fbpx
ಕಿರುತೆರೆ

ಬಿಗ್‌ಬಾಸ್: ಯಾಕಿಂಗೆ ಮಂಗಾ ಮಾಡ್ತೀರಿ ಸ್ವಾಮಿ?

ಬಿಗ್‌ಬಾಸ್: ಯಾಕಿಂಗೆ ಮಂಗಾ ಮಾಡ್ತೀರಿ ಸ್ವಾಮಿ?

 

 

ಕಳೆದ ಸೀಜನ್‌ಗಳ ಮೂಲಕವೇ ಕನ್ನಡದ ಬಿಗ್‌ಬಾಸ್ ಶೋ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಆದರೂ ಸುದೀಪ್ ಅವರ ಕಾರಣಕ್ಕೆ ಒಂದಷ್ಟು ಕ್ರೇಜ಼್ ಕಾಪಾಡಿಕೊಂಡಿದ್ದ ಬಿಗ್‌ಬಾಸ್ ಈ ಸೀಜ಼ನ್‌ನಲ್ಲಿ ಸಂಪೂರ್ಣವಾಗಿ ಸೋಲಿನ ಕಮರಿಗೆ ಬಿದ್ದಿದೆ. ಯಾವಾಗ ಏನು ಮಾಡಿದರೂ ಇದರ ಟಿಆರ್‌ಪಿ ಬರಖತ್ತಾಗೋದಿಲ್ಲ ಅಂತ ಸ್ಪಷ್ಟವಾಯ್ತೋ ಆಗ ವಾಹಿನಿಯ ಮಂದಿ ಪ್ರಚಾರಕ್ಕಾಗಿ ನಾನಾ ಚೀಪ್ ಗಿಮಿಕ್‌ಗಳನ್ನು ಶುರು ಮಾಡಿಕೊಂಡಿದೆ.

 

 

ಸಂಯುಕ್ತಾ ಹೆಗ್ಡೆ ಎಂಬ ನಖರಾ ಎಲಿಮೆಂಟೊಂದು ತುಂಡು ಚೆಡ್ಡಿಯಲ್ಲಿ ಬಿಗ್‌ಬಾಸ್ ಮನೆ ಸೇರಿದ್ದು, ಕ್ಷಣಕ್ಷಣವೂ ನಖರಾ ಮಾಡುತ್ತಾ ಕಡೆಗೆ ಸಮೀರ್ ಆಚಾರ್ಯನಿಗೆ ಕಪಾಳಕ್ಕೆ ಬಾರಿಸಿದ್ದೆಲ್ಲವೂ ಟಿಆರ್‌ಪಿ ಮೇಲಕ್ಕೆತ್ತೋ ಕಸರತ್ತುಗಳಾ? ಈ ಪ್ರಶ್ನೆಗೆ ಈ ಶೋನ ಅಳಿದುಳಿದ ಅಭಿಮಾನಿ ಪ್ರೇಕ್ಷಕರೂ ಹೌದು ಅನ್ನುತ್ತಿದ್ದಾರೆ!
ಈ ಸೀಜ಼ನ್ ಆರಂಭದಲ್ಲೇ ಮಹಾ ಸಂಕಟವೊಂದಕ್ಕೆ ಸಿಕ್ಕಿಕೊಂಡಿದ್ದ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಇದೀಗ ದಿನೇ ದಿನೇ ಪಾತಾಳ ಸೇರುತ್ತಿರೋ ಬಿಗ್‌ಬಾಸನ್ನು ಕಂಡು ಗರ ಬಡಿದಂತಾಗಿರೋದು ಸತ್ಯ. ಯಾಕೆಂದರೆ ಕಳೆದ ಸೀಜ಼ನ್ನುಗಳಿಗೆ ಹೋಲಿಸಿದರೆ ಈ ಬಾರಿಯ ಟಿಆರ್‌ಪಿ ಸಂಪೂರ್ಣ ಇಳಿಮುಖ ಕಂಡಿದೆ. ಆದ ಕಾರಣವೇ ಟೀಚರುಗಳ ಹೆಸರಲ್ಲಿ ಹಳೇ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸೋ ಕಸರತ್ತುಗಳೂ ನಡೆದವು. ಆದರೆ ಅದ್ಯಾವುದೂ ಅಂದುಕೊಂಡಂತೆ ಗೆಲುವು ಕಂಡಿಲ್ಲ.

