fbpx
ಸಮಾಚಾರ

ಏರ್‌ಟೆಲ್, ವೊಡಾಫೋನ್ ಐಡಿಯಾ ಬಳಿಕ ಗ್ರಾಹಕರಿಗೆ ಶಾಕ್ ಕೊಟ್ಟ ಜಿಯೋ: ಕರೆ, ಡೇಟಾ ಶುಲ್ಕ ಏರಿಕೆ

ವೊಡಾಫೋನ್​ ಐಡಿಯಾ ಮತ್ತು ಭಾರತಿ ಏರ್​ಟೆಲ್​ ಹಾದಿಯನ್ನೇ ಜಿಯೋ ಟೆಲಿಕಾಂ ಕಂಪನಿ ಕೂಡ ಅನುಸರಿಸುತ್ತಿದ್ದು, ಇನ್ನು ಕೆಲವು ವಾರಗಳಲ್ಲಿ ಮೊಬೈಲ್​ ಫೋನ್​ ಕರೆ ಮತ್ತು ಡೇಟಾ ದರವನ್ನು ಕೆಲ ನಿಯಮಗಳೊಂದಿಗೆ ಏರಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಬುಧವಾರ ತಿಳಿಸಿದೆ.

ಡಿಸೆಂಬರ್ ನಿಂದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಕರೆ ಮತ್ತು ಡೇಟಾ ಶುಲ್ಕ ಹೆಚ್ಚಳ ಮಾಡುವುದಾಗಿ ಹೇಳಿದ ಒಂದು ದಿನದ ತರುವಾಯ ಜಿಯೋ ಈ ಹೇಳಿಕೆ ನೀಡಿದೆ. ಟೆಲಿಕಾಂ ಸುಂಕಗಳಲ್ಲಿ ಪರಿಷ್ಕರಣೆಗಾಗಿ ಟೆಲಿಕಾಂ ನಿಯಂತ್ರಕ ಟ್ರಾಯ್ ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಜಿಯೋ ಹೇಳಿದೆ.

“ಇತರೆ ಆಪರೇಟರ್ಸ್​ಗಳಂತೆ ನಾವು ಸರ್ಕಾರದೊಂದಿಗೆ ಕಾರ್ಯ ನಿರ್ವಹಿಸಬೇಕಾಗಿದೆ. ನಿಯಂತ್ರಣ ಮಂಡಳಿಯ ಕ್ರಮಕ್ಕೆ ಒಳಪಟ್ಟು ನಮ್ಮ ಉದ್ಯಮವನ್ನು ಬಲಗೊಳಿಸುವ ನಿಟ್ಟಿನಲ್ಲಿ ನಮ್ಮ ಟಾರಿಫ್​ಗಳನ್ನು ಮುಂದಿನ ಕೆಲ ವಾರಗಳಲ್ಲಿ ಏರಿಸಬೇಕಾಗಿದೆ. ಡಿಜಿಟಲ್ ಒಳ್ಳಗೊಳ್ಳುವಿಕೆಯ ಮೇಲೆ ಪ್ರತಿಕೂಲಕರವಾದ ಪರಿಣಾಮ ಬೀರದಂತೆ ಗುಣಮಟ್ಟದ ಸೇವೆಗೆ ನಿರಂತರ ಬಂಡವಾಳ ಹರಿವಿನ ನಿಟ್ಟಿನಲ್ಲಿ ಟಾರಿಫ್​ಗಳಲ್ಲಿ ಬದಲಾವಣೆ ಆಗಲಿದೆ” ಎಂದು ಜಿಯೋ ತಿಳಿಸಿದೆ.

ಅಂದಹಾಗೆ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಮತ್ತು ಭಾರ್ತಿ ಏರ್‌ಟೆಲ್ ಪರವಾಗಿ ಕಂಪನಿಗಳು ತಮ್ಮ ಸೇವಾ ಸುಂಕ ಯೋಜನೆಗಳನ್ನು ಡಿಸೆಂಬರ್ 1 ರಿಂದ ಹೆಚ್ಚಿಸಲಿವೆ. ಪ್ರಸ್ತುತ, ಯಾವ ಯೋಜನೆಯಲ್ಲಿ ಎಷ್ಟು ರೂಪಾಯಿಗಳನ್ನು ಹೆಚ್ಚಿಸಲಾಗುವುದು ಎಂದು ಕಂಪನಿಗಳು ಹೇಳಿಲ್ಲ.

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟು 74,000 ಕೋಟಿ ರೂ ನಷ್ಟ ಅನುಭವಿಸಿರುವುದಾಗಿ ಹೇಳಲಾಗಿದೆ. ಒಂದೊಮ್ಮೆ ಟೆಲಿಕಾಂ ವಲಯಕ್ಕೆ ಪರಿಹಾರ ಹರಿದುಬರದೆ ಹೋದಲ್ಲಿ ಮುಂದೆ ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ವೊಡಾಫೋನ್ ಸುಳಿವು ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top