fbpx
ಸಮಾಚಾರ

ಈ ವರ್ಷವೂ ಸರಳವಾಗಿ ಬರ್ತಡೇ ಆಚರಿಸಲು ನಟ ದರ್ಶನ್‌ ನಿರ್ಧಾರ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕುವ ಮೂಲಕ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಡಿ ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಆದರೆ ಬ್ಯಾನರ್, ಕೇಕ್, ಹಾರ ತಂದು ಅದ್ಧೂರಿಯಾಗಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಹೇಳಿದ್ದಾರೆ.

 

 

‘ಬ್ಯಾನರ್, ಕೇಕ್‌, ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ, ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ ಡಿ ಬಾಸ್‌.

‘ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್‌ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆಗಳು ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಡಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೂ ಸಂಘದ ಕಾರ್ಯಕರ್ತರಿಗೆ, ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ’ ಎಂದು ದರ್ಶನ್ ಹೇಳಿದ್ದಾರೆ.

ಕಳೆದ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್, ಕೇಕ್, ಹಾರಕ್ಕೆ ಹಣವನ್ನು ಖರ್ಚು ಮಾಡುವ ಬದಲು ಆ ಹಣದಲ್ಲಿ ದವಸ ಧಾನ್ಯ ನೀಡುವಂತೆ ಮನವಿ ಮಾಡಿದ್ದರು. ದರ್ಶನ್ ಮಾತಿಗೆ ಬೆಲೆ ಕೊಟ್ಟು ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ದಾನ ನೀಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವರ್ಷವು ಕೂಡ ದರ್ಶನ್ ಅವರು ಅದೇ ರೀತಿ ಮನವಿ ಮಾಡಿಕೊಂಡಿದ್ದು, ಅಭಿಮಾನಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ದರ್ಶನ್‌ ಮನವಿಗೆ ಸ್ಪಂದಿಸಿದ ನೂರಾರು ಮಂದಿ ಅಭಿಮಾನಿಗಳು ಈಗಾಗಲೇ ದವಸ, ಧಾನ್ಯಗಳು, ಅಕ್ಕಿ, ಬೇಳೆ ಮುಂತಾದವುಗಳನ್ನು ತಂದು ದರ್ಶನ್‌ ಅವರಿಗೆ ನೇರವಾಗಿ ನೀಡುತ್ತಿದ್ದಾರೆ. ಮೂಟೆಗಳ ಲೆಕ್ಕದಲ್ಲಿ ಅಭಿಮಾನಿಗಳು ನೀಡುತ್ತಿದ್ದು, ಎಲ್ಲವನ್ನೂ ಸ್ವತಃ ದರ್ಶನ್‌ ಅವರೇ ಪಡೆದುಕೊಂಡು ತಮ್ಮ ನಿವಾಸದಲ್ಲಿ ಸಂಗ್ರಹ ಮಾಡುತ್ತಿದ್ದಾರೆ. ಹೀಗೆ ಅಭಿಮಾನಿಗಳಿಂದ ದವಸ- ಧಾನ್ಯಗಳು ಪಡೆದುಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top