fbpx
ಸಮಾಚಾರ

ರಾಜ್ಯಸಭೆಯ 250ನೇ ಅಧಿವೇಶನದಲ್ಲಿ NCP, ಮತ್ತು BJDಯನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ.

ಇತ್ತೀಚಿಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿರುವ ಎನ್ ಸಿಪಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹಾಡಿ ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವ ಮಧ್ಯೆಯೇ, ಪ್ರಧಾನಿ ಮೋದಿ ಅವರು, ಶರದ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಬಿಜೆಡಿ ಪಕ್ಷ ಲೋಕಸಭೆಯಲ್ಲಿ ಶಿಷ್ಟಾಚಾರವನ್ನು ಕಾಪಾಡಿಕೊಂಡು ಬಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎನ್‍ಸಿಪಿ ಹಾಗೂ ಬಿಜೆಡಿ(ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ) ಎರಡೂ ಪಕ್ಷಗಳನ್ನು ನಾನು ಪ್ರಶಂಸಿಸಲು ಬಯಸುತ್ತೇನೆ ಎನ್ನುತ್ತಲೇ ಪ್ರಧಾನಿ ಮೋದಿ ರಾಜ್ಯಸಭೆಯ ಕಲಾಪದಲ್ಲಿ ಚರ್ಚೆಯನ್ನು ಆರಂಭಿಸಿದರು. ಈ ಎರಡೂ ಪಕ್ಷಗಳು ಸಂಸತ್ತಿನ ನಿಯಮಗಳನ್ನು ಅತ್ಯದ್ಭುತವಾಗಿ ಪಾಲಿಸಿವೆ. ಅವರು ಎಂದೂ ಸದನದ ಬಾವಿಗೆ ಇಳಿದು ಪ್ರತಿಭಟಿಸಿಲ್ಲ. ಆದರೂ ಅವರು ತಮ್ಮ ಅಭಿಪ್ರಾಯಗಳನ್ನು ತುಂಬಾ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ.

ಸಂಸತ್ ನಲ್ಲಿ ಯಾವುದೇ ಕೋಲಾಹಲ ನಡೆಸದೇ ವಿಷಯದ ಬಗ್ಗೆ ಹೇಗೆ ಧ್ವನಿ ಎತ್ತಬೇಕು ಎಂಬ ಬಗ್ಗೆ ಭಾರತೀಯ ಜನತಾ ಪಕ್ಷ ಸೇರಿದಂತೆ ಉಳಿದ ಪಕ್ಷಗಳು ಕೂಡಾ ಎನ್ ಸಿಪಿ ಮತ್ತು ಬಿಜೆಡಿ ಪಕ್ಷವನ್ನು ನೋಡಿ ಕಲಿಯಬೇಕು ಎಂದು ಪ್ರಧಾನಿ ಮೋದಿ ಇತರೆ ಸಂಸದರಿಗೆ ಸಲಹೆ ನೀಡಿದರು.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿರುವುದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಈ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top