fbpx
ಸಮಾಚಾರ

ತಂದೆ-ತಾಯಿ ವಿರುದ್ಧವೇ ಕೇಸ್ ದಾಖಲಿಸಿದ ತಮಿಳು ನಟ ವಿಜಯ್! ಹೆತ್ತವರ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ಯಾಕೆ?

ನಟ ‘ದಳಪತಿ’ ವಿಜಯ್ ಅವರಿಗೆ ತಮಿಳುನಾಡು ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ವಿಜಯ್ ಸಿನಿಮಾ ವಿಚಾರಕ್ಕೆ ಮಾತ್ರ ಹೆಚ್ಚು ಸುದ್ದಿ ಆಗುತ್ತಾರೆ. ಖಾಸಗಿ ವಿಚಾರಗಳಿಂದ ಅವರು ಸುದ್ದಿಯಾಗಿದ್ದು ಕಡಿಮೆ. ಆದರೆ, ಈಗ ಅವರ ಕುಟುಂಬ ಕಲಹ ಜೋರಾಗುತ್ತಿದೆ. ತಮ್ಮ ತಂದೆ-ತಾಯಿ ವಿರುದ್ಧವೇ ವಿಜಯ್ ಕೇಸ್ ದಾಖಲು ಮಾಡಿದ್ದಾರೆ. ತಂದೆ ಎಸ್‌.ಎ. ಚಂದ್ರಶೇಖರ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ನಡೆದಿದ್ದೇನು? ಇಲ್ಲಿದೆ ಮಾಹಿತಿ.

ವಿಜಯ್​ ಅವರ ತಂದೆ ಖ್ಯಾತ ನಿರ್ದೇಶಕ ಎಸ್​.ಎ. ಚಂದ್ರಶೇಖರ್​ ಅವರು ತಮ್ಮ ಪುತ್ರನ ಅಸಮ್ಮತಿಯ ನಡುವೆಯೂ ರಾಜಕೀಯದಲ್ಲಿ ಸಕ್ರಿಯರಾಗುವ ನಿಟ್ಟಿನಲ್ಲಿ ‘ಆಲ್​ ಇಂಡಿಯಾ ದಳಪತಿ ವಿಜಯ್​ ಮಕ್ಕಳ್​ ಇಯಕ್ಕಮ್​’ ಪಕ್ಷ ಆರಂಭಿಸಿದ್ದಾರೆ. ಈ ಪಕ್ಷಕ್ಕೆ ಚಂದ್ರಶೇಖರ್​ ಪ್ರಧಾನ ಕಾರ್ಯದರ್ಶಿ. ಅವರ ತಾಯಿ ಶೋಭಾ ಚಂದ್ರಶೇಖರ್​ ಖಜಾಂಚಿ. ಪದ್ಮನಾಭನ್​ ಪಕ್ಷದ ನಾಯಕರಾಗಿದ್ದಾರೆ. 2021ರ ಅಕ್ಟೋಬರ್ ನಲ್ಲಿ ನಡೆಯಲಿರುವ ಸ್ಥಳೀಯ ಚುನಾವಣೆಯಲ್ಲಿ ಈ ಪಕ್ಷ ಸ್ಪರ್ಧಿಸಲಿದೆ. ಈ ಹಿನ್ನೆಲೆ ತಮ್ಮ ಹೆಸರಿನಲ್ಲಿ ಯಾವುದೇ ಸಭೆ-ಸಮಾರಂಭಗಳನ್ನು ನಡೆಸಲು ಅನುಮತಿ ನೀಡದಂತೆ ವಿಜಯ್ ಅವರು ನ್ಯಾಯಾಲಯದ ಕದ ತಟ್ಟಿದ್ದಾರೆ.

ಅವರು ತಮ್ಮ ಪೋಷಕರು ಸೇರಿದಂತೆ 11 ಪ್ರತಿವಾದಿಗಳ ವಿರುದ್ಧ ಮಧ್ಯಂತರ ತಡೆ ಕೋರಿದ್ದಾರೆ. ಅವರ ಅಭಿಮಾನಿ ಬಳಗದ ಪದಾಧಿಕಾರಿಗಳನ್ನು ಕೂಡ ಪ್ರತಿವಾದಿಗಳಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣವನ್ನು ಸೆಪ್ಟೆಂಬರ್ 27 ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ನನ್ನ ತಂದೆ ನೀಡಿರುವ ರಾಜಕೀಯ ಹೇಳಿಕೆಗಳೊಂದಿಗೆ ನನಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ ಎಂದು ವಿಜಯ್​ ಹೇಳಿದ್ದರು. ಪಕ್ಷಕ್ಕೆ ವಿಜಯ್​ ಹೆಸರಿದೆ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಆಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಿಜಯ್​ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ಇದು ವಿಜಯ್ ಅವರ ರಾಜಕೀಯ ಪಕ್ಷವಲ್ಲ. ಈ ಪಕ್ಷದೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅಂದು ವಿಜಯ್‍ಗೆ ಅಭಿಮಾನಿ ಸಂಘ ಕಟ್ಟಲು ಅವರ ಯಾವುದೇ ಅನುಮತಿ ಪಡೆಯಲಿಲ್ಲ. ಅದೇ ರೀತಿ ಈಗಲೂ ರಾಜಕೀಯ ಪಕ್ಷ ಸ್ಥಾಪನೆಗೆ ವಿಜಯ್ ಅನುಮತಿ ಬೇಕಿಲ್ಲ ಎಂದು ಚಂದ್ರಶೇಖರ್ ವಾದ ಮಾಡಿದ್ದರು ಎಂಬ ಮಾತು ಕೇಳಿಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top