fbpx
ಸಮಾಚಾರ

ಸರ್ಕಾರದ ವಿರುದ್ಧ ಟೀಕೆ: ಬಸನಗೌಡ ಪಾಟೀಲ್ ಯತ್ನಾಳ್ ಶಾಕ್ ಕೊಟ್ಟ ಬಿಜೆಪಿ ಶಿಸ್ತು ಸಮಿತಿ

ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದ ಅನಿಶ್ಚಿತತೆ ಕುರಿತು ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರಿಗೆ ಕಾರಣ ಕೇಳಿ ಪಕ್ಷ ನೋಟಿಸ್​ ಜಾರಿ ಮಾಡಿದೆ.

ಪಕ್ಷ ವಿರೋಧಿ ಚಟುವಟಿಕೆಗೆ ಕಾರಣ ನೀಡುವಂತೆ ಹೈ ಕಮಾಂಡ್​ ನೋಟಿಸ್​ ಜಾರಿಗೊಳಿಸಿದೆ. ಸಮಸ್ಯೆ ಇದ್ದರೆ ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು, ಪದೇ ಪದೇ ಪಕ್ಷ ಹಾಗೂ ನಾಯಕರಿಗೆ ಮುಜುಗರಕ್ಕೆ ಒಳಗಾಗುವಂತಹ ಹೇಳಿಕೆ ನೀಡಿದರೆ ಪಕ್ಷದ ಘನತೆಗೆ ಕುಂದು ಉಂಟಾಗುತ್ತದೆ. ಇದು ಪಕ್ಷ ವಿರೋಧಿ ಚಟುವಟಿಕೆ ಆಗಿದ್ದು, ಇದಕ್ಕೆ ಸ್ಪಷ್ಟೀಕರಣ ನೀಡುವಂತೆ ಪಕ್ಷದ ಶಿಸ್ತು ಸಮಿತಿ ಸೂಚಿಸಿದೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದ ತ್ನಾಳ್ ಪದೇ ಪದೇ ಸಿಎಂ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು. ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಲಾಗುತ್ತದೆ, ಉತ್ತರ ಕರ್ನಾಟಕದವರು ಮುಂದಿನ ಸಿಎಂ ಆಗುತ್ತಾರೆ ಎಂಬಿತ್ಯಾದಿ ಹೇಳಿಕೆ ನೀಡಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು.

ಸಚಿವ ಸಂಪುಟ ವಿಸ್ತರಣೆಯ ವೇಳೆ ಅಸಮಾಧಾನಗೊಂಡಿದ್ದ ಯತ್ನಾಳ್ ‘ಸಿಡಿ’ ಬಾಂಬ್ ಹಾಕಿದ್ದರು. ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಯತ್ನಾಳ್ ವಿರುದ್ಧ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಿದ್ದರು. ಇದೀಗ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಶೋಕಾಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top