fbpx
ಸಿನಿಮಾ

2.0 ಸಿನಿಮಾದಲ್ಲಿ ಬರುವ ‘ಪಕ್ಷಿ ರಾಜ್ ‘ಯಾರು ಗೊತ್ತಾ ? ಈ ಪಾತ್ರವನ್ನು ಸೃಷ್ಟಿಸಲು ಸ್ಫೂರ್ತಿ ದೊರೆತದ್ದೆ ‘ ಭಾರತದ ಹಕ್ಕಿ ಮನುಷ್ಯ’ ಎಂದು ಕರೆಯಲ್ಪಡುವ ವ್ಯಕ್ತಿಯ ನೈಜ ಜೀವನಕತೆಯಿಂದ.

2018 ರ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 2 .0 ವಿಶ್ವಾದ್ಯಂತ ತೆರೆ ಕಂಡಿದ್ದು . ಸುಮಾರು 10 , 500 ಸ್ಕ್ರೀನ್ಗಳ ಮೇಲೆ ಆರ್ಭಟಿಸುತ್ತಿದೆ. ಬಿಡುಗಡೆಯ ದಿನದಿಂದಲೇ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿರುವ ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನ ಬಿಂದಾಸ್ ಹೀರೋ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಶಂಕರ್ ಅಚ್ಚು ಕಟ್ಟಾಗಿ ರೂಪಿಸಿದ್ದು ಮುಖ್ಯಭೂಮಿಕೆಯಲ್ಲಿ ನಟಿ ಅಮಿ ಜ್ಯಾಕ್ಸನ್ ಕೂಡ ಕಾಣಿಸಿಕೊಳ್ಳುತ್ತಾರೆ.

2.0 ಸಿನಿಮಾದ ಚಿತ್ರಕತೆಯು ಒಂದು ಮಟ್ಟಿಗೆ ಸುದ್ದಿ ಮಾಡಿದ್ದೂ, ನಟ ಅಕ್ಷಯ್ ಈ ಚಿತ್ರದಲ್ಲಿ ನಿರ್ವಹಿಸಿರುವ ‘ಪಕ್ಷಿ ರಾಜ್’ ಪಾತ್ರದ ಬಗ್ಗೆ ಎಲ್ಲೆಡೆಯಿಂದ ವ್ಯಾಪಕ ಹೊಗಳಿಕೆ ವ್ಯಕ್ತವಾಗಿದೆ. ಆದರೆ ಇದೀಗ ತಾಜಾ ಸುದ್ದಿಯೊಂದು ಹೊರ ಬಿದ್ದಿದ್ದು ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಿರುವ ಪಾತ್ರವನ್ನು ‘ಡಾ.ಸಲೀಂ ಆಲಿ’ ಎಂಬ ಪಕ್ಷಿ ಪ್ರೇಮಿಯ ನೈಜ ಜೀವನಕತೆಯಿಂದ ಸ್ಫೂರ್ತಿ ಪಡೆದು ಮಾಡಿದುದ್ದಾಗಿದೆ ಎಂಬ ವಿಷಯ ಎಲ್ಲೆಡೆ ಹರಿದಾಡುತ್ತಿದೆ.

