fbpx
ಸಮಾಚಾರ

ರೈತ ಮಹಿಳೆ ಬಳಿ ಕೊನೆಗೂ ಕ್ಷಮೆ ಕೇಳಿದ ‘ಭಾರಿ ಕೆಟ್ಟ ಮನುಷ್ಯ’: ಕ್ಷಮೆ ಕೇಳೋ ಹಾಗೆ ಮಾಡಿದ ಕರುನಾಡ ಜನರು

“ನಾನು ಬಾರಿ ಕೆಟ್ಟ ಮನುಷ್ಯ ಇದ್ದಿನಿ.. ಏಯ್ ಬಾಯಿ ಮುಚ್ಚು ರಾಸ್ಕಲ್” ಎಂದು ಮಹಿಳೆಯರನ್ನು ಗದರಿಸಿದ್ದ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ರೈತ ಮಹಿಳೆ ಬಳಿ ಕ್ಷಮೆ ಯಾಚಿಸಿದ್ದಾರೆ. ‘ರಾಸ್ಕಲ್‌’ ಎಂದು ಅವಾಚ್ಯವಾಗಿ ನಿಂದಿಸಿದ ಘಟನೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು, ಅವರ ವರ್ತನೆಯನ್ನು ಖಂಡಿಸಿರುವ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲೂ ಖಂಡಿಸಿದ್ದರು. ಇದೀಗ ಮಾಧುಸ್ವಾಮಿ ಅವರು ಕ್ಷಮೆಯಾಚಿಸಿದ್ದಾರೆ.

“ಹೆಣ್ಣು ಅಂತ ಆಗಲಿ ಅಥವಾ ರೈತ ಸಂಘದವರು ಎಂದು ಗುರುತಿಸಿ ಮಾತನಾಡಿಲ್ಲ. ವ್ಯಯಕ್ತಿಕವಾಗಿ ಮಿತಿ ಮೀರಿ ಮಾತನಾಡಿದ್ದಕ್ಕೆ ನಾನು ಆ ರೀತಿ ಪ್ರತಿಕ್ರಿಯಿಸಿದೆ. ನನ್ನ ಮಾತಿನಿಂದ ಹೆಣ್ಮಕ್ಕಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ” ಎಂದು ಸಚಿವ ಮಾಧುಸ್ವಾಮಿ ಹೇಳಿದರು.

“ಕೆರೆಗೆ ನೀರು ಬಿಡುವ ವಿಚಾರಕ್ಕೆ ಪರಿಶೀಲನೆಗಾಗಿ ಹೋಗಿದ್ದೆ. ಆ ವೇಳೆ ಅಲ್ಲಿಗೆ ಬಂದಿದ್ದ ಆ ಮಹಿಳೆ 130 ಎಕರೆ ಕೆರೆ ಒತ್ತುವರಿಯಾಗಿದೆ ಎಂದಳು. ಏನಮ್ಮ ಈ ಪ್ರಶ್ನೆ ನನ್ನ ಕೇಳ್ತಿಯ ಅಂತ ನಾನು ಕೇಳಿದೆ. ಅದಕ್ಕವಳು ನೀವು ಏನ್ರಿ ಮಾಡ್ತಾ ಇದ್ದೀರಿ ಅಂತ ನನ್ನನ್ನೇ ಕೇಳಿದರು.. ಆ ಕೋಪಗೊಂಡ ನಾನು ಮುಚ್ಚಮ್ಮ ಬಾಯಿ ರ್ರಾಸ್ಕಲ್‌. ಆದೇಶ ಕೊಡಲಿಕ್ಕೆ ಬರಬೇಡ, ರಿಕ್ವೆಸ್ಟ್‌ ಮಾಡಿ ಅಂತ ಹೇಳಿದ್ದಾಗಿ ತಿಳಿಸಿದರು.”

