fbpx
ಸಮಾಚಾರ

ಅಯೋಧ್ಯಾ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್!

ಅಯೋಧ್ಯೆ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 18 ಮೇಲ್ಮನವಿ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಸೇರಿದಂತೆ ಐವರು ನ್ಯಾಯಮೂರ್ತಿಗಳ ಪೀಠ ಇಂದು ಈ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿತು.

ಒಟ್ಟು 18 ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ಐವರು ಸದಸ್ಯರ ನ್ಯಾಯಪೀಠವು ಎಲ್ಲಾ ಅರ್ಜಿಗಳನ್ನು ಬದಿಗಿರಿಸಲು ನಿರ್ಧರಿಸಿತು. ನ್ಯಾ| ಡಿ.ವೈ. ಚಂದ್ರಚೂಡ್, ನ್ಯಾ| ಅಶೋಕ್ ಭೂಷಣ್, ನ್ಯಾ| ಎಸ್.ಎ. ನಜೀರ್ ಮತ್ತು ನ್ಯಾ| ಸಂಜೀವ್ ಖನ್ನಾ ಅವರು ಈ ನ್ಯಾಯಪೀಠದಲ್ಲಿದ್ದಾರೆ.

ಅಂದಹಾಗೆ 2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್ ನೇತೃತ್ವದ ಪೀಠ, ಅಯೋಧ್ಯಾ ವಿವಾದದ ಅಂತಿಮ ತೀರ್ಪು ನೀಡಿತ್ತು. ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ತೀರ್ಪು ನೀಡಿತ್ತು. ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲೇ 5 ಎಕರೆ ಭೂಮಿ ನೀಡಬೇಕೆಂದೂ ಪೀಠ ಹೇಳಿತ್ತು. ಅಷ್ಟೇ ಅಲ್ಲ, ಮತ್ತೊಬ್ಬ ಪ್ರತಿವಾದಿ ನಿರ್ಮೋಹಿ ಅಖಾಡಕ್ಕೆ ಅಯೋಧ್ಯಾ ರಾಮಮಂದಿರ ನಿರ್ಮಾಣ ಟ್ರಸ್ಟ್‌ನಲ್ಲಿ ಪ್ರಮುಖ ಸ್ಥಾನ ನೀಡಬೇಕೆಂದು ತೀರ್ಪು ನೀಡಿತ್ತು.

ನವೆಂಬರ್ 9ರಂದು ನೀಡಲಾಗಿದ್ದ ತೀರ್ಪು ಪ್ರಶ್ನಿಸಿ ಒಟ್ಟು 18 ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸುಮಾರು 40 ನಾಗರಿಕ ಕಾರ್ಯಕರ್ತರು ಮೂಲ ಅರ್ಜಿದಾರರು ಅಲ್ಲದಿದ್ದರೂ ಅರ್ಜಿ ಸಲ್ಲಿಸಿದ್ದರು. ಸಂವಿಧಾನಪೀಠದ ಸರ್ವಾನುಮತದ ಆದೇಶವು ಅಸಮರ್ಪಕವಾಗಿದೆ. ಮುಸ್ಲಿಮರ ಭಾವನೆ ಹಾಗೂ ಹಕ್ಕುಗಳನ್ನು ಕಸಿದುಕೊಂಡಿದೆ. ಹೀಗಾಗಿ ಮರುಪರಿಶೀಲನೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top