fbpx
ಸಮಾಚಾರ

ನಮ್ಮ ಹೆಮ್ಮೆಯ ಕರ್ನಾಟಕದ ಕನ್ನಡ ಬಾವುಟವನ್ನು ರಚಿಸಿದವರಾದ್ರು ಯಾರು,ಇದರ ಹಿಂದೆ ಇರೋ ಕಥೆ ಆದ್ರೂ ಏನ್ ಗೊತ್ತಾ

1960 ನೇ ಇಸವಿಯಲ್ಲಿ ಅನ್ಯ ಭಾಷೆಗಳ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ ಹೀನಾಯ ಸ್ಥಿತಿ ಒದಗಿದಾಗ ಕನ್ನಡದ ವಾತಾವರಣವನ್ನು ಮೂಡಿಸಲು, ಕನ್ನಡಿಗರನ್ನು ಎಚ್ಚರಿಸಲು ಮೂಡಿದ್ದೇ, ಕನ್ನಡ ಚಳುವಳಿ. ಹೀಗೆ ಹೋರಾಟ ಮಾಡಲು ಪ್ರಾರಂಭಿಸಿದ ಅವರಲ್ಲಿ ಕೋಣಂದೂರು ಲಿಂಗಪ್ಪ, ಆ. ನ. ಕೃ . ಮೈಸೂರು ನಟರಾಜ್, ಮೈಸೂರು ಶೇಷಗಿರಿ ರಾವ್, ನಾಡಿಗೇರ ಕೃಷ್ಣರಾವ್, ಕರ್ಣ ಮಂಗಳಂ ಶ್ರೀಕಂಠಯ್ಯ, ಮೊದಲಾದವರುಗಳ ಜೊತೆ ಕೈಜೋಡಿಸಿದವರು ಮ. ರಾಮಮೂರ್ತಿಯವರು.

ರಾಮಮೂರ್ತಿಯವರು ಜನಿಸಿದ್ದು, 1918ರ ಮಾರ್ಚ್ 11ನೇ ತಾರೀಖಿನಂದು, ನಂಜನಗೂಡಿನಲ್ಲಿ ಜನಿಸಿದರು. ಇವರ ತಂದೆ ವೀರಕೇಸರಿ ಸೀತಾರಾಮಶಾಸ್ತ್ರಿಗಳು. ಇವರು ಕೂಡ ಸ್ವಾತಂತ್ರ್ಯ ಹೋರಾಟಗಾರರು ಮತ್ತು ತಾಯಿ ಸುಬ್ಬಮ್ಮನವರು.ತಂದೆ ಸೀತಾರಾಮ ಶಾಸ್ತ್ರಿಗಳು ಗಾಂಧೀಜಿ ಅವರ ವಿಚಾರಗಳಿಗೆ ಮನಸೋತು ಚಳುವಳಿಯ ಹಾದಿಯನ್ನು ಹಿಡಿದರು. ಚಳುವಳಿಯ ಪ್ರಚಾರಕ್ಕಾಗಿ ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಪ್ರಾರಂಭಿಸಿದ್ದ ಪತ್ರಿಕೆ ವೀರಕೇಸರಿ. ಚಳುವಳಿಯಿಂದ ಕಾರಾಗೃಹ ವಾಸವನ್ನು ಅನುಭವಿಸಬೇಕಾದ ಪರಿಸ್ಥಿತಿ ಬಂದರೂ ಅವರು ಧೃತಿಗೆಡಲಿಲ್ಲ.ಮಾಧ್ಯಮಿಕ ಶಾಲೆಯ ನಂತರ ರಾಮಮೂರ್ತಿಯವರು ಬೆಂಗಳೂರಿನ ಗಾಂಧಿನಗರದಲ್ಲಿ ಇದ್ದ ಆರ್ಯವಿದ್ಯಾ ಶಾಲೆಗೆ ಸೇರಿದರು.ಕೆಲವೇ ದಿನಗಳಲ್ಲಿ ಆ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಇದ್ದ ಮಹಾನ್ ಸಾಹಿತಿ ದೇವುಡುರವರು ಬಾಲಕ ರಾಮಮೂರ್ತಿಯವರ ಕಾಳಜಿ ವಹಿಸಿಕೊಂಡರು. ಸಾಹಿತ್ಯ ವಾತಾವರಣದಿಂದ ಪ್ರೇರಿತರಾದ ರಾಮಮೂರ್ತಿಯವರು ಬರೆದ ಮೊದಲ ಕಥೆ “ ಗುರುದಕ್ಷಿಣೆ” .