2.0 ಸಿನಿಮಾದಲ್ಲಿ ಅಕ್ಷಯ್ ನಟನೆಯ ‘ ಪಕ್ಷಿ ರಾಜ್’ ಪಾತ್ರವನ್ನು ನಿಕಟ ಪಕ್ಷಿ ಪ್ರೇಮಿಯಾಗಿ ಚಿತ್ರಿಸಲಾಗಿದೆ. ಹಾಗಂತ ಚಿತ್ರದಲ್ಲಿ ‘ಸಲೀಂ ಆಲಿ’ ಅವರ ಜೀವನಕ್ಕೆ ಸಂಬಂಧಿಸಿದಂತೆ ಯಾವ ಘಟನೆಗಳು ಅಷ್ಟಾಗಿ ಕಾಣಸಿಗುವುದಿಲ್ಲ. ಆದರೆ ‘ಪಕ್ಷಿ ರಾಜ್’ ಪಾತ್ರ ನಿರ್ವಹಿಸಲು ಅಕ್ಷಯ್ ಕುಮಾರ್ ಧರಿಸಿರುವ ವಸ್ತ್ರಗಳು, ಕನ್ನಡಕ ಹಾಗೂ ಅವರ ಹಾವಭಾವ ಸಲೀಂ ಆಲಿ ಅವರ ಜೀವನವನ್ನೇ ಹೋಲುತ್ತಿರುವುದು ಇಲ್ಲಿ ವಿಶೇಷವಾಗಿದೆ.

ಹಾಗಾದರೆ ಯಾರಿದು ‘ಡಾ.ಸಲೀಂ ಆಲಿ’ ?

ಮುಂಬೈ ನಲ್ಲಿ ಜನಿಸಿದ ‘ಸಲೀಂ ಆಲಿ’ ಆವರು ಭಾರತದ ಶ್ರೇಷ್ಠ ಪಕ್ಷಿ ಶಾಸ್ತ್ರಜ್ಞ . ಚಿಕ್ಕಂದಿನಲ್ಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ಸಲೀಂ ಆಲಿ ಅವರು ತಮ್ಮ ಮಾವನಾದ ಅಮೀರುದ್ದೀನ್ ತಯಾಬ್ಜಿ ಮತ್ತು ಅತ್ತೆ ಹಮೀದಾ ಬೇಗಂ ಅವರ ಆಶ್ರಯದಲ್ಲಿ ಬೆಳೆದರು. ಸಲೀಂ ಆಲಿ ರವರ ಮಾವ ಒಳ್ಳೆಯ ಬೇಟೆಗಾರ ಮತ್ತು ಅಪ್ಪಟ ಪ್ರಕೃತಿಯ ಪ್ರೇಮಿ ಅಗ್ಗಿದ್ದರಿಂದಲೋ ಏನೋ ಸಲೀಂ ಆಲಿ ಅವರು ಚಿಕ್ಕವರಿರುವಾಗಲೇ ತಮ್ಮ ಮಾವನ ಮಾರ್ಗದರ್ಶನದಲ್ಲಿ ಬೇಟೆಯ ಕುರಿತಾದ ಮೊದಲ ಪಾಠ-ಪ್ರವಚನಗಳನ್ನು ಪಡೆದುಕೊಂಡರು.

 

 

ವಿಜ್ಞಾನದ ಬಗ್ಗೆ ತಮಗಿದ್ದ ಆಗಾಧ ಆಸಕ್ತಿಯಿಂದ ಸಲೀಂ ಆಲಿ ಅವರು ವಿಜ್ಞಾನ ಲೋಕವೇ ಅಚ್ಚರಿಪಡುವಂತಹ ಅನೇಕ ಕೊಡುಗೆಗಳನು ನೀಡಿದರು. ಆದ್ದರಿಂದಲೇ ಇಂದಿಗೂ ಸಲೀಂ ಆಲಿ ಅವರನ್ನು ” ಭಾರತದ ಪಕ್ಷಿ ಅಥವಾ ಹಕ್ಕಿ ಮನುಷ್ಯ” ಗುರುತಿಸಲಾಗುತ್ತದೆ.

