fbpx
ಮನೋರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಫ್ ಸ್ಟೋರಿ.

ಸಣ್ಣ ವಯಸ್ಸಿಗೇ ಇಷ್ಟೊಂದು ಸಾಧನೆಗಳಿಗೆ ‘ಬಾಸ್’ ಆಗಿರುವ ದರ್ಶನ್ ಎಂಬ ಸ್ಪುರದ್ರೂಪಿ ನಟನ ಜೀವನಾನುಭವಗಳನ್ನೊಮ್ಮೆ ಹಿಂತಿರುಗಿ ನೋಡಿದರೆ, ಕಾಣಸಿಗುವುದು ಬರೀ ಕಲ್ಲುಮುಳ್ಳಿನ ಹಾದಿ ಮಾತ್ರ… ‘ಬದುಕಿನಲ್ಲಿ ಕಷ್ಟ-ಕಾರ್ಪಣ್ಯಗಳನ್ನು ತಡವಿಸಿಕೊಂಡವರು ಮಾತ್ರ ಸಾಧನೆಯ ದಾರಿಯಲ್ಲಿ ಯಶಸ್ವಿಯಾಗಿ ಎದ್ದುನಿಲ್ಲಲು ಸಾಧ್ಯ’ ಅನ್ನೋ ಮಾತು ದರ್ಶನ್ ಪಾಲಿಗೆ ಅಕ್ಷರಶಃ ನಿಜ… ದರ್ಶನ್‌ರ ಸಿನಿಮಾ ಸುದ್ದಿಗಳು, ಅದರ ಗದ್ದಲಗಳನ್ನು ಬಿಟ್ಟು ಒಮ್ಮೆ ಅವರು ನಡೆದು ಬಂದ ದಾರಿಯತ್ತ ಬೆಳಕು ಚೆಲ್ಲೋಣ

 

 

ತಮ್ಮಿಡೀ ಜೀವನವನ್ನು ಚಿತ್ರರಂಗಕ್ಕಾಗಿ ಮುಡಿಪಾಗಿಟ್ಟವರು ತೂಗುದೀಪ ಶ್ರೀನಿವಾಸ್. ಸಿನಿಮಾವನ್ನೇ ಉಸಿರಾಗಿಸಿಕೊಂಡು ಹಗಲೂ ರಾತ್ರಿ ಅದಕ್ಕಾಗಿ ದುಡಿಯುತ್ತಿದ್ದ ತೂಗುದೀಪ ಮಕ್ಕಳ ಮೇಲೂ ಅದೇ ಮಮಕಾರವನ್ನು ಹೊಂದಿದ್ದ ಸಭ್ಯ ತಂದೆ. ಆಗೆಲ್ಲ ಸಿನಿಮಾ ಚಿತ್ರೀಕರಣಗಳಿಗಾಗಿ ಮದ್ರಾಸು, ಬೆಂಗಳೂರುಗಳಿಗೆ ಅಲೆಯುತ್ತಾ ಹತ್ತಾರು ದಿನಗಳ ಕಾಲ ಮನೆ-ಮಡದಿ-ಮಕ್ಕಳಿಂದ ದೂರವಿರುತ್ತಿದ್ದ ತೂಗುದೀಪ ಶ್ರೀನಿವಾಸ್ ತಮ್ಮೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಮಕ್ಕಳನ್ನು ನೋಡಲು ಓಡೋಡಿ ಮೈಸೂರಿಗೆ ಬಂದುಬಿಡುತ್ತಿದ್ದರು.
ಆಗೆಲ್ಲಾ ಪೋಷಕನಟರಿಗೆ ಅಂಥಾ ಸಂಭಾವನೆಯೂ ಸಿಗುತ್ತಿರಲಿಲ್ಲವಾದ್ದರಿಂದ ದೂಗುದೀಪ ಅವರದ್ದು ಐಶಾರಾಮಿ ಬದುಕೂ ಆಗಿರಲಿಲ್ಲ. ಸಿನಿಮಾ ನಟನೆಯಿಂದ ಬಂದ ಹಣದಲ್ಲಿ ಮೈಸೂರಿನಲ್ಲಿ ವಾಸಕ್ಕೊಂದು ಮನೆ ನಿರ್ಮಿಸಿದ್ದ ತೂಗುದೀಪ ಶ್ರೀನಿವಾಸ್ ತಮ್ಮ ಮುದ್ದಿನ ಮಕ್ಕಳಿಗೆ ಯಾವುದಕ್ಕೂ ಕೊರತೆ ಮಾಡಿದವರಲ್ಲ…
ಹೀಗೆ ಕಷ್ಟ-ಸುಖಗಳೇನೇ ಇದ್ದರೂ ಗೌರವಸ್ಥ ಜೀವನ ತೂಗುದೀಪ ಅವರದ್ದಾಗಿತ್ತು. ಆದರೆ ಅನಾರೋಗ್ಯವೆನ್ನುವುದು ಬಡತನ, ಶ್ರೀಮಂತಿಕೆಯನ್ನು ನೋಡಿ ಬರುವಂಥದ್ದಲ್ಲವಲ್ಲ? ತೆರೆಯ ಮೇಲೆ ತಮ್ಮ ಗತ್ತು, ಗೈರತ್ತುಗಳಿಂದ ಗುಡುಗುತ್ತಿದ್ದ ಶ್ರೀನಿವಾಸ್ ಅದೊಂದು ದಿನ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದರು. ಆ ನಂತರವೇ ಗೊತ್ತಾಗಿದ್ದು ತೂಗುದೀಪ ಅವರಿಗೆ ಎರಡೂ ಕಿಡ್ನಿಗಳು ವಿಫಲವಾಗಿಬಿಟ್ಟಿವೆ ಎಂದು.

