fbpx
ಸಮಾಚಾರ

TRP ಗೋಸ್ಕರ ಜೈನರು ಮತ್ತು ಹಿಂದುಗಳ ಮಧ್ಯ ತಂದಿಟ್ಟು ತಮಾಷೆ ನೋಡಿತೇ ಕಲಾಮಾಧ್ಯಮ ವಾಹಿನಿ?

ಎರಡು ಕೋಮುಗಳ ಜನರು ಅನ್ಯೋನ್ಯವಾಗಿರುವುದನ್ನು ಸಹಿಸಿಕೊಳ್ಳದೆ ಎರಡು ಧರ್ಮಗಳ ಜನರ ನಡುವೆ ಬೆಂಕಿ ಹಚ್ಚಿಕೊಳ್ಳುವ ಹಾಗೆ ಸುದ್ದಿ ಬಿತ್ತರಿಸಿ ‘ಮಜಾ’ ನೋಡುವ ಅಸಂಖ್ಯಾತ ವಾಹಿನಿಗಳು ಯೂಟ್ಯೂಬ್ ಲೋಕದಲ್ಲಿ ಅಣಬೆಯಂತೆ ಹುಟ್ಟಿಕೊಳ್ಳಲಾರಂಭಿಸಿವೆ. ಈ ಲಿಸ್ಟಿಗೆ ಯೂಟ್ಯೂಬ್ ನಲ್ಲಿ ಒಂದಷ್ಟು ಒಳ್ಳೆ ಹೆಸರು ಸಂಪಾದಿಸಿರುವ ಕಲಾಮಾದ್ಯಮ ವಾಹಿನಿ ಕೂಡ ಸೇರ್ಪಡೆಗೊಂಡಿದೆಯೇ ಎಂಬ ಅನುಮಾನ ಮೂಡಲಾರಂಭಿಸಿದೆ. ಏಕೆಂದರೆ ವಾರದಿಂಚೆಗೆ ಕಲಾಮಾದ್ಯಮ ವಾಹಿನಿಯಲ್ಲಿ ಅಪ್ಲೋಡ್ ಆಗಿರುವ ಕೆಲವೊಂದು ವಿಡಿಯೋಗಳು ಜೈನ ಧರ್ಮದ ಭಾವನೆಗಳಿಗೆ ದಕ್ಕೆ ತರುವಂತದ್ದಾಗಿದ್ದು ಹಿಂದೂ ಮತ್ತು ಜೈನ ಸಮುದಾಯದ ಜನರ ಭಾವೈಕ್ಯತೆಗೆ ಭಂಗ ತರುವ ಪ್ರಯತ್ನ ಪಡಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

