fbpx
ಸಮಾಚಾರ

ಕೋವಿಡ್‍ಗೆ ಹೆದರಿ ಆತ್ಮಹತ್ಯೆ ಮಾಡ್ಕೊಂಡ ದಂಪತಿಯ ಕೊರೊನಾ ವರದಿ ನೆಗೆಟಿವ್: ಡೆತ್‌ ನೋಟ್‌ನಲ್ಲಿ ಏನಿದೆ?

ಮಂಗಳೂರು: ತಮಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಅದರಿಂದ ಮಾರಣಾಂತಿಕ ಕಪ್ಪು ಶಿಲೀಂದ್ರ ಸಮಸ್ಯೆ ಉಂಟಾಗಲಿದೆ ಎಂದು ಭಾವಿಸಿ, ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ದಂಪತಿಯ ಕೋವಿಡ್ 19 ವರದಿ ನೆಗೆಟಿವ್ ಬಂದಿದೆ.

ಸೂರತ್ಕಲ್‍ನ ಚಿತ್ತಾಪುರದ ರೆಹೆಜಾ ಅಪಾರ್ಟ್‍ಮೆಂಟ್‍ನ 8ನೆ ಮಹಡಿಯಲ್ಲಿ ರಮೇಶ್ ಸುವರ್ಣ ಮತ್ತು ಗುಣ ಸುವರ್ಣ ದಂಪತಿ ನೆಲೆಸಿದ್ದರು. ಒಂದು ವಾರದಿಂದ ಗುಣ ಅವರಿಗೆ ಕೆಮ್ಮು, ನೆಗಡಿ ಕಂಡುಬಂದಿತ್ತು. ಈ ನಡುವೆ ಮೂರು ದಿನಗಳಿಂದ ರಮೇಶ್ ಅವರಿಗೆ ಮೈ-ಕೈ ನೋವು ಕಾಣಿಸಿಕೊಂಡಿದ್ದರಿಂದ ನಮಗೆ ಕೊರೊನಾ ಬಂದಿದೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು.

ದಂಪತಿ ಸಾಯುವ ಮುನ್ನ ಡೆತ್ ನೋಟ್ ಕೂಡಾ ಬರೆದಿದ್ದಾರೆ. ರಮೇಶ್ ಮತ್ತು ಗುಣ ಸುವರ್ಣ ದಾಂಪತ್ಯ ಜೀವನಕ್ಕೆ ಕಾಲಿರಿಸಿ 21 ವರ್ಷಗಳಾದರೂ ಸಂತಾನ ಭಾಗ್ಯ ಕರುಣಿಸಿರಲಿಲ್ಲ. ಎರಡು ಸಲ ಗರ್ಭಿಣಿಯಾದರೂ ಮಧುಮೇಹ ದಿಂದ ಮಗುವಾಗಿರಲಿಲ್ಲ.ಇದೇ ಕೊರಗಿನಲ್ಲಿ ದಂಪತಿ ಯಾರ ಜೊತೆಯ ಸೇರುತ್ತಿರಲಿಲ್ಲ. ಇಂದು ಸಾವನ್ನಪ್ಪುವ ವೇಳೆಯಲ್ಲೂ ಕುಟುಂಬದವರಿಗೆ ವಾಯ್ಸ್ ಮೆಸೇಜ್ ಮಾಡಿದ ಪತಿ ರಮೇಶ್,ಆತ್ಮಹತ್ಯೆ ಮಾಡುತ್ತಿರೋದರ ಬಗ್ಗೆ ಕ್ಷಮೆ ಕೇಳಿದ್ದಾರೆ. ಅಲ್ಲದೇ ಡೆತ್ ನೋಟ್ ಜೊತೆಗೆ ಒಂದು ಲಕ್ಷ ರೂಪಾಯಿ ಇಟ್ಟು ಅಂತ್ಯಕ್ರಿಯೆ, ಅಂತ್ಯ ಸಂಸ್ಕಾರಕ್ಕೆ ಉಪಯೋಗಿಸುವಂತೆ ಕೇಳಿಕೊಂಡಿದ್ದಾರೆ.

ಡೆತ್‌ ನೋಟ್‌ನಲ್ಲಿ ಏನಿದೆ?:
ನಾನು 14ನೇ ವಯಸ್ಸಿನಿಂದಲೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. 2000ನೇ ಇಸವಿಯಲ್ಲಿ ನಮ್ಮ ಮದುವೆಯಾಗಿದೆ. 2001ರಲ್ಲಿ ಗರ್ಭಿಣಿಯಾಗಿದ್ದಾಗ ನನಗೆ ಸಕ್ಕರೆ ಕಾಯಿಲೆ ಬಾಧಿಸಿತು. ಆಪರೇಷನ್‌ ಮೂಲಕ ಹೆರಿಗೆಯಾದರೂ ಗಂಡು ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 2005ರಲ್ಲಿ ಮತ್ತೆ ಗರ್ಭಿಣಿಯಾಗಿದ್ದೆ. ಆದರೂ ಮಾತ್ರೆಯಿಂದ ವ್ಯತಿರಿಕ್ತ ಪರಿಣಾಮವಾಗುತ್ತಿದ್ದಂತೆ ಮತ್ತೆ ಸಮಸ್ಯೆ ಎದುರಾಯಿತು. ಯಾವುದೇ ಮಾತ್ರೆ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಅಂದಿನಿಂದ ಪ್ರತಿನಿತ್ಯ ಎರಡು ಇನ್ಸೂಲಿನ್‌ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಕಾರಣದಿಂದ 2020ರ ಬಳಿಕ ಕೋವಿಡ್‌ ಬಂದ ಬಳಿಕ ನಾವೆಲ್ಲ ತುಂಬಾ ಜಾಗರೂಕತೆ ತೆಗೆದುಕೊಂಡಿದ್ದೆವು. ಆದರೆ ಸುಮಾರು 10 ದಿನಗಳಿಂದ ಕೋವಿಡ್‌ ನನ್ನನ್ನು ಬಾಧಿಸಿದ್ದು, ಅದು ವಿಕೋಪಕ್ಕೆ ಹೋಗಿ ಬ್ಲಾಕ್‌ ಫಂಗಸ್‌ ಭಯ ಕಾಡಿದೆ. ಗಂಡನಿಗೂ ಮೂರು ದಿನದಿಂದ ಕೋವಿಡ್‌ ಲಕ್ಷಣಗಳು ಕಂಡು ಬರುತ್ತಿದೆ. ಈ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top