fbpx
ಹೆಚ್ಚಿನ

2017ರಲ್ಲಿ ಹೆಸರಾಂತ ಭಾರತೀಯ ಮಾಧ್ಯಮಗಳು ಪ್ರಸಾರ ಮಾಡಿದ ಸುಳ್ಳು ಸುದ್ದಿ ಪ್ರಕರಣಗಳನ್ನು ಇಲ್ಲಿ ವಿವರಿಸಿದ್ದೇವೆ.

2017ರಲ್ಲಿ ಹೆಸರಾಂತ ಭಾರತೀಯ ಮಾಧ್ಯಮಗಳು ಪ್ರಸಾರ ಮಾಡಿದ ಸುಳ್ಳು ಸುದ್ದಿ ಪ್ರಕರಣಗಳನ್ನು ಇಲ್ಲಿ ವಿವರಿಸಿದ್ದೇವೆ.

 

ಈಗ ಸುಳ್ಳು ಸುದ್ದಿ ಹರಡುವುದೂ ಒಂದು ಬಿಸಿನೆಸ್. ಕೆಲವರು ತಮಾಷೆ, ಮಜಾಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕೆಲಸ ಮಾಡಿದರೆ, ಇನ್ನು ಕೆಲವರು ಜನರನ್ನು ಪ್ರಚೋದಿಸಲು, ದಾರಿ ತಪ್ಪಿಸಲು ಈ ಕಾರ್ಯ ಮಾಡುತ್ತಾರೆ. ಕೆಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಈ ಕೆಲಸಕ್ಕಾಗಿಯೇ ಯುವಕರನ್ನು ನೇಮಕ ಮಾಡಿಕೊಂಡಿವೆಯಂತೆ!

ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾದ ವೃತ್ತಪತ್ರಿಕೆಗಳು, ಟಿವಿ ಮಾಧ್ಯಮಗಳು ತಮ್ಮ ಜವಾಬ್ದಾರಿಯಿಂದ ವಿಮುಖರಾದಂತೆ ಕಾಣುತ್ತಿವೆ. ಟಿಆರ್‍ಪಿಗಾಗಿ ಮಾಧ್ಯಮಗಳೇ ಸುಳ್ಳು ಸುದ್ದಿಗಳ ಹಿಂದೆ ಬೀಳುತ್ತಿವೆ. 2017ರಲ್ಲಿ ಹೆಸರಾಂತ ಭಾರತೀಯ ಮಾಧ್ಯಮಗಳು ಪ್ರಸಾರ ಮಾಡಿದ ಹಲವು ಸುಳ್ಳು ಸುದ್ದಿ ಪ್ರಕರಣಗಳನ್ನು ಇಲ್ಲಿ ವಿವರಿಸಿದ್ದೇವೆ.

 

1 ರಿಪಬ್ಲಿಕ್ ಟಿವಿ: ಕತ್ತಲಲ್ಲಿ ಕರೆಂಟು ಹುಡುಕುವ ಸಾಹಸ!

ಸತ್ಯ ಸಂಶೋಧಕ ಅರ್ನಾಬ್ ಗೋಸ್ವಾಮಿಯವರ ರಿಪಬ್ಲಿಕ್ ಟಿವಿಯ ತಂಡದವರು, ಜಾಮಿಯಾ ಮಸೀದಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂಬ ಬ್ರೇಕಿಂಗ್ ನ್ಯೂಸ್ ಕೊಟ್ಟು ನಗೆಪಾಟಿಲಿಗೀಡಾದರು. 4 ಕೋಟಿ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಕಾರಣ ವಿದ್ಯುತ್ ನಿಗಮದವರು ಜಾಮಾ ಮಸೀದಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಹಿಂದುತ್ವವಾದಿ ಗುಂಪೊಂದು ತೇಲಿಬಿಟ್ಡ ಸುಳ್ಳನ್ನೇ ನಂಬಿದ ರಿಪಬ್ಲಿಕ್ ಟಿವಿ ಬ್ರೇಕಿಂಗ್ ನ್ಯೂಸ್ ಜಡಿದೇ ಬಿಟ್ಟಿತು.

