fbpx
ಸಮಾಚಾರ

ಕೊರೊನಾ ವೈರಸ್ ವದಂತಿ: ಜಾಗೃತಿಗಾಗಿ ವೇದಿಕೆಯಲ್ಲೇ ಕೋಳಿ ಮಾಂಸ ತಿಂದ ಸಚಿವರು!

ಕೊರೊನಾ ವೈರಸ್‌ ಭೀತಿಯಿಂದ ಕೋಳಿ ಮಾಂಸ ಸೇವನೆಯಲ್ಲಿ ತೀವ್ರ ಇಳಿಮುಖವಾದ ಬೆನ್ನಲ್ಲೇ ತೆಲಂಗಾಣ ಸಚಿವರು ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಕೋಳಿ ಮಾಂಸ ಸೇವಿಸಿದ್ದಾರೆ. ಆ ಮೂಲಕ ಕೋಳಿ ಮಾಂಸಕ್ಕೂ ಕೊರೊನಾ ವೈರಸ್‌ಸೋಂಕಿಗೂ ಯಾವುದೇ ಸಂಬಂಧ ಇಲ್ಲವೆಂಬ ಸಂದೇಶ ರವಾನಿಸಿದ್ದಾರೆ.

ಕೋಳಿ ಮಾಂಸ ಹಾಗೂ ಕೋಳಿ ಮೊಟ್ಟೆ ತಿನ್ನುವುದರಿಂದ ಕೊರೋನ ವೈರಸ್ ಹರಡುತ್ತದೆ ಎಂಬ ವದಂತಿಯು ಕೋಳಿ ಹಾಗೂ ಮೊಟ್ಟೆ ಮಾರಾಟದ ಮೇಲೆ ಕೆಟ್ಟ ಪರಿಣಾಮಬೀರಿದೆ. ಹೀಗಾಗಿ ಹೈದರಾಬಾದ್‌ನಲ್ಲಿ ತೆಲಂಗಾಣ ಪೌಲ್ಟ್ರಿ ಬೀಡರ್ಸ್ ಅಸೋಸಿಯೇಶನ್, ತೆಲಂಗಾಣ ಪೌಲ್ಟ್ರಿ ಫೆಡರೇಶನ್ ಜೊತೆಗೆ ರಾಷ್ಟ್ರೀಯ ಮೊಟ್ಟೆ ಉತ್ಪನ್ನ ಸಮನ್ವಯ ಸಮಿತಿಯು ಜನರಲ್ಲಿ ಭೀತಿ ಹೋಗಲಾಡಿಸಲು ಕೋಳಿ ಹಾಗೂ ಮೊಟ್ಟೆ ಮೇಳ ಕಾರ್ಯಕ್ರಮ ಆಯೋಜಿಸಿತ್ತು. ತೆಲಂಗಾಣ ಸಚಿವ ಕೆಟಿ ರಾಮರಾವ್ ಕೋಳಿ ಹಾಗೂ ಮೊಟ್ಟೆ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಕೋಳಿ ಹಾಗೂ ಮೊಟ್ಟೆಯನ್ನು ಸೇವಿಸಿದರು.

ಕೊರೊನಾ ವೈರಸ್ ಎಂಬ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆಯೇ ವಿನಃ, ಕೋಳಿ ಮಾಂಸ ತಿನ್ನುವುದರಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ತೆಲಂಗಾಣ ಸಚಿವರಾದ ಕೆ.ಟಿ.ರಾಮ ರಾವ್‌, ಎಟೆಲಾ ರಾಜೇಂದ್ರ ಮತ್ತು ತಲಸಾನಿ ಶ್ರೀನಿವಾಸ್‌ ಯಾದವ್‌ ಅವರು ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಿದ್ದಾರೆ.

ಅಂದಹಾಗೆ ಕೊರೊನಾ ವೈರಸ್ ಗೆ ಕೋಳಿಯ ಮಾಂಸ ಕಾರಣವಲ್ಲ. ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎಂಬುದೆಲ್ಲ ಸುಳ್ಳು ಸುದ್ದಿಯಾಗಿದ್ದು, ಇಂಥ ವದಂತಿಗಳಿಗೆ ಯಾರೂ ಕಿವಿಗೊಡದಂತೆ ಕರ್ನಾಟಕ ಸರ್ಕಾರ ಕೂಡ ಸ್ಪಷ್ಟನೆ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top