fbpx
ಸಮಾಚಾರ

ಕನ್ನಡಿಗರಿಗೆ ವಿಶೇಷವಾಗಿ ತಾಯ್ನುಡಿ ದಿನದ ಶುಭಾಶಯ ಹೇಳಿದ ಸಂಸದ ಜಿಸಿ ಚಂದ್ರಶೇಖರ್!

ಪ್ರತಿವರ್ಷ ಫೆಬ್ರವರಿ 21ರಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಭಾಷಾ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವರು ಶುಭಾಶಯ ಹಂಚಿಕೊಂಡಿದ್ದಾರೆ. ಅದೇ ರೀತಿ ರಾಜ್ಯ ಸಭಾ ಸದಸ್ಯರಾದ ಜಿಸಿ ಚಂದ್ರಶೇಖರ್ ಅವರು ಕೂಡ ಕನ್ನಡಿಗರಿಗೆ ತಾಯ್ನುಡಿಯ ದಿನಾಚರಣೆಯ ಶುಭಾಶಯವನ್ನು ಹೇಳಿದ್ದಾರೆ!

 

 

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಾಯ್ನುಡಿ ದಿನದ ಅಂಗವಾಗಿ ವಿಡಿಯೋ ಹಂಚಿಕೊಂಡಿರುವ ಸಂಸದರು ಪಂಪನು ತನ್ನ ಮರು ಹುಟ್ಟು ಹೇಗಿರಬೇಕು ಎಂಬುದನ್ನು ಹೇಳುವ ಪದ್ಯವನ್ನು ವಾಚಿಸಿದ್ದಾರೆ. “ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿ ನಿಂಪುಗಳ್ಗಾರವಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ ನಾಗಿಯುಮೇನೊ ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್‌ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ್‌ ” ಎಂಬ ಪಂಪನ ಸಾಲುಗಳನ್ನು ಹೇಳಿ ಅದನ್ನು ವಿವರಿಸಿದ್ದಾರೆ!

“ತ್ಯಾಗ, ಭೋಗ, ವಿದ್ಯೆ, ಸಂಗೀತ ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅರ್ಹರಾಗಿರುವ ಬನವಾಸಿ ದೇಶದ ಮನುಷ್ಯರೇ ನಿಜವಾದ ಮನುಷ್ಯರು. ಅಂತಹ ದೇಶದಲ್ಲಿ ಹುಟ್ಟಲು ಅದೃಷ್ಟಶಾಲಿಗಳಾಗಿರಬೇಕು. ಹಾಗೆ ಮನುಷ್ಯರಾಗಿ ಹುಟ್ಟಲು ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ಎಂದು ಪಂಪ ವರ್ಣನೆ ಮಾಡಿದ್ದಾರೆ” ಎಂದು ಸಂಸದರು ವಿಡಿಯೋದಲ್ಲಿ ವಿವರಿಸಿ ಕನ್ನಡಿಗರಿಗೆ ತಾಯ್ನುಡಿಯ ದಿನಾಚರಣೆಯ ಶುಭಾಶಯವನ್ನು ಹೇಳಿದ್ದಾರೆ!

“ನಮ್ಮ ತಾಯ್ನುಡಿ ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ಒಂದು ಶಕ್ತಿ, ಈ ಮಣ್ಣಿನ ಸೊಗಡಿನ ಸಂಸ್ಕೃತಿ, ಜನರ ಜೀವನಾಡಿ ಭಾವೈಕ್ಯತೆಯ ಮತ್ತು ಶಾಂತಿಯ ಪ್ರತೀಕ. ಕನ್ನಡನಾಡು ಎಲ್ಲಾ ಜನರ ಮನ ತಣಿಸುವ ಸರ್ವ ಜನಾಂಗದ ಶಾಂತಿಯ ತೋಟ. ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರು, ಸಮಾನತೆ ಸಾರಿದ ಶರಣರು ದಸರಾ ಕೀರ್ತನೆಗಳು ಕನ್ನಡದ ಮುಕುಟಕ್ಕೆ ಮೆರಗು ಹೆಚ್ಚಿಸಿದ್ದಾರೆ!” ಎಂದು ಕೂಡ ಸಂಸದರು ವಿಡಿಯೋದಲ್ಲಿ ಹೇಳಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top