fbpx
ಸಿನಿಮಾ

ಅನಂತ್ ನಾಗ್ – ಸುಹಾಸಿನಿ ಜೋಡಿಯ  ಮುಂದುವರಿದ ಸಿನಿಮಾ `ಯಾನ’

ಅನಂತ್ ನಾಗ್ – ಸುಹಾಸಿನಿ ಜೋಡಿಯ  ಮುಂದುವರಿದ ಸಿನಿಮಾ `ಯಾನ’

 

ವಿಜಯಲಕ್ಷ್ಮಿ ಸಿಂಗ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಚಿತ್ರ `ಯಾನ’. `ಈ ಬಂಧನ’ದಂಥಾ ಸಂಬಂಧಗಳ ಸೂಕ್ಷ್ಮ ಪದರುಗಳ ಹಿಟ್ ಚಿತ್ರ ನಿರ್ದೇಶನ ಮಾಡಿರುವ ವಿಜಯಲಕ್ಷ್ಮಿ ಸಿಂಗ್ `ಯಾನ’ ಚಿತ್ರದ ಮೂಲಕ ಒಂದು ಕಾಲದ ಹಾಟ್ ಫೇವರಿಟ್ ಜೋಡಿ ಎಂದು ಗುರುತಿಸಿಕೊಂಡಿದ್ದ ಅನಂತ್ ನಾಗ್ ಮತ್ತು ಸುಹಾಸಿನಿ ಬಹುಕಾಲದ ನಂತರ ಒಟ್ಟಾಗಿ ನಟಿಸುತ್ತಿರೋದು ವಿಶೇಷ.

 

ಇಡೀ ಚಿತ್ರದಲ್ಲಿ ಬಹು ಮುಖ್ಯವಾಗಿರೋ ಅನಂತ್ ನಾಗ್ ಮತ್ತು ಸುಹಾಸಿನಿ ಜೋಡಿಯ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ. ಒಳಾಂಗಣ ಮತ್ತು ಹೊರ ಪ್ರದೇಶಗಳಲ್ಲಿ ನಡೆಯಲಿರೋ ಈ ಚಿತ್ರೀಕರಣದಲ್ಲಿ ಸುಹಾಸಿನಿ, ಅನಂತ್ ನಾಗ್ ಮತ್ತು ವೈಭವಿ ಒಟ್ಟಾಗಿ ನಟಿಸಲಿದ್ದಾರಂತೆ.

 

ಅಷ್ಟಕ್ಕೂ ವಿಜಯಲಕ್ಷ್ಮಿ ಸಿಂಗ್ ಅವರು ಕಥೆ ಬರೆಯುತ್ತಲೇ ಆ ಪಾತ್ರಕ್ಕೆ ಸುಹಾಸಿನಿಯವರನ್ನು ಫಿಕ್ಸ್ ಮಾಡಿಕೊಂಡಿದ್ದರಂತೆ. ಈ ಮೂಲಕ ಅದೆಷ್ಟೋ ದಶಕಗಳ ಕನಸೊಂದು ನನಸಾದ ಖುಷಿ ವಿಜಯಲಕ್ಷ್ಮಿ ಅವರದ್ದು. ಯಾಕೆಂದರೆ, ಬಹುಕಾಲದ ಸುದೀರ್ಘವಾದ ಗೆಳೆತನ ಹೊಂದಿದ್ದರೂ ಮನಸಿಗೆ ತೃಪ್ತಿಯಾಗುವಂಥಾ ಪಾತ್ರವೊಂದನ್ನು ಸುಹಾಸಿನಿಯವರಿಗಾಗಿ ಸೃಷ್ಟಿಸಿ ನಟಿಸುವಂತೆ ಮಾಡೋ ಕನಸು ಈ ವರೆಗೂ ಸಾಧ್ಯವಾಗಿರಲಿಲ್ಲವಂತೆ. ಸುಹಾಸಿನಿ ಅವರೇ `ಎಲ್ಲರಿಗೂ ಅವಕಾಶ ಕೊಡ್ತೀಯ. ನನ್ನನ್ನು ಹಾಕಿಕೊಂಡು ಸಿನಿಮಾ ಮಾಡೋದ್ಯಾವಾಗ’ ಅಂತ ಆಗಾಗ ಹೇಳುತ್ತಿದ್ದದ್ದು ಉಂಟಂತೆ. ಆಗೆಲ್ಲ ನಿಂಗಾಗೇ ಒಂದು ಪಾತ್ರ ಸೃಷ್ಟಿಯಾದ ನಂತರವೇ ಅದು ಸಾಧ್ಯ ಅಂತ ವಿಜಯಲಕ್ಷ್ಮಿ ಹೇಳಿಕೊಂಡು ಬರುತ್ತಿದ್ದರಂತೆ. ಅದಕ್ಕೀಗ ಯಾನ ಚಿತ್ರದ ಮೂಲಕ ಕಾಲ ಕೂಡಿ ಬಂದಿದೆ.