ನಮ್ಮ ದೇಶಾದ್ಯಂತ ಪಕ್ಷಿಗಳ ಮೇಲೆ ವ್ಯವಸ್ಥಿತವಾದ ಸರಣಿ ಸಮೀಕ್ಷೆಗಳನ್ನು ಕೈ ಗೊಂಡ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಸಲೀಂ ಆಲಿ ಅವರ ಪಾಲಿಗಿದ್ದು. ಗೀಜುಗನ ಪಕ್ಷಿಯ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದ ಸಲೀಂ ಆಲಿ ಅವರು ತಮ್ಮ ಮೊದಲ ಅಧ್ಯಯನವನ್ನು ‘ಗೀಜುಗನ ಹಕ್ಕಿಯ‘ ಮೇಲೆ ನಡೆಸಿ ಅದನ್ನು ಪ್ರಕಟಿಸಿ ಅನಂತರ ಅನೇಕ ಪುಸ್ತಕಗಳನ್ನು ರಚಿಸಿದರು.

 

 

ಹಾಗೇ ನೋಡಿದರೆ ಸಲೀಂ ಆಲಿ ಅವರಿಗೆ ಕೇವಲ ಪಕ್ಷಿಗಳ ಅಧ್ಯಯನ ಮಾತ್ರ ತೃಪ್ತಿನೀಡುತ್ತಿರಲಿಲ್ಲ ಅದರೊಂದಿಗೆ ಅವುಗಳ ಸಂರಕ್ಷಣೆಗಾಗಿಯೂ ಸಹ ಪಣ ತೊಟ್ಟು ಕೆಲಸಮಾಡಿದರು . ಅವರ ಅವಿರತ ಪ್ರಯತ್ನದಿಂದ ಸಾಧಿತವಾದದ್ದು ಭರತಪುರ ವನ್ಯ ಧಾಮ. ರಾಜರ ಖಾಸಗೀ ಬೇಟೆ ಪ್ರದೇಶವಾಗುವ ಅಪಾಯವಿದ್ದ ಈ ಕಾಡನ್ನು ವನ್ಯಜೀವಿಧಾಮವನ್ನಾಗಿಸಿದ್ದು ಸಲೀಂ ಆಲಿ ಅವರ ಪರಿಶ್ರಮ. ಕೇರಳದ ಮೌನಕಣಿವೆ ಕಾಡಿನ ಹೋರಾಟ ತಂದ ವಿಜಯ, ಭಾರತದ ಪರಿಸರ ಪರ ಹೋರಾಟದ ಮಹತ್ವದ ಮೈಲುಗಲ್ಲು. ಇದರಲ್ಲಿ ಸಲೀಂ ಅಲಿಯವರ ಪಾಲು ಬಹಳಷ್ಟಿದೆ. ಈ ರೀತಿ ಸಲೀಂ ಆಲಿ ಯವರು ಕೈಗೊಂಡ ಕಾರ್ಯಗಳು ನೊರೆಂಟು. ಅಷ್ಟೇ ಏಕೆ ತಮ್ಮ ಸರ್ವೇಕ್ಷಣೆಗಾಗಿ ರಾಷ್ಟ್ರದಾದ್ಯಂತ ಪ್ರವಾಸ ಮಾಡುತಿದ್ದಾಗ ಸಲೀಂ ಆಲಿ ಅವರು ಕಂಡು ಹಿಡಿದ ಪಕ್ಷಿಧಾಮವೇ ನಮ್ಮ ‘ಕರ್ನಾಟಕದ ರಂಗನ ತಿಟ್ಟು‘, ಇದನ್ನು ಪತ್ತೆಮಾಡಿದ್ದಲ್ಲದೆ ಅದಕ್ಕೆ ಸೂಕ್ತ ರಕ್ಷಣೆ ಕೊಡಿಸುವಲ್ಲಿಯೂ ಸಲೀಂ ಆಲಿ ಅವರು ಸಫಲರಾಗಿದ್ದರು.

ವಿಜ್ಞಾನ ಕ್ಷೇತ್ರದಲ್ಲಿ ಡಾ.ಸಲೀಂ ಆಲಿ ಅವರು ಮಾಡಿದ ಅಪ್ರತಿಮ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ 1958 ರಲ್ಲಿ ಪದ್ಮಭೂಷಣ ವನ್ನು ಮತ್ತು 1976 ರಲ್ಲಿ ಪದ್ಮ ವಿಭೂಷಣವನ್ನು ನೀಡಿ ಸತ್ಕರಿಸಿತು.

