fbpx
ದೇವರು

ಕರ್ನಾಟಕದಿಂದ ಕನ್ಯಾಕುಮಾರಿವರೆಗೂ 10 ದಿನಗಳ ದಸರಾ ಹೇಗಿರುತ್ತೆ ಗೊತ್ತಾ,ದೇಶದ ಭಾಗಗಳ ಜಗಮಗಿಸುವ ವೈಭವಯುತ ದಸರಾದ ಒಂದು ಇಣುಕು ನೋಟ

ನವರಾತ್ರಿ ಆರಂಭವಾಗಿದೆ, ದಸರಾ ಆಚರಣೆಗೆ ಇಡೀ ದೇಶವೇ ಸಜ್ಜುಗೊಂಡಿದೆ. ಇದು ಶಕ್ತಿ ದೇವಿಯನ್ನು ಆರಾಧಿಸುವ ಪವಿತ್ರ ಹಬ್ಬ. ಅಕ್ಟೋಬರ್ 10 ನೇ ತಾರೀಖಿನಿಂದ 19 ನೇ ತಾರೀಖಿನವರೆಗೂ ಒಂಬತ್ತು ದಿನಗಳ ಕಾಲ ನಡೆಯುತ್ತದೆ ಶಕ್ತಿ ದೇವಿಯ ಆರಾಧನೆ.ಜಗನ್ಮಾತೆಯ ಅನುಗ್ರಹ ಪಡೆಯಲು ಇದು ಶುಭ ಸಮಯ.ಅಕ್ಟೋಬರ್ 10 ನೇ ತಾರೀಖಿನಿಂದ 19 ನೇ ತಾರೀಕಿನವರೆಗೆ ಶರನ್ನವರಾತ್ರಿಯ ಆರಾಧನೆಯನ್ನು ಮಾಡಲಾಗುತ್ತದೆ. ಇದು ಇಂದೂಗಳ ಪವಿತ್ರ ಹಬ್ಬ.ನವರಾತ್ರಿಯನ್ನು ಕರ್ನಾಟಕದಲ್ಲಿ ದಸರಾ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಇದೇ ಹಬ್ಬವನ್ನು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯಾಗಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. 9 ದಿನಗಳ ಕಾಲ ಆಚರಿಸುವ ಈ ಹಬ್ಬಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ. ಪುರಾಣದ ಪ್ರಕಾರ ಜಗನ್ಮಾತೆ ಆದಿಶಕ್ತಿ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹಾರ ಮಾಡಿ ಲೋಕವನ್ನು ಕಾಪಾಡುತ್ತಾಳೆ . ಹೀಗಾಗಿ ನವರಾತ್ರಿಯಲ್ಲಿ 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ.

ನವರಾತ್ರಿಯ ಒಂಬತ್ತು ರಾತ್ರಿಗಳಲ್ಲಿ ದೇವಿಯ ಒಂಬತ್ತು ಅವತಾರಗಳನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ವೇಳೆ ಭಕ್ತರು ಕಟ್ಟುನಿಟ್ಟಿನ ವ್ರತ ಪೂಜೆಗಳಲ್ಲಿ ತಲ್ಲೀನರಾಗುತ್ತಾರೆ. ನಮ್ಮ ಭಾರತದ ಪ್ರಧಾನಿ ನರೇಂದ್ರ ಮೋದಿ ಜಿಯವರು ಕೂಡ ಆದಿಶಕ್ತಿಯ ಪರಮ ಭಕ್ತರು. ತಮ್ಮ ವಿಶಿಷ್ಟ ಆಲೋಚನೆ ಮತ್ತು ಯೋಜನೆಗಳಿಂದ ಜಗದ್ವಿಖ್ಯಾತರಾಗಿರುವ ಮೋದಿ ಕೂಡ ಪ್ರತಿ ವರ್ಷ ತಪ್ಪದೇ ನವರಾತ್ರಿಯನ್ನು ಆಚರಿಸುತ್ತಾರೆ. ನವರಾತ್ರಿಯ ವೇಳೆ ಅವರು ಎಲ್ಲೇ ಇದ್ದರೂ ಕೂಡ ಕಟ್ಟುನಿಟ್ಟಿನ ಉಪವಾಸ ಮಾಡಿ ಜಗನ್ಮಾತೆಯನ್ನು ಆರಾಧಿಸುತ್ತಾರೆ . ನಮ್ಮ ಭಾರತ ವೈವಿಧ್ಯಮಯ ದೇಶ , ಇಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವಿಶಿಷ್ಟ ಸಂಸ್ಕೃತಿಯನ್ನು ಪಾಲಿಸಲಾಗುತ್ತದೆ. ಉಡುಗೆ ತೊಡುಗೆ ಭಾಷೆ ಸಂಪ್ರದಾಯ ಆಚರಣೆಗಳಲ್ಲಿ ವಿಭಿನ್ನತೆ ಇರುತ್ತದೆ. ಸಹಜವಾಗಿ ಪ್ರತಿವರ್ಷ ಬರುವ ದಸರಾ ಆಚರಣೆಯಲ್ಲೂ ಕೂಡ ವಿಭಿನ್ನತೆ ಇದೆ. ಹೀಗಾಗಿ ಶ್ರೀಮಂತ ಭಾರತ ದೇಶದ ವಿವಿಧ ದಸರಾ ಹಬ್ಬದ ಆಚರಣೆಯನ್ನು ನೀವೆಲ್ಲರೂ ಒಮ್ಮೆಯಾದರೂ ನೋಡಲೇಬೇಕು, ನೋಡಿ ಕಣ್ತುಂಬಿಕೊಳ್ಳಬೇಕು.

