fbpx
ಸಮಾಚಾರ

#ElevateMosa ಕನ್ನಡಿಗರ ಕೋಟಿ ಕೋಟಿ ದುಡ್ಡು ಹೊರರಾಜ್ಯದವರ ಪಾಲು, ಮಾಜಿ ಐಟಿಬಿಟಿ ಇಲಾಖೆ ಮಂತ್ರಿ ಎಸ್.ಆರ್ ಪಾಟೀಲ್ ಅವರ ಮಾತಿಗೂ ಇರಲಿಲ್ಲ ಕಿಮ್ಮತ್ತು

ಬೆಚ್ಚಿಬೀಳಿಸುವ ಸುದ್ದಿಯೇನೆಂದರೆ ಎಲಿವೇಟ್ ಮೋಸ ಇಂದು ನೆನ್ನೆಯದಲ್ಲ 2016 ರ ಮೇ ತಿಂಗಳಲ್ಲಿ ಹೊರಡಿಸಿದ್ದ ಟಿಪ್ಪಣಿಯಲ್ಲಿ ಕೆಬಿಟ್ಸ್ ಅಂಗಸಂಸ್ಥೆಯಾದ ಬೆಂಗಳೂರಿನ ಬಯೋ ಇನೊವೇಟಿವ್ ಕೇಂದ್ರ ಸಂಸ್ಥೆಯು ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆಯಾಗದೆ ಇರುವುದರಿಂದ ಸಂಸ್ಥೆಯು ಕಾನೂನುಬಾಹಿರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

 

 

ಆದರೂ ಈ ಟಿಪ್ಪಣಿಯನ್ನು ಗಾಳಿಗೆ ತೂರಿ ವರ್ಷಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಾ ಬಂದಿದೆ.ಐಟಿಬಿಟಿ ಇಲಾಖೆಯ ಹಗರಣಗಳು ಕೆದಕಿದಷ್ಟು ಹೊರಗೆ ಬರುತ್ತಿವೆ ದೊಡ್ಡ ದೊಡ್ಡ ಮಂದಿಗಳಿಂದ ಹಿಡಿದು ಕಾರ್ ಡ್ರೈವರ್ ವರೆಗೂ ಹಗರಣಗಳನ್ನು ಮತ್ತಷ್ಟು ಬಿಚ್ಚಿಡುತ್ತೇವೆ ಕಾದು ನೋಡಿ.

ಏನಿದು #ELEVATEMOSA
ಹೊಸ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆ ಬೆಳವಣಿಗೆಗೆ ಸಹಕಾರಿ ಎನಿಸಿರುವ ನವೋದ್ಯಮ (ಸ್ಟಾರ್ಟ್‌ಅಪ್‌)ಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಸರ್ಕಾರದ
ಜೈವಿಕ ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನ ಇಲಾಖೆ ಆರಂಭಿಸಿರುವ ‘ಎಲಿವೇಟ್‌’ ಕಾರ್ಯಕ್ರಮ ಕರ್ನಾಟಕ ಸರ್ಕಾರದ ಹಣದಿಂದ ಶುರುವಾಗಿರುವ ಕಾರ್ಯಕ್ರಮ ಆದರೆ ಇದರ ಉಪಯೋಗ ನಿಜವಾಗಿಯೂ ರಾಜ್ಯಕ್ಕೆ , ಕನ್ನಡಿಗರಿಗೆ ಆಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ .

‘ಎಲಿವೇಟ್‌-2019’ ಕಾರ್ಯಕ್ರಮದಲ್ಲಿ ಕರ್ನಾಟಕದ ದುಡ್ಡು ಹೊರರಾಜ್ಯಗಳ ಜಾತ್ರೆ ಎನ್ನುವ ಹಾಗೆ ಎಲಿವೇಟ್ ಕಾರ್ಯಕ್ರಮ ರೂಪುಗೊಂಡಿದೆ , ದೇಶದ ಯಾವುದೇ ರಾಜ್ಯದಲ್ಲಿ ನವೋದ್ಯಮಗಳಿಗೆ ಫಂಡಿಂಗ್ ನೀಡುವ ಪ್ರಕ್ರಿಯೆ ಜಾರಿಯಿಲ್ಲ ಆದ್ರೆ ಹೊರರಾಜ್ಯದ ಯಾವುದೇ ಕಂಪನಿಗಳು ಬಂದು ಇಲ್ಲಿ ನೊಂದಣಿ ಮಾಡಿಸಿ ‘ಎಲಿವೇಟ್‌’ ಕಾರ್ಯಕ್ರಮದ ಮೂಲಕ ತಮ್ಮ ಕಂಪನಿಗಳಿಗೆ ಹಣ ಪಡೆಯಬಹುದಾಗಿದೆ.

