fbpx
ಸಮಾಚಾರ

ಸಿದ್ದುಗೆ ಗುದ್ದು ನೀಡಲು ಡಿಕೆಶಿ- ಜಿಸಿ ಚಂದ್ರಶೇಖರ್ ಮಾಡಿದ ಮಾಸ್ಟರ್ ಪ್ಲಾನ್

ಕಾಂಗ್ರೆಸ್ ನಲ್ಲಿ ದಶಕಗಳಿಂದ ಕಾರ್ಯಶೀಲರಾಗಿದ್ದ ಬಿಕೆ ಹರಿಪ್ರಸಾದ್‌ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳಿಸಿರುವ ಕಾಂಗ್ರೆಸ್ ಹೈಕಮಾಂಡ್‌ ನಿರ್ಧಾರ ರಾಜ್ಯ ಕಾಂಗ್ರೆಸ್ ನಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡುವುದೇ ವರಿಷ್ಠರ ಈ ನಡೆಗೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಬಿ.ಕೆ.ಹರಿಪ್ರಸಾದ್ ಈವರೆಗೂ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದವರು. ಇದೇ ಮೊದಲ ಬಾರಿಗೆ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲಾಗಿದೆ. ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ 18 ವರ್ಷಗಳ ಸುದೀರ್ಘ ರಾಜ್ಯಸಭಾ ಸದಸ್ಯತ್ವ ಅವಧಿ ಮುಗಿಯುತ್ತಿರುವ ಹಂತದಲ್ಲೇ, ಕರ್ನಾಟಕ ವಿಧಾನ ಪರಿಷತ್‌ ಪ್ರವೇಶಕ್ಕೆ ಹೈಕಮಾಂಡ್‌ ಅನುವು ಮಾಡಿಕೊಟ್ಟಿರುವುದರ ಹಿಂದೆ ನಾನಾ ರಾಜಕೀಯ ಲೆಕ್ಕಾಚಾರವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ‌ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ. ಸಿದ್ದರಾಮಯ್ಯ ತಾವು ಅಂದುಕೊಂಡಂತೆ ನಸೀರ್ ಅಹಮದ್ ಗೆ ಟಿಕೆಟ್ ಕೊಡಿಸುವುದರಲ್ಲಿ ಸಫಲರಾಗಿರಬಹುದು, ಸಿದ್ದರಾಮಯ್ಯ ಆದರೆ ಕಾಂಗ್ರೆಸ್ ನಲ್ಲಿರುವ ಅನೇಕ ಮುಸ್ಲಿಂ ನಾಯಕರ ಅಸಮಾಧಾನಕ್ಕೆ ಕಾಲರಣರಾಗಿದ್ದಾರೆ. ನಸೀರ್ ಪರ ಸಿದ್ದರಾಮಯ್ಯ ಲಾಬಿ ನಡೆಸುತ್ತಿದ್ದಂತೆ ಉಳಿದ ಮುಸ್ಲಿಂ ನಾಯಕರಾದ ಜಮೀರ್ ಅಹಮದ್ ಮತ್ತು ರಿಜ್ವಾನ್ ಅರ್ಷದ್ ಬಿಟ್ಟು ಉಳಿದೆಲ್ಲಾ ನಾಯಕರು ಜಬ್ಬಾರ್ ಪರ ಸಹಿ ಸಂಗ್ರಹ ಮಾಡಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಸಿದ್ದರಾಮಯ್ಯ, ನಸೀರ್ ಒಬ್ಬರಿಗೋಸ್ಕರ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ.

ಇನ್ನು ಮುಖ್ಯಮಂತ್ರಿ ಹುದ್ದೆ ಕನಸು ಕಾಣುತ್ತಿರುವ ಡಿಕೆಶಿ ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಸಂಪ್ರದಾಯಿಕ ಮತಗಳ ‌ಜೊತೆಗೆ ಒಂದಿಷ್ಟು ಒಕ್ಕಲಿಗ ಮತಗಳನ್ನ ನಂಬಿಕೊಂಡಿದ್ದಾರೆ. ಈ ಒಕ್ಕಲಿಗ ಮತಗಳನ್ನು ಸೆಳೆಯಲು ಡಿಕೆಶಿ ಸಹೋದರ ಡಿಕೆ ಸುರೇಶ್ ಮಾಜಿ ಸಂಸದ ಮುದ್ದಹನುಮೇಗೌಡರನ್ನು ಪರಿಷತ್ತಿಗೆ ತರಲು ಪ್ರಯತ್ನಿಸಿದ್ದರು. ಮುದ್ದಹನುಮೇಗೌಡರ ಆಯ್ಕೆ ಮುಖಾಂತರ ತಮ್ಮ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನೂ ಗಟ್ಟಿ ಮಾಡಿಕೊಳ್ಳುವುದು ಸುರೇಶ್ ಲೆಕ್ಕಾಚಾರ ಆಗಿತ್ತು.‌ ಆದರೆ ಮೂಲ ಕಾಂಗ್ರೆಸಿಗರು ಉರುಳಿಸಿದ ದಾಳದ ಎದುರು ಡಿಕೆ ಸಹೋದರರ ತಂತ್ರ ವಿಫಲವಾಯಿತು. ಮೂಲ ಕಾಂಗ್ರೆಸಿಗರು ಮೇಲುಗೈ ಸಾಧಿಸಿದ್ದಾರೆ.