 

 

 

ದೇಶದ ಯಾವ್ಯಾವ ಭಾಗದಲ್ಲಿ ದಸರಾ ನೋಡಲೇಬೇಕು ?
ಜೀವನದಲ್ಲೊಮ್ಮೆ ಮೈಸೂರು ದಸರಾ ನೋಡಲೇಬೇಕು.ಅತ್ಯಂತ ವರ್ಣರಂಜಿತವಾಗಿ ನಡೆಯುತ್ತೆ ದಸರಾ. ಪಶ್ಚಿಮ ಬಂಗಾಳದಲ್ಲಿ ದಸರಾ ನೋಡಿದರೆ ಜೀವನ ಸಾರ್ಥಕವಾಗುತ್ತದೆ. ಗುಜರಾತ್ನಲ್ಲಿ ದಸರಾ ವೇಳೆ ಗರ್ಭಾ ನೃತ್ಯ ವೈಭವ, ವಾರಣಾಸಿಯಲ್ಲಿ ರಾಮಲೀಲಾ ನೃತ್ಯ ನಾಟಕ ನೋಡೋದೇ ಚೆಂದ, ಇಡೀ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ ರಾಜಸ್ಥಾನದ ಕೋಟಾ ದಸರಾ.
ದಸರಾ ಆಚರಣೆ ಹೇಗೆ ಇರಲಿ ನವರಾತ್ರಿಯಲ್ಲಿ ಜಗನ್ಮಾತೆಯನ್ನು ಪೂಜಿಸುವ ದಿನಗಳೇ ಶುಭ ದಿನಗಳು. ಈ ಸಂದರ್ಭದಲ್ಲಿ ಭಕ್ತರನ್ನು ಪೊರೆಯುವ ಜಗನ್ಮಾತೆ ಭೂಮಿಗೆ ಬರುತ್ತಾಳಂತೆ, ಮಕ್ಕಳಿಂದ ಪೂಜೆ ಸತ್ಕಾರವನ್ನು ಪಡೆಯುತ್ತಾಳಂತೆ, ತನ್ನನ್ನು ಪ್ರೀತಿಯಿಂದ ನೋಡಿಕೊಂಡು, ನಿಷ್ಕಲ್ಮಶ ಭಕ್ತಿಯಿಂದ ಪೂಜೆ ಮಾಡಿದ ಭಕ್ತರಿಗೆ ಬೇಕಾದ್ದನ್ನು ಕರುಣಿಸುತ್ತಾಳೆ ಎನ್ನಲಾಗುತ್ತದೆ.ದಸರಾ ಆಚರಣೆಗೆ ಇಡೀ ದೇಶವೇ ಸಜ್ಜಾಗಿದೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ದಸರಾ ಆಚರಣೆ ಹೇಗಿರುತ್ತದೆ ? ದೇಶದಲ್ಲಿ ದಸರಾ ವೈಭವ ಹೇಗಿರುತ್ತದೆ ಗೊತ್ತಾ ? ನವರಾತ್ರಿ ನಮ್ಮ ಭಾರತ ದೇಶದ ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ವಿಶಿಷ್ಟವಾದ ಹಬ್ಬವನ್ನು ವಿವಿಧ ರೀತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇಶದ ಪ್ರಸಿದ್ಧ ಶಕ್ತಿ ದೇಗುಲಗಳಲ್ಲಿ ನವರಾತ್ರಿ ಆಚರಣೆ ಅತ್ಯಂತ ಜೋರಾಗಿ ನಡೆಯುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯ ಪೂಜೆ ಉತ್ಸವಗಳನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು, ನವರಾತ್ರಿಯ ಉತ್ಸವ ಎಲ್ಲೆಲ್ಲಿ ರಂಗು ಪಡೆಯುತ್ತದೆ ಗೊತ್ತಾ ? ಇಲ್ಲಿ ನಡೆಯುವ ದಸರಾವನ್ನು ನೀವು ಮಿಸ್ ಮಾಡುವಹಾಗಿಲ್ಲ.

