fbpx
ಮನೋರಂಜನೆ

ವಿಷ್ಣು ಅಭಿಮಾನಿಗಳು ಯಶ್ ವಿರುದ್ಧ ಅಸಹನೆ ಹೊಂದಿದ್ದೇಕೆ?

ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದ ವಿಚಾರದಲ್ಲಿ ಅಭಿಮಾನಿಗಳು ಕಾದು ಸುಸ್ತಾಗಿದ್ದಾರೆ. ಬೆಂಗಳೂರಿನಲ್ಲಿ ವಿಷ್ಣು ಸಮಾಧಿ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣವಾಗಲಿ ಎಂಬ ಇರಾದೆಯಿಂದ ಅಭಿಮಾನಿಗಳು ಹೋರಾಟ ನಡೆಸುತ್ತಿದ್ದರೆ ಭಾರತೀ ಮೇಡಂ ಮಾತ್ರ ಅದನ್ನು ಮೈಸೂರಿಗೆ ಶಿಫ್ಟ್ ಮಾಡೋ ಭಿನ್ನ ರಾಗ ತೆಗೆದು ಕೂತಿದ್ದಾರೆ. ಹೀಗಿರೋವಾಗಲೇ ವಿಷ್ಣು ಸ್ಮಾರಕದ ವಿಚಾರವಾಗಿ ರಾಕಿಂಗ್ ಸ್ಟಾರ್ ಯಶ್ ಮೊದಲ ಸಲ ಮಾತಾಡಿದ್ದಾರೆ. ಈ ಮಾತುಗಳು ವಿಷ್ಣು ಅಭಿಮಾನಿಗಳಲ್ಲಿ ಅಸಹನೆಗೂ ಕಾರಣವಾಗಿದೆ. ಈ ಬಗ್ಗೆ ವಿಷ್ಣು ಸೇನೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ಯಶ್‌ಗೆ ಬಹಿರಂಗ ಪತ್ರ ಬರೆದು ವಿಷ್ಣು ಅಭಿಮಾನಿಗಳ ಮನದ ಮಾತಿಗೆ ಧ್ವನಿಯಾಗಿದ್ದಾರೆ.

 

 

ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ವಿಷ್ಣು ಅಭಿಮಾನಿಯಾಗಿ ಪಾತ್ರ ಮಾಡಿದ್ದವರು ಯಶ್. ಅವರು ಮೊದಲ ಬಾರಿ ವಿಷ್ಣು ಸ್ಮಾರಕದ ಬಗ್ಗೆ ಮಾತಾಡಲು ವೇದಿಕೆ ಕಲ್ಪಿಸಿದ್ದು ಅನಿರುದ್ದ್ ಅಭಿನಯದ ರಾಜಸಿಂಹ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಇದರಲ್ಲಿ ವಿರಾವೇಶದಿಂದಲೇ ಮಾತಾಡಿದ ಯಶ್, ಸರ್ಕಾರ ಬೇಗನೆ ವಿಷ್ಣು ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸಲಿ. ಇಲ್ಲದಿದ್ದರೆ ನಾವು ಅಭಿಮಾನಿಗಳೇ ಸೇರಿ ಸ್ಮಾರಕ ನಿರ್ಮಾಣ ಮಾಡುತ್ತೇವೆ ಅಂತ ಘೋಷಣೆ ಮಾಡಿದ್ದಾರೆ.

