fbpx
ಮನೋರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥಿ ಪಕ್ಕಾ ಕನ್ನಡತಿ!

ಮುನಿರತ್ನ ನಿರ್ಮಾಣದ ಕುರುಕ್ಷೇತ್ರದ ಚಿತ್ರೀಕರಣ ಸಾಂಘವಾಗಿ ನೆರವೇರುತ್ತಿದ್ದರೂ ತಾರಾಗಣದ ಸಂಪೂರ್ಣ ಚಿತ್ರಣವಿನ್ನೂ ನಿಗೂಢ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದಲ್ಲಿ ದುರ್ಯೋಧನನ ಪಾತ್ರ ಮಾಡುತ್ತಿರೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಆದರೆ ದುರ್ಯೋಧನನ ಜೋಡಿ ಭಾನುಮತಿ ಯಾರಾಗ್ತಾರೆಂಬುದು ಮಾತ್ರ ಪರಮ ಕುತೂಹಲವಾಗಿ ಉಳಿದುಕೊಂಡಿತ್ತು!

 

ಆದರೀಗ ದುರ್ಯೋಧನನಿಗೆ ಭಾನುಮತಿ ಸಿಕ್ಕಿದ್ದಾಳೆ. ಆಕೆ ಪಕ್ಕಾ ಕನ್ನಡತಿ ಎಂಬ ಸಿಹಿ ಸುದ್ದಿಯೂ ಹೊರ ಬಿದ್ದಿದೆ!

ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗೋ ಭಾಗ್ಯವನ್ನು ಮೇಘನಾ ರಾಜ್ ಪಡೆದುಕೊಂಡಿದ್ದಾರೆ. ಚಿರಂಜೀವಿಯೊಂದಿಗೆ ನಿಜ ಜೀವನದಲ್ಲಿ ಹಸೆಮಣೆ ಏರೋ ಖುಷಿಯಲ್ಲಿರೋ ಮೇಘನಾ ಈ ಚಿತ್ರದಲ್ಲಿ ಭಾನುಮತಿಯ ಪಾತ್ರ ಮಾಡಲಿರೋದು ಪಕ್ಕಾ ಆಗಿದೆಯಂತೆ.

ಭಾನುಮತಿಯ ಪಾತ್ರಕ್ಕಾಗಿ ಆರಂಭದಿಂದಲೂ ತಲಾಷು ನಡೆಯುತ್ತಿತ್ತು. ಆದರೆ, ಈ ಪಾತ್ರಕ್ಕೆ ಮುನಿರತ್ನ ಪರಭಾಷಾ ನಟಿಯನ್ನು ಕರೆತರುತ್ತಾರೆಂಬ ಬಗ್ಗೆಯೂ ಗುಲ್ಲೆದ್ದಿತ್ತು. ಆದ್ದರಿಂದಲೇ ಕುರುಕ್ಷೇತ್ರದ ಸುತ್ತಾ ದಿನಕ್ಕೊಬ್ಬರಂತೆ ಪ್ರಸಿದ್ಧ ಪರಭಾಷಾ ನಟಿಯರ ಹೆಸರು ಗಿರಕಿ ಹೊಡೆಯಲಾರಂಭಿಸಿತ್ತು. ಈ ಸಾಲಿನಲ್ಲಿ ರೆಜಿನಾ, ರಮ್ಯಾ ನಂಬೀಸನ್ ಮುಂತಾದ ನಟಿಯರ ಹೆಸರು ಪ್ರಧಾನವಾಗಿ ಕೇಳಿ ಬಂದಿತ್ತು. ಆದರೆ ಈ ಚಿತ್ರದ ತಾರಾಗಣದಲ್ಲಿ ಪ್ರಮುಖವಾಗಿ ಕನ್ನಡದ ತಾರೆಯರ ದಂಡನ್ನೇ ಜಮಾವಣೆ ಮಾಡಿರೋ ಮುನಿರತ್ನ ದರ್ಶನ್ ಅವರ ಜೋಡಿಯಾಗಿ ಬೇರೆ ಭಾಷೆಯವರನ್ನು ಕರೆತರಲು ಸಾಧ್ಯವೇ ಅಂತೊಂದು ಪ್ರಶ್ನೆಯೂ ಹುಟ್ಟಿಕೊಂಡಿತ್ತು.

 

ಆದರೀಗ ಮುನಿರತ್ನ ಆ ಪಾತ್ರಕ್ಕೆ ಪಕ್ಕಾ ಕನ್ನಡತಿ ಮೇಘನಾರನ್ನು ಆಯ್ಕೆ ಮಾಡೋ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. ಇದುವರೆಗೂ ಕನ್ನಡದ ಒಂದಷ್ಟು ನಟರ ಜೊತೆ ನಟಿಸಿರೋ ಮೇಘನಾ ಪಾಲಿಗಿದು ನಿಜಕ್ಕೂ ಬಂಪರ್ ಆಫರ್ ಎಂಬುದರಲ್ಲಿ ಎರಡು ಮಾತಿಲ್ಲ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top