ವಿಚಾರವೇನೆಂದರೆ ಕಲಾಮಾದ್ಯಮ ಚಾನೆಲ್ ನಲ್ಲಿ ಇತ್ತೀಚಿಗೆ ವಿಡಿಯೋವೊಂದನ್ನ ಹರಿಬಿಡಲಾಗಿತ್ತು. ಆ ವಿಡಿಯೋದಲ್ಲಿ ಜೈನ ಸಮುದಾಯದ ಹೆಮ್ಮೆಯ ಬೆಳ್ತಂಗಡಿ ಬಸದಿ ಬಗೆಗಿನ ಕುರಿತು ಅನೇಕ ವಿಚಾರಗಳನ್ನ ತಿಳಿಸಿಲಾಗಿತ್ತು. ಜೈನರಿಗೆ ಸಂಬಂಧಪಟ್ಟ ಐತಿಹಾಸಕ ಸ್ಥಳದ ಬಗ್ಗೆ ವಿಶ್ಲೇಷಿಸಲು ‘ಶ್ರೀರಂಗ ಜೋಶಿ’ ಎಂಬ ಸ್ಥಳೀಯ ಶಿಕ್ಷಕರೊಬ್ಬರನ್ನು ಕಲಾಮಾದ್ಯಮ ತಂಡ ಕರೆದುಕೊಂಡು ಹೋಗಿತ್ತು. ಆ ವ್ಯಕ್ತಿ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಈ ವೇಳೆ ಜೈನ ಬಸದಿಗಳಿಗೂ ಹಿಂದೂ ದೇವಾಲಯಗಳಿಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಯನ್ನು ಕಲಾಮಾದ್ಯಮ ತಂಡದವರು ಕೇಳುತ್ತಾರೆ. ಇದಕ್ಕೆ ಉಡಾಫೆಯ ಉತ್ತರ ನೀಡಿದ ಜೋಶಿ ಅವರು ಜೈನ ಬಸದಿಗಳಿಗೂ ಹಿಂದೂ ದೇವಾಲಯಗಳಿಗೂ ಏನೂ ವ್ಯತ್ಯಾಸವಿಲ್ಲ ಎಂದು ತಪ್ಪು ಮಾಹಿತಿ ನೀಡುತ್ತಾರೆ. ಅಷ್ಟೇ ಅಲ್ಲದೆ ಜೈನ ಧರ್ಮದ ಅನೇಕ ವಿಚಾರಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಜೈನ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. “ಜೈನರು ಕೂಡ ಹಿಂದೂಗಳಂತೆ ವೇದಗಳನ್ನ ನಂಬುತ್ತಾರೆ, ಜೈನರ ಶ್ಲೋಕಗಳು ಕೂಡ ಸಂಸ್ಕೃತದಲ್ಲಿವೆ. ಇಲ್ಲಿನ ರಾಜರು ಬೇರೆ ಕಡೆಯಿಂದ ವಲಸೆ ಬಂದವರು. ಅವರು ಇಲ್ಲಿ ಇದ್ದ ಜನರನ್ನು ಜೈನ ಧರ್ಮಕ್ಕೆ ಮತಾಂತರ ಮಾಡಿದ್ದಾರೆ” ಎಂದು ಬಾಯಿಗೆ ಬಂದಹಾಗೆ ಜೋಶಿ ಅವರು ಹೇಳಿದ್ದಾರೆ. ಹಿಂದೂ ವ್ಯಕ್ತಿ ಜೈನ ಧರ್ಮದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕೆ ಸಹಜವಾಗಿಯೇ ಜೈನರಲ್ಲಿ ಅಸಮಾಧಾನ ಹುಟ್ಟುಕೊಂಡಿದೆ.

 

 

ಆದರೆ ವಾಸ್ತವವಾಗಿ ಇವೆಲ್ಲಾ ಸತ್ಯಕ್ಕೆ ದೂರವಾದವು. ಜೈನರು ವೇದಗಳನ್ನ ನಂಬುವುದಿಲ್ಲ, ಹಾಗೂ ಅವರ ಶ್ಲೋಕಗಳು ಪಾಕೃತ ಭಾಷೆಯಲ್ಲಿವೆ. ಹಾಗೂ ಈ ಪ್ರದೇಶದ ಜೈನ ರಾಜರುಗಳು ಮೂಲತಃ ಇಲ್ಲಿಯವರೇ ಆಗಿದ್ದು ಎಲ್ಲಿಂದಲೋ ವಲಸೆ ಬಂದವರಲ್ಲ. ಹಾಗೂ ಅವರ್ಯಾರು ಈ ಪ್ರದೇಶದ ಜನರನ್ನ ಜೈನ ಧರ್ಮಕ್ಕೆ ಮತಾಂತರ ಮಾಡಿಲ್ಲ. ಅಷ್ಟೇ ಅಲ್ಲದೆ ಜೈನ ಬಸದಿಗಳಿಗೂ ಮತ್ತು ಹಿಂದೂ ದೇವಾಲಯಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಬಸದಿ-ದೇವಾಲಯ, ಸಂಸ್ಕೃತ-ಪ್ರಾಕೃತ,ಜೈನರು ರಾಜರುಗಳು ವಲಸಿಗರು, ಜೈನ ಧರ್ಮಕ್ಕೆ ಮತಾಂತರ ಈ ರೀತಿಯ ಮಾತುಗಳು ಹಿಂದೂ ಹಾಗೂ ಜೈನ ಧರ್ಮಿಯರಲ್ಲಿ ಅನಗತ್ಯ ಚರ್ಚೆಗೆ ಕಾರಣವಾಗುತ್ತಿದೆ. ಇದು ಇವರಿಬ್ಬರ ಭಾವೈಕ್ಯತೆಗೂ ದಕ್ಕೆ ತರುವಂತದ್ದಾಗಿದೆ ಎಂಬುದು ಎರಡೂ ಸಮುದಾಯವಾದ ಜನರ ಅಭಿಪ್ರಾಯ. ಹಾಗಾಗಿ ಮನಬಂದಂತೆ ಜೈನ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿದ ಜೋಶಿ ಹಾಗೂ ಸತ್ಯಂಶಗಳನ್ನ ಕ್ರಾಸ್ ಚೆಕ್ ಮಾಡದೆ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ ಕಲಾಮಾದ್ಯಮ ಯೂಟ್ಯೂಬ್ ಚಾನೆಲ್ ವಿರುದ್ಧ ಜೈನ ಸಮುಧಾಯದವರು ಕಿಡಿಕಾರಿದ್ದಾರೆ.