 

ಮೈಸೂರು ದಸರಾ:ಮೈಸೂರು ದಸರಾ ಎಷ್ಟೊಂದು ಸುಂದರ ,ಮೈಸೂರು ದಸರಾ ಎಂದರೆ ವಿಶ್ವವಿಖ್ಯಾತ. ಇದಕ್ಕೆ ಕಾರಣ ಎಂದರೆ ಮೈಸೂರಿನಲ್ಲಿರುವ ರಾಜಮನೆತನ, ಅಂಬಾರಿ ಹಾಗೂ ವಿಜಯದಶಮಿ ಮೆರವಣಿಗೆ.ವಿಜಯ ದಶಮಿಯಂದು ಮೈಸೂರಿನ ರಥ ಬೀದಿಯಲ್ಲಿ ನಡೆಯುವ ಜಂಬೂಸವಾರಿ ಸಾಂಸ್ಕೃತಿಕ ನಗರಿಯ ಗತ ವೈಭವವನ್ನು ಬಿಂಬಿಸುತ್ತದೆ. ಇಲ್ಲಿ ನಡೆಯುವ ಪಂಜಿನ ಕವಾಯತು ಮೈನವಿರೇಳಿಸುತ್ತದೆ.
ಕುಲು ದಸರಾ:ಜೀವನದಲ್ಲಿ ಒಮ್ಮೆ ನೋಡಲೇ ಬೇಕು ಕುಲು ದಸರಾ.ಕುಲು ಕಣಿವೆಯ ಪ್ರಸಿದ್ಧ ಉತ್ಸವ ದಸರಾ. ಹಿಮಾಚಲ ಪ್ರದೇಶದ ಕುಲು ಕಣಿವೆಯು ಚಿಕ್ಕದಾದರೂ ಇಲ್ಲಿ ನಡೆಯುವ ದಸರಾ ಆಚರಣೆ ಅತ್ಯಂತ ವಿಶಿಷ್ಟ. ಕುಲು ಕಣಿವೆಯ ಮೈದಾನದಲ್ಲಿ ಪ್ರತಿ ವರ್ಷ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಜಯದಶಮಿಯಂದು ಆರಂಭವಾಗುವ ದಸರಾ ಏಳು ದಿನಗಳ ಕಾಲ ನಡೆಯುತ್ತದೆ. ಈ ಸಮಯದಲ್ಲಿ ಮನಾಲಿಯಲ್ಲಿ ಸೇರಿದಂತೆ ಸುಮಾರು 200 ಸ್ಥಳೀಯ ದೇವತೆಗಳನ್ನು ರಘುನಾಥ್ ಜಿ ದೇವಾಲಯಕ್ಕೆ ಅದ್ದೂರಿ ಮೆರವಣಿಗೆಯ ಮೂಲಕ ಕರೆತರಲಾಗುತ್ತದೆ. ಕೊನೆಯ ದಿನ ಬಿಯಾಸ್ ನದಿಯ ದಡದಲ್ಲಿ ಮರದ ತುಂಡು ಹಾಗೂ ಹುಲ್ಲಿನ ರಾಶಿಗೆ ಬೆಂಕಿ ಹಾಕಲಾಗುತ್ತದೆ. ದುಷ್ಟ ಸಂಹಾರದ ಸಂಕೇತವಾಗಿ ಆಚರಿಸುವ ಕುಲು ದಸರಾ ನೆರೆದವರ ಕಣ್ಣಮನಸ್ಸನ್ನು ಸೆಳೆಯುತ್ತದೆ. ಸುಮಾರು ಎರಡು ಶತಮಾನಗಳಿಂದ ಆಚರಣೆಯಲ್ಲಿದೆ ಈ ಕುಲು ದಸರಾ. ಪಂಜಾಬ ರಾಜ್ಯವನ್ನು ಆಳುತ್ತಿದ್ದ ಜಗತ್ ಪ್ರಸಿದ್ಧ ದೊರೆ ರಣಜಿತ್ ಸಿಂಗ್ ಈ ಕುಲು ದಸರಾ ಉತ್ಸವವನ್ನು ಆರಂಭಿಸಿದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.
ಪಶ್ಚಿಮ ಬಂಗಾಳದ ಜನರಿಗೆ ದುರ್ಗೆಯ ಜೊತೆ ಭಾವನಾತ್ಮಕ ನಂಟು. ಜೀವನದಲ್ಲಿ ಒಮ್ಮೆ ಇಲ್ಲಿ ನಡೆಯುವ ದಸರಾ ಆಚರಣೆ ನೋಡಲೇಬೇಕು.

