fbpx
ಸಮಾಚಾರ

ನಮ್ಮೆಜಮಾನ್ರು ಬದುಕಿದ್ದಾಗಲೂ ನೆಮ್ಮದಿ ಕಾಣಲಿಲ್ಲ, ಕನಿಷ್ಠ ಸಾವಿನಲ್ಲೂ ನೆಮ್ಮದಿ ಕಾಣಬಾರದೇ?

ಕನ್ನಡದ ಮೇರುನಟರಲ್ಲಿ ಒಬ್ಬರಾದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸತ್ತು ಮಲಗಿ ಬರೋಬ್ಬರಿ 9 ವರ್ಷಗಳೇ ಕಳೆದಿದ್ದರು ಇಂಥ ಧೀಮಂತ ನಟನಿಗೊಂದು ನೆಟ್ಟಗಿನ ಸಮಾಧಿಯ ವ್ಯವಸ್ಥೆಯಾಗಿಲ್ಲ. ಇದಕ್ಕೆ ಸರ್ಕಾರದ ಉಡಾಫೆ ಮತ್ತು ಚಿತ್ರರಂಗದ ನಿರ್ಲಕ್ಷ್ಯ ಮನೋಭಾವವೇ ಕಾರಣ ಎಂಬುದು ವಿಷ್ಣು ಅಭಿಮಾನಿಗಳ ಆರೋಪ. ವಿಷ್ಣು ನಿಧನದ ನಂತರ ಮೂರು ಬೇರೆ ಬೇರೆ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸ್ಮಾರಕದ ವಿಚಾರದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ವರ್ಷಗಳಿಂದಲೂ ವಿಷ್ಣು ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿರುವ ವಿಷ್ಣು ಸ್ಮಾರಕ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

ಮೊನ್ನೆ ನಿಧನರಾದ ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕಂಠೀರವ ಸ್ಟುಡಿಯೋದ ಡಾ.ರಾಜ್ ಸಮಾಧಿಯ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. “ಡಾ.ರಾಜಕುಮಾರ್ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಡಾ.ಅಂಬರೀಶ್ ರವರ ಸ್ಮಾರಕಭಾವನ ನಿರ್ಮಿಸುತ್ತಿರುವಂತೆ ಅಲ್ಲೇ ಪಕ್ಕದಲ್ಲೇ ಈಗ ಡಾ.ವಿಷ್ಣುವರ್ಧನ್ ರವರ ಸ್ಮಾರಕವನ್ನೂ ನಿರ್ಮಿಸಿ” ಎಂಬ ಮಾತುಗಳು ಒಂದು ವರ್ಗದಿಂದ ಕೇಳಿಬರುತ್ತಿದೆ. ಈ ಮಾತುಗಳನ್ನು ಕೇಳುತ್ತಿದ್ದಂತೆ ಕುಪಿತರಾಗಿರುವ ಡಾ.ವಿಷ್ಣುವರ್ಧನ್ ರವರ ಅಭಿಮಾನಿಗಳು ಸುಮಾರು 9 ವರ್ಷಗಳಿಂದ ವಿಷ್ಣು ಸ್ಮಾರಕ ಸಮಸ್ಯೆಯನ್ನ ಬಗೆಹರಿಸಲು ಸಾಧ್ಯವಾಗಿಲ್ಲ, ಹೀಗಿರುವಾಗ ಈಗ ಅಂಬಿ ಅಣ್ಣ ನಿಧನ ಹೊಂದಿರುವ ಸಮಯದಲ್ಲಿ ವಿಷ್ಣು ಸ್ಮಾರಕ ಕುರಿತು ಯಾಕೆ ಮಾತು ಎಂಧು ಸಾಹಸ ಸಿಂಹನ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರಂತೆ.

 

ಈ ಬಗ್ಗೆ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ತಮ್ಮ ಅಭಿಪ್ರಾಯವನ್ನು ಫೇಸ್ಬುಕ್ ನಲ್ಲಿ ಸುದೀರ್ಘವಾಗಿ ಬರೆದು ಕೊಂಡಿದ್ದು, ಅವರ ಮಾತುಗಳನ್ನೇ ಇಲ್ಲಿ ಯಥಾವತ್ತಾಗಿ ನೀಡಲಾಗಿದೆ:

ವಿಷ್ಣು ಸ್ಮಾರಕ ಮಾಡಲಿಲ್ಲ ಅಂದರೆ ವಿವಾದ ಆಗುತ್ತೆ ಅನ್ನೋದಿಕ್ಕೆ ಹೆದರಿ ಈ ಹೇಳಿಕೆ ನೀಡಿದ್ದ ?

