fbpx
ಸಮಾಚಾರ

1000 ಸರ್ಕಾರೀ ಶಾಲೆಗಳಿಗೆ ಇನ್ಫೋಸಿಸ್ ನಿಂದ ಕಂಪ್ಯೂಟರ್ ಪೂರೈಕೆ!

ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ, ಒಂದು ಸಾವಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಪೂರೈಕೆ ಮಾಡಲು ಉದ್ದೇಶಿಸಿದ್ದು, ಇನ್ಫೋಸಿಸ್ ಪ್ರತಿಷ್ಠಾನದ ಈ ಸೇವಾ ಕಾರ್ಯಕ್ಕೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಬಂಧ ಗುರುವಾರ ಇಸ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ನಿರೀಕ್ಷಿತ ಗುಣಮಟ್ಟದ ತಂತ್ರಜ್ಞಾನ ಒದಗಿಸಲು ಕಂಪ್ಯೂಟರ್‌ ಹಾಗೂ ಪೂರಕ ಪರಿಕರಗಳನ್ನು ಪೂರೈಸಲಿದ್ದಾರೆ. ಕಂಪ್ಯೂಟರ್‌ ಒದಗಿಸುವ ಶಾಲೆಗಳಲ್ಲಿ ಪ್ರಸ್ತುತ ಇರುವ ಶೈಕ್ಷಣಿಕ ಸ್ಥಿತಿಗತಿ ಮತ್ತು ಕಂಪ್ಯೂಟರ್‌ಗಳನ್ನು ಪೂರೈಸಿದ ನಂತರದ ಮೂರು ತಿಂಗಳ ಅವಧಿಯ ಶೈಕ್ಷಣಿಕ ಸ್ಥಿತಿಗತಿಯ ಗುಣಮಟ್ಟವನ್ನು ತಿಳಿದು, ಬದಲಾದ ಪರಿಣಾಮವನ್ನು ಅರಿಯಲಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ!

‘ಮೊದಲ ಹಂತದಲ್ಲಿ ಒಂದು ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್ ಪೂರೈಸುವ ಭರವಸೆಯನ್ನು ಸುಧಾಮೂರ್ತಿ ನೀಡಿದ್ದಾರೆ. ಪ್ರತಿಷ್ಠಾನದೊಂದಿಗೆ ವಾರದೊಳಗೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಮಕ್ಕಳ ದಾಖಲಾತಿ ಹೆಚ್ಚಾಗಿರುವ ಶಾಲೆಗಳಿಗೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗುವುದು. ಕಂಪ್ಯೂಟರ್ ಪೂರೈಸಿದ ನಂತರದ ಮೂರು ತಿಂಗಳ ಅವಧಿಯ ಶೈಕ್ಷಣಿಕ ಸ್ಥಿತಿಗತಿಯ ಗುಣಮಟ್ಟ ಅಳೆಯುವ ವ್ಯವಸ್ಥೆಯೊಂದನ್ನು ಅನುಷ್ಠಾನಕ್ಕೆ ಮೊದಲೇ ರೂಪಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top