fbpx
ಸಮಾಚಾರ

ಕುವೆಂಪು ಪದ್ಮ ವಿಭೂಷಣ ಪದಕ ಕದ್ದ ಕಳ್ಳರಿಗೆ 2 ವರ್ಷ ಜೈಲು ಶಿಕ್ಷೆ!

ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಕವಿ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪದ್ಮವಿಭೂಷಣ ಪದಕ ಸೇರಿದಂತೆ ಇತರೆ ಅಮೂಲ್ಯ ವಸ್ತುಗಳನ್ನು ಖದೀಮರು ಕಳ್ಳತನ ಮಾಡಿದ್ದರು. ಈ ಪ್ರಕರಣದ ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಮೊದಲ ಅಪರಾಧಿ ದಾವಣಗೆರೆಯ ರೇವಣಸಿದ್ದಪ್ಪ ವಿಚಾರಣಾ ಹಂತದಲ್ಲಿಯೇ ಮೃತ ಪಟ್ಟಿದ್ದ. ಕಳ್ಳತನಕ್ಕೆ ಪ್ರೇರಣೆ ನೀಡಿದ್ದ ಕವಿಮನೆಯ ಮಾರ್ಗದರ್ಶಕ ಅಂಜನಪ್ಪ ಹಾಗೂ ಕಳ್ಳತನದ ಮಾಲೆಂದು ತಿಳಿದಿದ್ದರೂ ಅದನ್ನು ಖರೀದಿಸಿದ್ದ ಸವಳಂಗದ ಪ್ರಕಾಶ್‌ಗೆ ನ್ಯಾಯಾಲಯ ತಲಾ 2 ವರ್ಷ ಕಾರಾಗೃಹ ವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.

ಎರಡು ಮತ್ತು ಮೂರನೇ ಅಪರಾಧಿಗಳಿಗೆ ನ್ಯಾಯಾಲಯವು ತಲಾ ಎರಡು ವರ್ಷ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡದ ಹಣ ಕಟ್ಟಲು ವಿಫಲವಾದರೆ, ಮತ್ತೆ ಆರು ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದೆ.

ಏನಿದು ಘಟನೆ:
ಅಂದಹಾಗೆ 2015ರ ನ.23ರಂದು ಕವಿಮನೆಗೆ ನುಗ್ಗಿದ ಆರೋಪಿಗಳು ಒಂದು ಸಾವಿರ ರು. ನಗದು ಹಾಗೂ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಪ್ರದಾನ ಮಾಡಿದ್ದ ಪದ್ಮವಿಭೂಷಣ ಪದಕ ಹಾಗೂ ಮೈಸೂರು ವಿಶ್ವವಿದ್ಯಾಲಯ ನೀಡಿದ್ದ 2 ಪದಕಗಳನ್ನು ಅಪಹರಿಸಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಂದಿನ ಪಿಎಸ್‍ಐ ಭರತ್ ಕುಮಾರ್ ಹಾಗೂ ಸಿಪಿಐ ಎಚ್.ಎಂ ಮಂಜುನಾಥ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ ಇತರೆ ಪದಕಗಳನ್ನು ವಶ ಪಡಿಸಿಕೊಳ್ಳಲಾಗಿತ್ತಾದರೂ ಪದ್ಮವಿಭೂಷಣ ಪದಕ ಪತ್ತೆಯಾಗಿರಲಿಲ್ಲ. ಇಂದಿಗೂ ಪದ್ಮವಿಭೂಷಣ ಪದಕ ಮಾತ್ರ ಪತ್ತೆಯಾಗಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top