fbpx
ಸಮಾಚಾರ

ವಾಷಿಂಗ್ಟನ್ ಸುಂದರ್ ಹೆಸರಲ್ಲಿ ‘ವಾಷಿಂಗ್ಟನ್’ ಬಂದಿತ್ತು ಹೇಗೆ ಗೊತ್ತಾ?

ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ನಡುವಣ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಮಾತು ನಾಲ್ಕನೇ ಟೆಸ್ಟ್ ಪಂದ್ಯವು ಬ್ರಿಸ್ಬೇನ್ ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ಗೂ ಪಾದಾರ್ಪಣೆ ಮಾಡಿದ ತಮಿಳುನಾಡಿನ ವಾಷಿಂಗ್ಟನ್ ಸುಂದರ್ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿಯೇ ‘ಆಲ್‌ರೌಂಡ್’ ಆಟದ ಮೂಲಕ ಗಮನ ಸೆಳೆದಿದ್ದಾರೆ.

ತಂಡ ಸಂಕಷ್ಟ ಸ್ಥಿತಿಯಲ್ಲಿ ಇದ್ದಾಗ ಬ್ಯಾಟಿಂಗ್ ಗೆ ಬಂದ ಸುಂದರ್ ತಂಡವನ್ನು ಅಪಾಯದಿಂದ ಪಾರು ಮಾಡಿದರು. ವಿಶ್ವ ಶ್ರೇಷ್ಠ ಬೌಲರ್ ಗಳಾದ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್‌ ಅವರಂತಹ ಘಟಾನುಘಟಿ ವೇಗಿಗಳನ್ನು ಸುಂದರ್ ಎದುರಿಸಿದ್ದು ಇದೇ ಮೊದಲ ಸಲ. ಆದರೂ ದಿಟ್ಟ ಆಟವಾಡಿ, ಅರ್ಧಶತಕ ಗಳಿಸಿದರು.

ಇದೇ ಹೊತ್ತಿನಲ್ಲಿ ಈ ಹುಡುಗನ ಹೆಸರು ‘ವಾಷಿಂಗ್ಟನ್‌’ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕುತೂಹಲದ ಹುಡುಕಾಟಗಳೂ ನಡೆದವು. ಚೆನ್ನೈನ ಹುಡುಗನಿಗೆ ಈ ಹೆಸರು ಬಂದಿದ್ದಾದರೂ ಹೇಗೆ ಎಂಬ ಶೋಧ ಜೋರಾಗಿಯೇ ನಡೆಯಿತು. ಅವರ ತಂದೆ ಸುಂದರ್, ಮಗನಿಗೆ ವಾಷಿಂಗ್ಟನ್ ಎಂದೇ ನಾಮಕರಣ ಮಾಡಿದ್ದರ ಹಿಂದೆ ಒಂದು ಕಥೆ ಇದೆ. ಏನಂದು ಅಂತೀರಾ? ಮುಂದೆ ಓದಿ

ವಾಷಿಂಗ್ಟನ್ ಸುಂದರ್‌ ಹೆಸರಿನಲ್ಲಿ ‘ವಾಷಿಂಗ್ಟನ್’ ಸೇರಿಸಿದ್ದು ಅವರ ತಂದೆ ಎಂ ಸುಂದರ್. ಎಂ ಸುಂದರ್ ಕೂಡ ಕ್ರಿಕೆಟರೆ. ಆದರೆ ತಮಿಳುನಾಡು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರಲಿಲ್ಲ. ಎಂ ಸುಂದರ್‌ಗೊಬ್ಬರು ಗಾಡ್ ಫಾದರ್ ಇದ್ದರು. ಪಿಡಿ ವಾಷಿಂಗ್ಟನ್ ಅವರು ಹೆಸರು.

ಪಿಡಿ ವಾಷಿಂಗ್ಟನ್ ಒಬ್ಬ ದೊಡ್ಡ ಕ್ರಿಕೆಟ್ ಅಭಿಮಾನಿ. ಸುಂದರ್ ಆಟವನ್ನು ಅವರು ಇಷ್ಟಪಡುತ್ತಿದ್ದರು. ಅಲ್ಲದೆ ಶಾಲಾ ಪುಸ್ತಕಗಳನ್ನು ತೆಗೆದುಕೊಡುತ್ತ, ಶಾಲಾ ಶುಲ್ಕ ಪಾವತಿಸುತ್ತ ಸುಂದರ್‌ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದರು. ಇದರಿಂದ ಸುಂದರ್‌ಗೆ ಕ್ರಿಕೆಟ್‌ನಲ್ಲಿ ತೊಡಗಿಕೊಳ್ಳಲೂ ಸಹಾಯವಾಗಿತ್ತು.

1999ರಲ್ಲಿ ಪಿಡಿ ವಾಷಿಂಗ್ಟನ್ ಸಾವನ್ನಪ್ಪಿದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಸುಂದರ್‌ಗೆ ಗಂಡು ಮಗು ಜನಿಸಿತು. ತನ್ನ ಗಾಡ್ ಫಾದರ್ ಹೆಸರನ್ನು ತನ್ನ ಪುತ್ರನಿಗಿಡಲು ಸುಂದರ್ ಬಯಸಿದರು. ಹೀಗೆ ವಾಷಿಂಗ್ಟನ್ ಸುಂದರ್‌ ಹೆಸರಿನಲ್ಲಿ ‘ವಾಷಿಂಗ್ಟನ್’ ಸೇರಿಕೊಂಡಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top