 

 

 

ದುರ್ಗಾ ಪೂಜೆ ಎಂದರೆ ಪಶ್ಚಿಮಬಂಗಾಳ, ಪಶ್ಚಿಮ ಬಂಗಾಳ ಎಂದರೆ ದುರ್ಗಾಪೂಜೆ. ಯಾಕೆಂದರೆ ಇಲ್ಲಿ ದುರ್ಗೆಯನ್ನು ಆರಾಧಿಸುವ ಹಾಗೆ ಬೇರೆ ಎಲ್ಲೂ ಆರಾಧಿಸುವುದಿಲ್ಲ. ಇಲ್ಲಿನ ಜನರಿಗೆ ದುರ್ಗೆಗು ಅವಿನಾಭಾವ ನಂಟಿದೆ. ದುರ್ಗೆಯ ಜೊತೆ ಈ ಜನರದ್ದು ಭಾವನಾತ್ಮಕ ಅನುಬಂಧ. ದಸರಾ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ, ಎಲ್ಲಿ ನೋಡಿದರೂ ಅತ್ಯಾಕರ್ಷಕ ಬಣ್ಣ, ಬಣ್ಣದ ಪೆಂಡಾಲ್ ಗಳು ಕಂಡು ಬರುತ್ತವೆ. ಈ ಪೆಂಡಾಲ್ ಗಳಲ್ಲಿ ದುರ್ಗಾ ದೇವಿಯ ಸುಂದರ ಮೂರ್ತಿಗಳನ್ನು ಇಟ್ಟು ಪೂಜಿಸಲಾಗುತ್ತದೆ. ದುರ್ಗೆಯನ್ನು ವಿಸರ್ಜನೆ ಮಾಡುವ ದಿನ ಅತ್ಯಂತ ಸಂಭ್ರಮದ ಪೂಜೆ ನಡೆಯುತ್ತದೆ. ಬಾಯಿಯ ಮೂಲಕ ಉಲೂ ಲೂ ಶಬ್ದ ಮಾಡುತ್ತಾ ಮೆರವಣಿಗೆ ಮಾಡುತ್ತಾ ತಾಯಿಯನ್ನು ವಿಸರ್ಜನೆ ಮಾಡಲಾಗುತ್ತದೆ.

