fbpx
ವಿಶೇಷ

ಶಿವಗಂಗೆ ಬೆಟ್ಟದ ತುತ್ತ ತುದಿಯನ್ನು ‘ಶಾಂತಲಾ ಡ್ರಾಪ್’ ಎಂದು ಕರೆಯುವುದರ ಹಿಂದಿರುವ ರೋಚಕ ಕಥೆಯನ್ನು ಒಮ್ಮೆ ಓದಿ.

ಹೊಯ್ಸಳರ ಸುಪ್ರಸಿದ್ಧ ದೊರೆ ವಿಷ್ಣುವರ್ಧನ ಪಟ್ಟದರಸಿಯೇ ನಾಟ್ಯರಾಣಿ ಶಾಂತಲಾ ದೇವಿ. ಇಂದಿಗೂ ತನ್ನ‌ ಅಪ್ರತಿಮ ನಾಟ್ಯಕಲೆಯ ಮೂಲಕ ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿರುವ ರಾಣಿ ಶಾಂತಲಾ ದೇವಿ ಇಂದಿಗೂ ಎಷ್ಟೋ ನೃತ್ಯಗಾರರಿಗೆ ಸ್ಪೂರ್ತಿಯ ಚಿಲುಮೆ. ಹೀಗಿರುವಾಗ ನಾಟ್ಯರಾಣಿ ಶಾಂತಲಾ ದೇವಿ ಹೆಸರನ್ನು ‘ಶಿವಗಂಗೆ’ ಬೆಟ್ಟದ ತುತ್ತ ತುದಿಗೆ ಏಕೆ ಇಟ್ಟಿದ್ದಾರೆ ಅನ್ನುವ ಸಹಜ ಕುತೂಹಲ ಮನಃಪಟಲದಲ್ಲಿ ಮೂಡುವುದು ಸಹಜ.

ಒಂದು ದಿನ ತನ್ನ ಮಂತ್ರಿ ಗಂಗರಾಜುವಿನೊಂದಿಗೆ ಹೊಯ್ಸಳ ರಾಜ ವಿಷ್ಣುವರ್ಧನ ಹೊರ ಸಂಚಾರಕ್ಕೆ ಬಂದಿರುತ್ತಾನೆ . ಹೊರಸಂಚಾರಕ್ಕೆ ತಡವಾಗಿ ಬಂದಿದ್ದರಿಂದ ಕತ್ತಲು ಆವರಿಸಿ ಬಿಡುತ್ತದೆ ಹೀಗಾಗಿ ಹೊರಸಂಚಾರಕ್ಕೆ ಬಂದ ಸುತ್ತಮುತ್ತಲಿನ ಜಾಗದಲ್ಲೇ ಎಲ್ಲಾದರೂ ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ಮಂತ್ರಿ ಗಂಗರಾಜುವಿಗೆ ರಾಜ ವಿಷ್ಣುವರ್ಧನ ಆದೇಶಿಸುತ್ತಾನೆ. ರಾಜನ ಅಪ್ಪಣೆಯಂತೆ ಮಂತ್ರಿ ಗಂಗರಾಜು ಶಿವಗಂಗೆ ಬೆಟ್ಟದ ಕೆಳಗೆ ರಾಜ ವಿಷ್ಣುವರ್ಧನ ತಂಗಲು ಬೇಕಾದ ಎಲ್ಲಾ ಸೌಕರ್ಯಗಳನ್ನೆಲ್ಲ ಸಿದ್ಧಪಡಿಸುತ್ತಾನೆ. ಹೊರಸಂಚಾರದಿಂದ ದಣಿದಿದ್ದ ರಾಜ ಇನ್ನೇನು ನಿದ್ರಾ ದೇವಿಯ ತೆಕ್ಕೆಗೆ ಬೀಳಬೇಕು ಅನ್ನುವಷ್ಟರಲ್ಲಿ ಬೆಟ್ಟದ ಮೇಲಿಂದ ಗೆಜ್ಜೆಯ ಸದ್ದು ಗಾಳಿಯಲಿ ತೇಲಿ ಬಂದು ರಾಜನ ಕರ್ಣಕುಂಡಲಗಳನ್ನು ಮತ್ತು ಮನಸ್ಸನ್ನು ಮುದಗೊಳಿಸುತ್ತದೆ. ಅಸಲಿಗೆ ಬೆಟ್ಟದ ಮೇಲೆ ನಾಟ್ಯ ರಾಣಿ ಶಾಂತಲಾ ನೃತ್ಯ ಮಾಡುತ್ತಿರುತ್ತಾಳೆ. ಗೆಜ್ಜೆಯ ಸದ್ದಿಗೆ ಮಾರು ಹೋದ ರಾಜ ವಿಷುವರ್ಧನ ಕೂಡಲೇ ಮಂತ್ರಿಯನ್ನು ಕರೆದು ಮೇಲಿಂದ ಹೇಗೆ ಗೆಜ್ಜೆ ಸದ್ದು ಬರುತ್ತಿದೆ ತಿಳಿದುಕೊಂಡು ಬಾ ಎಂದು ಹೇಳಿ ಕಳಹಿಸುತ್ತಾನೆ. ರಾಜನ ಆಜ್ಞೆಯಂತೆ ಶಿವಗಂಗೆ ಬೆಟ್ಟದ ಮೇಲೆ ತೆರಳಿದ ಮಂತ್ರಿ ಗಂಗರಾಜು ಮರಳಿ ಬಂದು ಅಲ್ಲಿ ನೃತ್ಯಾಭ್ಯಾಸ ನಡೆಯುತ್ತಿದೆ ಎಂದು ತಿಳಿಸುತ್ತಾನೆ. ಕುತೂಹಲಭರಿತನಾದ ರಾಜ ವಿಷ್ಣುವರ್ಧನ ಖುದ್ದಾಗಿ ತಾನೇ ಶಿವಗಂಗೆ ಬೆಟ್ಟದ ಮೇಲೆ ಹೋಗುತ್ತಾನೆ. ಬೆಟ್ಟದ ಮೇಲೆ ಮನಮೋಹಕವಾಗಿ ನೃತ್ಯ ಮಾಡುತ್ತಿದ್ದ ನಾಟ್ಯರಾಣಿ ಶಾಂತಲಾಳ ಕಂಡ ರಾಜ ಬೆಕ್ಕಸ ಬೆರಗಾಗಿದ್ದಲ್ಲದೆ ಅವಳಿಗೆ ಮನಸೋತು ಅವಳನ್ನು ಪ್ರೀತಿಸಿ ಮುಂದೆ ಅವಳನ್ನೇ ವಿವಾಹವಾಗಿ ಪಟ್ಟದರಸಿಯನ್ನಾಗಿ ಮಾಡಿಕೊಳ್ಳುತ್ತಾನೆ.

