fbpx
ಸಮಾಚಾರ

ಕನ್ನಡದ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ನಿಧನ

ಸ್ಯಾಂಡಲ್‍ವುಡ್‍ನ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ಇಂದು ಕೊನೆಯುಸಿರೆಳೆದಿದ್ದಾರೆ. ಬೆಳಗಿನ ಜಾವ 6.30ರ ಸುಮಾರಿಗೆ ಅವರು ಕೊನೆಯುಸಿರು ಎಳೆದರು ಎಂದು ತಿಳಿದುಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು.

ಪಾಪ ಪಾಂಡು ಧಾರಾವಾಹಿಯ ಪಾತ್ರದಿಂದ ಜನಪ್ರಿಯತೆ ಗಳಿಸಿದ್ದ ಇವರು ನಟರಂಗ ತಂಡದೊಟ್ಟಿಗೆ ಗುರುತಿಸಿಕೊಂಡಿದ್ದರು. ಶಂಕರ್ ರಾವ್ ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದು, ರಂಗಭೂಮಿಯಲ್ಲಿ ಗುರುತಿಸಿಕೊಂಡು ಬಳಿಕ ಸಿನಿಮಾ ರಂಗದಲ್ಲಿ ಅವಕಾಶ ಪಡೆದಿದ್ದರು. ಸಿನಿಮಾ ರಂಗದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದರು. ಶಂಕರ್ ರಾವ್ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ.

ಸಿದ್ಧಾರ್ಥ, ಪರಮಶಿವ, ದಿಲ್ವಾಲಾ, ಸಿದ್ಲಿಂಗು, ಸ್ನೇಹಿತರು, ರಾಜಕುಮಾರ, ಕನ್ನಡದ ಕಿರಣ್ ಬೇಡಿ, ವಂಶಿ, ಅರಸು, ಮಿಲನ, ಉಪ್ಪಿ ದಾದಾ ಎಂಬಿಬಿಎಸ್, ಮೋಹಿನಿ 9886788888, ವೀರ ಕನ್ನಡಿಗ, ಧ್ರುವ, ನಾಗರಹಾವು, ಪರ್ವ, ಕುರುಬನ ರಾಣಿ, ಉಲ್ಟಾ ಪಲ್ಟಾ, ಗೆಲುವಿನ ಸರದಾರ, ಶಿವ ಸೈನ್ಯ, ಚಿನ್ನಾರಿ ಮುತ್ತ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಶರೀಫಾ, ಜೀವನ ಚಕ್ರ, ಪ್ರಚಂಡ ಕುಳ್ಳ, ಬ್ಯಾಂಕರ್ ಮಾರ್ಗಯ್ಯ, ಮೂಗನ ಸೇಡು, ಪುಟಾಣಿ ಏಜೆಂಟ್ 123, ಮುಯ್ಯಿಗೆ ಮುಯ್ಯಿ ಮತ್ತು ‘ಅಪ್ಪು’ ಚಿತ್ರದಲ್ಲಿ ಲೆಕ್ಚರರ್ ಪಾತ್ರ, ‘ಬಿಸಿಬಿಸಿ’ ಚಿತ್ರದಲ್ಲಿ ಕಿಲಾಡಿ ರಸಿಕ ತಾತನ ಪಾತ್ರ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

1956ರಲ್ಲಿ ಬೆಂಗಳೂರಿಗೆ ಬಂದ ಶಂಕರ್ ರಾವ್ ‘ಗೆಳೆಯರ ಬಳಗ’ ಟೀಮ್​ ಕಟ್ಟಿಕೊಂಡು ನಾಟಕ ಮಾಡುತ್ತಿದ್ದರು. 19ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಮನೆಯ ಜವಾಬ್ದಾರಿಯನ್ನೂ ಹೊತ್ತುಕೊಂಡರು. ಪ್ರತಿ ವರ್ಷ ಸಿಗುತ್ತಿದ್ದ ಬೋನಸ್​ ಹಣದಲ್ಲಿ ಹೊಸ ರಂಗ ತಂಡ ಕಟ್ಟಿಕೊಂಡರು. ‘ನಟರಂಗ’ ತಂಡದ ಜೊತೆಗೂ ಶಂಕರ್​ ರಾವ್​ ಗುರುತಿಸಿಕೊಂಡಿದ್ದರು. ಹವ್ಯಾಸಿ ರಂಗಭೂಮಿ ಕಲಾವಿದನಾಗಿದ್ದ ಅವರು ಹಲವಾರು ಪೋಷಕ ಪಾತ್ರಗಳು ಮತ್ತು ಹಾಸ್ಯ ಪಾತ್ರಗಳ ಮೂಲಕ ಅವರು ಜನಪ್ರಿಯತೆ ಪಡೆದುಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top