fbpx
ಹೆಚ್ಚಿನ

ಶಕ್ತಿಶಾಲಿ ಹನುಮನ ಸಮುದ್ರಲಂಘನ ಹಾಗೂ ಲಂಕಾ ದರ್ಶನ ಕುರಿತ ಕುತೂಹಲ ಕಥೆ ಬಗ್ಗೆ ನಿಮ್ಗ್ ಗೊತ್ತಾ,ಗೊತ್ತಿಲ್ಲ ಅಂದ್ರೆ ತಿಳ್ಕೊಳ್ಳಿ.

ಗರುಡನಂತೆ ಅತ್ಯಂತ ವೇಗವಾಗಿ ಹನುಮಂತನು ಆಕಾಶಕ್ಕೆ ಜಿಗಿದಾಗ, ಕಪಿಗಳಿಗೆ ಎಲ್ಲರಿಗೂ ಅತ್ಯಂತ ಸಂತಸವಾಯಿತು ಅವರು ಮತ್ತೆ ಹನುಮಂತನು ಮರಳಿ ಬರುವವರೆಗೆ ಸಮುದ್ರ ತೀರದಲ್ಲಿಯೇ ವಾಸ ಮಾಡಿದರು. ಹನುಮಂತನು ಸಾಲಾಗಿರುವ ವನ ಪ್ರದೇಶವನ್ನು ಕಂಡನು. ಮಲಯ ಪರ್ವತದ ವನಗಳು ದಕ್ಷಿಣದ ನದಿಗಳು ಎಲ್ಲವನ್ನೂ ನೋಡುವಾಗ ತನ್ನ ಶರೀರವನ್ನು ಚಿಕ್ಕದಾಗಿಸಿದನು.ದಾರಿಯಲ್ಲಿ ಮೈನಾಕ ಪರ್ವತವು ಕಂಡಾಗ ಅಲ್ಲಿ ವಿಶ್ರಮಿಸಿ ಅಲ್ಲಿಂದ ಮುಂದುವರಿದನು. ಹಿಂದೆ ಇಂದ್ರನ ವಜ್ರಾಯುಧದಿಂದ ಪರ್ವತಗಳ ರೆಕ್ಕೆ ಕತ್ತರಿಸಿದ ಮೈನಾಕನು ಸಮುದ್ರದಲ್ಲಿ ಮುಳುಗಿದ್ದನು. ರಾಮ ಕಾರ್ಯಕ್ಕೆ ಹೊರಟ ಹನುಮಂತನಿಗೆ ಶುಭ ಕೋರಿದನು. ಮೈನಾಕ ಹಿಮಾಲಯನ ಮಗ.

 

 