 

ಆ ನಂತರದಲ್ಲಿ ಲಾಸ್ಯ ಎಂಬ ಅಗೋಚರ ನಟಿಯೊಬ್ಬಳ ಜೊತೆ ಬಿಗ್‌ಬಾಸ್ ಮನೆ ಸೇರಿಕೊಂಡವಳು ನಖರಾ ರಾಣಿ ಸಂಯುಕ್ತಾ ಹೆಗಡೆ. ಅಷ್ಟಕ್ಕೂ ಈಕೆ ಒಂದಷ್ಟು ದಿನ ಇದ್ದು ಹೋಗೋ ಒಪ್ಪಂದದ ಮೇರೆಗಷ್ಟೇ ಮನೆ ಸೇರಿಕೊಂಡಿದ್ದವಳು. ಆದರೆ ಮೊದಲ ದಿನದಿಂದಲೇ ಬಾಯಿ ಬಡಕೊಳ್ಳಲಾರಂಭಿಸಿದ ಈಕೆಯ ಕೂಗು ಮಾರಿ ಬುದ್ಧಿ ಪ್ರೇಕ್ಷಕರಿಗೆ ರೇಜಿಗೆ ಹುಟ್ಟಿಸಿತ್ತು. ಆರಂಭದಿಂದಲೂ ಸಮೀರ್ ಆಚಾರ್ಯನ ಮೇಲೆ ವಿನಾ ಕಾರಣ ರೇಗಲಾರಂಭಿಸಿದ್ದ ಸಂಯುಕ್ತಾ ನೆನ್ನೆಯ ಟಾಸ್ಕಿನಲ್ಲಿ ತನ್ನ ಮೈಮುಟ್ಟಿದ ಎಂಬ ಕಾರಣ ಕೊಟ್ಟು ಸಮೀರನ ತಲ್’ತಲೆ ಮೇಲೆ ಬಾರಿಸಿದ್ದಾಳೆ. ಇದೇ ಸಂಯುಕ್ತಾ `ಇವತ್ತೇನಾದ್ರೂ ಫಿಜಿಕಲ್ ಟಾಸ್ಕ್ ಕೊಟ್ರೆ ನಿಮ್ಗೆ ಹೊಡಿಬಾರದ ಜಾಗಕ್ಕೆ ಹೊಡೀತೀನಿ ಎಂಬರ್ಥದಲ್ಲಿ ಎಗರಾಡಿದ್ದಳು!

ಆ ನಂತರ ಕನ್ಫೆಷನ್ ರೂಮಿನಲ್ಲಿ ನಡೆದ ಮಹಾ ಡ್ರಾಮಾ ಬಿಗ್‌ಬಾಸ್‌ನ ಬೋಗಸ್ ಪ್ರವರಗಳನ್ನು ಪ್ರೇಕ್ಷಕರೆದುರು ಅನಾವರಣಗೊಳಿಸಿದೆ. ಸಂಯುಕ್ತಾ ತಾನು ಮಹಾ ಸಾಚಾ, ಏನೋ ಸಿಟ್ಟಿನಲ್ಲಿ ಹೊಡೆದೆ ಎಂಬಂತೆ ಮಾತಾಡುತ್ತಾ ಮಳ್ಳಿಯಂತಾಡಿದ್ದಾಳೆ. ಅಲ್ಲಿಗೆ ಈ ಶೋ ಸ್ಕ್ರಿಪ್ಟೆಡ್ ಮೆಥೆಡ್ಡಿನಲ್ಲಿ ನಡೆಯುತ್ತಿದೆ ಅಂತ ಜನಸಾಮಾನ್ಯರೂ ಮಾತಾಡಿಕೊಳ್ಳುವಂತಾಗಿದೆ.

