fbpx
ಸಮಾಚಾರ

ದರ್ಶನ್‌ ಬಗ್ಗೆ ಜಗ್ಗೇಶ್‌ ಅವಹೇಳನ: ಆಡಿಯೋ ಲೀಕ್ ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಜಗ್ಗೇಶ್

ಇತ್ತೀಚೆಗಷ್ಟೇ ಪ್ಯಾನ್‌ ಇಂಡಿಯಾ ಸಿನಿಮಾಗಳ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ನಟ ಜಗ್ಗೇಶ್‌ ಅವರು, ನಿರ್ಮಾಪಕರೊಬ್ಬರ ಜೊತೆ ಫೋನ್‌ ಸಂಭಾಷಣೆ ಸಂದರ್ಭದಲ್ಲಿ ದರ್ಶನ್‌ ಬೆಂಬಲಿಗರ ಕುರಿತು ಹೇಳಿರುವ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಸಂಭಾಷಣೆ ಸೋರಿಕೆ ಆದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆಯನ್ನೂ ಜಗ್ಗೇಶ್‌ ನೀಡಿದ್ದಾರೆ.

 

 

ನಿರ್ಮಾಪಕರೊಬ್ಬರ ಬಳಿ ಸಿನಿಮಾ ಜಾಹೀರಾತಿನ ಬಗ್ಗೆ ದೂರವಾಣಿ ಮೂಲಕ ಮಾತನಾಡಿರುವ ಜಗ್ಗೇಶ್‌ ಅವರು ಕನ್ನಡದ ದಿನಪತ್ರಿಕೆಯೊಂದರ ಕುರಿತು ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ಸೋಶಿಯಲ್‌ ಮೀಡಿಯಾದಲ್ಲಿ ಸಿನಿಮಾ ಪ್ರಚಾರ ಮಾಡುವವರ ಬಗ್ಗೆಯೂ ವಿಷಯ ಎತ್ತಿದ್ದಾರೆ. ಅಷ್ಟೇ ಆಗಿದ್ದರೆ ಇದು ವಿವಾದಕ್ಕೆ ಕಾರಣ ಆಗುತ್ತಿರಲಿಲ್ಲ. ಆದರೆ ಅದರಲ್ಲಿ ಅವರು ದರ್ಶನ್‌ ಹುಡುಗರ ಕುರಿತಾಗಿಯೂ ಒಂದಷ್ಟು ಅವಹೇಳನಕಾರಿ ಮಾತುಗಳನ್ನು ಆಡಿರುವುದು ಕೇಳಿಬಂದಿದೆ.

‘ಪಾಪ…ಆ ಹುಡುಗನಿಗೆ ಮಾಡೋಕೆ ಹೇಳಿದ್ನಲ್ಲ, ಅವನಿಗೂ ಒಂಚೂರು ಏನಾದರೂ ಕೊಡು. ಅವನು ಮದುವೆ ಆಗಿದ್ದಾನೆ. ಪಾಪ, ಸಪರೇಟ್‌ ಸಂಸಾರ ಮಾಡ್ತಾವ್ನೆ. ಕಷ್ಟದಲ್ಲಿ ಇದ್ದಾನೆ. ಒಳ್ಳೆಯ ಹಾರ್ಡ್‌ ವರ್ಕರ್‌. ನಮ್ಮ ಹತ್ರ ಇರುವವರೆಲ್ಲ ಇಂಥವರೇನೇ. ಬಟ್‌, ದರ್ಶನ್‌ ಥರ, ಅವರ ಥರ ಇದಾರಲ್ಲಾ.. ಅವ**ನ್ ತಲೆಮಾಂಸ ಕಳಿಸಿ ಅಣ್ಣಾ… ನೂರು ಕುರಿ ಕಳಿಸಿ ಅಣ್ಣಾ ಅನ್ನುವಂಥವರು ಯಾರೂ ಇಲ್ಲ ನನ್ನ ಹತ್ತಿರ. ಸಹಾಯ ಮಾಡು’ ಎಂದು ಜಗ್ಗೇಶ್‌ ಉಲ್ಲೇಖಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಆಡಿಯೊ ಕ್ಲಿಪ್‌ ಹರಿದಾಡುತ್ತಿದ್ದು, ಇದು ದರ್ಶನ್‌ ಬೆಂಬಲಿಗರ ವಿರೋಧಕ್ಕೆ ಕಾರಣವಾಗಿದೆ.

ಜಗ್ಗೇಶ್‌ ಸ್ಪಷ್ಟನೆ:
‘ಚಿತ್ರ ಪ್ರಚಾರಕ್ಕೆ ‘ಫೇಕ್‌ನ್ಯೂಸ್‌ ಸ್ಪ್ರೆಡ್‌’ ಮಾಡುವ ಹುನ್ನಾರ! ಒಬ್ಬ ಚಿಕ್ಕಹುಡುಗನದು ಈ ಆಟ! ನಾನು ಏನು ಅಂತ ನನ್ನ ಬಲ್ಲ ಎಲ್ಲರಿಗೂ ತಿಳಿದಿದೆ! ಇಂಥ ವಿಷಯಕ್ಕೆ ಹೃದಯ ತೆಗೆದು ತೋರುವ ಅವಶ್ಯಕತೆ ಇಲ್ಲ! ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳಿತು! ಈ ಪ್ರಯತ್ನದ ಮಹನೀಯರಿಗೆ ಶುಭಹಾರೈಕೆ! ಕರ್ತವ್ಯದಿಂದ ಜಗ ಗೆಲ್ಲಿ, ನನ್ನ ವಿನಂತಿ!’ ಎಂದು ಜಗ್ಗೇಶ್‌ ಅವರು ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top