‘ಎಲಿವೇಟ್‌’ ಕಾರ್ಯಕ್ರಮಕ್ಕೆ ನೋಂದಣೆ ಮಾಡಬೇಕೆಂದರೆ ಕೆಲವು ನಿಯಮಗಳಿವೆ ಅವುಗಳೆಂದರೆ

1. ಕರ್ನಾಟಕದಲ್ಲಿ ಒಂದು ಘಟಕವಾಗಿ (ಪ್ರೈ.ಲಿ.ಟಿ.ಡಿ / ಒಪಿಸಿ, ಎಲ್‌ಎಲ್‌ಪಿ / ಪಾಲುದಾರಿಕೆ, ಮಾಲೀಕತ್ವ) ಕಂಪನಿಯನ್ನು ನೋಂದಾಯಿಸಿಕೊಳ್ಳಬೇಕು.
ಕಂಪನಿ ನೋಂದಣಿಯಾದ ದಿನಾಂಕದಿಂದ ವಹಿವಾಟಿನ ಪ್ರಕಾರ ಒಟ್ಟು ಆದಾಯವು 50 ಕೋಟಿ ರೂ.ಗಿಂತ ಕಡಿಮೆಯಿರಬೇಕು.
ಕನಿಷ್ಠ 50% ಅರ್ಹ ಉದ್ಯೋಗಿಗಳನ್ನು ಕರ್ನಾಟಕದಲ್ಲಿ ನೇಮಿಸಬೇಕು.

ಆದರೆ ಈ ನಿಯಮಗಳು ಕೇವಲ ಗಾಳಿಯಲ್ಲಿ ಮಾತ್ರ, ಇದು ಕನ್ನಡಿಗರಿಗೆ ಮಾಡುತ್ತಿರುವ ‘ElevateMosa’

ಆದರೆ ಈ ನಿಯಮಗಳು ಕೇವಲ ನಿಮಿತ್ತ ಮಾತ್ರ ಯಾಕೆಂದರೆ ಅನೇಕ ಸ್ಪರ್ಧಿಗಳು ವರ್ಷಕ್ಕೆ ಒಂದರಂತೆ ಹೊಸ ಹೊಸ ಕಂಪನಿಗಳನ್ನು ಈ ಕಾರ್ಯಕ್ರಮದಲ್ಲಿ ದುಡ್ಡು ಪಡೆಯುವ ನಿಟ್ಟಿನಲ್ಲೇ ಕರ್ನಾಟಕದಲ್ಲಿ ನೋಂದಾಯಿಸಿಕೊಂಡು ಮತ್ತೆ ಮತ್ತೆ ಸ್ಪರ್ಧೆಗೆ ಬರುತ್ತಿದ್ದಾರೆ.

2. ನೋಂದಣಿಯಾಗಿ ಕೇವಲ ಒಂದೇ ತಿಂಗಳಾಗಿದ್ದರು ಸಹ ಈ ಸ್ಪರ್ಧೆಗೆ ಭಾಗವಹಿಸಬಹುದು.

