fbpx
ಸಮಾಚಾರ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ’ ರಚನೆ: ನರೇಂದ್ರ ಮೋದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಕುರಿತು ಕೇಂದ್ರದ ಆಡಳಿತಾರೂಢ ಎನ್’ಡಿಎ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ. ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಬಜೆಟ್‌ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಮಹತ್ವದ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಮಂದಿರ ನಿರ್ಮಿಸಲು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಎಂಬ ಹೆಸರಿನ ಸಮಿತಿಯನ್ನು ನಿರ್ಮಿಸಲಾಗುವುದು. ಟ್ರಸ್ಟ್‌ ರಚನೆ ಕುರಿತು ಕೇಂದ್ರ ಸಂಪುಟ ನಿರ್ಧಾರ ಕೈಗೊಂಡಿದೆ. ಟ್ರಸ್ಟ್‌ಗೆ ಭೂಮಿಯನ್ನು ಹಸ್ತಾಂತರಿಸಲಾಗುವುದು” ಎಂದರು.

“ಅಯೋಧ್ಯೆಯಲ್ಲಿ ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ಜಾಗ ನೀಡುವಂತೆ ನಾವು ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಒಪ್ಪಿಕೊಂಡಿದೆ. ಭಾರತದಲ್ಲಿ ಹಿಂದು, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಬೌದ್ಧರು, ಪಾರ್ಸಿಗಳು ಹಾಗೂ ಜೈನ್ ಹೀಗೆ ಎಲ್ಲರೂ ಒಂದೇ ಕುಟುಂಬದ ಸದಸ್ಯರು” ಎಂದು ಹೇಳಿದರು

ಅಂದಹಾಗೆ ಅಯೋಧ್ಯೆಯ ಬಾಬರಿ ಮಸೀದಿ–ರಾಮ ಜನ್ಮಭೂಮಿ ವಿವಾದಿತ ನಿವೇಶನಕ್ಕೆ ಸಂಬಂಧಿಸಿ 2019 ನವೆಂಬರ್ 9ಕ್ಕೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಆ ಜಾಗವನ್ನು ರಾಮಲಲ್ಲಾಗೆ ನೀಡುವಂತೆ ಆದೇಶಿಸಿತ್ತು. ಮಸೀದಿ ನಿರ್ಮಾಣಕ್ಕೆ ಬೇರೆಡೆ 5 ಎಕರೆ ಜಾಗ ನೀಡುವಂತೆ ಸೂಚಿಸಿತ್ತು. ಟ್ರಸ್ಟೊಂದನ್ನು ನಿರ್ಮಿಸಿ ಅದಕ್ಕೆ ಮಂದಿರ ನಿರ್ಮಾಣದ ಹೊಣೆ ನೀಡುವಂತೆಯೂ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top