 

 

ಇದಕ್ಕೆ ವೀರಕಪುತ್ರ ಶ್ರೀನಿವಾಸ್ ಬಹಿರಂಗ ಪತ್ರದ ಮೂಲಕ ಅಭಿಮಾನಿಗಳ ಪರವಾಗಿ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಭಾರತೀ ಮೇಡಂ ಒಪ್ಪಿಗೆ ಸೂಚಿಸಿದ್ದರೆ ಅಭಿಮಾನಿಗಳು ಯಾರಿಗೂ ಕಾಯುತ್ತಿರಲಿಲ್ಲ. ನಾವೇ ಮುಂದೆ ನಿಂತು ಸ್ಮಾರಕ ನಿರ್ಮಾಣ ಮಾಡುತ್ತಿದ್ದೆವು. ಆದರೆ ಈಗ ಎದುರಾಗಿರೋದು ಭಾರತೀ ಮೇಡಂರ ಒಪ್ಪಿಗೆಯ ಸಮಸ್ಯೆಯೇ. ವರ್ಷದ ಹಿಂದೆ ಮುಖ್ಯಮಂತ್ರಿಗಳೂ ಕೂಡಾ ಭಾರತೀ ಅವರನ್ನು ಒಪ್ಪಿಸಿದರೆ ಸದರಿ ಸ್ಥಳದಲ್ಲೇ ಸ್ಮಾರಕ ಮಾಡೋದಾಗಿ ಹೇಳಿದ್ದರು. ಈಗ ಅದನ್ನೇ ಇನ್ನೊಂದು ಸ್ವರೂಪದಲ್ಲಿ ನೀವೂ ಹೇಳಿದ್ದೀರಿ. ಇದೆಲ್ಲ ಬರೀ ಕಣ್ಣೊರೆಸೋ ಮಾತುಗಳೆಂಬುದು ನಮಗೂ ಗೊತ್ತಿದೆ. ನಿಮಗೆ ನಿಜಕ್ಕೂ ಸ್ಮಾರಕ ನಿರ್ಮಾಣದ ಬಗ್ಗೆ ಒಲವಿದ್ದರೆ ವಿಷ್ಣು ಅವರ ಸಮಾಧಿ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಭಾರತಿ ಅವರನ್ನು ಒಪ್ಪಿಸಿ. ಆದರೆ ಇಂಥಾ ಮಾತುಗಳ ಮೂಲಕ ವಿಷ್ಣು ಸರ್ ಅಭಿಮಾನಿಗಳನ್ನು ಮತ್ತಷ್ಟು ನೋಯಿಸಬೇಡಿ ಎಂಬುದು ಪತ್ರದ ಸಂಕ್ಷಿಪ್ತ ಸಾರಾಂಶ.

 

 

ವೀರಕಪುತ್ರ ಶ್ರೀನಿವಾಸ್ ಆಕ್ರೋಶದಲ್ಲಿ ಅರ್ಥ ಇಲ್ಲದಿಲ್ಲ. ರಾಕಿಂಗ್ ಸ್ಟಾರ್ ಯಶ್ ಅಸಲೀ ಸಮಸ್ಯೆ ಗೊತ್ತಿದ್ದೂ ರಾಜಕಾರಣಿಯ ಶೈಲಿಯಲ್ಲಿ ಮಾತಾಡಿದ್ದಾರೆಂಬುದು ಎಂಥವರಿಗಾದರೂ ಅರ್ಥವಾಗುತ್ತದೆ. ಸಿನಿಮಾದಲ್ಲಿ ವಿಷ್ಣು ಹೆಸರನ್ನು ಬಳಸಿಕೊಂಡು ಅವರ ಸ್ಮಾರಕದ ವಿಚಾರದಲ್ಲಿ ತೆಪ್ಪಗಿದ್ದಾರೆಂಬ ಆರೋಪ ಯಶ್ ಮೇಲಿತ್ತು. ಇದೀಗ ಆ ಬಗ್ಗೆ ಮಾತಾಡೋ ಮೂಲಕ ಅದರಿಂದ ಬಚಾವಾಗೋ ಬುದ್ಧಿವಂತಿಕೆ ಪ್ರದರ್ಶಿಸಿರೋ ಯಶ್ ಒಂದರ್ಥದಲ್ಲಿ ತಾವಾಗೇ ಬಲೆಗೆ ಬಿದ್ದಿದ್ದಾರೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top