3. ಕನಿಷ್ಠ 50% ಅರ್ಹ ಉದ್ಯೋಗಿಗಳನ್ನು ಕರ್ನಾಟಕದಲ್ಲಿ ನೇಮಿಸಬೇಕು ಎಂಬ ಮತ್ತೊಂದು ನಿಯಮ ಕೇವಲ ನೆಪ ಮಾತ್ರಕ್ಕೆ ಇದನ್ನು ಅಳೆಯಲು ಯಾವುದೇ ಮಾನದಂಡವಿಲ್ಲ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಐಷಾರಾಮಿ ಹೋಟೆಲ್ ಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಹೊರ ರಾಜ್ಯದಿಂದ ಬರುವ ಮಂದಿಗೆ ಇಲ್ಲಿನ ಕನ್ನಡಿಗರು ಕಟ್ಟಿದ ಕೋಟಿ ಕೋಟಿ ತೆರಿಗೆ ಹಣವನ್ನು ಕೊಟ್ಟು ಕಳುಹಿಸುವುದು ಯಾವ ಪುರುಷಾರ್ಥಕ್ಕೆ ? ರಾಜ್ಯದಲ್ಲಿ ಸೃಷ್ಟಿಯಾಗುವ ಕೆಲಸಗಳು ಹಾಗು ಉದ್ಯಮಗಳಲ್ಲಿ ಕನ್ನಡಿಗರೇ ಸಿಂಹಪಾಲನ್ನು ಪಡೆಯಬೇಕು ಎಂಬ ಕೂಗು ಬಹಳವಾಗಿದೆ ಆದರೂ ಸಹ ಮಾಹಿತಿ ತಂತ್ರಜ್ಞಾನ ಹಾಗು ಜೈವಿಕ ತಂತ್ರಜ್ಞಾನ ಇಲಾಖೆ ಎಲ್ಲವನ್ನು ಗಾಳಿಗೆ ತೂರಿ ಹೊರರಾಜ್ಯದವರಿಗೆ ಮಣೆ ಹಾಕುತ್ತಿರುವುದು ಅನೇಕ ಕರ್ನಾಟಕದ ಅಭ್ಯರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

 

ಕರ್ನಾಟಕ, ಸಂಸ್ಕೃತಿ ಹಾಗು ಪ್ರವಾಸೋದ್ಯಮ ವಿಭಾಗದಲ್ಲಿ ಜಡ್ಜ್ ಗಳಿಗೆ ಇಲ್ಲಿನ ಸಂಸ್ಕೃತಿಯ ಅರಿವಿಲ್ಲ

ಕತ್ತೆಗೆ ಗೊತ್ತೇ ಕಸ್ತೂರಿಯ ಘಮಲು ಎನ್ನುವ ಹಾಗೆ ಎಲ್ಲವನ್ನು ತಾಂತ್ರಿಕ ಜ್ಞಾನದಿಂದಲೇ ನೋಡುವುದು ಸರಿಯೇ ? ಕರ್ನಾಟಕ ಮತ್ತು ಸಂಸ್ಕೃತಿ ಹಾಗು ಕರ್ನಾಟಕ ಪ್ರವಾಸೋದ್ಯಮ ವಿಭಾಗದಲ್ಲಿ ಸ್ಪರ್ಧೆಗಳು ನಡೆದರೆ ತಾಂತ್ರಿಕ ಜ್ಞಾನ ಹೊಂದಿರುವ ಜಡ್ಜ್ ಗಳ ಜೊತೆಯಲ್ಲಿ ಈ ನಾಡಿನ ಅರಿವು, ಸಂಸ್ಕೃತಿ, ಭಾಷಾಭಿಮಾನ ಹೊಂದಿರುವ ಸಾಹಿತಿಗಳನ್ನು, ಬರಹಗಾರರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಆಯಾ ವಿಭಾಗಗಳಿಗೆ ಆಯಾ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಜಡ್ಜ್ ಗಳನ್ನು ಆಯ್ಕೆ ಮಾಡಿ ಸ್ಪರ್ಧಿಗಳನ್ನು ಆರಿಸುವಾಗ ಕೆಲವು ಮಾನದಂಡಗಳನ್ನು, ರೂಪುರೇಷೆಗಳನ್ನು ನೀಡಬೇಕಾಗುತ್ತದೆ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೇ ಮಾತ್ರ ಸ್ಪರ್ಧೆ ಸಂಪೂರ್ಣವಾಗುತ್ತದೆ ,ಉ.ದಾ: ಕೃಷಿ ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತಿದ್ದರೆ ಗದ್ದೆಗೆ ಇಳಿದು
ಉಳಿಮೆ ಮಾಡುವ ಕೃಷಿಕರು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳು ಜೊತೆಗೆ ತಾಂತ್ರಿಕ ಪರಿಣಿತಿ ಹೊಂದಿರುವ ಜಡ್ಜ್ ಗಳು ಆಯ್ಕೆ ಸಮಿತಿಯಲ್ಲಿ ಕೂರಬೇಕಾಗುತ್ತದೆ.

