನ್ನು ನೋಡಿದರೆ ಈ ಮಾತು ನಿಜವೆನ್ನಿಸುತ್ತೆ!

 

 

ಬಾಗಲಕೋಟೆ ಜಿಲ್ಲೆಯ ಹುನಗುಂದದವರು ಗೋಪಾಲ ದೇಶಪಾಂಡೆ. ತಾಯಿ ಶಾಲಾ ಶಿಕ್ಷಕಿಯಾಗಿದ್ದವರು. ತಂದೆ ದೇಶಪಾಂಡೆಯವರು ಆ ಕಾಲದಲ್ಲೇ ಕೆಲ ನಾಟಕಗಳಲ್ಲಿ ಅಭಿನಯಿಸುತ್ತಾ ಹೆಸರು ಮಾಡಿದ್ದವರು. ಆದರೆ ತಂದೆ ನಾಟಕ ಕಲಾವಿದರಾದರೂ ತಾನೂ ನಟನಾಗಬೇಕೆಂಬ ಬಯಕೆಯೇನೂ ಗೋಪಾಲರಿಗೆ ಚಿಗುರಿದ್ದಿಲ್ಲವಂತೆ. ಅವರ ಪಾಡಿಗವರು ಓದುತ್ತಾ ಸಾಗುತ್ತಿರಬೇಕಾದರೆ ೨೦೦೦ನೇ ಇಸವಿಯಲ್ಲಿ ತಂದೆಯನ್ನು ಕಳಕೊಂಡ ಆಘಾತ ಎದುರಿಸಬೇಕಾಗಿ ಬಂದಿತ್ತು. ಆಗ ಕಾಲೇಜು ವಿದ್ಯಾರ್ಥಿಯಾಗಿದ್ದ ಗೋಪಾಲ, ಬಿಎಸ್‌ಸಿ ಪದವಿ ಓದಲಾರಂಭಿಸಿದ್ದರು. ಆದರೆ ಪರೀಕ್ಷೆ ಬರೆದು ಬಂದ ಅವರಿಗೆ ನಪಾಸಾಗೋದು ಗ್ಯಾರೆಂಟಿ ಎಂಬ ಭವಿಷ್ಯ ಪಕ್ಕಾ ಆಗಿತ್ತು. ಆ ಅನಾಹುತ ಜಾಹೀರಾಗೋ ಮುನ್ನವೇ ಬಚಾವಾಗೋ ದಾರಿ ಹುಡುಕಲಾರಂಭಿಸಿದ್ದ ಗೋಪಾಲ ದೇಶಪಾಂಡೆ ಅದೊಂದು ದಿನ ಮನೆ ಕ್ಲೀನ್ ಮಾಡೋ ಕಾರ್ಯದಲ್ಲಿ ಮಗ್ನರಾಗಿದ್ದಾಗ ನೀನಾಸಂಗೆ ಸಂಬಂಧಿಸಿದ ಪುಸ್ತಿಕೆಯೊಂದು ಸಿಕ್ಕಿಬಿಟ್ಟಿತ್ತಂತೆ. ಅದಾದ ಕೆಲವೇ ದಿನಗಳಲ್ಲಿ ಅವರು ನೀನಾಸಂ ಅಂಗಳದಲ್ಲಿದ್ದರು!

 

 

