fbpx
ಸಾಧನೆ

ಅಭಿವೃದ್ಧಿಯ `ಕನಸುಗಾರ’ ಅಬ್ದುಲ್ ಕಲಾಂ

ಸ್ವತಂತ್ರ ಭಾರತದ ರಾಜನೀತಿಜ್ಞರ ಪೈಕಿ ಮಕ್ಕಳಿಗೆ ಅತ್ಯಂತ ಹೆಚ್ಚು ಪ್ರೀತಿಪಾತ್ರರಾಗಿದ್ದವರು ಡಾ. ಅಬ್ದುಲ್ ಕಲಾಂ. ಸರ್ ಎಂ. ವಿಶ್ವೇಶ್ವರಯ್ಯನವರ ನಂತರ – ಸಾಧನೆ, ಸರಳ ಜೀವನ ಮತ್ತು ಪ್ರಾಮಾಣಿ ಕತೆಗಾಗಿ ಹೆಸರು ಗಳಿಸಿದ ದೊಡ್ಡ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿದ `ಭಾರತ ರತ್ನ’ ಪ್ರಶಸ್ತಿಯನ್ನೂ ಪಡೆದ ಇನ್ನೊಬ್ಬ ಇಂಜಿನಿಯರ್ ಅಂದರೆ – ಡಾ. ಎ. ಪಿ. ಜೆ. ಅಬ್ದುಲ್ ಕಲಾಂ.

 

 

ಅವುಲ್ ಫಕೀರ್ ಜೈನಲ್ಬದೀನ್ ಅಬ್ದುಲ್ ಕಲಾಂ ಎನ್ನುವುದು ಅವರ ಪೂರ್ಣ ಹೆಸರು. ಅವರು ಭಾರತದ 11ನೇ ರಾಷ್ಟ್ರಪತಿಯಾಗಿ (2002-2007) ದೇಶದ ಸಾಂವಿಧಾನಿಕ ಮುಖ್ಯಸ್ಥರಾಗಿದ್ದರು. ಅದಕ್ಕೂ ಮೊದಲು ಸುರಕ್ಷಾ ವಿಜ್ಞಾನಿಯಾಗಿ, ಸರ್ಕಾರದ ಸಲಹೆಗಾರರಾಗಿ ಭಾರತದ ಏರೋಸ್ಪೇಸ್, ರಾಕೆಟ್, ಕ್ಷಿಪಣಿ, ಅಣ್ವಸ್ತ್ರ ಅಭಿವೃದ್ಧಿ ಯೋಜನೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ದೇಶದ ಸುರಕ್ಷಾ ತಂತ್ರಜ್ಞಾನವನ್ನು ಬೆಳೆಸಿದವರು ಅವರೇ.ಮಕ್ಕಳಲ್ಲಿ ದೇಶಭಕ್ತಿ, ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯ ಕನಸುಗಳನ್ನು ಮೂಡಿಸಿದವರು ಅವರು. ಬೇರೇನೂ ಉದ್ದೇಶವಿಲ್ಲದೇ `ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲೇಬೇಕು’ ಎಂಬ ಒಂದೇ ಗುರಿಯಿಂದ ತಮ್ಮ ಜೀವನವೆಲ್ಲ ಬರಹ, ಭಾಷಣ, ಪ್ರವಾಸ, ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದ ದೇಶದ ಏಕೈಕ ಪ್ರಮುಖ ವ್ಯಕ್ತಿ ಅವರು. ಕಲಾಂ ಜನಿಸಿದ್ದು 1931ರ ಅಕ್ಟೋಬರ್ 15ರಂದು. ತಮಿಳುನಾಡಿನ ರಾಮೇಶ್ವರಂ ಅವರ ಸ್ವಂತ ಸ್ಥಳ. ಅವರದು ಸಾಧಾರಣ ಮಟ್ಟದ ದೊಡ್ಡ ಕುಟುಂಬ. ವಿಶ್ವೇಶ್ವರಯ್ಯನವರಂತೆ ಕಲಾಂ ಸಹ ಬಡತನದ ಕಷ್ಟದಲ್ಲೇ ಪರಿಶ್ರಮದಿಂದ ಓದಿದವರು. ಶಾಲೆಯಲ್ಲಿ ಕಲಿಯುವಾಗಲೇ ಮನೆಮನೆಗೆ ದಿನಪತ್ರಿಕೆ ಹಾಕಿ ಒಂದಿಷ್ಟು ಹಣ ಗಳಿಸಿ ತಂದೆಗೆ ಕೊಡುತ್ತಿದ್ದರು. 1960ರಲ್ಲಿ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದ ನಂತರ ಸುರಕ್ಷಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ `ಡಿಆರ್‍ಡಿಒ’ದಲ್ಲಿ ವಿಜ್ಞಾನಿಯಾದರು. ನಂತರ `ಇಸ್ರೋ’ ಬಾಹ್ಯಾಕಾಶ ಸಂಸ್ಥೆಗೆ ವರ್ಗಾವಣೆ ಪಡೆದರು. ಎಸ್‍ಎಲ್‍ವಿ ಸರಣಿಯ ರಾಕೆಟ್‍ಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರ ಹಲವಾರು ಮುಖ್ಯ ವೈಜ್ಞಾನಿಕ ಯೋಜನೆಗಳಲ್ಲಿ ತೊಡಗಿದ್ದರು.

1974ರ ಹಾಗೂ 1998ರಲ್ಲಿ ದೇಶವು ಅಣ್ವಸ್ತ್ರ ತಯಾರಿಸುವ ಉದ್ದೇಶದಿಂದ ನಡೆಸಿದ ಪರಮಾಣು ಸ್ಫೋಟ ಪರೀಕ್ಷೆಗಳಲ್ಲಿ ಅವರ ಪಾತ್ರವಿತ್ತು. 1992-99ರ ಅವಧಿಯಲ್ಲಿ ಕಲಾಂ ಪ್ರಧಾನಮಂತ್ರಿಗಳ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿದ್ದರು. ಅವರಿಗೆ ಸುಮಾರು 40 ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‍ಗಳನ್ನು ನೀಡಿವೆ. 1981ರಲ್ಲಿ `ಪದ್ಮಭೂಷಣ’, 1990ರಲ್ಲಿ `ಪದ್ಮವಿಭೂಷಣ’ ಮತ್ತು 1997ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಭಾರತ ರತ್ನ’ವನ್ನು ಭಾರತ ಸರ್ಕಾರ ನೀಡಿದೆ.

ಜುಲೈ 27, 2015 ರಂದು ಶಿಲ್ಲಾಂಗ್‍ನಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವಾಗಲೇ ನಿಧನರಾದ ಅಬ್ದುಲ್ ಕಲಾಂ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಆತ್ಮಕಥೆ `ವಿಂಗ್ಸ್ ಆಫ್ ಫೈರ್’ ಅತ್ಯಂತ ಹೆಚ್ಚು ಮಾರಾಟವಾಗಿರುವ ಕೃತಿ ಎನಿಸಿದೆ. ದೇಶದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದೆ. ಅದಲ್ಲದೇ `ಇಂಡಿಯ 2020’, `ಇಗ್ನೈಟೆಡ್ ಮೈಂಡ್ಸ್’, `ಟರ್ನಿಂಗ್ ಪಾಯಿಂಟ್ಸ್’, `ಸೈಂಟಿಫಿಕ್ ಇಂಡಿಯನ್’ – ಅವರ ಕೆಲವು ಪ್ರಮುಖ ಕೃತಿಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top