ನೀವು ಕೊಟ್ಟ ಬಟ್ಟೆಯಲ್ಲಿ ಒಬ್ಬ ಮಗನಿಗೆ ಶರ್ಟ್ ಹೊಲಿದ ಮೇಲೂ ಇನ್ನೂ ಬಟ್ಟೆ ಉಳಿದಿದೆ, ಅದರಲ್ಲೇ ಮತ್ತೊಬ್ಬ ಮಗನಿಗೆ ಚೆಡ್ಡಿ ಹೊಲಿದು ಬಿಡ್ಲಾ? ಅಂತ ಟೈಲರೊಬ್ಬ ಕೇಳುತ್ತಿರುವ ಹಾಗಿದೆ ನನಗೀಗ! ರಾಜ್ ಅಲ್ಲೇ ಇದ್ದಾರೆ, ಈಗ ಅಂಬಿಯೂ ಹೋಗ್ತಿದ್ದಾರೆ ಮತ್ತೆ ವಿಷ್ಣು ಯಾಕೆ ಎಲ್ಲೋ ಇರೋದು, ಅವರನ್ನೂ ಕಂಠೀರವ ಸ್ಟುಡಿಯೋಗೆ ತಂದುಬಿಡಿ ಅನ್ನೋ ನಿಮ್ಮ ಆಲೋಚನಾ ಶೈಲಿಗೆ ಮೂಕ ವಿಸ್ಮಿತರಾಗಿದ್ದೇವೆ. ವಿಷ್ಣು ಮೇಲೆ ನಿಮಗೆಲ್ಲಾ, ಎಂಥಾ ಪ್ರೀತಿ! ಎಂಥಾ ಪ್ರೀತಿ!! ವಾಹ್ ವಾಹ್.. ಗ್ರೇಟ್!! ಅಲ್ಲಾ ಸ್ವಾಮಿ, ವಿಷ್ಣು ಅಲ್ಲೆಲ್ಲೋ ಇದ್ದಾರೆ ಅನ್ನೋ ಸಂಗತಿ, ಈಗ ನೆನಪಾಯಿತಾ? ಹತ್ತು ವರ್ಷದಿಂದ ಆ ಜ್ಙಾನ ಇರಲಿಲ್ಲವಾ? ವಿಷ್ಣು ಮೇಲಿನ ಪ್ರೀತಿ ಸತ್ತು ಹೋಗಿತ್ತಾ? ಅಯ್ಯೋ ರಾಜ್ಕುಮಾರ್ ಅವರಿಗೆ ಸ್ಮಾರಕ ಆಗ್ಹೋಯ್ತು, ಅಂಬಿಗೂ ಮಾಡ್ಬಿಡ್ತೀವಿ ಇನ್ನು ವಿಷ್ಣುದು ಮಾಡದಿದ್ರೆ ಸುಮ್ನೆ ವಿವಾದ ಆಗುತ್ತೆ ಅಂತ ಹೀಗೊಂದು ಹೇಳಿಕೆ ಕೊಡ್ತಿದ್ದೀರಾ? ಅದೂ ಎಂಥಹಾ ಹೇಳಿಕೆ, ಸ್ಥಳಾಂತರ ಮಾಡುವ ಹೇಳಿಕೆಯಾ ?

ಹತ್ತು ವರ್ಷದಿಂದ ಎಲ್ಲಿ ಹೋಗಿತ್ತು ಈ ಪ್ರೀತಿ ?