 

ವಿಜಯಲಕ್ಷ್ಮಿ ಸಿಂಗ್ ಮತ್ತು ಸುಹಾಸಿನಿ ಅವರದ್ದು 1982ರ ಕಾಲದಿಂದ ಸಾಗಿಬಂದಿರುವ ಸುಧೀರ್ಗ  ಗೆಳೆತನದ ಯಾನ! ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಒಟ್ಟಾಗಿ ನಟಿಸೋ ಮೂಲಕ ಅದು ಕುದುರಿಕೊಂಡಿತ್ತು. ಸುಹಾಸಿನಿ ಆ ಬಳಿಕ ಕನ್ನಡದಲ್ಲಿ ಎಂದೂ ಮರೆಯದ ಛಾಪು ಮೂಡಿಸುವಲ್ಲಿಯೂ ವಿಜಯಲಕ್ಷ್ಮಿಯವರ ಪಾತ್ರವಿದೆ. ರಾಜೇಂದ್ರ ಸಿಂಗ್ ಬಾಬು ಬಂಧನ ಚಿತ್ರದ ಕಥೆ ರೆಡಿ ಮಾಡಿಕೊಂಡು ಅದರಲ್ಲಿನ ನಂದಿನಿ ಪಾತ್ರಕ್ಕೆ ಸೂಟ್ ಆಗೋ ನಾಯಕಿಯ ಹುಡುಕಾಟದಲ್ಲಿದ್ದರಲ್ಲಾ? ಆ ಪಾತ್ರದ ಲಕ್ಷಣಗಳನ್ನು ಕೇಳಿಕೊಂಡ ವಿಜಯಲಕ್ಷ್ಮಿಗೆ ಆ ಪಾತ್ರಕ್ಕೆ ಸುಹಾಸಿನಿಯೇ ಹೇಳಿ ಮಾಡಿಸಿದ್ದಾರೆ ಅನ್ನಿಸಿತ್ತಂತೆ. ತಕ್ಷಣವೇ ಅದೊಂದು ದಿನ ಚಾಮುಂಡೇಶ್ವರಿ ಸ್ಟುಡಿಯೋಗೆ ರಾಜೇಂದ್ರ ಸಿಂಗ್ ಬಾಬುರನ್ನು ಕರೆದು ಸುಹಾಸಿನಿಯವರನ್ನು ಪರಿಚಯ ಮಾಡಿಸಿದ ವಿಜಯಲಕ್ಷ್ಮಿ ಇವಳೇ ನಂದಿನಿ ಅಲ್ವಾ ಅಂದಿದ್ದರಂತೆ!

 

 

ಹಾಗೆ ಬಂಧನ ಚಿತ್ರದಲ್ಲಿ ನಂದಿನಿಯಾಗಿ ವಿಷ್ಣುವರ್ಧನ್ ಜೊತೆ ನಟಿಸಿದ ಸುಹಾಸಿನಿ ಕನ್ನಡಿಗರನ್ನು ಆವರಿಸಿಕೊಂಡರು.

 

ಆ ಬಳಿಕ ಹೊಸ ನೀರು ಚಿತ್ರದಲ್ಲಿ ಅನಂತ್ ನಾಗ್ ಜೊತೆ ನಟಿಸೋ ಮೂಲಕ ಈ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಆ ನಂತರವೂ ಒಂದಾಗಿ ನಟಿಸಿತ್ತು. ಬಳಿಕ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಈ ಜೋಡಿ ಇದೀಗ ಬಹು ಕಾಲದ ನಂತರ ಯಾನ ಚಿತ್ರದ ಮೂಲಕ ಮತ್ತೆ ಒಂದಾಗಿದೆ. ವಿಶೇಷವೆಂದರೆ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ನಟಿಸಿದ ಮೊದಲ ಸಿನಿಮಾ `ಶ್ರೀಮಾನ್’ನಲ್ಲಿ ಅನಂತ್ ನಾಗ್ ಅವರೇ ನಾಯಕನಟರಾಗಿದ್ದರು.

