fbpx
ಸಮಾಚಾರ

ಕೋಟಿಗೊಬ್ಬ-3 ಚಿತ್ರದ ವಿರುದ್ಧ ಪಿತೂರಿ ಮಾಡಿದವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸೂರಪ್ಪ ಬಾಬು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ ಕೋಟಿಗೊಬ್ಬ ಚಿತ್ರ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಒಂದು ದಿನ ತಡವಾಗಿ ರಿಲೀಸ್ ಆದ ಹೊರತಾಗಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಮೊದಲ ದಿನ ತೆರೆಗೆ ಬಾರದಂತೆ ಚಿತ್ರದ ವಿರುದ್ಧ ಷಡ್ಯಂತ್ರ ರೂಪಿಸಿದ ಕೆಟ್ಟ ವ್ಯಕ್ತಿಗಳ ವಿರುದ್ಧ ನಿರ್ಮಾಪಕ ಸೂರಪ್ಪ ಬಾಬು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಮೊದಲ ದಿನ ಚಿತ್ರ ಬಿಡುಗಡೆ ಮಾಡಲು ಆಗದೆ ಇರಲು ಕಾರಣರಾದ ವಿತರಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ. ವಿತರಕರಾದ ಗೌತಮ್ ಚಂದು, ಎಂ.ಡಿ. ಖಾಜಾಪೀರ್ ಮತ್ತು ಕುಮಾರ್ ಫಿಲ್ಮ್ಸ್ ವಿರುದ್ಧ ಕೇಸ್ ದಾಖಲಿಸಲು ಸೂರಪ್ಪ ಬಾಬು ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ. ತೊಂದರೆ ನೀಡಿದ ವಿತರಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸೂರಪ್ಪ ಬಾಬು ಚಿಂತಿಸಿದ್ದಾರೆ.

ವಿತರಕರು ಸರಿಯಾದ ಸಮಯಕ್ಕೆ ಹಣ ನೀಡದೇ ‘ಕೋಟಿಗೊಬ್ಬ 3’ ಚಿತ್ರದ ವಿರುದ್ಧ ಸಂಚು ಮಾಡಿದರು ಎಂದು ಅವರು ಆರೋಪಿಸಿದ್ದಾರೆ. ವಿತರಕರ ಸಂಚಿನಿಂದಾಗಿ ಚಿತ್ರದ ನಟ ಹಾಗೂ ನಿರ್ಮಾಣ ಸಂಸ್ಥೆಗೆ ಅಪಖ್ಯಾತಿ ಬಂದಿದೆ. ಹಾಗಾಗಿ ವಿತರಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸೂರಪ್ಪ ಬಾಬು ನಿರ್ಧರಿಸಿದ್ದಾರೆ. ಈ ವಿಚಾರವನ್ನ ಸ್ವತಃ ‌ಸೂರಪ್ಪ ಬಾಬು ಖಚಿತ ಪಡಿಸಿದ್ದಾರೆ.

“‘ಕೋಟಿಗೊಬ್ಬ 3’ ಚಿತ್ರದ ವಿತರಣೆ ಹಕ್ಕನ್ನು ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರದಲ್ಲಿ ಮೆಹಲ್ ಫಿಲ್ಮ್ಸ್ ಮಾಲೀಕರಾದ ಗೌತಮ್ ಚಂದ್ ಹಾಗೂ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ವಿತರಕಣೆ ಹಕ್ಕನ್ನು ಎಂ.ಡಿ. ಖಾಜಾಪೀರ್ ಮತ್ತು ಕುಮಾರ್ ಫಿಲ್ಮ್ಸ್ ಮಾಲೀಕರಾದ ಕುಮಾರ್ ಅವರು ಪಡೆದಿದ್ದರು. ವಿತರಣೆ ಕರಾರಿನ ಒಪ್ಪಂದದಂತೆ ಮುಂಗಡ ಹಣವಾಗಿ ಕೇವಲ 15% ಹಣವನ್ನು ಮಾತ್ರ ನಾನು ಪಡೆದಿದ್ದೆ. ಚಿತ್ರ ಬಿಡುಗಡೆಯ ಒಂದು ದಿನ ಮೊದಲು 13-10-2021 ರಂದು ಚಿತ್ರದ ನಿರ್ಮಾಪಕನಾದ ನನಗೆ ಬಾಕಿ ಹಣ ನೀಡಬೇಕೆಂದು ಒಪ್ಪಂದವಾಗಿತ್ತು, ಆದರೆ ಎಂ.ಡಿ ಜಾಫರ್ ಮತ್ತು ಕುಮಾರ್ ಫಿಲ್ಮ್ ಮಾಲೀಕ ಕುಮಾರ್ ಅವರು ಕೊನೆ ಕ್ಷಣದವರೆಗೂ ಹಣ ಕೊಡದೇ ನಮ್ಮ ಸಿನಿಮಾ ಬಿಡುಗಡೆಗೆ ತೊಂದರೆ ಮಾಡಿದ್ದು, ಫೋನ್ ಕರೆ ಮೂಲಕ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಕೊಡದೇ ತೊಂದರೆ ಮಾಡಿದ್ದಾರೆ. ”

“ಇದರಿಂದ ನಮ್ಮ ಚಿತ್ರವನ್ನು ಅಂದುಕೊಂಡ ದಿನದಂದು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವಿತರಕರ ತಪ್ಪಿನಿಂದ ನಮ್ಮ ಸಂಸ್ಥೆಗೆ ಸರಿ ಸುಮಾರು 8 ರಿಂದ 10 ಕೋಟಿ ರೂ. ನಷ್ಟವಾಯಿತಲ್ಲದೇ, ಮಾರನೇ ದಿನ ಚಿತ್ರವನ್ನು ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಒದಗಿ ಬಂತು. ಇನ್ನು ನಮ್ಮ ಸಂಸ್ಥೆಗೂ ಈ ವಿತರಕರಿಗೂ ಆದ ಕರಾರಿನ ಪ್ರಕಾರ ಹಣ ನೀಡದೇ ವಂಚಿಸಿದ್ದು, ನಮಗೆ ಬಹಳಷ್ಟು ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಮುಖ್ಯವಾಗಿ ನನಗೆ ಹಾಗೂ ಚಿತ್ರದ ನಟ ಸುದೀಪ್ ಅವರಿಗೆ ಅಪಖ್ಯಾತಿ ತರಲು ಈ ವಿತರಕರು ಸಂಚು ಮಾಡಿರುವುದರಿಂದ ವಿತರಕರ ಮೇಲೆ ಮಾನನಷ್ಟ ಮೊಕದ್ದಮೆಯೂ ‌ಸೇರಿದಂತೆ ಕಾನೂನು ಕ್ರಮ ಜರುಗಿಸುತ್ತೇವೆ.” ಎಂದು ಸೂರಪ್ಪ ಬಾಬು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top