ಅದನ್ನೇನು ಟೂರಿಂಗ್ ಟಾಕೀಸ್ ಸಿನಿಮಾ ಅಂದ್ಕೊಂಡ್ ಬಿಟ್ರಾ ಸ್ವಾಮಿ? ಯಾವಾಗಂದ್ರೆ ಆವಾಗ, ಎಲ್ಲಿಗಂದ್ರೆ ಅಲ್ಲಿಗೆ ಶಿಫ್ಟ್ ಮಾಡೋಕೆ? ಶಿಪ್ಟ್ ಮಾಡೋ ಹಾಗಿದ್ರೆ ಇಷ್ಟು ದಿವ್ಸ ಕಾಯ್ಬೇಕಿತ್ತಾ ನಾವು? ಯಾವಾಗ್ಲೋ ಸ್ಮಾರಕವಾಗ್ಬಿಡ್ತಿತಿತ್ತು. ಅಷ್ಟಕ್ಕೂ ರಾಜ್ ಅವರನ್ನು ಕಂಠೀರವದಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದು, ಅಂಬರೀಷ್ ಅವರನ್ನೂ ಅಲ್ಲೇ ಸಂಸ್ಕಾರ ಮಾಡ್ತಿದ್ದೀರಿ. ಆದ್ದರಿಂದ ಅವರಿಗೆ ಅಲ್ಲೇ ಸ್ಮಾರಕ ಮಾಡೋದು ನ್ಯಾಯೋಚಿತ ನಿರ್ಧಾರ! ಆದರೆ ವಿಷ್ಣು ಅವರನ್ನು ಸಂಸ್ಕಾರ ಮಾಡಿರುವಂತಹುದ್ದು ಅಭಿಮಾನ್ ಸ್ಟುಡಿಯೋದಲ್ಲಿ ಎಂಬುದು ನೆನಪಿರಲಿ.

ನಮ್ಮ ಯಜಮಾನರ ಸ್ಮಾರಕ ಅಭಿಮಾನ್ ಸ್ಟುಡಿಯೋ ದಲ್ಲಿಯೇ ಆಗ್ಬೇಕು !

ವಿಷ್ಣು ಅವರನ್ನು ಸಂಸ್ಕಾರ ಮಾಡಿರುವಂತಹುದ್ದು ಅಭಿಮಾನ್ ಸ್ಟುಡಿಯೋದಲ್ಲಿ ಎಂಬುದು ನೆನಪಿರಲಿ. ಪುಣ್ಯಭೂಮಿ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕು. ಸರ್ಕಾರಗಳು ನಮ್ಮ ಜೊತೆ ಇಲ್ಲದಿರಬಹುದು, ರಾಜಕೀಯದ ಗೆಳೆಯರು ನಮಗಿಲ್ಲದಿರಬಹುದು, ಪ್ರಭಾವಿ ಉತ್ತರಾಧಿಕಾರಿಗಳು ಇಲ್ಲದಿರಬಹುದು ಆದ್ರೆ ಅವರನ್ನು ಆರಾಧಿಸೋ ನನ್ನ ತರಹದ ಲಕ್ಷಾಂತರ ಅಭಿಮಾನಿಗಳಿದ್ದಾರೆ. ನಮಗೆ ಹಣದ ಸಮಸ್ಯೆ ಇಲ್ಲ. ನಾವೆಲ್ಲಾ ಒಟ್ಟಾದ್ರೆ ಬೆಟ್ಟ ಮಾಡ್ಬಿಡ್ತೀವಿ! ಜಾಗದ ಸಮಸ್ಯೆ ಇಲ್ಲ! ಈಗ್ಲೂ ಒಂದೆರೆಡು ಎಕರೆ ಜಾಗವನ್ನು ದಾನ ಕೊಡುವಂತಹ ಅಭಿಮಾನಿಗಳು ಸಾಕಷ್ಟಿದ್ದಾರೆ! ಆದ್ರೆ ನಮಗೆ ಯಾವ್ ಯಾವ ಜಾಗಗಳೋ ಬೇಡ. ನಮ್ಮೆಜಮಾನ್ರು ಮಲಗಿರೋ ಜಾಗವೇ ಬೇಕು. ಅದಕ್ಕಾಗಿಯೇ ಈ ಹೋರಾಟಗಳು. ನೋವಿನ ನರಳಾಟಗಳು. ನಮ್ಮೆಜಮಾನ್ರು ಬದುಕಿದ್ದಾಗಲೂ ನೆಮ್ಮದಿ ಕಾಣಲಿಲ್ಲ, ಕನಿಷ್ಠ ಸಾವಿನಲ್ಲೂ ನೆಮ್ಮದಿ ಕಾಣಬಾರದೇ? ಅಥವಾ ಹಾಗೆ ನೆಮ್ಮದಿ ಕಾಣುವಂತಾಗಲಿ ಎಂದು ನಾವು ಭಾವಿಸುವುದು ತಪ್ಪೇ?

ಒಂದೇ ಒಂದು ಕಲ್ಲು ಅಲುಗಾಡಿದ್ರೂ ಪರಿಸ್ಥಿತಿಗಳು ನೆಟ್ಟಗಿರಲ್ಲ!