ಡಿ.ಕೆ ಶಿವಕುಮಾರ್, ರಾಜ್ಯಸಭೆ ಸದಸ್ಯ ಜಿ.ಸಿ ಚಂದ್ರಶೇಖರ್ ಅವ್ರ ಪ್ರಭಾವದಿಂದ ಹರಿಪ್ರಸಾದ್ ಅವರಿಗೆ ಪರಿಷತ್ ಸ್ಥಾನ ಸಿಗುತ್ತಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರಿಗೆ ಪರ್ಯಾಯ ಹಿಂದುಳಿದ ವರ್ಗದ ನಾಯಕನನ್ನು ಬೆಳೆಸುವುದು ವರಿಷ್ಠರ ಲೆಕ್ಕಾಚಾರವಾಗಿದ್ದು, ಇದೇ ಕಾರಣಕ್ಕೆ ರಾಜಕೀಯವಾಗಿ ಪ್ರಜ್ಞಾವಂತರಾದ ಈಡಿಗ (ಬಿಲ್ಲವ) ಸಮುದಾಯದ ಹರಿಪ್ರಸಾದ್‌ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಬೇಕಿತ್ತು. ಇದೇ ಕಾರಣಕ್ಕೆ ಬಿ.ಕೆ. ಹರಿಪ್ರಸಾದ್ ಪರ ಡಿ.ಕೆ ಶಿವಕುಮಾರ್, ಜಿ.ಸಿ. ಚಂದ್ರಶೇಖರ್ ಹೈಕಮಾಂಡ್ ಗೆ ಒತ್ತಡ ಹಾಕಿದ್ದಾರೆ. ಡಿ.ಕೆ ಶಿವಕುಮಾರ್, ಜಿ.ಸಿ. ಚಂದ್ರಶೇಖರ್ ಅವರ ಪ್ರಪೋಸಲ್ ಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಓಕೇ ಅಂದಿದ್ದು ಹರಿಪ್ರಸಾದ್ ಅವರಿಗೆ ಪರಿಷತ್ ಟಿಕೆಟ್ ನೀಡಿ ಸಿದ್ದರಾಮಯ್ಯ ಅಂಡ್ ಟೀಮ್ ಗೆ ಟಾಂಗ್ ನೀಡಿದೆ ಎಂದು ಹೇಳಲಾಗುತ್ತಿದೆ.

ಹರಿಪ್ರಸಾದ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ಹಿಂದಿನ ಸೂತ್ರಧಾರ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಎಂದೇ ಹೇಳಲಾಗುತ್ತಿದೆ. ಮೊದಲಿನಿಂದಲೂ ಸಿದ್ದರಾಮಯ್ಯಗೆ ಸಡ್ಡು ಹೊಡೆಯಲು ಕಾಯುತ್ತಿದ್ದ ಜಿ.ಸಿ. ಚಂದ್ರಶೇಖರ ಪರಿಷತ್ ಅಭ್ಯರ್ಥಿಯಾಗಿ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಸೂಚಿಸಿದ್ದಾರೆ.. ಇತರೆ ಮೂಲ ಕಾಂಗ್ರೆಸಿಗರಾದ ಡಾ. ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ಶಾಮನೂರು ಶಿವಶಂಕರಪ್ಪ ಮತ್ತಿತರ ಜೊತೆಗೂಡಿ ರಾಜ್ಯ ರಾಜಕಾರಣಕ್ಕೆ ಬರಲು ಸಿದ್ದರಿಲ್ಲದಿದ್ದ ಹರಿಪ್ರಸಾದ್ ಅವರ ಮನವೊಲಿಸಿದರು. ಹಾಗಾಗಿ ಹೈಕಮಾಂಡ್ ಕೂಡ ಹರಿಪ್ರಸಾದ್ ಅವರಿಗೆ ಪರಿಷತ್ ಟಿಕೆಟ್ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top