fbpx
ಸಮಾಚಾರ

ಡಿಕೆಶಿ, ಚಿದಂಬರಂ ವಿರುದ್ಧ ಒಂದೇ ಅರ್ಜಿ: EDಗೆ ಸುಪ್ರೀಂ ಕೋರ್ಟ್‌ ತರಾಟೆ

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿದೆ. ಇದರೊಂದಿಗೆ ಡಿಕೆ ಶಿವಕುಮಾರ್ ಅವರು ಬಂಧನ ಭೀತಿಯಿಂದ ಪಾರಾಗಿದ್ದಾರೆ. ಹಾಗೆಯೇ, ಡಿಕೆಶಿ ಸಂಬಂಧಿಸಿದ ಪ್ರಕರಣದಲ್ಲಿ ಬೇರೆ ಯಾರನ್ನೂ ಬಂಧಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿತು.

ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್.ಎಫ್.ನಾರಿಮನ್ ನೇತೃತ್ವದ ದ್ವಿ ಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿದೆ. ಇತ್ತ ಕರ್ನಾಟಕ ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ನೀಡಿದ ಆದೇಶವನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಡಿ.ಕೆ.ಶಿವಕುಮಾರ್ ಅರ್ಜಿ ವಿಚಾರಣೆ ಆಗುವರೆಗೂ ಹೊಸ ಸಮನ್ಸ್ ನೀಡುವಂತಿಲ್ಲ ಎಂದು ಇಡಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಕೇಂದ್ರಕ್ಕೂ ತರಾಟೆ:
ಹಾಗೆಯೇ, ಕೇಂದ್ರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿರುವ ನ್ಯಾಯಪೀಠ ಚಿದಂಬರಂ ಪ್ರಕರಣವನ್ನು ಉಲ್ಲೇಖಿಸಿ ಡಿಕೆಶಿ ಬಂಧನಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೇಲೆ ನ್ಯಾ| ನಾರಿಮನ್ ಕೋಪಗೊಂಡರು. ಸುಪ್ರೀಂ ಕೋರ್ಟ್​ಗೆ ನಿರ್ದೇಶನ ನೀಡಲು ಬರಬೇಡಿ. ಚಿದಂಬರಮ್ ಪ್ರಕರಣವನ್ನೂ ಡಿಕೆಶಿ ಪ್ರಕರಣವನ್ನೂ ತಾಳೆ ಮಾಡಬೇಡಿ. ಎಲ್ಲ ಪ್ರಕರಣಗಳನ್ನು ಒಂದೇ ಮನೋಭಾವದಿಂದ ಕಾಣೋದನ್ನು ಬಿಡಬೇಕು. ಸರರ್ಕಾದ ತನಿಖಾ ಅಧಿಕಾರಿಗಳು ಮನಸ್ಥಿತಿ ಬದಲಾಯಿಸಿಕೊಳ್ಳಿ. ಹೈಕೋರ್ಟ್ ಆದೇಶಗಳ ಮೇಲೆ ಅನುಮಾನಿಸುವುದು ಸರಿಯಲ್ಲ. ಪ್ರಕರಣವನ್ನು ಒಂದಕ್ಕೊಂದು ಜೋಡಿಸುವುದನ್ನು ಬಿಡಿ ಎಂದು ಕೇಂದ್ರ ಸರ್ಕಾರದ ಪರ ವಕೀಲರಿಗೆ ಬುದ್ಧಿ ಹೇಳಿದರು.

ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್ ಅವರನ್ನು ಸೆ.3 ರಂದು ಇಡಿ ಬಂಧಿಸಿತ್ತು. ಇದರ ನಂತರ ಡಿಕೆಶಿ 48 ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು.ಕಳೆದ ತಿಂಗಳು ಅಂತ್ಯದಲ್ಲಿ ದೆಹಲಿ ಹೈಕೋರ್ಟ್ ಶಿವಕುಮಾರ್ ಗೆ ಜಾಮೀನು ಮಂಜೂರು ಮಾಡಿತ್ತು. ಸಧ್ಯ ಸುಪ್ರೀಂ ಕೋರ್ಟ್ ಆದೇಶದಿಂದ ಮಾಜಿ ಸಚಿವ ಶಿವಕುಮಾರ್ ತುಸು ನಿರಾಳರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top