fbpx
ಸಮಾಚಾರ

ಧೋನಿಯ ಮತ್ತೊಂದು ದಾಖಲೆ ಮುರಿದ ರಿಷಬ್ ಪಂತ್: ಟೆಸ್ಟ್​ನಲ್ಲಿ ನೂತನ ಸಾಧನೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ದಿನದಾಟದಲ್ಲಿ ಭಾರತೀಯ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಗಳಿಸಿದ ಸಾಧನೆಯನ್ನು ಮಾಡಿದ ರಿಷಬ್ ಭಾರತೀಯ ವಿಕೆಟ್ ಕೀಪರ್‌ಗಳ ಪೈಕಿ ವೇಗವಾಗಿ ಈ ಮೈಲಿಗಲ್ಲು ಮುಟ್ಟಿದ ಆಟಗಾರ ಎನಿಸಿಕೊಂಡಿದ್ದಾರೆ.

ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ರಿಷಭ್‌ ಪಂತ್‌ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. 976 ರನ್‌ಗಳೊಂದಿಗೆ ಗಬ್ಬಾ ಟೆಸ್ಟ್‌ ಆರಂಭಿಸಿದ್ದ ರಿಷಭ್‌ ಪಂತ್‌, ಪ್ರಥಮ ಇನಿಂಗ್ಸ್‌ನಲ್ಲಿ 23 ರನ್‌ ಗಳಿಸಿದ್ದರು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸುವ ಮೂಲಕ 1000 ರನ್‌ ಮೈಲುಗಲ್ಲು ಸ್ಥಾಪಿಸಿದರು. ಜತೆಗೆ ವೇಗವಾಗಿ 1000 ರನ್ ಗಳಿಸಿದ ಭಾರತದ ಮೊದಲ ವಿಕೆಟ್‌ ಕೀಪರ್ ಎಂಬ ದಾಖಲೆಗೆ ಭಾಜನರಾದರು.

ಇದುವರೆಗೆ 16 ಟೆಸ್ಟ್‌ಗಳ 27 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಪಂತ್, ಎರಡು ಶತಕ ಹಾಗೂ ನಾಲ್ಕು ಅರ್ಧಶತಕ ಸಹಿತ 1,088 ರನ್ ಕಲೆ ಹಾಕಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 23 ರನ್ ಗಳಿಸಿ ಔಟಾಗಿದ್ದ ಪಂತ್‌, ಎರಡನೇ ಇನಿಂಗ್ಸ್‌ನಲ್ಲಿ 89 ರನ್‌ ಗಳಿಸಿ ಔಟಾಗದೆ ಉಳಿದರು. ಈ ಪಂದ್ಯಕ್ಕೂ ಮುನ್ನ ಅವರ ಖಾತೆಯಲ್ಲಿ 976 ರನ್‌ ಗಳಿದ್ದವು.

ಇದಕ್ಕೂ ಮೊದಲು ವೇಗವಾಗಿ ಸಾವಿರ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಶ್ರೇಯ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರಲ್ಲಿತ್ತು. ಧೊನಿ 32 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಉಳಿದಂತೆ ಫಾರೂಕ್‌ ಇಂಜಿನಿಯರ್‌ 36 ಇನಿಂಗ್ಸ್‌, ವೃದ್ಧಿಮಾನ್‌ ಸಹಾ 37 ಇನಿಂಗ್ಸ್‌ ಮತ್ತು ನಯನ್‌ ಮೋಂಗಿಯಾ 39 ಇನಿಂಗ್ಸ್‌ಗಳಲ್ಲಿ ಸಾವಿರ ರನ್ ಪೂರೈಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top