ವಿಡಿಯೋ ಯೂಟ್ಯೂಬ್ ನಲ್ಲಿ ಪ್ರಸಾರವಾಗುತ್ತಿದಂತೆ ಶ್ರೀರಂಗ ಜೋಶಿ ವಿರುದ್ಧ ಸ್ಥಳೀಯ ಜೈನ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಆ ನಂತರ ಎಚ್ಚೆತ್ತುಕೊಂಡ ಜೋಶಿ ಜೈನ ಸಮುದಾಯಕ್ಕೆ ಪತ್ರದ ಮುಖೇನ ಬಹಿರಂಗ ಕ್ಷಮೆ ಕೋರಿದ್ದಾರೆ. “ವಿಶ್ವಧರ್ಮವಾದ ಜೈನ ಧರ್ಮದ ಬಗ್ಗೆ ನನಗೆ ಬಹಳ ಹೆಮ್ಮೆಯಿದ್ದು ಅಜ್ಜಾನದಿಂದಾಗಿ ಹಾಗೂ ಮಾಹಿತಿಯ ಕೊರತೆಯಿಂದಾಗಿ ಕೆಲವೊಂದು ತಪ್ಪು ಹೇಳಿಕೆಗಳನ್ನು ನೀಡಿರುತ್ತೇನೆ. ಆ ನಂತರ ನನ್ನ ಹೇಳಿಕೆಯ ತಪ್ಪಿನ ಗಂಭೀರತೆಯು ನನಗೆ ಅರಿವಾಗಿರುತ್ತದೆ. ನನ್ನಲ್ಲಿ ಜಾತಿ ನಿಂದನೆ ಮತ್ತು ಧರ್ಮ ನಿಂದನೆ ಮಾಡುವ ಯಾವುದೇ ಉದ್ದೇಶ ಇರುವುದಿಲ್ಲ. ನಾನು ಹೇಳಿರುವ ಹೇಳಿಕೆಯ ಗಂಭೀರತೆಯನ್ನು ತಿಳಿಯದೇ ತಪ್ಪು ಎಸಗಿರುತ್ತೇನೆ. ಈ ಬಗ್ಗೆ ಈಗಾಗಲೇ ಮೂಡುಬಿದಿರೆ ಶ್ರೀಮಠ ಹಾಗೂ ಕಾರ್ಕಳ ಶ್ರೀಮಠದ ಪರಮ ಪೂಜ್ಯ ಸ್ವಾಮೀಜಿಯವರಲ್ಲಿ ಕ್ಷಮಾಪಣಾ ಪತ್ರವನ್ನು ನೀಡಿದ್ದೇನೆ. ನಾನು ನನ್ನ ತಪ್ಪಿನ ಅರಿವಾಗಿ ಸ್ವ-ಇಚ್ಛೆಯಿಂದ ಯಾರದೇ ಒತ್ತಡಕ್ಕೆ ಒಳಪಡದೆ ಮತ್ತೊಮ್ಮೆ ಇಡೀ ಜೈನ ಸಮಾಜಕ್ಕೆ ಸಮಸ್ತ ಜೈನ ಬಾಂಧವರಲ್ಲಿ ನನ್ನ ತಪ್ಪು ಹೇಳಿಕೆಗಾಗಿ ಕ್ಷಮ ಕೋರುತ್ತಿದ್ದೇನೆ. ” ಜೋಶಿ ತಮ್ಮ ಕ್ಷಮಾಪಣಾ ಪತ್ರದಲ್ಲಿ ಬೇಡಿಕೊಂಡಿದ್ದಾರೆ.