ಹಾಗೆಯೇ ಕರ್ನಾಟಕ ಮತ್ತು ಸಂಸ್ಕೃತಿ ಹಾಗು ಕರ್ನಾಟಕ ಪ್ರವಾಸೋದ್ಯಮದ ವಿಭಾಗ ಸುತ್ತಿನಲ್ಲಿ ಪಾಲ್ಗೊಳ್ಳುವ ಜಡ್ಜ್ ಗಳಿಗೆ ಕನ್ನಡ ಭಾಷೆ ಗೊತ್ತಿರಬೇಕು ಎಂಬುವ ಕನಿಷ್ಠ ಜ್ಞಾನ ಕೂಡ ಇಲಾಖೆಗೆ ಇಲ್ಲದಿರುವುದು ಖೇದನೀಯ, ಇಂತಹ ಜಡ್ಜ್ ಗಳು ನಮ್ಮ ಭಾಷೆಯ ಸಂಸ್ಕೃತಿಯ ಘಮಲು ಇಲ್ಲದೇ ಇರುವವರು ಇಂತವರು ಈ ಸೀಟ್ ನಲ್ಲಿ ಕುಳಿತು ನ್ಯಾಯಯುತವಾಗಿ ಆಯ್ಕೆ ಮಾಡಲು ಸಾಧ್ಯವೇ ಎಂದು ಅಭ್ಯರ್ಥಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಆಯ್ಕೆ ಪಟ್ಟಿಯಲ್ಲಿ ಕೊಟ್ಟ ಸ್ಕೋರ್ ಗಳು ಪಾರದರ್ಶಕವಾಗಿರಬೇಕು

ಮೂರು ಸುತ್ತಿನಲ್ಲಿ ನಡೆಯುತ್ತಿದೆ ಎನ್ನಬಹುದಾದ ಈ ಸ್ಪರ್ಧೆಯಲ್ಲಿ ಇತರ ಎಲ್ಲ ಪರೀಕ್ಷೆಗಳಂತೆ ಪ್ರತಿ ಸುತ್ತಿನ ಸ್ಕೋರ್ ಗಳು ಪಾರದರ್ಶಕವಾಗಿ ಸ್ಪರ್ಧಿಗಳಿಗೆ ಕಾಣಸಿಗಬೇಕು ಹಾಗೆಯೆ ಯಾವ ಕಾರಣಕ್ಕೆ ಅವರ ಮುಂದಿನ ಸುತ್ತಿಗೆ ಅನರ್ಹಗೊಂಡಿದ್ದಾರೆ ಎಂಬ ಮಾಹಿತಿ ಅವರಿಗೆ ಸಿಗಬೇಕು, ಮಾನದಂಡಗಳ ಪ್ರಕಾರ ಯಾವ ಅಂಶದಿಂದ ಅವರು ಸೊತ್ತಿದ್ದಾರೆ ಎಂದು ತಿಳಿದಾಗ ಮಾತ್ರ ಮುಂದೆ ಸ್ಪರ್ಧಿಗಳು ತಮ್ಮನ್ನು ತಾವು ಅವಲೋಕಿಸಿ ಸರಿ ಪಡಿಸಿಕೊಂಡು ಮುಂದೆ ಸಾಗಬಹುದು , ಸ್ಪರ್ಧೆಯಲ್ಲಿ ಆಯ್ಕೆ ಮಾಡಿ ಕೇವಲ ಹೆಸರಿಗೆ ಮಾತ್ರ ಐಷಾರಾಮಿ ಕಾರ್ಯಕ್ರಮಗಳನ್ನು ಮಾಡಿ ಕೈತೊಳೆದುಕೊಂಡರೆ ಸಾಲದು,ಇಲಾಖೆಯಿಂದ ಅನ್ಯಾಯವಾಗಿ ಮುಂದೆ ಉದ್ಯಮವನ್ನೇ ಮಾಡಬಾರದು ಎಂದು ಅದೆಷ್ಟು ಜನ ಧೈರ್ಯಗೆಡಿಸಿಕೊಂಡಿದ್ದಾರೋ ತಿಳಿಯದು.

 

ಇದು ವ್ಯವಸ್ಥಿತ ಕುತಂತ್ರವೇ?

ಈಗಲಾದರೂ ಮಾಹಿತಿ ತಂತ್ರಜ್ಞಾನ ಹಾಗು ಜೈವಿಕ ತಂತ್ರಜ್ಞಾನ ಇಲಾಖೆಯ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ, ವ್ಯವಸ್ಥಾಪಕ ನಿರ್ದೇಶಕರು ಪ್ರಶಾಂತ್ ಕುಮಾರ್ ಮಿಶ್ರ ಉತ್ತರ ಕೊಡುವರೇ ಕಾದು ನೋಡಬೇಕಿದೆ, ಇಲಾಖೆಯ ನಿಲುವು ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತಾಗಿದೆ.