 

 

ಈ ಸಂಯುಕ್ತಾಳನ್ನು ಟಿಆರ್‌ಪಿ ಮೇಲೆತ್ತೋ ಕಸರತ್ತಿನ ಫಲವಾಗಿಯೇ ಒಳಗೆ ಕಳಿಸಲಾಗಿತ್ತು. ಪ್ರತೀ ಕ್ಷಣವೂ ನಖರಾ ಮಾಡಿ ಸದ್ದು ಮಾಡುವಂತೆಯೂ ಹೇಳಿ ಕಳಿಸಲಾಗಿತ್ತು. ನಂತರ ಸಮಯ ನೋಡಿಕೊಂಡು ಸಮೀರ್ ಆಚಾರ್ಯನಂಥಾ ಸಾಧು ಆಸಾಮಿಯ ಕಪಾಳಕ್ಕೆ ಹೊಡೆಯೋ ಮೂಲಕ ಎಲ್ಲಾ ಚಾನೆಲ್ಲುಗಳೂ ಮುಗಿಬಿದ್ದು ಸುದ್ದಿ ಮಾಡುವಂತೆ ಮಾಡಲೂ ಮೊದಲೇ ಪ್ಲಾನು ರೆಡಿಯಾಗಿತ್ತು. ಇಂಥಾ ನಾನಾ ವಿಚಾರಗಳ ಬಗ್ಗೆ ಬಿಗ್‌ಬಾಸ್ ಪ್ರೇಕ್ಷಕರೇ ಮಾತಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆಯಂಥಾ ವಿಚಾರಗಳೂ ಕೂಡಾ ಪ್ರೇಕ್ಷಕರ ವಲಯದಲ್ಲೇ ಕೇಳಿ ಬರುತ್ತಿವೆ.ಆ ಮೂಲಕವೇ ನೋಡ ಹೋದರೆ ಕಪಾಳಕ್ಕೆ ಹೊಡೆಸಿಕೊಳ್ಳೋದಕ್ಕೆ ಸಮೀರ್ ಆಚಾರ್ಯನೆಂಬ ಮಿಕವನ್ನು ಕೂಡಾ ಸಂಯುಕ್ತಾಗೆ ಮೊದಲೇ ಸೂಚಿಸಿದ್ದರು. ಯಾಕೆಂದರೆ ಈ ಸಮೀರ್ ಟಾಸ್ಕ್ ವಿಚಾರದಲ್ಲಿ ಅದೇನೇ ಕೂಗಾಡಿದರೂ ಮೂಲತಃ ಸಾತ್ವಿಕ ಆಸಾಮಿ. ತೀರಾ ಮೈಮೇಲೆ ಬಂದರೂ ಎದುರಿನವರ ಮೇಲೆ ಹಲ್ಲೆ ಮಾಡುವ ದುಷ್ಟನಲ್ಲ. ಇದೇ ಕಾರಣಕ್ಕೆ ಸಮೀರ್ ಕಪಾಳ ಮೋಕ್ಷದ ಪ್ಲಾನಿಗೆ ಬಲಿಯಾಗಿದ್ದಾರೆ. ಒಂದು ವೇಳೆ ಈ ಸಂಯುಕ್ತಾ ದಿವಾಕರ್‌ಗಾಗಲಿ, ಜೆಕೆಗಾಗಲಿ, ರಿಯಾಜ್‌ಗಾಗಲಿ ಹೊಡೆದಿದ್ದರೆ ಮುಖಾ ಮೂತಿ ಒಡೆಸಿಕೊಳ್ಳಬೇಕಾಗುತ್ತಿತ್ತು. ಬೇರೆಲ್ಲ ಬೇಡ, ಅನುಪಮಾಳಂತ ಹುಡುಗಿಗೇ ಹೊಡೆದಿದ್ದರೂ ಸಂಯುಕ್ತಾ ಕೈ ಕಾಲು ಮುರಿಸಿಕೊಂಡು ಮನೆಯಿಂದ ಹೊರ ಬೀಳ ಬೇಕಾಗುತ್ತಿತ್ತು. ಆದ್ದರಿಂದಲೇ ಹಳಸಲಾದರೂ ಇಜ್ಜಿಲು ಒಲೆಯ ಸಾತ್ವಿಕ ಆಹಾರವನ್ನೇ ನೆಚ್ಚಿಕೊಂಡಿರೋ ಸಮೀರ್ ಆಚಾರ್ಯನನ್ನು ಇದರಲ್ಲಿ ಬಲಿಪಶು ಮಾಡಲಾಗಿದೆ… ಇವಿಷ್ಟೂ ವಿಚಾರಗಳನ್ನು ಬಿಗ್‌ಬಾಸ್ ಪ್ರೇಕ್ಷಕರೇ ಮಾತಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಈ ಶೋದ ಮಾನ ಮೂರಾಬಟ್ಟೆಯಾಗಿದೆ!

