fbpx
ಸಮಾಚಾರ

ವಿವಾದಿತ ಸ್ವಾಮಿ ನಿತ್ಯಾನಂದ ದೇಶದಿಂದ ಪರಾರಿ!

ಸ್ವಘೋಷಿತ ದೇವಮಾನವ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ವದಂತಿಯನ್ನು ತಳ್ಳಿಹಾಕಿದ್ದ ಅವರ ಶಿಷ್ಯರು ನಿತ್ಯಾನಂದ ಸ್ವಾಮಿಗಳು ದೀರ್ಘಕಾಲದ ತಪಸ್ಸಿಗಾಗಿ ಉತ್ತರ ಭಾರತಕ್ಕೆ ತೆರಳಿದ್ದಾರೆ ಎಂದು ಹೇಳಿದ್ದರು. ಆದರೀಗ, ವಿವಾದಿತ ಸ್ವಾಮಿ ನಿತ್ಯಾನಂದ ದೇಶ ಬಿಟ್ಟು ಹೋಗಿರುವುದನ್ನು ಗುಜರಾತ್​ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಮೂಲದ ವಿದ್ಯಾರ್ಥಿನಿಯರ ಪೋಷಕರು ನೀಡಿದ ದೂರಿನ ಅನ್ವಯ ತನಿಖೆ ನಡೆಸುತ್ತಿರುವ ಅಹಮದಾಬಾದ್‌ ಪೊಲೀಸರು, ತಕ್ಷಣಕ್ಕೆ ನಿತ್ಯಾನಂದನ್ನು ಭಾರತದಲ್ಲಿ ಹುಡುಕುವುದು ವ್ಯರ್ಥ ಪ್ರಯತ್ನ. ಕಾರಣ, ಕರ್ನಾಟಕದಲ್ಲಿ ತನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಲೇ ಆತ ಭಾರತ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ಈ ಕುರಿತು ಇದುವರೆಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಜೊತೆಗೆ ಆತನ ಗಡೀಪಾರು ಕೋರಿ ಇದುವರೆಗೆ ಕೇಂದ್ರ ಗೃಹ ಸಚಿವಾಲಯ ಅಥವಾ ಗುಜರಾತ್‌ ಪೊಲೀಸರಿಂದ ಯಾವುದೇ ಕೋರಿಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗುಜರಾತ್ ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಲ್ಲಿ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೋರ್ಟ್ ಅನುಮತಿ ನೀಡಿದರೆ ಇಂಟರ್ಪೋಲ್ ಹಾಗೂ ಇತರೆ ಏಜೆನ್ಸಿಗಳ ಮೂಲಕ ವಿದೇಶದಿಂದ ಬಂಧಿಸಿ ಭಾರತಕ್ಕೆ ಕರೆತರಲು ಪೊಲೀಸರು ಸಿದ್ಧರಿದ್ದಾರೆ ಎಂದು ಗುಜರಾತ್ ಸರ್ಕಾರ ಹೇಳಿಕೊಂಡಿದೆ.

ನಕಲಿ ಪಾಸ್‌ಪೋರ್ಟ್ ಬಳಕೆ
ಗುಜರಾತ್ ಪೊಲೀಸರ ಪ್ರಕಾರ ನಿತ್ಯಾನಂದ ಪಾಸ್‌ಪೋರ್ಟ್ ಪೊಲೀಸರ ವಶದಲ್ಲಿದೆ. ಹಾಗಿದ್ದರೆ ವಿದೇಶಕ್ಕೆ ನಿತ್ಯಾನಂದ ಪರಾರಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ನಿತ್ಯಾನಂದ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ‘ಒಂದು ವರ್ಷದ ಹಿಂದೆಯೇ ನಿತ್ಯಾನಂದನ ಪಾಸ್‌ಪೋರ್ಟ್‌ ಅವಧಿ ಮುಗಿದಿತ್ತು. ಆದ್ದರಿಂದ ಆತ ನೇಪಾಳಕ್ಕೆ ತೆರಳಿ, ಅಲ್ಲಿ ನಕಲಿ ಪಾಸ್‌ಪೋರ್ಟ್‌ ಮೂಲಕ ದಕ್ಷಿಣ ಅಮೆರಿಕದ ಈಕ್ವೆಡಾರ್‌ಗೆ ತೆರಳಿರಬಹುದು’ ಎಂದು ಮೂಲಗಳು ಹೇಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top