ಅಗಸ್ಟ್ 30ರಂದು ಮಧ್ಯಾಹ್ನ 2 ಗಂಟೆ 5 ನಿಮಿಷಕ್ಕೆ ಈ ಸುದ್ದಿ ಕೊಟ್ಟ ರಿಪಬ್ಲಿಕ್ ಟಿವಿ ‘ಜಾಮಿಯಾ ಮಸೀದಿಯ ಇಮಾಮ್ ಬುಖಾರಿಗೆ ಐಷಾರಾಮಿ ಕಾರ್‍ಗಳನ್ನು ಕೊಳ್ಳಲು ಹಣವಿದೆ, ಕರೆಂಟ್ ಬಿಲ್ ತುಂಬಲು ಏನು ದಾಡಿ?’ ಎಂದು ಪ್ರಶ್ನಿಸಿ ವಿವರವಾದ ಸುದ್ದಿ ಮಾಡಿತು. ರಿಪಬ್ಲಿಕ್ ಟಿವಿಯ ವರದಿಗಾರರು ಜಾಮಿಯಾ ಮಸೀದಿಯ ಸುತ್ತ ತಿರುಗಾಡಿ, ಅಲ್ಲಿದ್ದ ಕಾರುಗಳನ್ನು ತೋರಿಸಿದರು, ಮಸೀದಿಯಲ್ಲಿ ಲೈಟ್‍ಗಳು ಉರಿಯುತ್ತಿಲ್ಲೆಂದು ಹೊರಗೆ ಕತ್ತಲಲ್ಲಿ ನಿಂತು ವರದಿ ಮಾಡಿದರು. ಆದರೆ ಯಾವ ಸಮಯದಲ್ಲಿ ಮಸೀದಿಯ ಲೈಟ್‍ಗಳನ್ನು ತೆಗೆಯುತ್ತಾರೆ, ಯಾವ ಸಮಯದಲ್ಲಿ ಲೈಟ್‍ಗಳನ್ನು ಆನ್ ಮಾಡಿರುತ್ತಾರೆ ಎಂದು ಅಕ್ಕಪಕ್ಕದವರನ್ನು ಕೇಳುವ ವ್ಯವಧಾನವೂ ಆ ವರದಿಗಾರರಿಗೆ ಇರಲೇ ಇಲ್ಲ. ಒಬ್ಬ ವರದಿಗಾರ ಮಸೀದಿಯ ಹೊರಗಡೆ ಇದ್ದ ಒಂದು ಕರೆಂಟ್ ಬೋರ್ಡ್ ತೋರಿಸಿದ. ಅದರಲ್ಲಿ ಕೆಂಪು ಇಂಡಿಕೇಟರ್ ಉರಿಯುತ್ತಿದ್ದರೂ ಆತ ಕರೆಂಟ್ ಕಟ್ ಮಾಡಲಗಿದೆ ಎಂದೇ ಹೇಳುತ್ತಿದ್ದ.

ಅಂತದ್ದೇನೂ ಇಲ್ಲ, ಮಸೀದಿಯಿಂದ ಯಾವ ಬಿಲ್ ಬಾಕಿ ಉಳಿದಿಲ್ಲ, ನಾವು ವಿದ್ಯುತ್ ಸಂಪರ್ಕ ತೆಗೆದಿಲ್ಲ ಎಂದು ವಿದ್ಯುತ್ ನಿಗಮದವರು ನೀಡಿದ ಹೇಳಿಕೆಯನ್ನು ನಿರ್ಲಕ್ಷಿಸುತ್ತಲೇ ಈ ಸುಳ್ಳು ಸುದ್ದಿಯನ್ನು ನಿರಂತರವಾಗಿ ಪ್ರಸಾರ ಮಾಡಲಾಯಿತು. ಇಂತಹ ಸುಳ್ಳು ಸುದ್ದಿಗಳ ಹಿಂದಿನ ಅಸಲಿಯತ್ತು ಬಯಲು ಮಾಡುವ ‘ಅಲ್ಟ್ ನ್ಯೂಸ್’ ಈ ಸುಳ್ಳುಸುದ್ದಿಯ ಹಿಂದಿನ ಸತ್ಯವನ್ನು ಬಯಲು ಮಾಡಿದ ಮೇಲಷ್ಟೇ ರಿಪಬ್ಲಿಕ್ ಟಿವಿ ತನ್ನ ವೆಬ್‍ಸೈಟ್‍ನಿಂದ ವಿಡಿಯೋವನ್ನು ಮತ್ತು ಟ್ಟಿಟರ್ ಖಾತೆಗಳಿಂದ ಈ ಸುದ್ದಿಯನ್ನು ಡಿಲೀಟ್ ಮಾಡಿತು; ಆದರೆ ಕ್ಷಮೆ ಕೇಳಲಿಲ್ಲ, ಪಶ್ಚಾತಾಪ ಪಡಲೂ ಇಲ್ಲ!