ಹೀಗಿರುವಾಗ ಒಂದು ದಿನ ರಾಜ ವಿಷುವರ್ಧನ ತನ್ನ ಅರಮನೆಯಲ್ಲಿ ನಾಟ್ಯ ಕಾರ್ಯಕ್ರಮವನ್ನು ಏರ್ಪಡಿಸಿ ನೃತ್ಯ ಮಾಡುವಂತೆ ತನ್ನ ಪಟ್ಟದರಸಿ ಶಾಂತಲಾ ದೇವಿಯನ್ನು ಕೇಳಿಕೊಳ್ಳುತ್ತಾನೆ. ರಾಜನೂ, ಪತಿಯೂ ಆದ ವಿಷ್ಣುವರ್ಧನನ್ನು ಸಂತೋಷಪಡಿಸುವುದು ನಿಜವಾದ ಧರ್ಮ ಎಂದು ಭಾವಿಸಿದ ಶಾಂತಲಾ ದೇವಿ ನೃತ್ಯ ಮಾಡಲು ಒಪ್ಪಿಗೆ ಸೂಚಿಸುತ್ತಾಳೆ. ನಾಟ್ಯರಾಣಿ ಶಾಂತಲಾ ದೇವಿಯ ನೃತ್ಯ ಕಾರ್ಯಕ್ರಮವನ್ನು ನೋಡಲು ನೆರದಿದ್ದ ಪ್ರತಿಯೊಬ್ಬರೂ ಶಾಂತಲಾ ದೇವಿಯ ನೃತ್ಯಕ್ಕೆ ತಲೆದೂಗುತ್ತಾರೆ. ಈ ಮದ್ಯೆ ಶಾಂತಲಾಳ ನೃತ್ಯವನ್ನು ಕಣ್ತುಂಬಿಕೊಂಡ ಮಹಾನ್ ಶಿಲ್ಪಿ ಜಕಣಾಚಾರಿಯು ಅವಳ ನೃತ್ಯಕ್ಕೆ ಮನಸೋತು ಆಕೆಯ ಹತ್ತಿರ ಬಂದು ನಿನ್ನ ತರಹದ ಶಿಲ್ಪವೊಂದನ್ನು ಕೆತ್ತಬೇಕೆಂದಿದ್ದೇನೆ ಅದಕ್ಕೆ ನಿನ್ನ ಒಪ್ಪಿಗೆ ಇದೆಯೇ? ಎಂದು ಕೇಳುತ್ತಾನೆ. ಜಕಣಾಚಾರಿಯ ಈ ಮಾತಿಗೆ ಹಿಂದೂ-ಮುಂದು ಯೋಚಿಸದೆ ಹಾಗೂ ಪತಿ ವಿಷ್ಣುವರ್ಧನನ ಅನುಮತಿಯೂ ಸ್ವೀಕರಿಸಿದೆ ರಾಣಿ ಶಾಂತಲಾ ಒಪ್ಪಿಗೆ ಸೂಚಿಸಿಬಿಡುತ್ತಾಳೆ.

