fbpx
ಸಮಾಚಾರ

‘ಅವರು ನನ್ನ ಗಾಡ್ ಫಾದರ್ ಅಲ್ಲ : ನನ್ನ ಅವರ ಸಂಬಂಧ ಮುಗಿದಿದೆ’

ಆರ್​ ಆರ್​ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ನನ್ನ ಗಾಡ್‌ಫಾದರ್‌ ಅಲ್ಲ. ನಾನೊಬ್ಬ ನಟ, ಮುನಿರತ್ನ ನಿರ್ಮಾಪಕರಷ್ಟೇ. ಕುರುಕ್ಷೇತ್ರ ಸಿನಿಮಾ ಮುಗಿಯುತ್ತಿದ್ದಂತೆ ಅವರ ಹಾಗೂ ನನ್ನ ಸಂಬಂಧ ಮುಗಿದಿದೆ ಎಂದು ನಟ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಆರ್ ಆರ್ ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ನಿಖಿಲ್ ಕುಮಾರಸ್ವಾಮಿ ಅವರು ಪ್ರಚಾರ ಮಾಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಅವರ ಪರವಾಗಿ ರೋಡ್‌ಶೋನಲ್ಲಿ ಭಾಗವಹಿಸಿ ನಿಖಿಲ್ಬ ಕುಮಾರಸ್ವಾಮಿ ಅವರು ಪ್ರಚಾರ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮುನಿರತ್ನ ಅವರ ಹೀಗೆ ಹೇಳಿಕೆ ಕೊಟ್ಟಿದ್ದಾರೆ.

“ಮುನಿರತ್ನ ನಿರ್ಮಾಪಕರು, ನಾನೊಬ್ಬ ನಟ ಅಷ್ಟೇ, ಕುರುಕ್ಷೇತ್ರ ಸಿನಿಮಾದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ಅದನ್ನು ನಾನು ಮಾಡಿದ್ದೇನೆ. ನನ್ನ ಹಾಗೂ ಮುನಿರತ್ನ ನಡುವಿನ ಸಂಬಂಧ ಸಿನಿಮಾಗೆ ಮಾತ್ರ ಸೀಮಿತ. ಸಿನಿಮಾ ಮುಗಿಯುತ್ತಿದ್ದಂತೆ ನನ್ನ ಅವರ ಸಂಬಂಧ ಮುಗಿದಿದೆ” ಎಂದು ಹೇಳಿದರು.

“ನಾನು ಜೆಡಿಎಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ವೈಯಕ್ತಿಕ ಕಾರಣಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ ವಿಷ ಹಾಕುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ.‌ ಈ ಬಗ್ಗೆ ಹಲವು ವದಂತಿಗಳನ್ನು ಕ್ಷೇತ್ರದಲ್ಲಿ ಹಬ್ಬಿಸಿದ್ದಾರೆ. ಅವುಗಳಿಗೆ ಕಿವಿಗೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬಾರದು. ಕೃಷ್ಣಮೂರ್ತಿ ಅವರ ಗೆಲುವಿಗೆ ಕೆಲಸ ಮಾಡಿ” ಎಂದು ಕರೆ ನೀಡಿದರು.

“ಆರ್‌ಆರ್‌ ನಗರದಲ್ಲಿ ಜೆಡಿಎಸ್‌ ಗೆಲುವಿನ ರೇಸ್‌ನಲ್ಲಿ ಇಲ್ಲ ಎಂದು ಅಂದುಕೊಂಡಿದ್ದರೆ ಅದು ತಪ್ಪು. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿರುವುದು ಗೊತ್ತಾಗುತ್ತಿದೆ. ತಳಮಟ್ಟದಲ್ಲಿ ಜೆಡಿಎಸ್‌ ಗೆಲುವಿನ ತರಂಗ ಕಾಣುತ್ತಿದೆ. ಸಾಮಾನ್ಯ ಕಾರ್ಯಕರ್ತನಿಗೆ ಜೆಡಿಎಸ್‌ ಈ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದೆ” ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top