2. ಆಜ್‍ತಕ್: ಸೌದಿಯಲ್ಲಿ ಹಸಿವಾದಾಗ ಗಂಡ ಹೆಂಡತಿಯನ್ನ ತಿನ್ನಬಹುದು!

ಕಳೆದ ವರ್ಷ ಆಜ್‍ತಕ್ ಹಿಂದಿ ಚಾನೆಲ್ ಮಾಡಿದ ಅತಿ ದೊಡ್ಡ ಹಾಸ್ಯಾಸ್ಪದ ಸುದ್ದಿಯಿದು. ಸೌದಿ ಅರೇಬಿಯಾದಲ್ಲಿ ಹೊಸ ಫತ್ವಾ ಹೊರಡಿಸಲಾಗಿದ್ದು, ಹಸಿವು ತಡೆಯಲಾಗದಿದ್ದರೆ ಪತಿ ತನ್ನ ಪತ್ನಿಯನ್ನೇ ತಿನ್ನಬಹುದು ಎಂಬುದೇ ಈ ಸುದ್ದಿ. 2015ರಲ್ಲಿ ಈ ತರಹದ ತಮಾಷೆಯನ್ನು ಮೊರಾಕ್ಕಾದ ಒಬ್ಬ ಬ್ಲಾಗರ್ ಬರೆದಿದ್ದ. ಆಜ್‍ತಕ್‍ನ ಹಿರಿಯಕ್ಕ ಇಂಡಿಯಾ ಟುಡೆಯೇ ಈ ತಮಾಷೆಯನ್ನು ಲೇವಡಿ ಮಾಡಿತ್ತು! ಆದರೆ 2017ರಲ್ಲಿ ಈ ತಮಾಷೆಯನ್ನೇ ಸೀರಿಯಸ್ ಆಗಿ ಪ್ರಸಾರ ಮಾಡಿದ ಆಜ್‍ತಕ್‍ನ ಉದ್ದೇಶವಾದರೂ ಏನು?

 

 

3. ಟೈಮ್ಸ್ ನೌ: ಮತಾಂತರದ ದರಪಟ್ಟಿ! ಬ್ರಾಹ್ಮಣ ಹುಡುಗಿಗೆ 5 ಲಕ್ಷ!