ಗುಜರಾತ್ ದಸರಾ:ಗುಜರಾತ್ ದಸರಾದ ಪ್ರಮುಖ ಆಕರ್ಷಣೆ ಗರ್ಭಾ ನೃತ್ಯ. ನವರಾತ್ರಿಯ ಆಚರಣೆಯನ್ನು ಮನಸಾರೆ ಆನಂದಿಸಬೇಕು ಎಂದರೆ ಗುಜರಾತ್ ಗೆ ಒಮ್ಮೆ ಭೇಟಿ ನೀಡಬೇಕು. ಯಾಕೆಂದರೆ ನವರಾತ್ರಿಯ ವೇಳೆ ಇಲ್ಲಿ ಶಕ್ತಿದೇವತೆಯ ಒಂಬತ್ತು ಅಂಶಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. 9 ರಾತ್ರಿಯ ಉತ್ಸವದ ಪ್ರಮುಖ ಆಕರ್ಷಣೆ ಗುಜರಾತ್ ನ ಜಾನಪದ ನೃತ್ಯ ಗರ್ಭ. ಪ್ರತಿ ನಿತ್ಯ ಪೂಜೆಯ ನಂತರ ಶಕ್ತಿ ದೇವತೆಯ ಪ್ರತಿಮೆಯ ಸುತ್ತ ಗರ್ಭಾ ಜಾನಪದ ನೃತ್ಯ ಮಾಡಲಾಗುತ್ತದೆ. ಕಣ್ಮನಸೆಳೆಯುವ ಈ ಗರ್ಭಾ ನೃತ್ಯ ಮಧ್ಯ ರಾತ್ರಿಯವರೆಗೂ ನಡೆಯುತ್ತದೆ.
ವಿಜಯವಾಡದ ಕನಕದುರ್ಗೆಯ ದಸರಾ:ದಸರಾದಲ್ಲಿ ವಿಜಯವಾಡದ ಕನಕ ದುರ್ಗೆಯ ದರ್ಶನ ಮಾಡುವುದೇ ಮಹಾನ್ ಸುಯೋಗ.ದಸರಾ ಆಂಧ್ರ ಪ್ರದೇಶದಲ್ಲೂ ರಂಗು ಪಡೆಯುತ್ತದೆ ಕನಕ ದುರ್ಗೆಯ ದಸರಾ. ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಅತ್ಯಂತ ವೈಭವ ಪ್ರೇರಿತವಾಗಿ ನಡೆಯುತ್ತದೆ. ಹತ್ತು ದಿನಗಳ ದಸರಾ ವೇಳೆ ಕನಕ ದುರ್ಗೆಗೆ ವಿವಿಧ ರೂಪಗಳಲ್ಲಿ ಅಲಂಕಾರ ನಡೆಯುತ್ತದೆ. ಆ ದಿನದ ಜ್ಯೋತಿಷ್ಯ, ನಕ್ಷತ್ರವನ್ನು ಅನುಸರಿಸಿ ಅಲಂಕಾರ ನಡೆಯುವುದು ವಿಶೇಷ.
ವಾರಾಣಸಿ ದಸರಾ:ದಸರಾ ಸಂದರ್ಭದಲ್ಲಿ ವಾರಣಾಸಿಯಲ್ಲಿ ನಡೆಯುತ್ತದೆ ರಾಮಲೀಲಾ ನೃತ್ಯ ನಾಟಕ. ವಾರಣಾಸಿಯ ದಸರಾ ಹಬ್ಬದ ಮುಖ್ಯ ಆಕರ್ಷಣೆ ರಾಮಲೀಲಾ. ರಾಮಲೀಲಾ ಎನ್ನುವುದು ಒಂದು ನೃತ್ಯ ನಾಟಕ. ಸೀತಾ, ರಾಮ, ಲಕ್ಷ್ಮಣರ ವನವಾಸದ ಕಥೆಯನ್ನು ರಾಮಲೀಲಾದಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಇಡೀ ವಾರಣಾಸಿಯ ನಗರ ರಾಮಲೀಲಾ ಮೈದಾನವಾಗಿ ಮಾರ್ಪಾಡಾಗುತ್ತದೆ.
ಕೋಟಾ ದಸರಾ:ಕೋಟಾ ದಸರಾದ ಪ್ರಮುಖ ಆಕರ್ಷಣೆ ಎತ್ತರದ ರಾವಣ. ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುವ ರಾಜಸ್ಥಾನದ ಉತ್ಸವವೇ ಕೋಟಾ ದಸರಾ. ಉತ್ಸವದ ಪ್ರಮುಖ ಆಕರ್ಷಣೆ 75 ಅಡಿ ಎತ್ತರದ ಬೃಹತ್ ರಾವಣ. ಶ್ರೀರಾಮಚಂದ್ರನಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ರಾವಣನನ್ನು ಸಂಹಾರ ಮಾಡಲು ದ್ಯೋತಕವಾಗಿ ಈ ಉತ್ಸವವನ್ನು ಮಾಡಲಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top