ತಮಾಶೆಯೆಂದರೆ, ಹಾಗೆ ಹೊರಡೋ ಘಳಿಗೆಯಲ್ಲಿಯೂ ನಟನಾಗಿ ಮಹತ್ತರವಾದದ್ದೇನೋ ಸಾಧಿಸೋ ಹಂಬಲವಾಗಲಿ, ಹೇಳಿಕೊಳ್ಳುವಂಥಾ ಗುರಿಯಾಗಲಿ ಗೋಪಾಲ ಅವರಿಗಿರಲಿಲ್ಲ. ನಪಾಸಾದ ದುರ್ವಾರ್ತೆ ಅವಮಾನದ ಸ್ವರೂಪ ಪಡೆದು ಲೈವ್ ಅಗಿ ಮುಖಕ್ಕೆ ರಾಚಿಕೊಳ್ಳೋದರಿಂದ, ಮತ್ತೊಮ್ಮೆ ಓದಿ ಪರೀಕ್ಷೆ ಬರೆದು ಪಾಸಾಗೋ ದುರಂತದಿಂದ ತಪ್ಪಿಸಿಕೊಳ್ಳೋ ಇರಾದೆಯಷ್ಟೇ ಅವರದ್ದಾಗಿತ್ತು. ನೀನಾಸಂಗೆ ಆಯ್ಕೆಯಾದರೆ ಹೇಗೂ ಊಟ ತಿಂಡಿಗೇನೂ ಕೊರತೆ ಇಲ್ಲ. ನಸೀಬು ನೆಟ್ಟಗಿದ್ದರೆ ಗೌರವಧನ ಸಿಗುತ್ತದೆ ಅಂದುಕೊಂಡು ಹೋದ ಗೋಪಾಲ ದೇಶಪಾಂಡೆ ನೀನಾಸಂ ವಿದ್ಯಾರ್ಥಿಯಾದರು. ಅಲ್ಲಿನ ಶಿಸ್ತಿಗೆ ಒಗ್ಗಿಕೊಳ್ಳುತ್ತಲೇ ರಂಗಭೂಮಿಯ ಧ್ಯಾನಕ್ಕೆ ಶರಣಾದರು. ಅವರಿಗರಿವಿಲ್ಲದೆಯೇ ಅವರೊಳಗಿನ ನಟನೆಯ ತಾಕತ್ತು ಅನಾವರಣಗೊಳ್ಳುತ್ತಾ ಸಾಗಿತ್ತು. ಹೀಗೆ ಅವರು ನೀನಾಸಂ ಸೇರಿಕೊಂಡಿದ್ದು ೨೦೦೫-೦೬ನೇ ಸಾಲಿನಲ್ಲಿ. ಆ ನಂತರ ೨೦೧೧ರ ಮಧ್ಯಭಾಗದ ತನಕ ಅಲ್ಲೇ ಇದ್ದು ನಟನೆಯ ಪಟ್ಟುಗಳನ್ನು ಕಲಿತು ಹೊರ ಬಿದ್ದ ಗೋಪಾಲ ದೇಶಪಾಂಡೆಯವರನ್ನು ಮುಂದೆ ಹೊಟ್ಟೆಗೆ ಹಿಟ್ಟಿಗೇನೆಂಬ ಆತಂಕ ಪ್ರಧಾನವಾಗಿ ಕಾಡಲಾರಂಭಿಸಿತ್ತು!

 

 

ಆ ಆತಂಕ ಹೊತ್ತುಕೊಂಡೇ ಬೆಂಗಳೂರಿಗೆ ಬಂದಿಳಿದು ಕಲಿತ ಕಲೆಯ ವಲಯದಲ್ಲೇನಾದರೂ ಕಸುಬು ಸಿಗಬಹುದಾ ಎಂಬ ತಲಾಷಿನಲ್ಲಿರೋವಾಗಲೇ ನಿರ್ದೇಶಕ ರಮೇಶ್ ಇಂದಿರಾ ಮಾಡುತ್ತಿದ್ದ ದೇವಿ ಧಾರಾವಾಹಿಗೆ ಕಲಾವಿದರು ಬೇಕೆಂಬ ವಿಚಾರ ಗೊತ್ತಾಗಿ ಅತ್ತ ದೌಡಾಯಿಸಿದ್ದರು. ಆದರೆ ಅಲ್ಲಿ ಸಿಕ್ಕಿದ್ದು ಒಂದು ದಿನದ ಪಾತ್ರ. ಅದು ಗೋಪಾಲ ದೇಶಪಾಂಡೆಯವರಿಗೆ ಸಿಕ್ಕ ಮೊದಲ ಅವಕಾಶ. ಆ ನಂತರ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟನೆಯ ದೆಸೆಯಿಂದಲೇ ಮುಖ್ಯ ಪಾತ್ರಗಳನ್ನು ತಮ್ಮದಾಗಿಸಿಕೊಂಡ ಅವರು ಅದರ ನಡುವೆಯೇ ಲೈಫು ಇಷ್ಟೇನೆ ಚಿತ್ರದಲ್ಲೂ ಒಂದು ಪಾತ್ರ ಮಾಡಿದ್ದರಂತೆ. ಆ ನಂತರ ಸಾಲು ಸಾಲು ಅವಕಾಶಗಳು ಅರಸಿ ಬರಲಾರಂಭಿಸಿ ಕಿರುತೆರೆ ಪ್ರೇಕ್ಷಕರ ಅಭಿಮಾನ ಪಡೆದುಕೊಳ್ಳುವಲ್ಲಿಯೂ ಯಶ ಕಂಡ ದೇಶಪಾಂಡೆ ಇದೀಗ ಪುಟ್ಟಗೌರಿ ಮದುವೆ ಸೀರಿಯಲ್ಲಿನ ಜಗದೀಶನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅದರ ಮೂಲಕವೇ ಭಾರೀ ಖ್ಯಾತಿಯೂ ಅವರದ್ದಾಗಿದೆ.