 

 

ಕರುಣಾಮಯಿ ತಾಯಿ ಕಷ್ಟಜೀವಿ ಮಗ…

ದರ್ಶನ್‌ರ ತಾಯಿ ಮೀನಾ ತೂಗುದೀಪ ಅದೆಂಥಾ ಕುಣಾಮಯಿ ಹೆಣ್ಣುಮಗಳು ಗೊತ್ತೆ? ಜೀವಕ್ಕಿಂತಾ ಹೆಚ್ಚು ಪ್ರೀತಿಸುವ ತನ್ನ ಪತಿ ಹೀಗೆ ಒಮ್ಮಲೇ ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದು ಮಲಗಿಬಿಟ್ಟರೆ ಸುಮ್ಮನೆ ಕಣ್ಣೀರು ಸುರಿಸುತ್ತಾ, ಹರಕೆ ಕಟ್ಟಿ ಕೂರುವ ಜಾಯಮಾನ ಅವರದ್ದಾಗಿರಲಿಲ್ಲ. ವೈದ್ಯರು ಒಂದು ಕಿಡ್ನಿಯನ್ನು ದಾನ ಮಾಡಿದರೆ ತಮ್ಮ ಪತಿಯ ಪ್ರಾಣ ಉಳಿಸಬಹುದು ಎಂದ ತಕ್ಷಣವೇ ಯಾವ ಯೋಚನೆಯನ್ನೂ ಮಾಡದೆ ತಮ್ಮ ಕಿಡ್ನಿಯನ್ನೇ ದಾನವಾಗಿ ನೀಡಿ ನ್ನ ಗಂಡನ ಉಳಿವಿಗಾಗಿ ಶ್ರಮಿಸಿದರು. ಮೀನಮ್ಮ ಅವರ ಶ್ರಮ, ಹಾರೈಕೆಗಳೇನೇ ಇದ್ದರೂ ವಿಧಿಯ ತೀರ್ಮಾನವೇ ಬೇರೆಯಾಗಿತ್ತು. ಎಷ್ಟೇ ಖರ್ಚು ಮಾಡಿ, ದುಬಾರಿ ಚಿಕಿತ್ಸೆ ನೀಡಿದರೂ ತೂಗುದೀಪ ಶ್ರೀನಿವಾಸ್ ಅವರನ್ನು ಉಳಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ.
ಹೀಗೆ ಏಕಾಏಕಿ ಮನೆಯ ದೀಪವೇ ಆರಿಹೋಗಿತ್ತು. ಆದರೂ ಆ ತಾಯಿ ಧೃತಿಗೆಡಲಿಲ್ಲ. ಯಾಕೆಂದರೆ ತಮ್ಮ ಕಣ್ಣೆದುರಿಗೆ ಆಗ ತಾನೆ ತೋಳೆತ್ತರಕ್ಕೆ ಬೆಳೆದಿದ್ದ ತಮ್ಮಿಬ್ಬರು ಮಕ್ಕಳಾದ ದರ್ಶನ್ ಮತ್ತು ದಿನಕರ್ ಎಂಬೆರೆಡು ಕುಡಿಗಳಿದ್ದವು. ಅವರಿಗೆ ಒಂದೊಳ್ಳೆ ಭವಿಷ್ಯವನ್ನು ಕಲ್ಪಿಸಿಕೊಡುವ ದೊಡ್ಡ ಜವಾಬ್ದಾರಿ ಆಕೆಯ ಮೇಲಿತ್ತು. ಈ ಕಾರಣಕ್ಕೇ ಗಂಡನ ಅಗಲಿಕೆಯ ನೋವನ್ನು, ಉಮ್ಮಳಿಸಿ ಬರುತ್ತಿದ್ದ ದುಃಖಗಳನ್ನು ಒಳಗೊಳಗೇ ಅದುಮಿಟ್ಟ ಮೀನಮ್ಮ ಮಕ್ಕಳ ಜೀವನ ರೂಪಿಸಲು ಟೊಂಕ ಕಟ್ಟಿ ನಿಂತರು.
ಅಷ್ಟರಲ್ಲಾಗಲೇ ದರ್ಶನ್ ವಿದ್ಯಾಭ್ಯಾಸವೂ ಮುಗಿದು ದುಡಿಯುವ ಹಂತಕ್ಕೆ ಬೆಳೆದು ನಿಂತಿದ್ದ. ಇದೇ ಹೊತ್ತಿಗೆ ತೂಗುದೀಪ ಶ್ರೀನಿವಾಸ್ ಅವರ ಅರೋಗ್ಯಕ್ಕೆಂದು ಮಾಡಿದ್ದ ಖರ್ಚೆಲ್ಲವೂ ಸಾಲವಾಗಿ ಬೆಳೆದು ನಿಂತಿತ್ತು. ಈ ಸಾಲವನ್ನು ತೀರಿಸುವುದರೊಂದಿಗೆ ತಾಯಿ ಮತ್ತು ತಮ್ಮನನ್ನು ಪೋಷಿಸುವ ದೊಡ್ಡ ಜವಾಬ್ದಾರಿ ಹಿರಿಯ ಮಗ ದರ್ಶನ್ ಹೆಗಲಿಗೇರಿತ್ತು. ಬದುಕಲು ಯಾವ ಕೆಲಸವಾದರೆ ಏನು ಎಂದು ತೀರ್ಮಾನಿಸಿದ ದರ್ಶನ್ ತಮ್ಮ ಮನೆಯಲ್ಲೇ ಒಂದೆರಡು ಹಸುಗಳನ್ನು ಕಟ್ಟಿ, ಅದರ ಹಾಲನ್ನು ಮಾರಿ ಬದುಕು ಸಾಗಿಸುವ ಮೂಲಕ ವೃತ್ತಿ ಬದುಕು ಆರಂಭಿಸಿದ ಶ್ರಮವಂತ.