 

 

 

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕನ್ನಡೇತರ ಹಾವಳಿ ಮಿತಿ ಮೀರಿತ್ತು. ಜನಸಾಮಾನ್ಯರಲ್ಲಿ ಕನ್ನಡದ ಅರಿವು ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಕನ್ನಡವನ್ನು ಎಲ್ಲರೂ ಓದುವಂತಾಗಬೇಕು, ಕುತೂಹಲ ಕಾದಂಬರಿಗಳ ಕ್ಷೇತ್ರವು ಒಂದು ಎಂದು ಚಿಂತಿಸಿದ ರಾಮಮೂರ್ತಿಯವರು ಅನೇಕ ಪತ್ತೆದಾರಿ ಕಾದಂಬರಿಗಳ ರಕ್ಷಣೆಗೆ ಮುಂದಾದರು.1950 ರಿಂದ 1960ರ ದಶಕದಲ್ಲಿ ಹಲವಾರು ಪತ್ತೆದಾರಿ ಕಾದಂಬರಿಗಳನ್ನು ರಚಿಸಿದರು. ಸುಮಾರು 150ಕ್ಕೂ ಹೆಚ್ಚು ಪತ್ತೆದಾರಿ ಕಾದಂಬರಿಗಳ ಜೊತೆ ಹಲವಾರು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದರು. ಆರು ಅಡಿ ಎತ್ತರದ ಆಜಾನುಬಾಹು, ದೃಷ್ಟಿ ನೋಟದಿಂದಲೇ ಎದುರಿಗೆ ನಿಂತವರನ್ನು ಸೆರೆಹಿಡಿದು ಬಿಡುವ ಬೊಗಸೆ ಕಂಗಳು, ಮಿಂಚಿನ ಕಣ್ಣುಗಳು ಇವು ರಾಮಮೂರ್ತಿಯವರ ಬಾಹ್ಯ ರೂಪ ಆದರೆ ವೇದಿಕೆ ಹತ್ತಿದರೆ ಸಾಕು ಆವೇಶಭರಿತರಾಗಿ ನಿರರ್ಗಳವಾಗಿ ಮಾತನಾಡುತ್ತಿದ್ದ ಭಾಷಣದಿಂದ ಕನ್ನಡದ ನರ ನಾಡಿಗಳನ್ನು ಕನ್ನಡಕ್ಕಾಗಿ ಪ್ರಚೋದಿಸಿದ ಧ್ವನಿ ಅವರದಾಗಿತ್ತು.

ಹೀಗೆ ಪರಮ ಸಾಹಸಿಯಾದ ರಾಮಮೂರ್ತಿಯವರು ಕೃಷಿ ಜೀವನ ನಡೆಸಲು ಬೆಂಗಳೂರು ಸಮೀಪ ಕನಕಪುರದ ತಲಘಟ್ಟಪುರದಲ್ಲಿ ತಮ್ಮ ಜಮೀನಿನಲ್ಲಿ ನೀರಿನ ಆಸರೆಗಾಗಿ ಬಾವಿ ತೋಡಿಸುತ್ತಿದ್ದಾಗ , ಬಾವಿಯಲ್ಲಿ ನೀರು ಬಂತು ಎಂಬ ಸಂತಸದಿಂದ ದಿವಾಕರ ಮಂಜುನಾಥ ಎನ್ನುವ ಇಬ್ಬರು ಮಕ್ಕಳ ಜೊತೆಗೆ ಬಾವಿಗೆ ಇಳಿದಾಗ ಮೇಲಿನಿಂದ ಮಣ್ಣು ಕುಸಿದು ಮೂವರು ದುರ್ಮರಣಕ್ಕೀಡಾದರು . ಕನ್ನಡ ಹೋರಾಟಗಾರರು, ಕಾದಂಬರಿಕಾರರು ಮತ್ತು ಸ್ವಾತಂತ್ರ ಹೋರಾಟಗಾರ, ಪತ್ರಕರ್ತ, ಕನ್ನಡ ಸೇನಾನಿ ಎನ್ನುವ ದೀಪ ನಂದಿ ಹೋದದ್ದು ಡಿಸೆಂಬರ್ 25ನೇ ತಾರೀಖು 1967ರಲ್ಲಿ. ಅವರು ಕನ್ನಡ ಪಕ್ಷ ಎಂಬ ಒಂದು ರಾಜಕೀಯ ಪಕ್ಷಕೋಸ್ಕರ ರಚಿಸಿದ ಬಾವುಟವೇ ಕನ್ನಡದ ಬಾವುಟ. ಭಾರತದ ಸಂಸ್ಕೃತಿಯಲ್ಲಿ ಮುತ್ತೈದೆತನದ ಮುಖ್ಯ ಅಂಶವೆಂದರೆ ಅರಿಶಿನ, ಕುಂಕುಮ. ಇದನ್ನೇ ನಮ್ಮ ಬಾವುಟದಲ್ಲಿರುವ ಬಣ್ಣಗಳು ವೈಶಿಷ್ಟ್ಯಗಳು ಕೂಡ, ಇಂತಹ ಸಂದರ್ಭದಲ್ಲಿ ರಾಮ ಮೂರ್ತಿಯವರನ್ನು ನೆನೆಯ ಬೇಕಾದದ್ದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top