ಹನುಮಂತನು ಮುಂದುವರೆಯುವಾಗ ಸುರಸಾ ಎಂಬ ರಾಕ್ಷಸಿಯು ವಾಯುಪುತ್ರನ ಮಾರ್ಗವನ್ನು ತಡೆದಳು. ದೇವತೆಗಳು ಆಂಜನೇಯನ ಸಾಹಸವನ್ನು ಪರೀಕ್ಷಿಸಲು ನಾಗ ಮಾತೆಯನ್ನು ಕರೆದು ರಾಕ್ಷಸಿಯನ್ನಾಗಿಸಿ ಕಳಿಸಿದ್ದರು. ಅವಳು ಹನುಮಂತನ ಎದುರಿಗೆ ಬಂದು ನೀನು ಧೀರನಾಗಿದ್ದರೆ ನನ್ನ ಬಾಯಿಯಲ್ಲಿ ಪ್ರವೇಶಿಸಿ ಹೊರಗೆ ಬರಬೇಕು ಎಂದು ಹೇಳಿದಳು. ಹನುಮಂತನು ಈಗ ಸಮಯವಿಲ್ಲ ತಿರುಗಿ ಬರುವಾಗ ನಿನ್ನ ಬಾಯಿಯನ್ನು ಪ್ರವೇಶಿಸುತ್ತೇನೆಂದು ಹೇಳಿದರೂ, ಅವಳು ಕೇಳದಿದ್ದಾಗ ಹನುಮಂತನು ದೊಡ್ಡದಾಗುತ್ತಾ ನಡೆದನು. ಅವನಂತೆ ಸುರಸಾ ಸಹಿತ ಬಾಯಿಯನ್ನು ದೊಡ್ಡದಾಗಿಸಿದಳು.ಸುರಸೆ ದೊಡ್ಡಬಾಯಿ ಹೊಂದಿದಾಗಲೇ ಹನುಮಂತನು ಚಿಕ್ಕ ಶರೀರವನ್ನು ಹೊಂದಿ ಅವಳ ಬಾಯಿ ಹೊಕ್ಕು ಹೊರ ಬಂದನು. ಅವಳು ಹನುಮಂತನ ಕುಶಲತೆಗೆ ಬೆರಗಾಗಿ ಲಂಕೆಗೆ ಹೋಗಿ ಸೀತೆಯನ್ನು ನೋಡುವ ಶಕ್ತಿ ನಿನಗಿದೆ. ನಿನಗೆ ಜಯವಾಗಲಿ ಎಂದು ಹರಸಿದಳು. ಹನುಮಂತನು ಮುಂದುವರಿದಾಗ ಸಮುದ್ರದಿಂದ ನೆರಳನ್ನು ಅನುಸರಿಸಿ ಹಿಡಿದು ಜನರು ಪ್ರಾಣಿಗಳನ್ನು ಹಿಡಿಯುವ ಸಿಂಹಿಕಾ ಎಂಬ ರಾಕ್ಷಸಿಯು ಹನುಮಂತನನ್ನು ಹಿಡಿದಳು. ಆಗ ಆ ರಾಕ್ಷಸಿಯ ಬಾಯಿಯಿಂದ ಅವಳ ಹೊಟ್ಟೆಯನ್ನು ಪ್ರವೇಶಿಸಿ ಹನುಮಂತನು ದೊಡ್ಡದಾಗುತ್ತಾ ನಡೆದನು. ಸಿಂಹಿಕೆಯ ಹೊಟ್ಟೆ ಒಡೆದು ಸತ್ತಳು. ಮುಂದೆ ಹನುಮಂತನು ಸುಂದರವಾದ ದೃಶ್ಯಗಳನ್ನು ಸೂರ್ಯೋದಯ, ಸೂರ್ಯಾಸ್ತ , ಚಂದ್ರೋದಯ ಎಲ್ಲವನ್ನೂ ನೋಡುತ್ತಾ ಸಮುದ್ರದ ಲಂಕಾ ತೀರಕ್ಕೆ ಬಂದನು.

ಲಂಕೆಯ ತ್ರಿಕೂಟ ಪರ್ವತದ ಲಂಬಕ ಎಂಬ ಎತ್ತರವಾದ ಶಿಖರದ ಮೇಲೆ ಇಳಿದನು ಹನುಮಂತ . ತೆಂಗು-ಕಂಗುಗಳಿಂದ ಅಲ್ಲಿನ ಪ್ರದೇಶ ಸುಂದರವಾಗಿತ್ತು. ಲಂಕೆಯನ್ನು ದೇವಶಿಲ್ಪಿ ಮಯನೇ ನಿರ್ಮಿಸಿದ್ದನು. ರಾವಣನು ಕುಬೇರನ ಅಲಕಾ ಪಟ್ಟಣಕ್ಕಿಂತಲೂ ಹೆಚ್ಚಾಗಿ ಸುಂದರವಾಗುವಂತೆ ಮಯನಿಂದ ನಗರ ನಿರ್ಮಾಣ ಮಾಡಿಸಿದ್ದನು. ಸುಂದರವಾದ ಉದ್ಯಾನಗಳು ಗಿಡ ಮರಗಳಿಂದ ಚೆಂದವಾಗಿರುವ ಅನೇಕ ಸುಂದರ ಭವನಗಳನ್ನು ಹೊಂದಿರುವ ಲಂಕೆಯು ಸ್ವರ್ಣ ಲಂಕೆಯೆಂದೇ ಪ್ರಸಿದ್ಧವಾಗಿತ್ತು.
ಲಂಕಾನಗರದ ಸುತ್ತಲೂ ಭದ್ರವಾದ ಕೋಟೆಯಿತ್ತು. ಬಲಿಷ್ಠವಾದ ರಾಕ್ಷಸರ ಸೈನ್ಯವು ಹಗಲು-ರಾತ್ರಿ ಕಾಯುತ್ತಿತ್ತು. ಅಲ್ಲದೆ ಲಂಕಿಣಿ ಎಂಬ ಲಂಕಾಧಿ ದೇವತೆ ಸಹ ಕೋಟೆಯನ್ನು ಕಾಯುತ್ತಿದ್ದಳು. ಹನುಮಂತನನ್ನು ಕೋಟೆಯ ಬಾಗಿಲಿಗೆ ಬಂದಾಗ ಲಂಕಿಣಿ ಅವನನ್ನು ಬೆನ್ನಟ್ಟಿ ಬಂದಳು. ಹನುಮಂತನು ವಿನಯದಿಂದ ನಾನು ಲಂಕೆಯನ್ನು ನೋಡಲು ಬಂದಿದ್ದೇನೆ. ನನ್ನನ್ನು ಒಳಗೆ ಹೋಗಲು ಬಿಡು ಎಂದು ಕೇಳಿದನು. ಅವಳು ಸಿಟ್ಟಿನಿಂದ ಗರ್ಜಿಸುತ್ತಾ ಹನುಮಂತನನ್ನು ತಡೆದಳು.