 

 

ಮೈಸೂರ್ ಹುಡ್ಗ ಛಾಲೆಂಜಿಂಗ್ ಸ್ಟಾರ್ ಆಗಿದ್ದು!
ಏನೇ ಕಷ್ಟಪಟ್ಟರೂ, ಹೊಟ್ಟೆ ತುಂಬಿಸಿಕೊಂಡರೂ ತನ್ನ ತಂದೆಯಿಂದ ರಕ್ತಗತವಾಗಿ ಬಂದಿದ್ದ ಕಲೆಯ ಹಸಿವು ದರ್ಶನ್‌ರನ್ನು ಸುಮ್ಮನೆ ಇರಗೊಳಿಸುತ್ತಲೇ ಇರಲಿಲ್ಲ. ಇತ್ತ ಬದುಕು ಸಾಗಿಸುವುದೇ ದುರ್ಬರವಾಗಿರುವ ಮನಸ್ಸು ಕೆರೆಯುವ ಕಲೆಯ ಬಯಕೆಯನ್ನು ಈಡೇರಿಸಿಕೊಳ್ಳುವುದಾದರೂ ಹೇಗೆ ಎಂಬ ಗೊಂದಲದಲ್ಲಿದ್ದಾಗಲೇ ಅವರ ತಾಯಿ ಮೀನಾ ತಮ್ಮ ಮಗನ ಮನೋಬಯಕೆಯನ್ನು ಕಂಡು ಮದ್ರಾಸಿನ ಶಾಲೆಯೊಂದಕ್ಕೆ ಅಭಿನಯ ಕಲಿಕೆಗೆ ಸೇರಿಸಿದರು. ಆ ಸಮಯದಲ್ಲಿ ದರ್ಶನ್ ಬರೀ ಅಭಿನಯ ಮಾರವಲ್ಲದೆ ತಾಂತ್ರಿಕವಾಗಿಯೂ ಒಂಷ್ಟು ತರಬೇರಿ ಪಡೆದರು. ನಂತರ ಮದ್ರಾಸಿನಿಂದ ಬಂದಮೇಲಷ್ಟೇ ದರ್ಶನ್‌ಗೆ ಗಾಂಧಿ ನಗರದ ಅಸಲೀ ಪರಿಚಯವಾಗಿದ್ದು.

ಅವಕಾಶಗಳಿಗಾಗಿ ಗಾಂಧಿ ನಗರದ ನಿರ್ಮಾಪಕ ನಿರ್ದೇಶಕರ ಕಛೇರಿ, ಮನೆಗಳ ಬಾಗಿಲಿಗೆ ಅಲೆಯುವುದೇ ದರ್ಶನ್‌ಗೆ ಒಂದು ಕೆಲಸವಾಗಿಬಿಟ್ಟಿತ್ತು. ಕೆಲವೊಮ್ಮ ದರ್ಶನ್ ಜೊತೆಗೆ ಅವರ ತಾಯಿ ಮೀನಾ ಅವರು ಕೂಡಾ ಹಲವು ಸಿನಿಮಾ ಮಂದಿಯ ಬಳಿಗೆ ಹೋಗಿ ‘ನಮ್ಮ ಮಗನಿಗೊಂದು ಛಾನ್ಸು ಕೊಡಿ’ ಕೇಳಿದ್ದಿದೆ. ಅವಕಾಶಕ್ಕಾಗಿ ಎಷ್ಟೇ ಅಂಗಲಾಚಿದರೂ, ಪಾದ ಸವೆಸಿದರೂ ಕ್ಯಾರೇ ಎನ್ನದ ಸಿನಿಮಾ ಮಂದಿ ದರ್ಶನ್‌ನನ್ನು ಒಬ್ಬ ಹಿರಿಯ ನಟನೊಬ್ಬನ ಮಗ ಎಂದು ಕೂಡಾ ಪರಿಣಿಸದೇ ಕಡೆಗಣಿಸಿಬಿಟ್ಟರು.