 

ಯಾನ ಚಿತ್ರದಲ್ಲಿ ಈ ಜೋಡಿಯನ್ನು ಒಂದು ಮಾಡಲು ವಿಜಯಲಕ್ಷ್ಮಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅಷ್ಟೇ ಸಂಯಮದಿಂದ ಕಾದಿದ್ದಾರೆ. ಆರೇಳು ತಿಂಗಳಿಂದಲೂ ಹೊರನಾಡಿನಲ್ಲಿದ್ದ ಸುಹಾಸಿನಿ ವಿದೇಶದಿಂದ ಮರಳಿದಾಗ ಅನಂತ್ ನಾಗ್ ವಿದೇಶ ಯಾನ ಆರಂಭಿಸುತ್ತಿದ್ದರಂತೆ. ಅವರು ಮರಳಿದಾಗ ಸುಹಾಸಿನಿ ಮತ್ತೆ ವಿದೇಶಕ್ಕೆ ತೆರಳುತ್ತಿದ್ದರಂತೆ. ಆದರೆ ಕಡೆಗೂ ಇದೀಗ ಇವರಿಬ್ಬರೂ ಮತ್ತೆ ಒಟ್ಟಾಗಿ ನಟಿಸೋದಕ್ಕೆ ಕಾಲ ಕೂಡಿ ಬಂದಿದೆ. ಅನಂತ್ ಮತ್ತು ಸುಹಾಸಿನಿ ಜೋಡಿಯಾಗಿ ನಟಿಸುತ್ತಿರುವ ಒಂಭತ್ತನೇ ಚಿತ್ರ ಈ `ಯಾನ’. ಯಾನ ಚಿತ್ರದಲ್ಲಿಯೂ ಇವರಿಬ್ಬರ ಪಾತ್ರವನ್ನು ವಿಜಯಲಕ್ಷ್ಮಿ ಬಹು ಕಾಲ ಕಾಡುವಂತೆ ರೂಪಿಸಿದ್ದಾರಂತೆ. ಈ ಮೂಲಕ ಸುಹಾಸಿನಿ ಮತ್ತು ಅನಂತ್ ನಾಗ್‍ರ ಯಶಸ್ವೀ ಜೋಡಿ ಮತ್ತೆ ಮೋಡಿ ಮಾಡಲಿದೆ ಎಂಬುದು ವಿಜಯಲಕ್ಷ್ಮಿ ಸಿಂಗ್ ಅವರ ಭರವಸೆ.

 

ಜೈಜಗದೀಶ್ ಅವರು ಅರ್ಪಿಸುತ್ತಿರುವ ಈ ಚಿತ್ರವನ್ನು ಹರೀಶ್ ಶೇರಿಗಾರ್ , ಶರ್ಮಿಳಾ ಶೇರಿಗಾರ್ ವೈಭವಿ, ವೈನಿಧಿ, ವೈಸಿರಿ ನಿರ್ಮಿಸುತ್ತಿದ್ದಾರೆ. ವಿಜಯಲಕ್ಷ್ಮೀಸಿಂಗ್ ಕಥೆ ಬರೆದಿರುವ ಈ ಚಿತ್ರಕ್ಕೆ ವಿಜಯಲಕ್ಷ್ಮೀಸಿಂಗ್ ಹಾಗೂ ಸುಹಾಸ್ ಗಂಗಾಧರ್ ಚಿತ್ರಕಥೆ ಬರೆದಿದ್ದಾರೆ. ಸುನಿ ಹಾಗೂ ಮಧು.ಬಿ.ಎ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ಕರ್ಮ್ ಚಾವ್ಲಾ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ವೈಭವಿ, ವ್ಸಿನಿಧಿ, ವೈಸಿರಿ, ಚಕ್ರವರ್ತಿ, ಸುಮುಖ, ಅಭಿಷೇಕ್, ಅನಂತನಾಗ್, ಸುಹಾಸಿನಿ ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರರಾಜ್, ಸುಂದರ್, ವೀಣಾಸುಂದರ್, ಎಂ.ಎನ್.ಲಕ್ಷ್ಮೀದೇವಿ ಮುಂತಾದವರಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top