fbpx
ಸಮಾಚಾರ

ಮನೆ ಮುಂದೆ ಬೋರ್ಡ್ ಹಾಕಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡ ನಟ ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕುವ ಮೂಲಕ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಡಿ ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಆದರೆ ಬ್ಯಾನರ್, ಕೇಕ್, ಹಾರ ತಂದು ಅದ್ಧೂರಿಯಾಗಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಹೇಳಿದ್ದಾರೆ.

 

 

‘ಬ್ಯಾನರ್, ಕೇಕ್‌, ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ, ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ ಡಿ ಬಾಸ್‌.

‘ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್‌ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆಗಳು ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಡಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೂ ಸಂಘದ ಕಾರ್ಯಕರ್ತರಿಗೆ, ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ’ ಎಂದು ದರ್ಶನ್ ಹೇಳಿದ್ದಾರೆ.

ಕಳೆದ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್, ಕೇಕ್, ಹಾರಕ್ಕೆ ಹಣವನ್ನು ಖರ್ಚು ಮಾಡುವ ಬದಲು ಆ ಹಣದಲ್ಲಿ ದವಸ ಧಾನ್ಯ ನೀಡುವಂತೆ ಮನವಿ ಮಾಡಿದ್ದರು. ದರ್ಶನ್ ಮಾತಿಗೆ ಬೆಲೆ ಕೊಟ್ಟು ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ದಾನ ನೀಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವರ್ಷವು ಕೂಡ ದರ್ಶನ್ ಅವರು ಅದೇ ರೀತಿ ಮನವಿ ಮಾಡಿಕೊಂಡಿದ್ದು, ಅಭಿಮಾನಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ದರ್ಶನ್ ಅವರು ಮನವಿ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಹಲವು ಅಭಿಮಾನಿಗಳು ದರ್ಶನ್ ಅವರನ್ನು ಭೇಟಿ ಮಾಡಿ ದವಸ ಧಾನ್ಯವನ್ನು ನೀಡುತ್ತಿದ್ದಾರೆ. ಅಭಿಮಾನಿಗಳು ದರ್ಶನ್ ಅವರಿಗೆ ದವಸ ಧಾನ್ಯ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ ಅಡುಗೆ ಸಾಮಾಗ್ರಿಗಳನ್ನು ನೀಡಿದ ಬಳಿಕ ಅಭಿಮಾನಿಗಳು ದರ್ಶನ್ ಅವರ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top