ಈ ಸಂದರ್ಭದಲ್ಲೇ ರೂಗುದೀಪ್ ಶ್ರೀನಿವಾಸ್ ಅವರ ಆತ್ಮೀಯ ಗೆಳೆಯರಾಗಿದ್ದ ಹಿರಿಯ ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್ (ರಕ್ಷಿತಾಳ ತಂದೆ) ದರ್ಶನ್‌ನ್ನನು ಕರೆದು ತನ್ನ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಸೇರಿಸಿಕೊಂಡರು. ಅದೇ ವೇಳೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಜನುಮದ ಜೋಡಿ ಚಿತ್ರ ನಿರ್ಮಾಣ ಹಂತದಲ್ಲಿತ್ತು. ಗೌರೀಶಂಕರ ಸಹಾಯಕನಾಗಿ ಕೆಲಸಕ್ಕೆ ಸೇರಿದ ದರ್ಶನ್ ಯಾವುದೇ ಬಿಂಕ ತೋರದೇ ನಿಯತ್ತಿನಿಂದ ಕೆಲಸ ಆರಂಭಿಸಿದ್ದರು.

ಆದರೆ ಆ ಕೆಲಸಕ್ಕೆ ದರ್ಶನ್‌ಗೆ ದೊರಕುತ್ತಿದ್ದುದು ಮಾತ್ರ ನೂರಿನ್ನೂರು ರುಪಾಯಿಗಳು. ಆಗಿನ್ನೂ ದರ್ಶನ್ ಕುಟುಂಬ ಮೈಸೂರಿನಲ್ಲೇ ನೆಲೆಸಿತ್ತಾದ್ದರಿಂದ ಪ್ರತೀದಿನ ಬೆಂಗಳೂರು-ಮೈಸೂರಿಗೆ ರೈಲಿನಲ್ಲೇ ಅಪ್ ಅಂಡ್ ಡೌನ್ ಮಾಡಬೇಕಿದ್ದುದು ದರ್ಶನ್ ಪಾಲಿಗೆ ಅನಿವಾರ್ಯವಾಗಿತ್ತು. ಶೂಟಿಂಗ್ ಮುಗಿದ ಮೇಲೆ ದಿನದ ಸಂಪಾದನೆಯನ್ನು ಪಡೆದು ಮೈಸೂರಿನತ್ತ ಮುಖ ಮಾಡುತ್ತಿದ್ದ ದರ್ಶನ್ ಸಂಪಾದನೆಯಲ್ಲಿ ಒಂದೇ ಒಂದು ಪೈಸೆಯನ್ನೂ ಖರ್ಚುಮಾಡದೆ ಅಷ್ಟೂ ಹಣವನ್ನು ತೆಗೆದುಕೊಂಡು ಹೋಗಿ ತನ್ನ ತಾಯಿಯ ಕೈಗೊಪ್ಪಿಸುತ್ತಿದ್ದರು. ತಮ್ಮ ಮನೆಯಿಂದ ರೈಲ್ವೇಸ್ಟೇಷನ್ನಿಗೆ ಆಟೋದಲ್ಲಿ ಹೋದರೆ ಎಲ್ಲಿ ಹಣ ಖರ್ಚಾಗಿಬಿಡುತ್ತದೋ ಎಂದು ಬೆಳಗ್ಗಿನ ಜಾವ ಎದ್ದು ಮೈಲುಗಟ್ಟಲೆ ದೂರವಿದ್ದ ರೈಲ್ವೇ ನಿಲ್ದಾಣಕ್ಕೆ ನಡೆದೇ ಹೋಗುವುದು ದರ್ಶನ್‌ಗೆ ಅಭ್ಯಾಸವಾಗಿಬಿಟ್ಟಿತ್ತು.

ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಕ್ಯಾಮೆರಾ ಅಸಿಸ್ಟೆಂಟ್ ಕೆಲಸ ಮಾಡಿಕೊಂಡಿದ್ದ ದರ್ಶನ್ ಮೈಸೂರಿನಿಂದ ಬಂದು ಕಾರ್ಯನಿರ್ವಹಿಸುವುದು ಸಾದ್ಯವೇ ಇಲ್ಲ ಎಂದಾಗ ಮೈಸೂರಿನ ಮನೆಯನ್ನು ಬಾಡಿಗೆಗೆ ನೀಡಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇದೇ ಸಂದರ್ಭದಲ್ಲಿ ನಿರ್ಮಾಪಕ ಎಂ.ಜಿ ರಾಮಮೂರ್ತಿ ಅವರ ‘ಮೆಜೆಸ್ಟಿಕ್’ ಚಿತ್ರದಲ್ಲಿ ನಾಯಕನಟನಾಗಿ ನಟಿಸುವ ಛಾನ್ಸು ದರ್ಶನ್ ಪಾಲಾಯಿತು. ನಿರ್ದೇಶಕ ಪಿ.ಎನ್. ಸತ್ಯಾಗೂ ಅದು ಮೊದಲ ಅನುಭವವೇ ಆಗಿತ್ತು. ಚಿತ್ರ ನಿರ್ಮಾಣದ ಹಂತದಲ್ಲಿ ನೂರಾರು ಅಡೆತಡೆಗಳು ಎದುರಾಗುತ್ತಿದ್ದವು. ಎಷ್ಟೋ ಬಾರಿ ‘ಈ ಸಿನಿಮಾ ಮುಗಿಯೋದೇ ಡೌಟು’ ಎಂಬಂತಾಗಿಬಿಟ್ಟಿತ್ತು. ಇವೆಲ್ಲ ತೊಂದರೆ, ತಪರಾಕಿಗಳೇನೇ ಇದ್ದರೂ ದರ್ಶನ್ ಮಾತ್ರ ತನ್ನ ಕೆಲಸಕ್ಕೆ ನಿಷ್ಟರಾಗಿದ್ದರು. ಯಾವುದೇ ಕಷ್ಟಕ್ಕೂ ಅಂಜದೆ, ಪ್ರಾಮಾಣಿಕ ವಾಗಿ ದುಡಿದಿದ್ದರಿಂದಲೋ ಏನೋ ‘ಮೆಜೆಸ್ಟಿಕ್’ ಬಿಡುಗಡೆಯಾಗುತ್ತಿದ್ದಂತೇ ದರ್ಶನ್ ಕಡೆಗೆ ಉತ್ತಮ ಪ್ರತಿಕಿಂiಳು ಹರಿದುಬಂದವು. ಅಲ್ಲೀತನಕ ಇದ್ದಕ್ಕಿದ್ದ ಹಾಗೆ ಎಂಟ್ರಿ ಕೊಟ್ಟ ಹೊಸ ಮುಖವೊಂದು ಯುವ ಪೀಳಿಗೆಯನ್ನು ಅಪಾರವಾಗಿ ಸೆಳೆದಿತ್ತು. ದರ್ಶನ್‌ರ ಸ್ಟೆಪ್ಪು, ಬಡಿದಾಟದ ಶೈಲಿ, ಡೈಲಾಗ್ ಡೆಲಿವರಿಯಲ್ಲಿನ ‘ದಿಗ್ಧರ್ಶನ’ ಪ್ರೇಕ್ಷಕರ ಮನಸ್ಸಿಗೆ ಕಿಚ್ಚು ಹೊತ್ತಿಸಿತ್ತು… ಇದೆಲ್ಲದರ ಪರಿಣಾಮವಾಗಿ ದರ್ಶನ್ ಎಂಬ ಈ ಮೈಸೂರು ಹುಡುಗ ರಾತ್ರೋರಾತ್ರಿ ‘ಛಾಲೆಂಜಿಂಗ್ ಸ್ಟಾರ್’ ಆಗಿ ಅವತಾರವೆತ್ತಿಬಿಟ್ಟಿದ್ದ… ಯಾವ ಗಾಂಧಿನಗರಿಗಳು ಅವಕಾಶ ನೀಡದೆ ಸತಾಯಿಸಿದ್ದರೋ ಅವರೇ ಬಂದು ಕಾಲ್ ಶೀಟ್‌ಗಾಗಿ ಕಾದು ಕುಳಿತು ‘ದರುಶನ ನೀಡೋ’ ಎಂದು ಅಂಗಲಾಚುವಂತಾಗಿತ್ತು.

ಮೆಜೆಸ್ಟಿಕ್ ನಂತರ ಬಂದ ಕರಿಯ, ದಾಸ ಚಿತ್ರಗಳು ಒಂದರ ಹಿಂದೆ ಒಂದು ಜಯಭೇರಿ ಭಾರಿಸಿದವು. ‘ದರ್ಶನ್‌ನನ್ನು ಹಾಕಿಕೊಂಡಡರೆ ಬಂಡವಾಳಕ್ಕಂತೂ ಮೋಸವಿಲ್ಲ’ ಎಂಬ ಮಾತುಗಳು ಕೇಳಿಬಂದವು. ಜೊತೆಗೆ ದರ್ಶನ್ ಚಿತ್ರ ಎಂದಾಕ್ಷಣ ಕರ್ನಾಟಕದ ಎಲ್ಲ ವಲಯದ ಬಿ.ಸಿ ಸೆಂಟರ್‌ಗಳೂ ಮುಂಗಡವಾಗಿ ಬುಕ್ ಆಗತೊಡಗಿದವು… ಈ ನಡುವೆ ಒಂದಷ್ಟು ಚಿತ್ರಗಳು ಸೋಲಿಗೆ ಶರಣಾದರೂ ಬಾಕ್ಸಾಫೀಸ್‌ನಲ್ಲಿ ಚೇತರಿಸಿಕೊಂಡಿದ್ದರಿಂದ ದರ್ಶನ್‌ಗೆ ‘ಮಿನಿಮಮ್ ಗ್ಯಾರೆಂಟಿ ನಟ’ ಎಂಬ ಹಣೆಪಟ್ಟಿಯೂ ದೊರಕಿಬಿಟ್ಟಿತು.
ಇದು ಛಾಲೆಂಚಿಗ್ ಸ್ಟಾರ್ ದರ್ಶನ್ ತನಗೆ ಎದುರಾದ ಪ್ರತಿಯೊಂದು ಕಷ್ಟಗಳಿಗೂ ಸವಾಲೊಡ್ಡಿ, ಛಾಲೆಂಜ್ ಮಾಡಿ ಗೆದ್ದುಬಂದ ಸಾಹಸಗಾಥೆ. ಇಂಥ ದರ್ಶನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೇವಲ ಹದಿನೈದು ವರ್ಷಗಳಲ್ಲಿ ಬರೋಬ್ಬರಿ ೪೯ ಚಿತ್ರಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲ, ಅತೀ ಹೆಚ್ಚು ಅಭಿಮಾನಿಗಳನ್ನು, ಅಭಿಮಾನಿ ಸಂಘಗಳನ್ನು ಹೊಂದಿರುವ ಮಾಸ್ ಹೀರೋ ಕೂಡಾ ಆಗಿದ್ದಾರೆ.

