fbpx
ಸಮಾಚಾರ

ಸೌತ್ ಆಫ್ರೀಕಾ ತಂಡಕ್ಕೆ ಎಬಿಡಿ ಕಮ್‌ಬ್ಯಾಕ್‌’ಗೆ ಮುಹೂರ್ತ ಫಿಕ್ಸ್: Mr.360 ರೀ ಎಂಟ್ರಿಗೆ ವೇದಿಕೆ ಸಜ್ಜು

ಬ್ಯಾಟ್ ಹಿಡಿದು ಕಣಕ್ಕಿಳಿದರೆ ಚೆಂಡಿಗೆ ಮೈದಾನದ ಅಷ್ಟದಿಕ್ಕುಗಳನ್ನು ತೋರಿಸೋ ಖದರ್ ಹೊಂದಿರೋ ಮಿಸ್ಟರ್.360 ಖ್ಯಾತಿಯ ಸ್ಪೋಟಕ ದಾಂಡಿಗ ಎಬಿಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾಗ ಅಭಿಮಾನಿಗಳಲ್ಲಿ ದುಃಖ ಉಕ್ಕಿಬಂದಿದ್ದು ಸುಳ್ಳಲ್ಲ.. ಸದ್ಯದ ಪೀಳಿಗೆಯ ಆಟಗಾರರಲ್ಲಿ ಜಗತ್ತಿನಾದ್ಯಂತ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರೋ ಆಟಗಾರನೆಸಿಕೊಂಡಿರುವ ಎಬಿಡಿ ತಮ್ಮ ನಿರ್ಧಾರವನ್ನು ಬದಲಿಸಿ ಮತ್ತೆ ಬ್ಯಾಟ್ ಹಿಡಿಯಬೇಕು ಎದುರಾಳಿಗಳ ಬೇವರೀಳಿಸಬೇಕು ಎಂದು ಎಷ್ಟೋ ಮಂದಿ ಅಭಿಮಾನಿಗಳು ಹಪಾಹಪಿಸಿದ್ದರು..ಅವರ ಬ್ಯಾಟಿಂಗ್ ಅಬ್ಬರವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು.. ಅಂತಾವ್ರಿಗೆಲ್ಲಾ ಕುಣಿದು ಕುಪ್ಪಳಿಸುವಂತ ಸುದ್ದಿಯನ್ನು ಎಬಿಡಿ ಕೊಟ್ಟಿದ್ದಾರೆ.

ಮಿಸ್ಟರ್ 360 ಖ್ಯಾತಿಯ ಎಬಿಡಿ ವಿಲಿಯರ್ಸ್ ಮರಳಿ ದಕ್ಷಿಣ ಆಫ್ರಿಕಾ ತಂಡ ಸೇರಲು ವೇದಿಕೆ ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯಲ್ಲಿ ಎಬಿಡಿ ಕಾಣಿಸಿಕೊಳ್ಳುವ ಬಗ್ಗೆ ಆಫ್ರಿಕಾ ತಂಡದ ನಿರ್ದೇಶಕ ಗ್ರೇಮ್ ಸ್ಮಿತ್ ಸುಳಿವೊಂದನ್ನು ನೀಡಿದ್ದಾರೆ. ಮುಂದೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್ ಎಬಿಡಿ ಸಹಿತ ಇಮ್ರಾನ್ ತಾಹೀರ್, ಕ್ರೀಸ್ ಮೋರಿಸ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಇದರಿಂದಾಗಿ ಆಫ್ರಿಕಾ ತಂಡ ಬಲಿಷ್ಠಗೊಳ್ಳಲಿದೆ ಎಂದು ಸ್ಮಿಥ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್​ ನಿರ್ದೇಶಕರಾಗಿರುವ ಮಾಜಿ ಆಟಗಾರ ಗ್ರೇಮ್ ಸ್ಮಿತ್ ಹಾಗೂ ತಂಡದ ಕೋಚ್ ಮಾರ್ಕ್ ಬೌಚರ್ ಎಬಿಡಿಯನ್ನು ಕರೆತರಲು ಉತ್ಸುಕರಾಗಿದ್ದಾರೆ. ಅದರಂತೆ ವೆಸ್ಟ್ ಇಂಡೀಸ್ ವಿರುದ್ದ ಎಬಿ ಡಿವಿಲಿಯರ್ಸ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ. ಅಲ್ಲದೆ ಇಮ್ರಾನ್ ತಾಹಿರ್ ಹಾಗೂ ಕ್ರಿಸ್ ಮೊರೀಸ್ ಅವರನ್ನೂ ಮತ್ತೆ ಕಣಕ್ಕಿಳಿಸಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮುಂದಾಗಿದೆ.

ಈ ವರ್ಷ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಪರ ಎಬಿಡಿ ಆಡಬೇಕಾದರೆ ಇದಕ್ಕೂ ಮುನ್ನ ಕೆಲ ದ್ವಿಪಕ್ಷೀಯ ಸರಣಿಗಳಲ್ಲಿ ಪಾಲ್ಗೊಳ್ಳಬೇಕಿದೆ. ತದ ನಂತರವೇ ಅವರನ್ನು ವಿಶ್ವಕಪ್ ತಂಡಕ್ಕೆ ಪರಿಗಣಿಸಲು ಸಾಧ್ಯ. ಹೀಗಾಗಿ ವೆಸ್ಟ್‌ ಇಂಡೀಸ್‌ ಪ್ರವಾಸ ಎಬಿ ಡಿ’ವಿಲಿಯರ್ಸ್‌ ಮರು ಪ್ರವೇಶಕ್ಕೆ ಹೇಳಿ ಮಾಡಿಸಿದ ವೇದಿಕೆ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top