ತನ್ನ ಅನುಮತಿ ಇಲ್ಲದೆ ಜಕಣಾಚಾರಿಯ ಮಾತಿಗೆ ಒಪ್ಪಿದ ಶಾಂತಲಾ ದೇವಿಯ ಮೇಲೆ ರಾಜ ವಿಷ್ಣುವರ್ಧನ ಕೋಪಗೊಳ್ಳುತ್ತಾನೆ ಅಷ್ಟೇ ಅಲ್ಲದೆ ಜಕಣಾಚಾರಿಯ ಮಾತಿಗೆ ಅಸಮ್ಮತಿ ಸೂಚಿಸು ಎಂದು ರಾಣಿಗೆ ಹೇಳಿಬಿಡುತ್ತಾನೆ. ಆದರೆ ಶಾಂತಲಾ ದೇವಿ ರಾಜನ ಮಾತನ್ನು ಧಿಕ್ಕರಿಸಿ ,ರಾಜನಿಗೆ ಗೊತ್ತಿಲ್ಲದ ಹಾಗೆ ಜಕಣಾಚಾರಿಯನ್ನು ಭೇಟಿ ಮಾಡಿ ನೃತ್ಯ ಪ್ರದರ್ಶನದ ಭಂಗಿಗಳನ್ನು ನೀಡಿ ಶಿಲಾಬಾಲಕಿಯ ರೂಪು ಕೊಡಲು ಜಕಣಾಚಾರಿಗೆ ನೆರವಾಗುತ್ತಾಳೆ. ಈ ವಿಷಯವನ್ನು ಮಂತ್ರಿ ಗಂಗರಾಜನ ಮೂಲಕ ತಿಳಿದ ರಾಜ ವಿಷ್ಣುವರ್ಧನ ಅವಳನ್ನು ದ್ವೇಷಿಸಲು ಆರಂಭಿಸುತ್ತಾನೆ.

ವಿಷ್ಣುವರ್ಧನ ತನ್ನನ್ನು ದ್ವೇಷಿಸುತ್ತಿರುವುದನ್ನು ಮನಗಂಡ ಶಾಂತಲಾ ದೇವಿಯು ತನ್ನ ಆಹಾರವನ್ನು ತೊರೆದು ಉಪವಾಸ ಪ್ರಾರಂಭಿಸುತ್ತಾಳೆ. ನಂತರ ಅವಳು ಒಂದು ದಿನ ತನ್ನ ತವರೂರಾದ ಶಿವಗಂಗೆಯ ಸ್ವಾಮಿಯ ದರ್ಶನ ಪಡೆಯಲು ಶಿವಗಂಗೆ ಬೆಟ್ಟವನ್ನು ಏರುತ್ತಾಳೆ . ಅಲ್ಲಿ ಸ್ವಾಮಿಯ ದರ್ಶನ ಪಡೆದ ನಂತರ ಒಂದು ಕಡಿದಾದ ಜಾಗದಿಂದ ಬಿದ್ದು ಅಸು ನೀಗುತ್ತಾಳೆ. ಅಂದು ನಾಟ್ಯ ರಾಣಿ ಶಾಂತಲಾ ದೇವಿ ನಿಂತ ಕಡಿದಾದ ಜಾಗವೇ ಅಥವಾ ತುತ್ತ ತುದಿಯೇ ಇಂದಿನ ಶಾಂತಲಾ ಡ್ರಾಪ್.

ಶಿವಗಂಗೆ ಬೆಟ್ಟದ ತುತ್ತ ತುದಿಯನ್ನು ಶಾಂತಲಾ ಡ್ರಾಪ್ ಎಂದು ಕರೆಯುವುದರ ಹಿಂದೆ ಮೂರ್ನಾಲಕ್ಕು ಕತೆಗಳಿದ್ದು, ಅದರಲ್ಲಿ ಮೇಲಿನ ಕತೆ ಮುಖ್ಯವಾದುದ್ದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top