 

 

ಪ್ರಾಣಿ ಪ್ರೀತಿಯ ದರ್ಶನ
ಸಂಬಂಧಗಳಿಗೇ ಬೆಲೆಯಿಲ್ಲದ, ಸ್ನೇಹಕ್ಕೂ ಕಿಮ್ಮತ್ತಿಲ್ಲದ ಈ ಪ್ರಪಂಚದಲ್ಲಿ ದರ್ಶನ್‌ರ ಜೀವಪರ ಕಾಳಜಿ ನಿಜಕ್ಕೂ ದೊಡ್ಡ ವಿಚಾರವೇ ಸರಿ.
ದರ್ಶನ್ ಬರೀ ಮನುಷ್ಯ ಜೀವನಕ್ಕೆ ಮಾತ್ರ ಬೆಲೆ ಕೊಡುವ ವ್ಯಕ್ತಿಯಲ್ಲ. ಬದಲಿಗೆ ಪ್ರಪಂಚದ ಎಲ್ಲ ಬಗೆಯ ಪ್ರಾಣಿಗಳ ಕಡೆಗೂ ದರ್ಶನ್‌ಗೆ ಅಪಾರವಾದ ಒಲವು. ಇವತ್ತಿಗೂ ದರ್ಶನ್ ತಮ್ಮ ಮನೆಯಲ್ಲಿ ಹತ್ತಾರು ಪ್ರಬೇಧದ, ವಿಭಿನ್ನವಾದ ಪ್ರಾಣಿ, ಪಕ್ಷಿಗಳನ್ನು ಸಾಕಿಕೊಂಡಿದ್ದಾರೆ ಎಂದರೆ ನಂಬಲೇಬೇಕು.

ತಾವು ಚಿತ್ರೀಕರಣಕ್ಕೆಂದು ಹೊರ ದೇಶಗಳಿಗೆ ಹೋದಾಗಲೆಲ್ಲಾ ಅಲ್ಲಿಂದ ಯಾವುದಾದರೊಂದು ಸಾಕು ಪ್ರಾಣಿಯನ್ನೂ, ಪಕ್ಷಿಗಳನ್ನೋ ತಂದಿಟ್ಟುಕೊಳ್ಳುವುದು ದರ್ಶನ್‌ಗೆ ಮಾಮೂಲಿಯಾಗಿಬಿಟ್ಟಿದೆ. ದರ್ಶನ್ ತಮ್ಮ ಎಸ್ಟೇಟಿನಲ್ಲಿ ಈಗಲೂ ಕುದುರೆ, ಒಂಟೆಗಂಳಂಥ ಪ್ರಾಣಿಗಳನ್ನು ಪ್ರೀತಿಯಿಂದ ಸಲಹುತ್ತಿದ್ದಾರೆ. ಸಾಮಾನ್ಯವಾಗಿ ಯಾರಾದರೂ ಫಾರಿನ್ ಟೂರುಗಳಿಗೆ ಹೋದರೆ ಮನೆಯ ಹಿರಿಯರಿಗೆ, ಸ್ನೇಹಿತರಿಗೆ ಅಲ್ಲಿನ ದುಬಾರಿ ಡ್ರಿಂಕ್ಸುಗಳನ್ನು ತಂದುಕೊಡುವುದು ವಾಡಿಕೆ. ಆದರೆ, ದರ್ಶನ್ ತಾವು ಹೊರದೇಶಗಳಿಂದ ಬರುವಾಗ ದುಬಾರಿ ರಮ್‌ಗಳನ್ನು ತಂದು ತಮ್ಮ ಕುದುರೆಗಳಿಗೆ ಕುಡಿಸುತ್ತಾರೆ. ಹೀಗಾಗಿ ದರ್ಶನ್ ತಮ್ಮ ತೋಟದೊಳಗೆ ಎಂಟ್ರಿ ನೀಡುತ್ತಿದ್ದಂತೇ ಆ ಕುದುರೆಗಳು ಇವರ ಆಗಮನಕ್ಕಾಗಿ ಕೆನೆದು ನಿಲ್ಲುತ್ತವಂತೆ.