 

 

ಆದರೆ ಜೋಶಿ ಅವರು ಕ್ಷಮೆ ಕೋರಿದ ನಂತರವೂ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿರುವ ವಿಡಿಯೋವನ್ನು ಡಿಲೀಟ್ ಮಾಡುವಂತೆ ಜೈನ ಸಮಾಜದವರು ಆಗ್ರಹಿಸಿದ್ದರೂ ಕೂಡ ಆರಂಭದಲ್ಲಿ ಕಲಾಮಾದ್ಯಮ ವಾಹಿನಿ ಡಿಲೀಟ್ ಮಾಡದೆ ಮೊಂಡುತನ ಪ್ರದರ್ಶಿಸಿತ್ತು. ಅರಳಿಕಟ್ಟೆ ತಂಡವು ಕಾರ್ಕಳ ಪ್ರದೇಶದ ಜೈನರ ಸಮುದಾಯದ ಜನರ ಸಂಪರ್ಕಿಸಿದಾಗ ಅವರೆಲ್ಲರೂ ‘ಜೋಶಿಯವರ ಉಡಾಫೆ ಮಾತುಗಳನ್ನ ಎಡಿಟ್ ಮಾಡದೆ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು ಕಲಾಮಾದ್ಯಮ ವಾಹಿನಿಯ ತಪ್ಪು. ಇಂಥಾ ಸೂಕ್ಶ್ಮ ವಿಚಾರಗಳ ಬಗ್ಗೆ ತಪ್ಪು ಮಾಹಿತಿಯಿರುವ ವಿಡಿಯೋ ಹಂಚಿಕೊಂಡರೆ ಎರಡು ಸಮುದಾಯದ ಜನರ ನಡುವೆ ಬೆಂಕಿ ಹಚ್ಚಿಕೊಳ್ಳುತ್ತದೆ ಎಂಬ ಕನಿಷ್ಠ ಜ್ಞಾನ ಯೂಟ್ಯೂಬ್ ವಾಹಿನಿಗೆ ಇರಬೇಕಿತ್ತು. ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಕ್ಕೆ ಕಲಾಮಾದ್ಯಮ ಚಾನೆಲ್ ಬಹಿರಂಗ ಕ್ಷಮೆಯಾಚಿಸಬೇಕು ಮತ್ತು ಈ ಕೂಡಲೇ ವಿಡಿಯೋ ಡಿಲೀಟ್ ಮಾಡಬೇಕು” ಎಂದು ಕೆಂಡಕಾರಿದರು. ಇನ್ನು ಈ ವಿವಾದದ ಬಗ್ಗೆ ಕಲಾಮಾದ್ಯಮ ವಾಹಿನಿಯ ಮುಖ್ಯಸ್ಥರ ಅಭಿಪ್ರಾಯ ಪಡೆಯಲು ಸಂಪರ್ಕಿಸಲು ಅರಳಿಕಟ್ಟೆ ತಂಡವು ಪ್ರಯತ್ನಿಸಿತು. ಆದರೆ ಸಂಪರ್ಕಕ್ಕೆ ಸಿಗದೇ ಕಲಾಮಾದ್ಯಮ ವಾಹಿನಿಯವರು ತಲೆಮರೆಸಿಕೊಂಡಿದ್ದಾರೆ.

ಎಷ್ಟೇ ವಿರೋಧ ವ್ಯಕ್ತವಾದರೂ ವಿಡಿಯೋ ಡಿಲೀಟ್ ಮಾಡದೆ ಮೊಂಡುತನ ಪ್ರದರ್ಶಿಸುತ್ತಿದ್ದ ಕಲಾಮಾದ್ಯಮ ವಾಹಿನಿ ವಿರುದ್ಧ ಜೈನ ಸಮುದಾಯದವರು ಪೊಲೀಸ್ ದೂರು ನೀಡಿದ್ದಾರೆ. ಜೈನ ಸಮುದಾಯದವರು ಈ ವಿಚಾರದ ಬಗ್ಗೆ ಕಾನೂನು ಸಮರಕ್ಕೆ ಮುಂದಾಗುತ್ತಿದ್ದಂತೆ ಭಯಗೊಂಡ ಕಲಾಮಾದ್ಯಮ ಯೂಟ್ಯೂಬ್ ಚಾನೆಲ್ ನವರು ಕೊನೆಗೂ ಆ ವಿವಾದಾತ್ಮಕ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ವಿಡಿಯೋ ಡಿಲೀಟ್ ಆಗಿದ್ದರೂ ಕಲಾಮಾದ್ಯಮ ವಾಹಿನಿ ಮುಖ್ಯಸ್ಥರು ಜೈನ ಸಮುದಾಯದವರ ಬಳಿ ಕ್ಷಮೆ ಕೋರಿ ರಾಜಿ ಮಾಡಿಕೊಳ್ಳುತ್ತಾರೋ? ಅಥವಾ ಕಾನೂನು ಹೋರಾಟ ಎದುರಿಸುತ್ತಾರೋ? ಕಾದು ನೋಡೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top