 

 

ಇಂಥಾ ಗೋಪಾಲ ದೇಶಪಾಂಡೆ ಸದ್ಯ ಬೆಂಗಳೂರಿನಲ್ಲೇ ವಾಸವಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕಿಯಾಗಿರುವ ಮಡದಿ ಜ್ಯೋತಿ, ಪುಟ್ಟ ಮಗ ಧೃವ ಮತ್ತು ಶಾಲಾ ಶಿಕ್ಷಕಿಯಾಗಿದ್ದು ನಿವೃತ್ತರಾಗಿರೋ ತಾಯಿಯೊಂದಿಗಿನ ಚೆಂದದ ಸಂಸಾರ ಅವರದ್ದು. ಇತ್ತೀಚೆಗಷ್ಟೇ ತೆರೆಗೆಬಂದಿದ್ದ ಸಾಹೇಬ ಚಿತ್ರದಲ್ಲಿ ಎಲ್ಲರೂ ಕಣ್ಣರಳಿಸಿ ನೋಡುವಂತೆ ನಟಿಸಿದ್ದ ದೇಶಪಾಂಡೆ ಇದೀಗ ಬಿಡುಗಡೆಯಾಗಿರೋ ನನ್ ಮಗಳೇ ಹೀರೋಯಿನ್ ಚಿತ್ರದ ನಂತರ ಸಿನಿಮಾ ರಂಗದಲ್ಲಿ ಹವಾ ಸೃಷ್ಟಿಸೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಸದ್ಯಕ್ಕೆ ಮನೋಹರ್ ನಿರ್ದೆಶನದ ‘ಪ್ರಯಾಣಿಕರ ಗಮನಕ್ಕೆ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರದಲ್ಲಿ ಎಸ್ಸೈ ಪರಮೇಶ ಎಂಬ ಪಾತ್ರವೂ ಅವರಿಗೆ ಪಕ್ಕಾ ಆಗಿದೆ. ಇನ್ನು ನೀನಾಸಂನಲ್ಲಿ ಕಲಿತು ಬಂದ ಅನೇಕರು ಸೇರಿ ರೂಪಿಸಿರುತ್ತಿರುವ ಕೃಷ್ಣಪೂರ್ಣ ನೀನಾಸಂ ನಿರ್ದೇಶನದ ‘ಹಿಕೋರಾ’ ಸಿನಿಮಾದಲ್ಲೂ ದೇಶಪಾಂಡೆ ಅವರಿಗೊಂದು ವಿಶೇಷ ಪಾತ್ರವಿದೆ. ಸವಾಲಿನ ಪಾತ್ರಗಳನ್ನೂ ಆವಾಹಿಸಿಕೊಂಡವರಂತೆ ಲೀಲಾಜಾಲವಾಗಿ ನಟಿಸೋ ಗೋಪಾಲ ದೇಶಪಾಂಡೆಯವರಿಗೆ ಚೆಂದದ ಅವಕಾಶಗಳು ಸಿಗಲಿ. ಇದೀಗ ತಾನೇ ಕೆಂಪು ಬಸ್ಸು ಹತ್ತಿ ಬೆಂಗಳೂರಿನ ಒಡಲಿಗೆ ಬಂದು ಬಿದ್ದಂಥಾ ಮುಗ್ಧ, ಸಹಜ ವ್ಯಕ್ತಿತ್ವದಿಂದಲೇ ಗಮನ ಸೆಳೆಯೋ ಅವರು ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಟನಾಗಿ ಮಿಂಚಲಿ ಎಂಬ ಹಾರೈಕೆ ನಮ್ಮದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top