ದರ್ಶನ್ ಪ್ರಾಣಿ ಪ್ರೀತಿ ಅಂದೆಂಥಾ ಪರಾಕಾಷ್ಟೆಯ ಹಂತ ತಲುಪಿತು ಎಂಬುದಕ್ಕೊಂದು ಪುಟ್ಟ ಉದಾಹರಣೆ ಇಲ್ಲಿದೆ: ಇನ್ನೂ ಮದುವೆಗೆ ಮುಂಚೆ ಹೊರದೇಶದಿಂದ ಹೆಣ್ಣು ಉಷ್ಟ್ರಪಕ್ಷಿಯೊಂದನ್ನು ದರ್ಶನ್ ತಂದು ತಮ್ಮ ಮನೆಯಲ್ಲಿ ಸಾಕಿದ್ದರು. ದರ್ಶನ್‌ರೊಂದಿಗೆ ಅಪಾರ ಪ್ರೀತಿಯಿಂದ ಬೆರೆಯುತ್ತಿದ್ದ ಆ ಪಕ್ಷಿ ದರ್ಶನ್ ಮದುವೆಯಾಗುತಿದ್ದಂತೇ ಖಿನ್ನತೆಗೆ ಒಳಗಾಗಿಬಿಟ್ಟಿತು. ಇನ್ನೂ ಒಂದು ಹಂತ ಮುಂದೆ ಹೋದಮೇಲೆ ದರ್ಶನ್ ಬಗೆಗೆ ತೀರಾ ಪೊಸೆಸಿವ್ ಆದ ಆ ಪಕ್ಷಿ ದರ್ಶನ್‌ಪತ್ನಿಯ ವ್ಯಾನಿಟಿ ಬ್ಯಾಗು, ಸೇರಿದಂತೆ ಆಕೆಯ ವಸ್ತುಗಳನ್ನೆಲ್ಲಾ ನಾಶಮಾಡಲು ಶುರು ಮಾಡಿತಂತೆ. ಕಡೆಗೊಂದು ದಿನ ಆ ಪಕ್ಷಿಯ ಉತ್ಕಟ ಪ್ರೀತಿಯ ಹಿಂಸೆಯನ್ನು ತಾಳಲಾರದೇ ತಮ್ಮ ಸ್ನೇಹಿತರೊಬ್ಬರ ಸುಪರ್ದಿಗೆ ಆ ಪಕ್ಷಿಯನ್ನು ಬಿಟ್ಟುಬಂದೆಂತೆ..!
ತೀರಾ ಬಡತನದ ದಿನಗಳಲ್ಲೂ, ತಮ್ಮ ದುಡಿಮೆಯ ಒಂದು ಪಾಲನ್ನು ಪಾರಿವಾಳ, ನಾಯಿಗಳಿಗೆ ವ್ಯಯಿಸುತಿದ್ದ ದರ್ಶನ್ ತಮ್ಮ ಪ್ರವೃತ್ತಿಯನ್ನು ಇಂದಿಗೂ ಹಾಗೇ ಉಳಿಸಿಕೊಂಡು, ಜೊತೆಗೆ ಬೆಳೆಸಿಕೊಂಡು ಬಂದಿದ್ದಾರೆ. ಮನುಷ್ಯತ್ವಕ್ಕೇ ಬೆಲೆ ಕೊಡದ ಈ ಬಣ್ಣದ ಲೋಕದಲ್ಲಿ ಇಂಥ ಪ್ರಾಣಿಪ್ರಿಯರು ಎಷ್ಟು ಅಪರೂಪ ಅಲ್ಲವೇ?

 

 

ಆಂಗ್ರೀ ಹೀರೋ ದರ್ಶನ್
ದಶನ್ ವೈಯಕ್ತಿಕವಾಗಿ ಎಷ್ಟು ಸ್ನೇಹಮಯಿಯೋ ಅಷ್ಟೇ ಮುಂಗೋಪಿ ಕೂಡ.
ತನ್ನ ಮನಸ್ಸಿಗೆ ಒಪ್ಪದ ವಿಚಾರಗಳನ್ನು ಮುಲಾಜಿಲ್ಲದೇ ಹೇಳಿಬಿಡುವ, ಕೆವೊಮ್ಮೆ ಹಿಂದು ಮುಂದು ನೋಡದೆ ತಮ್ಮ ನಿಲುವನ್ನು ವ್ಯಕ್ತಪಡಿಸುವ ದರ್ಶನ್‌ರ ನೇರವಂತಿಕೆಯೇ ಕೆಲವೊಮ್ಮೆ ಅವರಿಗೇ ಮುಳುವಾಗಿಬಿಡುತ್ತದೆ.
ಹಿಂದೊಮ್ಮೆ ‘ನಾನು ಕಾಸು ಕೊಟ್ಟರೆ ಕಾಚಾದಲ್ಲಿ ಬೇಕಾದರೂ ಕ್ಯಾಮೆರಾ ಮುಂದೆ ಬಂದು ನಿಂತುಬಿಡ್ತೀನಿ. ಜನ ನೋಡುವುದಿದ್ದರೆ ಸೆಕ್ಸ್ ಸಿನಿಮಾದಲ್ಲಿ ನಟಿಸಿದರೂ ತಪ್ಪಿಲ್ಲ’ ಎಂದು ಹೇಳಿಕೆ ನೀಡಿ ಮಾದ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದರು ದರ್ಶನ್. ಇತ್ತೀಚೆಗೆ ನಡೆದ ಅಮೃತ ಮಹೋತ್ಸವ ಸಂದರ್ಭದಲ್ಲಿ ತಮ್ಮ ತಂದೆಯ ಕುರಿತಾದ ಪುಸ್ತಕ ಹೊರ ತಂದಿಲ್ಲ ಎಂದು ಕುಪಿತರಾದ ದರ್ಶನ್, ವಾಹಿನಿಯೊಂದರ ನೇರ ಕಾರ್ಯಕ್ರಮದಲ್ಲೇ  ಛೇಂಬರ್ ಮಾಜಿ ಅಧ್ಯಕ್ಷೆ ಜಯಮಾಲಾರಿಗೆ ‘ನೀವು ಸತ್ತಾಗಲೂ ನಾನು ಬಣ್ಣ ತೆಗೆಯೊಲ್ಲ’ ಎಂಬ ಡ್ಯಾಮೇಜಿಂಗ್ ಸ್ಟೇಟ್‌ಮೆಂಟು ನೀಡಿ ವಿವಾದವನ್ನು ಮೈಮೇಲೆಳೆದುಕೊಂಡಿದ್ದರು.  ಸಾಹಸ ಸಿಂಹ ವಿಷ್ಣು ನಿಧನರಾದ ಸಂದರ್ಭದಲ್ಲೂ ಅಂಥದ್ದೇ ಮತ್ತೊಂದು ಹೇಳಿಗೆ ನೀಡಿ ಮಾಧ್ಯಮ ಮಾತ್ರವಲ್ಲದೇ ಇಡೀ ಚಿತ್ರರಂಗದವರಿಂದಲೇ ದೂಷಣೆಗೆ ಒಳಗಾಗಿದ್ದರು.
ಹೀಗೆ ಕೆಲವೊಮ್ಮೆ ಅತಿ ಎನಿಸುವಷ್ಟು ನೇರವಂತಿಕೆಯಿಂದ ವಿವಾದಗಳಿಗೆ ಸಿಲುಕುವ ದರ್ಶನ್ ಪತ್ರಕರ್ತರೊಂದಿಗೂ ತೀರಾ ಒಳ್ಳೆಯ ಸಂಬಂಧವನ್ನೇನೂ ಬೆಳೆಸಿಕೊಂಡಿಲ್ಲ. ತಮ್ಮ ಬಗ್ಗೆ- ಅದರಲ್ಲೂ, ತಮ್ಮ ಖಾಸಗಿ ಬದುಕಿನ ಬಗ್ಗೆ ಯಾರಾದರೂ ಗಾಸಿಪ್ ಬರೆದುಬಿಟ್ಟರೆ, ಸ್ವಲ್ಪವೂ ಸಹಿಸಿಕೊಳ್ಳದ ದರ್ಶನ್ ಮನಬಂದಂತೆ ಮಾತನಾಡಿ, ಅನವಶ್ಯಕ ವೈಶಮ್ಯ ಬೆಳೆಸಿಕೊಂಡುಬಿಡುತ್ತಾರೆ.
ಕೆಲವೊಮ್ಮೆ ತಾಳಯಿಲ್ಲದೆ ಇಂಥ ಸಣ್ಣಪುಟ್ಟ ತಪ್ಪುಗಳನ್ನು ಮಾಡುವ, ವಿವೇಚನೆಯಿಲ್ಲದೆ ಮಾತನಾಡುವ ಕೆಲವೇ ದೋಷಗಳನ್ನು ಬಿಟ್ಟರೆ ಈ ಆಂಗ್ರೀ ಹೀರೋ ದರ್ಶನ್ ನಿಜಕ್ಕೂ ಛಾಲೆಂಜಿಂಗ್ ಸ್ಟಾರೇ…!