7 ವರ್ಷಗಳ ಹಿಂದಿನ ಒಂದು ‘ಮತಾಂತರದ ದರಪಟ್ಟಿ’ಯನ್ನೇ ತೋರಿಸಿ, ಕೇರಳದಲ್ಲಿ ಹಿಂದೂ, ಬೌದ್ಧ, ಪಂಜಾಬಿ, ಗುಜರಾತಿ ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸಲು ಲಕ್ಷಗಳ ಲೆಕ್ಕದಲ್ಲಿ ಹಣ ನೀಡಲಾಗುತ್ತಿದೆ, ಇದಕ್ಕೆ ಒಂದು ರೇಟ್‍ಕಾರ್ಡ್ ಕೂಡ ಇದ್ದು ಸಾರ್ವಜನಿಕವಾಗಿ ಇದು ಲಭ್ಯವಿದೆ ಎಂದು ಪ್ರೈಮ್‍ಟೈಮ್‍ನಲ್ಲಿ ರಾಷ್ಟ್ರೀಯ ಸುದ್ದಿಯನ್ನಾಗಿ ಈ ಸುಳ್ಳನ್ನು ‘ಟೈಮ್ಸ್ ನೌ’ ಚಾನೆಲ್ 2017ರಲ್ಲಿ ಪ್ರಸಾರ ಮಾಡಿತು. ವಿಚಿತ್ರವೆಂದರೆ ಈ ಸುಳ್ಳುಸುದ್ದಿ ಕೆಲ ವರ್ಷಗಳ ಹಿಂದೆಯೇ ವ್ಯಾಟ್ಸಾಪ್‍ನಲ್ಲಿ ಹರಿದಾಡಿ, ಆ ರೇಟ್‍ಕಾರ್ಡ್ ಫೋಟೋಶಾಪ್ ಚಮತ್ಕಾರದಿಂದ ಸೃಷ್ಟಿಯಾದ ಸರಕು ಎಂಬ ಸತ್ಯ ಆಗಲೇ ಬಯಲಾಗಿತ್ತು. ಪಾಪ, ಟಿಆರ್‍ಪಿಗಾಗಿ ಟೈಮ್ಸ್‍ನೌ ಈ ಸುಳ್ಳುಸುದ್ದಿ ಪ್ರಸಾರ ಮಾಡಿ, ಇಸ್ಲಾಂಗೆ ಮತಾಂತರದ ದರಗಳನ್ನು ಪ್ರಕಟಿಸಿತು! ಬ್ರಾಹಣ ಹುಡುಗಿಯ ಮತಾಂತರಕ್ಕೆ 5 ಲಕ್ಷ, ಪಂಜಾಬಿ ಹುಡುಗಿಗೆ 7 ಲಕ್ಷ, ಒಬಿಸಿ ಹುಡುಗಿಯರಾದರೆ 2 ಲಕ್ಷ ಅಂತೆಲ ್ಲ’ದರ’ ಘೋಷಿಸಿ, ಸುಳ್ಳು ಸುದ್ದಿಯನ್ನು ವಿಜೃಂಭಿಸಿ, ತನ್ನ ಮರ್ಯಾದೆ ತಾನೇ ತೆಗೆದುಕೊಂಡಿತು.

 

4. ಝೀ ನ್ಯೂಸ್, ಎಬಿಪಿ: ದಾವೂದ್‍ನ 15 ಸಾವಿರ ಕೋಟಿ ಮೌಲ್ಯದ ಆಸ್ತಿ ವಶ!

ಇದು ಜನವರಿ 4, 2017ರಲ್ಲಿ ಝೀ ನ್ಯೂಸ್, ಎಬಿಪಿ:ಗಳು ಮಾಡಿದ ಮಹಾ ಸುಳ್ಳು ಸುದ್ದಿ! ಈ ಸುಳ್ಳುಸುದ್ದಿಗೆ ಯಾವುದೇ ಮೂಲವೇ ಇಲ್ಲ! ಅಂದರೆ ಈ ಸುಳ್ಳುಸುದ್ದಿಯ ಸೃಷ್ಟಿಕರ್ತ ಝೀ ನ್ಯೂಸ್! ಯುಎಇ ಸರ್ಕಾರವು ದಾವೂದ್ ಇಬ್ರಾಹಿಂನ 15 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕಬ್ಜಾ ಮಾಡಿಕೊಂಡಿದೆ, ಇದು ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಎಂದೆಲ್ಲ ಸುದ್ದಿ ಪ್ರಸಾರವಾಯಿತು. 2015ರಲ್ಲಿ ಪ್ರಧಾನಿ ಮೋದಿ ಅಲ್ಲಿಗೆ ಹೋದಾಗ ದಾವೂದ್‍ನ ಆಸ್ತಿ ಎಲ್ಲೆಲ್ಲಿವೆ ಎಂಬ ಪಟ್ಟಿಯನ್ನು ಅಲ್ಲಿನ ಸರ್ಕಾರಕ್ಕೆ ಕೊಟ್ಟು ಬಂದಿದ್ದರಂತೆ, ಅದರ ಆಧಾರ ಮೇಲೆಯೇ ಆಸ್ತಿ ವಶ ಮಾಡಿಕೊಳ್ಳಲಾಗಿದೆ ಎಂದು ಪ್ರಸಾರ ಮಾಡಲಾಯಿತು. ವಿದೇಶಾಂಗ ಸಚಿವಾಲಯ, ಯುಎಇಯಲ್ಲಿನ ಭಾರತದ ರಾಯಭಾರಿ ಯಾರಿಗೂ ಗೊತ್ತಿಲ್ಲದ ಈ ವಿಷಯ ಝೀ ನ್ಯೂಸ್‍ಗೆ ಸಿಕ್ಕಿತ್ತು. ಇದನ್ನೇ ನಂಬಿದ ಬಿಜೆಪಿ ತನ್ನ ಸಾಮಾಜಿ ಜಾಲತಾಣಗಳಲ್ಲಿ ಈ ಸುಳ್ಳನ್ನೇ ಹರಿಬಿಟ್ಟು ಪ್ರಚಾರ ಪಡೆಯಿತು. ಕೇವಲ ಐದೇ ದಿನದಲ್ಲಿ ಇದು ಅಪ್ಪಟ ಸುಳ್ಳು ಎಂದು ಸಾಬೀತಾಯಿತು. ಯುಎಇ ಅಧಿಕಾರಿಗಳೇ ಇದನ್ನು ಅಲ್ಲಗಳೆದರು! ದಾವೂದ್ ಸುದ್ದಿಗಳೆಂರೆ ನಮ್ಮ ಚಾನೆಲ್‍ಗಳಿಗೆ ಒಳ್ಳೆ ಟಿಆರ್‍ಪಿ ಸರಕುಗಳೇ ಅಲ್ಲವೇ?