ಈ ವಿಭಾಗದ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ, ವ್ಯವಸ್ಥಾಪಕ ನಿರ್ದೇಶಕರು ಪ್ರಶಾಂತ್ ಕುಮಾರ್ ಮಿಶ್ರ ಇಬ್ಬರ ಉತ್ತರ ಭಾರತದವರೇ ಆಗಿದ್ದು ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಅವಕಾಶದಿಂದ ವಂಚಿತರಾಗುವಂತೆ ಮಾಡಿದ್ದಾರೆ, ಪ್ರಶಾಂತ್ ಕುಮಾರ್ ಮಿಶ್ರ ಹುದ್ದೆಗೆ ನೇಮಕಗೊಂಡು ಕೆಲವೇ ದಿನಗಳಷ್ಟೇ ಕಳೆದಿವೆ.


ಎಲಿವೇಟ್‌-2019 ರ ಆಯ್ಕೆ ಪಟ್ಟಿ ಈ ರೀತಿ ಇದೆ

ಒಟ್ಟು 729 ಸಂಸ್ಥೆಗಳು ರಾಜ್ಯ ಹಾಗು ಹೊರರಾಜ್ಯಗಳಿಂದ ನೊಂದಣೆಯಾಗಿದ್ದವು ಅದರಲ್ಲಿ ಮೈಸೂರು, ಮಂಗಳೂರು, ಕಲಬುರ್ಗಿ, ಬೆಳಗಾವಿ ಮತ್ತು ಬೆಂಗಳೂರಿನಿಂದ(ಅಂದರೆ ಹೊರರಾಜ್ಯದಿಂದ ಬಂದು ಇಲ್ಲಿ ನೊಂದಣೆ ಮಾಡಿಸಿದ್ದ ಕಂಪನಿಗಳು ಸೇರಿ ) 617 ಸಂಸ್ಥೆಗಳು ಮೊದಲ ಸುತ್ತಿಗೆ ಆಯ್ಕೆಯಾಗಿದ್ದವು ನಂತರ 275 ಸಂಸ್ಥೆಗಳು ಫೈನಲ್ಸ್ ತಲುಪಿವೆ ಇವುಗಳಲ್ಲಿ ಅಂತಿಮವಾಗಿ 100 ಕಂಪನಿಗಳನ್ನ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಮತ್ತು ಸಂಸ್ಕೃತಿ , ಟೂರಿಸಂ , ಆಗ್ರೋ , AVGC (ಆಡಿಯೋ ವಿಶುಯಲ್ ಗ್ರಾಫಿಕ್ಸ್ ) , ಜೈವಿಕ ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನ ಹೀಗೆ ಅನೇಕ ವಿಭಾಗಗಳಲ್ಲಿ ಕಂಪನಿಗಳನ್ನ ಆಯ್ಕೆ ಮಾಡಲಾಗುತ್ತದೆ ಆದರೆ ಕರ್ನಾಟಕದ ಜೈವಿಕ ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಮುನ್ನಡೆಸುತ್ತಾ ‘ಗ್ಲೋಬಲಿ ಲೋಕಲ್’ ಎನ್ನುವ ಹಾಗೆ ನಾಡಿನ ಸಂಸ್ಕೃತಿ ,ಉದ್ಯಮಶೀಲತೆ, ಭಾಷೆ, ಆದ್ಯತೆಯನ್ನು ನೀಡಬೇಕಿದ್ದ ಐಟಿ ಬಿಟಿ ಸಂಸ್ಥೆ ಇಲ್ಲಿನ ಸಂಸ್ಥೆಗಳನ್ನು ಕಡೆಗಣಿಸಿ ಹೊರರಾಜ್ಯದ ಸಂಸ್ಥೆಗಳಿಗೆ ಮಣೆ ಹಾಕಿದೆ , ಕರ್ನಾಟಕ ಮತ್ತು ಸಂಸ್ಕೃತಿ ವಿಭಾಗದಲ್ಲಿ ಕೇವಲ ಒಂದು ಕಂಪನಿಯನ್ನು ಅಂತಿಮ ಸುತ್ತಿನಲ್ಲಿ ಆಯ್ಕೆ ಮಾಡಿದೆ, ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತು ಸತ್ಯ ಎನ್ನಿಸದೆ ಇರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top