 

 

ಅತ್ಯಂತ ಸರಳ ಮಾನವರಾಗಿದ್ದ ಸಲೀಂ ಆಲಿ, ತಮ್ಮ ಶ್ರೀಮಂತಿಕೆಯ ಸಮಯದಲ್ಲೂ ಯಾವುದೇ ರೀತಿಯ ವೈಭವದ ಜೀವನ ನಡೆಸಿದವರಲ್ಲ. ತಮ್ಮ ಕಾರ್ಯಗಳಿಗಾಗಿ ಪ್ರಾಯೋಜಕರಿಂದ ಪಡೆದುಕೊಳ್ಳುತ್ತಿದ್ದ ಹಣದ ಪ್ರತಿಯೊಂದು ಪೈಸೆಗೂ ಲೆಕ್ಕಕೊಟ್ಟು ಉಳಿದ ಹಣವನ್ನು ಹಿಂದಿರುಗಿಸುತ್ತಿದ್ದರು.

ಸದಾ ಕೆಲಸವನ್ನಷ್ಟೇ ಬಯಸಿದ, ಮಾಡಿದ ಕರ್ಮಯೋಗಿ ಸಲೀಂ ಆಲಿ. ಅದಕ್ಕಾಗಿ ತಮ್ಮ ಆರೋಗ್ಯವನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಿದ್ದರು. ತಮ್ಮ ಜೀವನದ ಕೊನೆಯ ವರ್ಷದವರೆಗೂ ಕ್ಷೇತ್ರಕಾರ್ಯ ಮಾಡುತ್ತಿದ್ದರು. ತಮ್ಮ ಆರೋಗ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಒಮ್ಮೆ ಕೆಲವರು ತಮ್ಮ ಕ್ಷೇತ್ರಕಾರ್ಯಕ್ಕೆ ಸಲೀಂ ಆಲಿ ಅವರನ್ನು ಕರೆಯಬೇಕೆಂದು ಬಯಸಿ, ಈ ವಯಸ್ಸಿನಲ್ಲಿ ಅವರಿಗೆ ಕ್ಷೇತ್ರಕಾರ್ಯ ಕಷ್ಟವಾಗಬಹುದೆಂದು ಭಾವಿಸಿ ಸಲಹೆಯನ್ನಷ್ಟೇ ಕೇಳೋಣ ಎಂದು ತೀರ್ಮಾನಿಸಿ ಇವರಲ್ಲಿಗೆ ಬಂದಾಗ, ಸಲೀಂ ಆಲಿ ಸೈಬೀರಿಯಾದ ಕೊಕ್ಕರೆಗಳನ್ನು ಹುಡುಕಿಕೊಂಡು ದುರ್ಗಮ ಹಿಮಾಲಯದ ಬೆಟ್ಟಗಳಲ್ಲಿ ಅಲೆಯುತ್ತಿದ್ದರು! ಆಗ ಅವರ ವಯಸ್ಸು 84. ಗುಜರಾತಿನ ವಾನ್ಸ್ಡ ರಾಷ್ಟ್ರೀಯ ಉದ್ಯಾನವನದಲ್ಲಿ ಕೈಗೊಂಡ ಕ್ಷೇತ್ರಕಾರ್ಯ ಅವರ ಜೀವನದ ಕೊನೆಯದು. ಆಗ ಅವರ ವಯಸ್ಸು 90 ದಾಟಿತ್ತು.

ಸ್ವಲ್ಪ ಕಾಲ ಪ್ರಾಸ್ಟೇಟ್ ಕ್ಯಾನ್ಸರ್‍ನಿಂದ ಬಳಲಿದ ಸಲೀಂ ಆಲಿ, ಜೂನ್ 20, 1987ರಂದು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top