 

 

5. ಇಂಡಿಯಾ ಟುಡೇ: ಕೋಮುಜ್ವಾಲೆಗೆ ಕುದಿಯುವ ಎಣ್ಣೆ!

ಕರ್ನಾಟಕದ ಹೊನ್ನಾವರದ ಪ್ರಕರಣವಿದು. ಇದು ಈಗ ಸಿಬಿಐ ವಿಚಾರಣೆಯಲ್ಲಿದೆ. ಪರೇಶ್ ಮೆಸ್ತಾನ ಮೇಲೆ ಕುದಿಯುವ ಎಣ್ಣೆ ಸುರಿಯಲಾಯಿತು, ಚಿತ್ರಹಿಂಸೆ ನೀಡಲಾಯ್ತು, ತಲೆ ಕತ್ತರಿಸಿ ಕೊಲ್ಲಲಾಯಿತು ಎಂದು ಪ್ರಚೋದನಾತ್ಕಕ ಸುದ್ದಿ ಪ್ರಕಟಿಸಿದ ‘ಇಂಡಿಯಾ ಟುಡೇ’ ಚಾನೆಲ್, ಗ್ರಾಫಿಕ್ಸ್ ಬಳಸಿ ತೋರಿಸಿದ ಚಿತ್ರಗಳ ಮೂಲಕ ಕೋಮು ದ್ವೇಷÀಕ್ಕೆ ಪ್ರೇರಣೆ ನೀಡಿತು. ಕನ್ನಡದ ಕೆಲವು ಚಾನೆಲ್‍ಗಳು ಕೂಡ ಕೆಲವು ನಾಯಕರ ಅಭಿಪ್ರಾಯವನ್ನೇ ಸತ್ಯ ಎಂಬಂತೆ ತೋರಿಸಿ ಪ್ರಚೋದನೆ ನೀಡಿದವು. ಆದರೆ ಪೋಸ್ಟ್‍ಮಾರ್ಟಂ ವರದಿಯಲ್ಲಿ ಮೇಲೇ ತಿಳಿಸಿದ ಯಾವ ಕುರುಹುಗಳೂ ಕಂಡು ಬರಲಿಲ್ಲ. ಈಗ ಸಿಬಿಐ ತನಿಖೆ ನಡೆಯುತ್ತಿದೆ. ಡಿ.ಕೆ ರವಿ ಸಾವಿನ ಪ್ರಕರಣದಲ್ಲೂ ಹೀಗೇ ಆಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಕೊನೆಗೆ ಸಿಬಿಐ ರವಿಯದು ಆತ್ಮಹತ್ಯೆ ಎಂದು ಹೇಳಿದ ಮೇಲಷ್ಟೇ ಊಹಾಪೋಹಗಳಗೆ ತೆರೆ ಬಿದ್ದಿತ್ತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top