ಈಗ್ಲೂ ಹೇಳ್ತೀವಿ ಕೇಳಿ.. ನೀವು ಸ್ಮಾರಕವನ್ನು ಮೈಸೂರಲ್ಲಿ ಮಾಡಿ, ಕಂಠೀರವದಲ್ಲೇ ಮಾಡಿ ನಮಗೇನು ಅಭ್ಯಂತರವಿಲ್ಲ! ಆದ್ರೆ ಪುಣ್ಯಭೂಮಿ ಮಾತ್ರ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕು. ಅಲ್ಲಿರುವ ಒಂದೇ ಒಂದು ಕಲ್ಲು ಅಲುಗಾಡಿದ್ರೂ ಪರಿಸ್ಥಿತಿಗಳು ನೆಟ್ಟಗಿರಲ್ಲ. ನಿಮ್ಮ ಹೇಳಿಕೆಗಳು ಬಾಯ್ಮಾತಿನ ತೀಟೆಗಳಾಗದಿರಲಿ. ಯಾರೋ ಸಣ್ಣಪುಟ್ಟ ವ್ಯಕ್ತಿಗಳ ಬಗ್ಗೆ ಅಲ್ಲ, ಯಜಮಾನ್ರಿಗೆ ಸಂಬಂಧಿಸಿ ನೀವು ಹೇಳಿಕೆ ಕೊಡ್ತಿದ್ದೀರಿ ಎಂಬ ಅರಿವಿರಲಿ. ನಮ್ಮೆಜಮಾನ್ರ ಜೀವದ ಗೆಳೆಯರಾದ ಅಂಬರೀಷ್ ಅವರನ್ನು ಕಳೆದುಕೊಂಡ ದುಃಖದಲ್ಲಿದ್ದೀವಿ ನಾವು. ಅವರನ್ನು ಗೌರವದಿಂದ ಕಳುಹಿಸಿಕೊಡೋ ಸಮಯವಿದು. ಅದು ಬಿಟ್ಟು ಅಂಬರೀಷ್ ಅವರ ಅಗಲಿಕೆಯ ಹೊತ್ತಿನಲ್ಲಿ ವಿಷ್ಣು ಅವರ ಹೆಸರನ್ನೇಕೆ ಎಳೆದು ತರುತ್ತೀರಿ!

ನಮ್ಮ ಮೌನ ಹೇಡಿತನವಲ್ಲ! ಅದು ನಮ್ಮೆಜಮಾನ್ರು ನಮಗೆ ಹೇಳಿಕೊಟ್ಟ ಪಾಠ.

ಒಂದು ವೇಳೆ, ಇದೆಲ್ಲಾ ಮುಗಿದ ಮೇಲೂ ನಿಮಗೆ ವಿಷ್ಣು ಬಗ್ಗೆ ಉಕ್ಕಿ ಹರಿಯುತ್ತಿರುವ ಪ್ರೇಮ, ಅಭಿಮಾನ ನಿಜವೇ ಆಗಿದ್ದಲ್ಲಿ ಕೂಡಲೇ ಹಿರಿಯ ನಟರಾದ ಬಾಲಕೃಷ್ಣ ಅವರ ಕುಟುಂಬವನ್ನು ಮುಖ್ಯಮಂತ್ರಿಗಳ ಜೊತೆ ಮುಖಾಮುಖಿ ಮಾಡಿಸಿ. ಅವರೇನು ಸರ್ಕಾರಕ್ಕಿಂತ ದೊಡ್ಡವರಲ್ಲ! ಅಷ್ಟಕ್ಕೂ ಅದು ಸರ್ಕಾರಿ ಜಮೀನು ಎಂಬುದು ನಿಮಗೆಲ್ಲಾ ತಿಳಿದಿರಲಿ. ಒಂದು ಸಭೆಯಲ್ಲಿ ಮುಗಿದು ಹೋಗುವ ವಿಷಯಕ್ಕೆ ರಾದ್ದಾಂತ ಏಕೆ? ಇಚ್ಚಾನುಸಾರ ಸ್ಟೇಟ್ಮೆಂಟ್ ಕೊಡೋದು ಬಿಟ್ಟು, ಇಚ್ಚಾಶಕ್ತಿ ಪ್ರದರ್ಶಿಸಿ!

ಕೊನೆಯಲ್ಲಿ ಒಂದು ಮಾತು.. ನಮ್ಮ ಮೌನ ಹೇಡಿತನವಲ್ಲ! ಅದು ನಮ್ಮೆಜಮಾನ್ರು ನಮಗೆ ಹೇಳಿಕೊಟ್ಟ ಪಾಠ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top