 

 

ಬ್ರಿಲಿಯಂಟ್ ಬಾಸ್!
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮೇಲಿಂದ ಮೇಲೆ ಅವಕಾಶ ದೊರೆಯುವ ಸಂದರ್ಭದಲ್ಲಿ ಹಲವು ನಟರು ವ್ಯಾವಹಾರಿಕವಾಗಿ ಹಿಂದೇಟು ಹಾಕಿಬಿಡುತ್ತಾರೆ.
ಆದರೆ ದರ್ಶನ್ ಮಾತ್ರ ಅದರಲ್ಲೂ ಚಾಲಾಕಿಯೇ. ತನ್ನ ಸಂಭಾವನೆ ವಿಚಾರದಲ್ಲಿ ಯಾವುದೇ ರಾಜಿ, ಮುಲಾಜುಗಳಿಲ್ಲಂದಂತೆ ವರ್ತಿಸುವ ದರ್ಶನ್ ತನಗೆ ಬರಬೇಕಿರುವ ಬಾಕಿ ಬರುವ ತನಕ ಡಬ್ಬಿಂಗ್ ಮಾಡುವುದಿಲ್ಲ. ಕೆಲವೊಮ್ಮೆ ತನಗೆ ಬರಬೇಕಿರುವ ಸಂಭಾವನೆಗೆ ಬದಲಿಗೆ, ಜಮೀನು, ಸೈಟುಗಳ ರೂಪದಲ್ಲಿ ಪಡೆಯುವ ದರ್ಶನ್ ಬುದ್ದಿವಂತಿಕೆ ಸಿಕ್ಕಾಪಟ್ಟೆ ಶಾರ್ಪು. ನಟನೆಯೊಂದಿಗೆ ಈಗ ತಮ್ಮದೇ ಶೂಟಿಂಗ್ ಯೂನಿಟ್ ಮತ್ತು ವಿತರಣಾ ಸಂಸ್ಥೆ ಕೂಡಾ ಹೊಂದಿರುವ ದರ್ಶನ್ ಕುಶಲ ವ್ಯಾಪಾರಿಗ.
ಒಂದು ವೇಳೆ ದರ್ಶನ್ ಇಂಥ ವ್ಯಾವಹಾರಿಕ ಪ್ರಜ್ಞೆ ರೂಢಿಸಿಕೊಳದೆ ಹೋಗಿದ್ದರೆ, ನಮ್ಮ ಗಾಂಧೀನಗರದ ಮಂದಿ ಇವರನ್ನು ಎಂದೋ ಬರಿಗೈ ‘ದಾಸ’ನನ್ನಾಗಿಸುತ್ತಿದ್ದರು ಎನ್ನುವುದು ಕೂಡಾ ಅಷ್ಟೇ ನಿಜ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top