fbpx
ಸಮಾಚಾರ

ಅಪಘಾತ ಮಾಡಿ ಪರಾರಿಯಾದ ಆರ್.ಅಶೋಕ್ ಪುತ್ರ: ಇಬ್ಬರ ಸಾವು, ಪೊಲೀಸರಿಂದ ಸಚಿವನ ಮಗನ ರಕ್ಷಣೆ?

ಬಳ್ಳಾರಿಯ ಹೊಸಪೇಟೆ ಬಳಿ ಮೂರು ದಿನಗಳ ಹಿಂದೆ ಕಾರೊಂದು ಗುದ್ದಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಈ ಕಾರನ್ನು ಬೆಂಗಳೂರಿನ ಪ್ರಭಾವಿ ಸಚಿವ ಆರ್. ಅಶೋಕ್ ಮಗ ಶರತ್ ಚಲಾಯಿಸುತ್ತಿದ್ದ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ರಸ್ತೆ ಬದಿ ನಿಂತಿದ್ದ ಪಾದಾಚಾರಿ, ರಸ್ತೆಯಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಪ್ರಕರಣದ ಸಂಬಂಧ ಸಾಕ್ಷ್ಯಗಳು ಸಿಕ್ಕಿದ್ದರೂ ಪೊಲೀಸರು ಅಶೋಕ್ ಪುತ್ರನನ್ನು ರಕ್ಷಿಸಲು ಮುಂದಾಗುತ್ತಿದ್ದಾರಾ ಎನ್ನುವ ಅನುಮಾನ ಎದ್ದಿದೆ.

ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿ ಪ್ರಕಾರ, ‘ಕಂದಾಯ ಸಚಿವ ಆರ್‌. ಅಶೋಕ್‌ ಅವರ ಮಗ ಶರತ್‌ ಕಾರು ಓಡಿಸಿ, ಇಬ್ಬರ ಸಾವಿಗೆ ಕಾರಣರಾಗಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಅವರನ್ನು ಸ್ಥಳದಿಂದ ಬೇರೊಂದು ಕಾರಿನಲ್ಲಿ ತಕ್ಷಣವೇ ಕಳುಹಿಸಿಕೊಡಲಾಗಿದೆ. ಅಷ್ಟೇ ಅಲ್ಲ, ಎಫ್‌.ಐ.ಆರ್‌.ನಲ್ಲಿ ಅವರು ಹೆಸರು ಸೇರದಂತೆ ಪೊಲೀಸ್‌ ಅಧಿಕಾರಿಗಳು ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ. ‘ಘಟನೆ ನಡೆದ ಸ್ಥಳದಲ್ಲಿ ಸಚಿವರ ಮಗ ಇದ್ದರು. ನಂತರ ಬೇರೊಂದು ಕಾರಿನಲ್ಲಿ ಅಲ್ಲಿಂದ ನಿರ್ಗಮಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಕಾರು ಅಪಘಾತಕ್ಕೀಡಾದ ಸಮಯದಲ್ಲಿ ಗಾಯಗೊಂಡ ಆರ್ ಅಶೋಕ ಅವರ ಮಗನನ್ನು ಮತ್ತೊಂದು ಕಾರಿನಲ್ಲಿ ಕರೆದುಕೊಂಡು ಬರಲಾಗಿದೆ. ಆ ಸಮಯದಲ್ಲಿ ಅಲ್ಲೇ ಸ್ಥಳೀಯ ಆಸ್ಪತ್ರೆಗೆ ಮೊದಲು ಕರೆದುಕೊಂಡು ಹೋಗಲಾಗಿದೆ. ತಲೆಗೆ ಪೆಟ್ಟು ಬಿದ್ದಿದ್ದು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ. ಎಫ್ ಐ ಆರ್ ನಲ್ಲೂ ಕಾರು ಚಾಲಕನ ಹೆಸರನ್ನು ರಾಹುಲ್ ಎಂದು ಉಲ್ಲೇಖಿಸಲಾಗಿದೆ.

ಅದೇ ಮಾರ್ಗದಲ್ಲಿ ತನ್ನ ಬೈಕ್ ಪಂಚರ್ ಆದ ಕಾರಣ ಪಕ್ಕದ ಹೋಟೆಲ್ ಒಂದರಲ್ಲಿ ಟೀ‌ ಕುಡಿಯುತ್ತ ನಿಂತಿದ್ದ ಮರಿಯಮ್ಮನ ಹಳ್ಳಿಯ ರವಿ ನಾಯಕ್ (21) ಎಂಬ ಯುವಕನ ಮೇಲೆ ಕಾರ್ ಹರಿದು 200 ಮೀಟರ್ ಗಳಷ್ಟು ದೂರ ಯುವಕನ್ನು ತಳ್ಳಿಕೊಂಡು ಹೋಗಿ ರಸ್ತೆ ಪಕ್ಕದಲ್ಲಿ ಪಲ್ಟಿ ಆಗಿದೆ. ಹೀಗಾಗಿ ರವಿ ನಾಯಕ್ ಕಾರ್ ಕೆಳಗೆ ಸಿಲುಕಿ ಸಾವಿಗೀಡಾಗಿದ್ದಾನೆ. ಕಾರ್ ಚಾಲನೆ ಮಾಡುತಿದ್ದ ಸಚಿನ್ ಎಂಬ ಯುವಕ ಸಹ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ.

ಏತನ್ಮಧ್ಯೆ, ಬಳ್ಳಾರಿ ಎಸ್​ಪಿ ಪತ್ರಿಕಾಗೋಷ್ಠಿ ನಡೆಸಿದ್ದು, ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯ ಹೆಸರು ರಾಹುಲ್​ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಹುಲ್​ ಕಾರು ಚಲಿಸುತ್ತಿದ್ದರು, ಈ ವೇಳೆ ಅಪಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಚಿನ್​ ಮೃತಪಟ್ಟಿದ್ದಾರೆ. ರಾಹುಲ್​ ಕೂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದರು.

ಪೊಲೀಸ್​ ಇಲಾಖೆಗೂ ರಾಜಕೀಯ ವಲಯದಿಂದ ತೀವ್ರ ಒತ್ತಡ ಬರುತ್ತಿದೆ ಎಂದು ಮೂಲಗಳು ಹೇಳಿವೆ. ಪೊಲೀಸರು ಕೂಡ ಈ ಪ್ರಕರಣದ ಸಂಬಂಧ ಮುಗುಮ್ಮಾಗಿರುವುದನ್ನು ಗಮನಿಸಿದರೆ ಘಟನೆಯನ್ನು ಮುಚ್ಚಿಹಾಕುವ ಹುನ್ನಾರದಂತೆ ಬಿಂಬಿತವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top