‘ಬಂದ ಜನ ಈ ರೀತಿಯಲ್ಲಿ ಮಾತಾಡಿದ್ರೆ ಹೇಗೆ? ಸ್ಥಳ ವೀಕ್ಷಣೆ ಮಾಡೋದಾದ್ರೆ ಹೇಗೆ? ಸಿಎಂಗೆ ನಾನು ವಿವರಣೆ ನೀಡ್ತೇನೆ. ಹೀಗೆಲ್ಲಾ ಆಯ್ತು ಅಂತ ಹೇಳ್ತೇನೆ. ರಾಜೀನಾಮೆ ಕೊಡಿ ಅಂದ್ರೆ ಕೊಟ್ಟು ಹೋಗ್ತೇನೆ. ನನ್ನಿಂದ ಸರ್ಕಾರಕ್ಕೆ, ಪಕ್ಷಕ್ಕೆ ತೊಂದರೆಯಾದ್ರೆ ರಾಜೀನಾಮೆ ನೀಡ್ತೇನೆ. ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ಸುಮ್ಮನಿರಲು ಸಾಧ್ಯವೇ?’ ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಏನಿದು ಘಟನೆ:
ಕೆಸಿ ವ್ಯಾಲಿ ಯೋಜನೆಯಿಂದ ತುಂಬಿದ ಕೆರೆಗಳನ್ನು ವೀಕ್ಷಣೆ ಮಾಡುವ ಸಲುವಾಗಿ ಮಾಧುಸ್ವಾಮಿ ಮೊನ್ನೆ ಕೋಲಾರಕ್ಕೆ ತೆರಳಿದ್ದರು. ಈ ವೇಳೆ ಅವರು ಅಗ್ರಹಾರ ಕೆರೆ ವೀಕ್ಷಣೆಗಾಗಿಯೂ ಸ್ಥಳಕ್ಕೆ ಹೋಗಿದ್ದರು..

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಕೋಲಾರ ಜಿಲ್ಲಾದ್ಯಕ್ಷೆ ನಳಿನಿ ಗೌಡ ಹಾಗೂ ಮತ್ತೊರ್ವ ಮಹಿಳಾ ಹೋರಾಟಗಾರ್ತಿ ಸಚಿವರಿಗೆ ಅಹವಾಲು ಸಲ್ಲಿಸಲು ಮುಂದಾದರು. “ದಯವಿಟ್ಟು ಅಗ್ರಹಾರ ಕೆರೆಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಿ” ಎಂದು ಸಚಿವರ ಬಳಿ ವಿನಂತಿಸಿಕೊಂಡಿದ್ದರು. ಆದರೆ, ಈ ವೇಳೆ ಗರಂ ಆದ ಸಚಿವರು “ನೀನು ತೆರವು ಮಾಡ್ತೀಯೇನಮ್ಮ” ಎಂದು ಗದರಿಸಲು ಶುರು ಮಾಡಿದ್ದರು.

ಈ ವೇಳೆ ಕೆರೆಗಳ ಒತ್ತುವರಿ ತೆರವು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತೆಯರು ಮನವಿ ಮಾಡಲು ಮುಂದಾಗಿದ್ದರು. ಇದರಿಂದ ಸಿಡಿಮಿಡಿಗೊಂಡ ಮಾಧುಸ್ವಾಮಿ ಮಹಿಳೆಯನ್ನು ಗದರಿಸಿ “ನಾನು ಭಾರಿ ಕೆಟ್ಟ ಮನುಷ್ಯ ಇದ್ದೀನಿ, ಏಯ್ ಮುಚ್ಚು ಬಾಯಿ, ರಾಸ್ಕಲ್” ಎಂದು ನಿಂದಿಸಿದರು.

ಇದರಿಂದ ಅಸಹಾಯಕತೆಯಿಂದ ಮಹಿಳೆ “ಅದೇನ್ ಅಣ್ಣ ನೀವು ಹಿಂಗ ಮಾತಾಡ್ತಾ ಇದ್ದೀರಾ? ಕರೆಕ್ಟ್ ಆಗಿ ಮಾತಾಡಿ. ನೀವು ಹೀಗೆ ಮಾತ್ನಾಡೋದು ಸರಿನಾ” ಎಂದು ಪ್ರಶ್ನಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಕೂಡ ಮಧ್ಯೆ ಪ್ರವೇಶಿಸಿ ಮಹಿಳೆಯರನ್ನು ತಡೆದು ದರ್ಪ ಮೆರೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top