 

 

ಬಿಗ್‌ಬಾಸ್ ಎಂಬುದೇ ಕನ್ನಡಕ್ಕೆ ಒಗ್ಗದ ಶೋ. ಆದರೆ ಅದನ್ನು ಅಸಲೀ ಕ್ರಿಯೇಟಿವಿಟಿಗಳ ಮೂಲಕ ಮಾಡಲಾರದ ವಾಹಿನಿ ಮಂದಿ ಇಂಥಾ ಗಲೀಜು ಐಡಿಯಾಗಳ ಮೊರೆ ಹೋಗಿರೋದು ನಿಜಕ್ಕೂ ಅಸಹ್ಯದ ವಿಚಾರ. ಇಂಥಾ ಗಲೀಜು ಶೋಗಳನ್ನು ನೋಡೋ ಲಕ್ಷಾಂತರ ಮಂದಿ ಇದೀಗ ಪರ್ಮನೆಂಟಾಗಿ ಚಾನೆಲ್ ಬದಲಿಸೋ ಮೂಲಕ ಬಿಗ್‌ಬಾಸ್‌ನ ಬೂಸಾ ಬುದ್ಧಿಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ.

ಇನ್ನು ಈ ಪ್ರಕರಣದ ಕೇಂದ್ರಬಿಂದುವಾಗಿರೋ ಸಂಯುಕ್ತಾ ಹೆಗಡೆ ಕನ್ನಡದಲ್ಲಿ ಮಾಡಿರೋದು ಎರಡೇ ಎರಡು ಚಿತ್ರ. ಆದರೆ ತಾನು ನಂಬರ್ ಒನ್ ನಟಿ ಎಂಬಂಥಾ ದೌಲತ್ತಿನಿಂದ ಮೆರೆಯುತ್ತಿರೋ ಈಕೆಯದ್ದು ಎಂಥಾ ಮನಸ್ಥಿತಿ ಎಂಬುದಕ್ಕೆ ಕಾಲೇಜ್ ಕುಮಾರ್ ಚಿತ್ರ ತಂಡದ ಬಳಿ ದಂಡಿ ದಂಡಿ ಉದಾಹರಣೆಗಳಿವೆ. ಹಿಂದಿಯ ರೋಡೀಸ್ ಮುಂತಾದ ಶೋಗಳಲ್ಲಿ ಹೀನಾಯವಾಗಿ ಉಗಿಸಿಕೊಂಡು ಬಂದಿದ್ದ ಸಂಯುಕ್ತಾ ಇದೀಗ ಬಿಗ್‌ಬಾಸ್ ಮೂಲಕ ಕರ್ನಾಟಕದ ಫೀಮೇಲ್ ಹುಚ್ಚಾ ವೆಂಕಟನಾಗಿ ಅವತರಿಸಿದ್ದಾಳೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top