 

 

 

ಲಂಕಿಣಿ ಹನುಮಂತನಿಗೆ ಒಂದು ಪೆಟ್ಟು ಕೊಟ್ಟಾಗ ಹನುಮಂತನಿಗೆ ಕೋಪ ಬಂದು ಅವಳ ತಲೆಯ ಮೇಲೊಂದು ಗುದ್ದಿದನು. ಆಗ ವಾನರನು ತಲೆಯ ಮೇಲೆ ಕುಕ್ಕಿದಾಗ ಲಂಕಾ ದೇವಿಗೆ ಬ್ರಹ್ಮನು ಶಾಪವನ್ನು ಕೊಟ್ಟಿದ್ದು ನೆನಪಾಯಿತು. ಹನುಮಂತನಿಗೆ ವಾನರ ಶ್ರೇಷ್ಠ. ನೀನಿನ್ನು ನಿಶ್ಚಿಂತನಾಗಿ ಒಳಗೆ ಪ್ರವೇಶ ಮಾಡಬಹುದು ರಾವಣನ ಅಂತ್ಯ ಸಮೀಪಿಸುತ್ತಿದೆ. ರಾಕ್ಷಸರಿಗೆ ಆಪತ್ತು ಬಂದಿದೆ ಎಂಬ ಹನುಮಂತನನ್ನು ಬಿಟ್ಟು ಕ್ಷಮೆ ಕೇಳಿದಳು.ಹನುಮಂತನು ವೈರಿ ರಾಜ್ಯವನ್ನು ಬಾಗಿಲಿನಿಂದ ಒಳಗೆ ಹೋಗಲು ಬಯಸದೆ ಕೋಟೆಯ ಗೋಡೆಯನ್ನು ಹಾರಿ ಮೊದಲು ಎಡಗಾಲಿಟ್ಟು ಪ್ರವೇಶಿಸಿದನು. ರಾಜ ಬೀದಿಯಲ್ಲಿ ನಡೆಯುತ್ತಾ ಹೋದನು. ರಾತ್ರಿಯ ಸಮಯವಾಗಿತ್ತು. ಎಲ್ಲಿ ನೋಡಿದರೂ ನೃತ್ಯ ಸಂಗೀತದ ಸೂಚನೆ ಕೇಳುತ್ತಿತ್ತು . ಹಲವು ರಾಕ್ಷಸರು ಯುದ್ಧದ ತಯಾರಿ ನಡೆಸಿದ್ದರು. ಹನುಮಂತನು ಅರಮನೆಗಳಲ್ಲಿ ಸೀತೆಯನ್ನು ಹುಡುಕಿದನು. ಲಂಕಾ ಪಟ್ಟಣದ ವಿವಿಧ ಸೌಧಗಳನ್ನು ಏರಿ ಅಲ್ಲೆಲ್ಲಾ ಸೀತೆ ಇದ್ದಾಳೆಯೇ ? ಎಂದು ಹುಡುಕುತ್ತಾ ಹೋದನು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top