ಶ್ರೀ ರಾಮಕೃಷ್ಣ ಪರಮಹಂಸರು ಗಂಟಲು ಕಾನ್ಸರ್ ನಿಂದ ಅಸುನೀಗಿದರು ಎಂಬುದು ಶ್ರೀ ರಾಮಕೃಷ್ಣರ ಬಗ್ಗೆ ಓದಿದ ಪ್ರತಿಯೊಬ್ಬರಿಗೂ ತಿಳಿದ ವಿಚಾರ. ಶ್ರೀ ರಾಮಕೃಷ್ಣರು ತೀವ್ರ ಗಂಟಲು ಕ್ಯಾನ್ಸರ್’ನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ರಾಮಕೃಷ್ಣರ ಈ ವ್ಯಾಧಿ ಸಾಂಕ್ರಾಮಿಕವಾದದ್ದು, ಅವರ ಬಳಿ ಸುಳಿದರೆ ವ್ಯಾಧಿ ನಮಗೂ ಹರಡಬಹುದು ಎಂದು ಬಹಳಷ್ಟು ಜನರು ಆತಂಕಗೊಂಡಿದ್ದರು. ಅಷ್ಟೇ ಅಲ್ಲ, ರಾಮಕೃಷ್ಣರ ಆತ್ಮೀಯ ಶಿಷ್ಯರು ಕೂಡ ರಾಮಕೃಷ್ಣರಿಗೆ ಬಂದ ಕಾಯಿಲೆ ನಮಗೂ ಅಂಟಬಹುದೆಂದು ಹೆದರಿ ಅವರ ಸೇವೆ ಮಾಡಲು ಹಿಂಜರಿಯತೊಡಗಿದರು.
ಇದನ್ನು ದೂರದಿಂದಲೇ ನೋಡಿದ ಶ್ರೀ ರಾಮಕೃಷ್ಣರ ಪ್ರಿಯ ಶಿಷ್ಯ ಸ್ವಾಮಿ ವಿವೇಕಾನಂದರು ಬಹಳ ನೊಂದುಕೊಂಡು ತಮ್ಮ ಆರಾಧ್ಯ ಗುರುವನ್ನು ಕಾಡುತ್ತಿರುವ ವ್ಯಾಧಿ ಸಾಂಕ್ರಾಮಿಕ ರೋಗವಲ್ಲವೆಂದು ನಿರೂಪಿಸಲು ಎಲ್ಲ ಸಹಶಿಷ್ಯರನ್ನು ಕರೆದುಕೊಂಡು ನೇರವಾಗಿ ಶ್ರೀ ರಾಮಕೃಷ್ಣರ ಕೋಣೆಗೆ ಹೋಗಿ, ಪರಮಹಂಸರು ಕುಡಿದು ಪಕ್ಕದಲ್ಲಿ ಇಟ್ಟಿದ್ದ ಎಂಜಲು ಬೆರೆತಿದ್ದ ಗಂಜಿಯ ಬಟ್ಟಲನ್ನು ಎತ್ತಿ ಗಟಗಟನೆ ಕುಡಿದರು. ಶ್ರೀ ರಾಮಕೃಷ್ಣರ ಈ ಕಾಯಿಲೆ ಅಂಟುರೋಗವಾಗಿದ್ದಲ್ಲಿ ನನಗೂ ಅದು ಹರಡಲಿ, ಅದಕ್ಕೆ ನಾನೇ ಮೊದಲು ಬಲಿಯಾಗಲು ಸಿದ್ದ ಎಂದುಬಿಟ್ಟರು. ಪಕ್ಕದಲ್ಲೇ ನಿಂತಿದ್ದ ಸಹಶಿಷ್ಯರೆಲ್ಲ ಬೆಕ್ಕಸ ಬೆರಗಾಗಿದ್ದಲ್ಲದೇ ತಮ್ಮ ಬಗೆ ತಾವೇ ನಾಚಿಕೆ ಪಟ್ಟುಕೊಂಡರು.
ಹೌದು, ಸ್ವಾಮಿ ವಿವೇಕಾನಂದರು ಒಬ್ಬ ಮಹಾನ್ ಶಿಷ್ಯ ಎಂದು ಹೇಳಲು ಇದಕ್ಕಿಂತ ಬೇರೆ ದೃಷ್ಟಾಂತ ಬೇಕೇ? ಗುರು ಶಿಷ್ಯರ ನಡುವಿನ ಭಾಂದವ್ಯ ಮರಿಚಿಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸ್ವಾಮಿ ವಿವೇಕಾನಂದ ಮತ್ತು ಶ್ರೀ ರಾಮಕೃಷ್ಣರ ಅಪರೂಪದಲ್ಲಿಯೇ ಅಪರೂಪವೆನ್ನಬಹುದಾದ ಒಡನಾಟ ಸರ್ವಕಾಲಕ್ಕೂ ಮಾದರಿಯಾಗಿ ನಿಲ್ಲುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
